ಒಂದೇ ಪ್ರಕರಣವನ್ನು ಮೂರು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಒಂದೊಂದು ಸಂಸ್ಥೆಯೂ ಒಂದೊಂದು ರೀತಿಯ ಆಯಾಮವನ್ನು ಕೊಡುತ್ತಿವೆ. ಹೀಗಾಗಿ, ಯಾವ ಸಂಸ್ಥೆ ಹೇಳುತ್ತಿರುವುದು ಸತ್ಯ ಎಂದು ಮತ್ತೊಂದು ತನಿಖೆ ನಡೆಸಬೇಕಾದ ದರ್ದು ಬರಬಹುದು...
ರಾಜ್ಯ ರಾಜಕಾರಣದಲ್ಲಿ ಆಪಾದಿತ ಮುಡಾ ಅಕ್ರಮ ಮತ್ತು ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರ ಭಾರೀ ಸಂಚಲನ ಸೃಷ್ಟಿಸಿವೆ. ಮುಡಾ ಅಕ್ರಮ ಕೇವಲ ಬಿಜೆಪಿ ಸೃಷ್ಟಿಸಿರುವ ವಿವಾದವೆಂದು ಹೇಳಲಾಗುತ್ತಿದೆ. ಆದರೆ, ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದು ಖಚಿತ ಎಂಬ ಮಾತುಗಳಿದ್ದವು. ಅಕ್ರಮ ಸಂಬಂಧ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಇದೀಗ, ಪ್ರಕರಣದಲ್ಲಿ ಚಾರ್ಜ್‌ಶೀಟ್‌ಅನ್ನು ಸಲ್ಲಿಸಲಾಗಿದ್ದು, ನಾಗೇಂದ್ರ ಅವರೇ ಹಗರಣದ ರೂವಾರಿ ಎಂದು ಹೇಳಿದೆ.
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಕಳೆದ ಜುಲೈ 12ರಂದೇ ನಾಗೇಂದ್ರ ಅವರನ್ನು ಇಡಿ ಬಂಧಿಸಿತ್ತು. ಅವರನ್ನು ಬಂಧಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾದಿಯಾಗಿ, ಕಾಂಗ್ರೆಸ್‌ನ ಎಲ್ಲ ನಾಯಕರು ನಿಗಮದಲ್ಲಿ ಯಾವುದೇ ಹಗರಣ ನಡೆದಿಲ್ಲವೆಂದು ಖಡಾಖಂಡಿತವಾಗಿ ಹೇಳಿದ್ದರು. ನಾಗೇಂದ್ರ ಅವರ ಬಂಧನವನ್ನು ವಿರೋಧಿಸಿದ್ದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿರುವ ಪಿತೂರಿ ಎಂದು ಆರೋಪಿಸಿದ್ದರು.
ಗಮನಾರ್ಹ ಸಂಗತಿ ಎಂದರೆ, ವಾಲ್ಮೀಕಿ ನಿಮಗದ ಹಗರಣದ ಬಗ್ಗೆ ಇಡಿ ಮಾತ್ರವೇ ತನಿಖೆ ನಡೆಸುತ್ತಿಲ್ಲ. ಕೇಂದ್ರ ಸರ್ಕಾರದ ಆಣತಿಯಲ್ಲಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಕೂಡ ತನಿಖೆ ನಡೆಸುತ್ತಿದೆ. ಮಾತ್ರವಲ್ಲದೆ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವೂ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಈಗಾಗಲೇ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಿದೆ. ಇದೀಗ, ಇಡಿ ಕೂಡ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇನ್ನು, ಸಿಬಿಐ ಚಾರ್ಜ್‌ಶೀಟ್ ಬಾಕಿ ಇದೆ.

ಸದ್ಯ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇಡಿ ಚಾರ್ಜ್‌ಶೀಟ್ ಸಲ್ಲಿಸಿದೆ. ನಿಗಮದಲ್ಲಿ 94 ಕೋಟಿ ರೂ. ಅಕ್ರಮ ನಡೆದಿರುವುದು ಸತ್ಯ. ಅಕ್ರಮದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರೇ ಮೊದಲ ಆರೋಪಿ. ಅಕ್ರಮದ ಹಣದಲ್ಲಿ 20.19 ಕೋಟಿ ರೂ.ಗಳನ್ನು ಲೋಕಸಭಾ ಚುನಾವಣೆಯ ವೇಳೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದೆ.
