- ಬೈಡನ್ ಅವರ ನೂತನ ಪ್ರಚಾರ ತಂಡವು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಘೋಷಣೆ
- ನವೆಂಬರ್ 2024ರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಪ್ರತಿಸ್ಪರ್ಧಿ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪುನಃ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
80 ವರ್ಷದ ಡೆಮಾಕ್ರಾಟ್ ಪಕ್ಷದಿಂದ ಅಧ್ಯಕ್ಷರಾಗಿರುವ ಜೋ ಬೈಡನ್, “ಪ್ರತಿ ಪೀಳಿಗೆಯೂ ಪ್ರಜಾಪ್ರಭುತ್ವದ ಪರವಾಗಿ ನಿಲ್ಲುತ್ತದೆ ಹಾಗೂ ಅವರ ಮೂಲಭೂತ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತುವ ಸಂದರ್ಭ ಒದಗಿ ಬಂದಿದೆ. ಪ್ರಸ್ತುತ ಭವಿಷ್ಯ ನಮ್ಮದು ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ಅಮೆರಿಕಾ ಅಧ್ಯಕ್ಷನಾಗಿ ಮರುಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಭವಿಷ್ಯವನ್ನು ಉಜ್ವಲಗೊಳಿಸುವ ಕೆಲಸಕ್ಕೆ ಮುನ್ನುಡಿ ಬರೆಯುವ ನಮ್ಮ ಜೊತೆಗೂಡಿ” ಎಂದು ತಿಳಿಸಿದ್ದಾರೆ.
ಈಗಾಗಲೇ ನಾಲ್ಕು ವರ್ಷ ಅಧಿಕಾರ ಅನುಭವಿಸುತ್ತಿರುವ ಜೋ ಬೈಡನ್ ಅವರಿಗೆ ಅಮೆರಿಕಾ ಪ್ರಜೆಗಳು ಮತ್ತೊಂದು ಅವಧಿಗೆ ಅಧಿಕಾರ ನೀಡುತ್ತಾರೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಬೈಡನ್ ಅವರ ನೂತನ ಪ್ರಚಾರ ತಂಡವು ಬಿಡುಗಡೆ ಮಾಡಿದ ಮೂರು ನಿಮಿಷಗಳ ಅವಧಿಯ ವಿಡಿಯೋದಲ್ಲಿ ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿದರು. ಈ ವಿಡಿಯೋದಲ್ಲಿ ಅಮೆರಿಕದ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ದೇಶದ ನಾಗರಿಕರ ಜವಾಬ್ದಾರಿ ಎಂದು ತಿಳಿಸಿದ್ದಾರೆ. 2021ರ, ಜನವರಿ 6ರಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಿಂದ ಅಮೆರಿಕದ ಕ್ಯಾಪಿಟಲ್ ಮೇಲೆ ನಡೆದ ದಾಳಿಯ ಚಿತ್ರಣದೊಂದಿಗೆ ವಿಡಿಯೋ ತೆರೆದುಕೊಳ್ಳುತ್ತದೆ.
ಈ ಸುದ್ದಿ ಓದಿದ್ದೀರಾ? 10 ವರ್ಷಗಳ ನಂತರ ಪಾಕ್ ಸಚಿವ ಭಾರತಕ್ಕೆ ಭೇಟಿ; ಜೈಶಂಕರ್ ಆಹ್ವಾನ ಹಿನ್ನೆಲೆ ಆಗಮನ
“ನಾನು ನಾಲ್ಕು ವರ್ಷಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ, ನಾವು ಅಮೆರಿಕದ ಆತ್ಮವನ್ನು ಕಾಪಾಡುವ ಯುದ್ಧದಲ್ಲಿದ್ದೆವು ಮತ್ತು ನಾವು ಇನ್ನೂ ಹೋರಾಡುತ್ತಿದ್ದೇವೆ. ಇದು ಸಮಾಧಾನಪಡುವ ಸಮಯವಲ್ಲ. ಅದಕ್ಕಾಗಿಯೇ ನಾನು ಮರು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನಮ್ಮ ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ನಾವು ಮಾಡಬಹುದು ಎಂದು ನನಗೆ ತಿಳಿದಿದೆ” ಎಂದು ಬೈಡನ್ ತಿಳಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ವೇದಿಕೆಗಳು ಅಮೆರಿಕದ ಸ್ವಾತಂತ್ರ್ಯಕ್ಕೆ ಬೆದರಿಕೆ ಎಂದು ಬೈಡೆನ್ ವಿವರಿಸಿದ್ದಾರೆ. ಮಹಿಳೆಯರ ಆರೋಗ್ಯ ರಕ್ಷಣೆ, ಸಾಮಾಜಿಕ ಭದ್ರತೆಯನ್ನು ಕಡಿತಗೊಳಿಸುವ ಮತ್ತು ಪುಸ್ತಕಗಳನ್ನು ನಿಷೇಧಿಸುವ ಪ್ರಯತ್ನಗಳ ವಿರುದ್ಧ ಹೋರಾಡುವುದಾಗಿ ಅಮೆರಿಕದ ಅಧ್ಯಕ್ಷರು ಪ್ರತಿಜ್ಞೆ ಮಾಡಿದರು. ಇದೇ ಸಂದರ್ಭದಲ್ಲಿ ‘ಮಗಾ’ ಎಂಬ ಘೋಷ ವಾಕ್ಯವನ್ನು ಬಿಡುಗಡೆಗೊಳಿಸಿದರು. ಈ ರಾಜಕೀಯ ಘೋಷಣೆಯ ಸಂಕ್ಷಿಪ್ತ ರೂಪ “ಮೇಕ್ ಅಮೆರಿಕ ಗ್ರೇಟ್ ಎಗೇನ್”. ಅಂದರೆ ಮತ್ತೊಮ್ಮೆ ಅಮೆರಿಕವನ್ನು ಶ್ರೇಷ್ಠಗೊಳಿಸುವುದು ಎಂದಾಗಿದೆ. ಬೈಡನ್ ಅವರಿಗೆ ನವೆಂಬರ್ 2024ರಲ್ಲಿ ನಡೆಯುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಪ್ರತಿಸ್ಪರ್ಧಿಯಾಗಲಿದ್ದಾರೆ.