ಸರ್ಕಾರದ ಪರ್ಯಾಯ ವ್ಯವಸ್ಥೆಯ ಬೆದರಿಕೆ ಅಸ್ತ್ರಕ್ಕೆ ಜಗ್ಗದ ರಾಜ್ಯ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘಟನೆಗಳು ಸೇವೆ ಕಾಯಂಗೆ ಆಗ್ರಹಿಸಿ ನಿಗದಿಯಂತೆ ಸೋಮವಾರ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದೆ.
ಇಂದು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ, ಅತಿಥಿ ಉಪನ್ಯಾಸಕರ 80 ಕಿ.ಮೀ ಪಾದಯಾತ್ರೆ ಆರಂಭವಾಗಿದೆ. ಹೊಸ ವರ್ಷದ ಆರಂಭದ ದಿನವೇ ಸರಕಾರಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಜ.3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿ, ಅಲ್ಲಿ ಸುಮಾರು 10 ಸಾವಿರ ಅತಿಥಿ ಉಪನ್ಯಾಸಕರು ಬೃಹತ್ ಸಮಾವೇಶ ನಡೆಸಲಿದ್ದಾರೆ.
ಸೇವೆ ಕಾಯಂಗೆ ಆಗ್ರಹಿಸಿ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ ಅತಿಥಿ ಉಪನ್ಯಾಸಕರು
ಸಿದ್ದಗಂಗಾ ಮಠದಿಂದ ಫ್ರೀಡಂ ಪಾರ್ಕಿನವರೆಗೆ ಪಾದಯಾತ್ರೆ@osd_cmkarnataka @drmcsudhakar @siddaramaiah @BJP4Karnataka @INCKarnataka pic.twitter.com/uQWnpRs01G
— eedina.com (@eedinanews) January 1, 2024
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಲು ಸೂಕ್ತ ಯೋಜನೆ ರೂಪಿಸುವುದಾಗಿ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ನಾವು ಸರ್ಕಾರಕ್ಕೆ ಕೇಳುತ್ತಿದ್ದೇವೆ. ಹತ್ತು ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಭದ್ರತೆ ಕೊಡಿ ಎಂದು ಕೇಳುವುದು ನಮ್ಮ ಹಕ್ಕು. ಅದಕ್ಕಾಗಿ ಕಳೆದ ಒಂದು 39 ದಿನಗಳಿಂದ ತರಗತಿ ಬಹಿಷ್ಕರಿಸಿ ನಾವು ಮುಷ್ಕರ ನಡೆಸುತ್ತಿದ್ದರೂ ನಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಪಾದಯಾತ್ರೆ ಮೂಲಕ ಹೋರಾಟ ತೀವ್ರಗೊಳಿಸಲು ನಾವು ತೀರ್ಮಾನಿಸಿದ್ದೇವೆ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ತಿಳಿಸಿದ್ದಾರೆ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಸದನದಲ್ಲೇ ಅಂದಿನ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದ್ದರು. ಈ ಸಂಬಂಧ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಈಗ ಅಧಿಕಾರಕ್ಕೆ ಬಂದಾಗ ಅದೇ ಮಾತಿನ ಮೇಲೆ ತಮ್ಮ ಸರ್ಕಾರ ಏಕೆ ನಿಲ್ಲುವುದಿಲ್ಲ? ಜೊತೆಗೆ ಪ್ರಣಾಳಿಕೆಯಲ್ಲೂ ಈ ಬಗ್ಗೆ ಭರವಸೆ ನೀಡಿದ್ದೀರಿ. ಹಾಗಾಗಿ ನುಡಿದಂತೆ ನಡೆಯುವ ಸರ್ಕಾರ ತಮ್ಮದು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿ ಎಂಬುದು ಅತಿಥಿ ಉಪನ್ಯಾಸಕರ ಆಗ್ರಹವಾಗಿದೆ.
ಅತಿಥಿ ಉಪನ್ಯಾಸಕರ ವೇತನ 5 ಸಾವಿರಕ್ಕೆ ಹೆಚ್ಚಿಸಿದ್ದ ರಾಜ್ಯ ಸರ್ಕಾರ
ಅತಿಥಿ ಉಪನ್ಯಾಸಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದ ಸರ್ಕಾರ, ಆ ಮಾತುಕತೆಯ ನಂತರ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ʼಅತಿಥಿ ಉಪನ್ಯಾಸಕರ ವೇತನ 5 ಸಾವಿರ ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದರು.
“ಪರಿಷ್ಕೃತ ವೇತನವು ಜನವರಿ 1, 2024 ರಿಂದ ಅನ್ವಯವಾಗಲಿದೆ. ಜೊತೆಗೆ ಅತಿಥಿ ಉಪನ್ಯಾಸಕರಿಗೆ ಇನ್ಕ್ರಿಮೆಂಟ್, ವೇತನ ಸಹಿತ ರಜೆ, ಆರೋಗ್ಯ ಸವಲತ್ತು, ನಿವೃತ್ತ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಿದ್ದೇವೆ” ಎಂದಿದ್ದರು.