ನಿಗಮದ ಹಣವನ್ನು ಅಕ್ರಮವಾಗಿ ಬಳಸಿಕೊಳ್ಳಲು ನಾಗೇಂದ್ರ ಅವರು ಚುನಾವಣೆಗೂ ಮುನ್ನವೇ ಸಂಚು ರೂಪಿಸಿದ್ದರು. ನಿಗಮದ ಹಣವನ್ನು ಲೂಟಿ ಮಾಡುವುದಕ್ಕಾಗಿಯೇ ತಮ್ಮ ಆಪ್ತ ಜೆ.ಜಿ. ಪದ್ಮನಾಭ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿಕೊಂಡಿದ್ದರು. ನಾಗೇಂದ್ರ ಅವರೇ ಯೂನಿಯನ್ ಬ್ಯಾಂಕ್‌ನಲ್ಲಿ ನಿಗಮದ ಮತ್ತೊಂದು ಖಾತೆ ತೆರೆಯಲು ಮತ್ತು ಹಣವನ್ನು ಆ ಖಾತೆಗೆ ವರ್ಗಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಆಣತಿಯಂತೆಯೇ ಅಧಿಕಾರಿಗಳು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಅಕ್ರಮವಾಗಿ ವರ್ಗಾವಣೆ ಮಾಡಲಾದ ಹಣದಲ್ಲಿ 5.16 ಕೋಟಿ ರೂ.ಗಳನ್ನು ನಾಗೇಂದ್ರ ಅವರೇ ಬಳಸಿಕೊಂಡಿದ್ದಾರೆ ಎಂದೂ ಇಡಿ ಆರೋಪಿಸಿದೆ.
ಲೋಕಸಭಾ ಚುನಾವಣೆ ವೇಳೆ, ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಮತದಾರರನ್ನು ಸೆಳೆಯಲು ನಿಗಮದ ಹಣವನ್ನು ಬಳಸಲಾಗಿದೆ. ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲೂ ಹಣ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಕೋಟ್ಯಂತರ ಹಣವನ್ನು ಮದ್ಯದಂಗಡಿಗಳಿಗೆ ವರ್ಗಾಯಿಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಇಡಿ ಉಲ್ಲೇಖಿಸಿದೆ.
ಅಕ್ರಮವಾಗಿ ಹಣ ವರ್ಗಾವಣೆಗಾಗಿ ನಾಗೇಂದ್ರ ಅವರು ಬೆಂಗಳೂರಿನ ವಸಂತನಗರದ ಶಾಂಗ್ರಿ–ಲಾ ಹೋಟೆಲ್‌ನಲ್ಲಿ ಸಭೆ ನಡೆಸಿದ್ದರು. ಆ ಸಭೆಯ ಸಾಕ್ಷ್ಯಗಳು ಲಭ್ಯವಾಗಿವೆ. ಜೊತೆಗೆ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಮತಗಟ್ಟೆಯಲ್ಲಿ ಎಷ್ಟು ಹಣ ಹಂಚಲಾಗಿದೆ ಎಂಬುದರ ಸಂಪೂರ್ಣ ವಿವರ ನಾಗೇಂದ್ರ ಆಪ್ತ ಸಹಾಯಕ ವಿಜಯಕುಮಾರ್ ಮೊಬೈಲ್‌ನಲ್ಲಿ ದೊರೆತಿದೆ ಎಂದೂ ಇಡಿ ಹೇಳಿದೆ.

ನಾಗೇಂದ್ರ ಮಾತ್ರವಲ್ಲದೆ, ವಾಲ್ಮೀಕಿ ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಅವರನ್ನೂ ಇಡಿ ಬಂಧಿಸಬಹುದು ಎಂದು ಹೇಳಲಾಗುತ್ತಿದೆ.
