ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಜುಲೈ 16ರಂದು ಗುಡ್ಡ ಕುಸಿದು ಆರು ಮಂದಿ ಸಾವನ್ನಪ್ಪಿದ್ದರು. ಕುಸಿದಿರುವ ಮಣ್ಣಿನ ಅಡಿಯಲ್ಲಿ ಸಿಲುಕಿರುವ ಲಾರಿಯಲ್ಲಿ ಚಾಲಕರೊಬ್ಬರು ಸಕ್ಕಿಕೊಂಡಿದ್ದು, ಆತ ಬದುಕಿದ್ದಾರೆ ಎಂದು ಹೇಳಲಾಗುತ್ತಿದೆ. ಮಣ್ಣು ತೆರವು ಕಾರ್ಯಾಚರಣೆ ಕೂಡ ನಡೆಯುತ್ತಿದೆ. ಭಾನುವಾರ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದು, ಚಾಲಕನ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸುವಂತೆ ಸೂಚನೆ ನೀಡಿದ್ದಾರೆ.
ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಫ್ ಸಿಬ್ಬಂದಿ ಜೊತೆ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕಾರ್ಯಾಚರಣೆಗೆ ಲಭ್ಯವಿರುವ ಎಲ್ಲ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು. ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಬೇಕು” ಎಂದು ಸೂಚನೆ ನೀಡಿದ್ದಾರೆ.
“ಗುಡ್ಡ ಕುಸಿತದ ಸ್ಥಳ ಒಂದು ರೀತಿ ದ್ವೀಪದಂತಾಗಿದೆ. ಸುತ್ತಲೂ ಕಾಳಿ ನದಿ ಭೋರ್ಗರೆದು ಹರಿಯುತ್ತಿದೆ. ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ. ಹೀಗಾಗಿ ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು ತಂತ್ರಜ್ಞಾನದ ನೆರವು ಪಡೆಯಬೇಕು” ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
“ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರುವ ಸಾಧ್ಯತೆ ಇದೆ. ಅವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ” ಎಂದು ಸಿದ್ದರಾಮಯ್ಯ ಅವರಿಗೆ ನಾಲ್ಕು ದಿನಗಳಿಂದ ಶಿರೂರಿನಲ್ಲೇ ಮೊಕ್ಕಾಂ ಹೂಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ವಿವರಿಸಿದ್ದಾರೆ.
ಈ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.
ಜುಲೈ 16ರಂದು ಶಿರೂರು ಬಳಿಯ ಹೆದ್ದಾರಿಯಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಹೆದ್ದಾರಿ ಪಕ್ಕದಲ್ಲಿ ಅಂಗಡಿ ನಡೆಸುತ್ತಿದ್ದ ಒಂದೇ ಕುಟುಂಬದ ಐವರು ಸೇರಿ ಆರು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಹಲವಾರು ವಾಹನಗಳು ಗಂಗಾವಳಿ ನದಿಗೆ ಬಿದ್ದಿದ್ದವು. ಕಳೆದ ಆರು ದಿನಗಳಿಂದ ಗುಡ್ಡ ಕುಸಿದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.