‘ಎನ್‌ಜಿಒಗಳಲ್ಲಿ ನಗರ ನಕ್ಸಲರು’ ನುಸುಳಿದ್ದಾರೆ ಮತ್ತು ಅವರು ಸರ್ಕಾರದ ವಿರುದ್ಧ ಸಕ್ರಿಯವಾಗಿ ಸುಳ್ಳು ಹರಡುತ್ತಿದ್ದಾರೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿಕೆ ನೀಡಿದ ಒಂದು ವಾರದ ನಂತರ ಪುಣೆ ಮೂಲದ ಸಂಘಟನೆಯೊಂದು ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದೆ.
ಈ ರೀತಿ ಇರುವ ಎನ್‌ಜಿಒಗಳ ಹೆಸರನ್ನು ಶಿಂಧೆ ಬಹಿರಂಗಪಡಿಸಬೇಕು ಅಥವಾ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಜೂನ್ 16ರಂದು ವಿಧಾನ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಂದೆ, “ನಕ್ಸಲರು ಗಡ್ಚಿರೋಲಿಯಲ್ಲಿ (ಮಹಾರಾಷ್ಟ್ರದ ಒಂದು ನಗರ) ಮಾತ್ರವಲ್ಲ, ನಗರ ನಕ್ಸಲರು ಎನ್‌ಜಿಒಗಳಿಗೆ ಪ್ರವೇಶಿಸಿದ್ದಾರೆ. ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಿದ್ದಾರೆ” ಎಂದು ಶಿಂದೆ ದೂರಿದ್ದರು.
“ಎಲ್ಲಾ ಎನ್‌ಜಿಒಗಳು ಅಲ್ಲ ಆದರೆ ಕೆಲವು ಎನ್‌ಜಿಒಗಳು ಆಡಳಿತ ವಿರೋಧಿಯಾಗಿದೆ. ಆ ಎನ್‌ಜಿಒಗಳು ನಮ್ಮ ಮೈತ್ರಿ ಸರ್ಕಾರದ ಬಗ್ಗೆ ಸಕ್ರಿಯವಾಗಿ ಸುಳ್ಳುಗಳನ್ನು ಹರಡುತ್ತಾರೆ” ಎಂದು ಶಿಂದೆ ಆರೋಪಿಸಿದ್ದರು.
ಇದನ್ನು ಓದಿದ್ದೀರಾ? ‘ನಗರ ನಕ್ಸಲ್’ ದಂಪತಿಗಳ ದುರಂತಗಾಥೆ ಮತ್ತು ಫ್ರಾಕ್ಚರ್‍ಡ್ ಫ್ರೀಡಂ
‘ನಿರ್ಭಯ್ ಬನೊ’ (ನಿರ್ಭಯವಾಗು) ಜನಾಂದೋಲನದ ಸಕ್ರಿಯ ಸದಸ್ಯ ಎಂದು ಹೇಳಿಕೊಳ್ಳುವ ಬಾಲಕೃಷ್ಣ ಅಲಿಯಾಸ್ ಬಂಟಿ ನಿಧಾಲ್ಕರ್ ಕಳುಹಿಸಿರುವ ನೋಟಿಸ್‌ನಲ್ಲಿ, ” ಮಹಾರಾಷ್ಟ್ರ ಜನರು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಮುಖ್ಯಮಂತ್ರಿಯಾಗಿರುವ ಶಿಂದೆ ಅವರು ಪ್ರತಿಯೊಂದು ವಿಷಯಕ್ಕೂ ರಾಜಕೀಯವನ್ನು ಎಳೆದು ತರುವುದು ಅನುಚಿತವಾಗಿದೆ” ಎಂದು ಹೇಳಲಾಗಿದೆ.
ನೋಟಿಸ್‌ನಲ್ಲಿ ಕೃಷಿ ಬಿಕ್ಕಟ್ಟು ಮತ್ತು ಇತರ ಸಮಸ್ಯೆಗಳ ನಡುವೆ ಹೆಚ್ಚುತ್ತಿರುವ ನಿರುದ್ಯೋಗದ ಪ್ರಸ್ತಾಪ ಮಾಡಲಾಗಿದ್ದು, ಇಂತಹ ಸಮಸ್ಯೆಗಳು ಇರುವಾಗ ಶಿಂದೆ ಆರೋಪ ಅಸಂಬದ್ಧ ಮತ್ತು ಕಾನೂನುಬಾಹಿರ. ಮುಖ್ಯಮಂತ್ರಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಅಭಿಪ್ರಾಯಿಸಲಾಗಿದೆ.
ವಕೀಲ ಅಸೀಮ್ ಸರೋದೆ ಮೂಲಕ ಕಳುಹಿಸಲಾದ ನೋಟಿಸ್‌ನಲ್ಲಿ, “ಶಿವಸೇನೆ ನಾಯಕರು ನೀಡಿದ ಈ ಹೇಳಿಕೆಯು ನಗರ ನಕ್ಸಲರಾದ ವಿವಿಧ ಎನ್‌ಜಿಒಗಳ ಬಗ್ಗೆ ಅವರಿಗೆ ತಿಳಿದಿದೆ ಎಂದು ಸೂಚಿಸುತ್ತದೆ. ಆದ್ದರಿಂದ ಈ ಎಲ್ಲಾ ಎನ್‌ಜಿಒಗಳ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಕ್ರಮ ಜರುಗಿಸಬೇಕು, ಸಾರ್ವಜನಿಕ ಪ್ರಕಟಣೆ ನೀಡಬೇಕು” ಎಂದು ಮನವಿ ಮಾಡಲಾಗಿದೆ.