ಅಂದಹಾಗೆ, ವಾಲ್ಮೀಕಿ ನಿಗಮದ ಅಕ್ರಮ ಕುರಿತ ತನಿಖೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು. ಅಕ್ರಮದ ಬಗ್ಗೆ ತನಿಖೆ ನಡೆಸಿದ್ದ ಎಸ್‌ಐಟಿ ಈ ಹಿಂದೆಯೇ ಚಾರ್ಜ್‌ಶೀಟ್ ಸಲ್ಲಿಸಿತ್ತು. ಚಾರ್ಜ್‌ಶೀಟ್‌ನಲ್ಲಿ ಅಕ್ರಮದಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲವೆಂದು ಹೇಳಿದ್ದ ಎಸ್‌ಐಟಿ, ಅಕ್ರಮದಲ್ಲಿ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂದು ಹೇಳಿತ್ತು.
ಆದರೆ, ಇಡಿ ಚಾರ್ಜ್‌ಶೀಟ್ ಎಸ್‌ಐಟಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ಗೆ ವ್ಯತಿರಿಕ್ತವಾಗಿದೆ. ಅಕ್ರಮದಲ್ಲಿ ನಾಗೇಂದ್ರ ಅವರೇ ಪ್ರಮುಖ ಆರೋಪಿ ಎಂದು ಹೇಳಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ, ಇಡಿ ಮತ್ತು ಎಸ್‌ಐಟಿ ಚಾರ್ಜ್‌ಶೀಟ್‌ಗಳಲ್ಲಿ ಅಕ್ರಮದಲ್ಲಿ ನಾಗೇಂದ್ರ ಅವರ ಪಾತ್ರದ ಬಗ್ಗೆ ಮಾತ್ರವೇ ಭಿನ್ನತೆ ಇದೆ. ಆದರೆ, ನಿಗಮದಲ್ಲಿ ಅಕ್ರಮ ನಡೆದಿದೆ ಎಂಬುದನ್ನು ರಾಜ್ಯ ಸರ್ಕಾರವೇ ನೇಮಿಸಿದ್ದ ಎಸ್‌ಐಟಿಯೂ ಹೇಳಿದೆ. ಇಡಿಯೂ ಆರೋಪಿಸಿದೆ.
ಇಡಿ ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಅವರೇ ಎ1 ಆರೋಪಿಯಾಗಿರುವುದು ಬಿಜೆಪಿಗರಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ಅಶ್ವತ್ಥ ನಾರಾಯಣ, ವಿಪಕ್ಷ ನಾಯಕ ಆರ್ ಅಶೋಕ್ ಆದಿಯಾಗಿ ಬಿಜೆಪಿಯ ಎಲ್ಲ ನಾಯಕರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಗರಣದ ಹೊಣೆ ಹೊರಬೇಕು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಹೇಗಾದರೂ, ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲೇಬೇಕೆಂದು ಹೆಣಗಾಡುತ್ತಿರುವ ಬಿಜೆಪಿಗರು, ಈ ಹಿಂದೆ ಮುಡಾ ಅಕ್ರಮದಲ್ಲಿ ಸಿದ್ದರಾಮಯ್ಯರ ಪಾತ್ರವಿದೆ. ಅವರು ರಾಜೀನಾಮೆ ನೀಡಬೇಕೆಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದರು. ಈಗ, ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಹೆಸರು ಇರುವುದಕ್ಕೂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಟ್ರಸ್ಟ್ ಆಸ್ಪತ್ರೆಗಾಗಿ ಭೂಮಿ ಸ್ವಾಧೀನ: ವಿಜಯೇಂದ್ರ ವಿರುದ್ಧ ಆಯನೂರು ಆರೋಪ
ರಾಜ್ಯ ಬಿಜೆಪಿಗರಿಗೆ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವುದಕ್ಕಿಂತ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದೇ ಆದ್ಯತೆಯೂ – ಗುರಿಯೂ ಆಗಿದೆ. ಅದೇನೇ ಇರಲಿ, ಈ ಹಿಂದೆ, ಅಕ್ರಮ ಬೆಳಕಿಗೆ ಬಂದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ”ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಕೇಂದ್ರ ಸರ್ಕಾರ ವಾಮಮಾರ್ಗದ ಮೂಲಕ ಯತ್ನಿಸುತ್ತಿದೆ. ವಾಲ್ಮೀಕಿ ಹಗರಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಹಗರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರು ಹೇಳುವಂತೆ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆಯ ಮಾಜಿ ನಿರ್ದೇಶಕ ಬಿ ಕಲ್ಲೇಶಪ್ಪ ಅವರಿಗೆ ಇಡಿ ಆಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ಪಿತೂರಿ” ಎಂದು ಹೇಳಿದ್ದರು.
ಆದರೆ, ಈಗ ತಮ್ಮದೇ ಸರ್ಕಾರ ರಚಿಸಿದ್ದ ಎಸ್‌ಐಟಿ ಮತ್ತು ಕೇಂದ್ರ ಸರ್ಕಾರದ ಕೈಗೊಂಬೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಇಡಿ– ಎರಡೂ ಕೂಡ ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿದೆ ಎಂದು ಹೇಳುತ್ತಿವೆ. ಈ ಅಕ್ರಮದ ರೂವಾರಿ ಯಾರು? ಎಸ್‌ಐಟಿ ಹೇಳುವಂತೆ ಅಧಿಕಾರಿಗಳೇ? ಅಥವಾ ಇಡಿ ಹೇಳುವಂತೆ ನಾಗೇಂದ್ರ ಅವರೇ? –ಈ ಪ್ರಶ್ನೆಗೆ ಸಮರ್ಪಕವಾದ ಉತ್ತರ ದೊರೆತಿಲ್ಲ.
ಒಂದೇ ಪ್ರಕರಣವನ್ನು ಮೂರು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಒಂದೊಂದು ಸಂಸ್ಥೆಯೂ ಒಂದೊಂದು ರೀತಿಯ ಆಯಾಮವನ್ನು ಕೊಡುತ್ತಿವೆ. ಹೀಗಾಗಿ, ಯಾವ ಸಂಸ್ಥೆ ಹೇಳುತ್ತಿರುವುದು ಸತ್ಯ ಎಂದು ಮತ್ತೊಂದು ತನಿಖೆ ನಡೆಸಬೇಕಾದ ದರ್ದು ಬರಬಹುದು.
ಇದೆಲ್ಲದರ ನಡುವೆ, ಇಡಿ ಚಾರ್ಜ್‌ಶೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ, ”ಇಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಹೆಸರು ಇರುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಇಡಿಯಿಂದ ನಮ್ಮ ಇಲಾಖೆಗೆ ವರದಿ ಬಂದಿಲ್ಲ” ಎಂದಿದ್ದಾರೆ. ಇದು, ನುಣುಚಿಕೊಳ್ಳುವ ಹೇಳಿಕೆಯಂತೆ ಕಂಡರೂ, ವಾಸ್ತವದಲ್ಲಿ ಇಡಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಮಾಹಿತಿ ನೀಡದೆಯೂ ಇರಬಹುದು ಎಂಬುದೂ ಕೂಡ ಅಷ್ಟೇ ಸ್ಪಷ್ಟ.
ಏನಾದರೂ ಇರಲಿ, ಇಲ್ಲಿ ಅಕ್ರಮ ನಡೆದಿದೆ. ಪರಿಶಿಷ್ಟ ಸಮುದಾಯಗಳಿಗೆ ಸೇರಬೇಕಾದ, ಪರಿಶಿಷ್ಟ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣ, ಅಕ್ರಮವಾಗಿ ದುರ್ಬಳಕೆಯಾಗಿದೆ. ಈ ಹಿಂದೆಯೇ, ನಿಗಮದ ಹಣ ಚುನಾವಣೆಗಾಗಿ ಪೋಲಾಗಿದೆ ಎಂದು ಆರೋಪಿಸಲಾಗಿತ್ತು. ಈಗ, ಹಣ ದುರ್ಬಳಕೆಯಾಗಿರುವುದು ಸ್ಪಷ್ಟವಾಗಿದೆ. ಯಾರೇ ತಪ್ಪು ಮಾಡಿದ್ದರೂ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ತಮ್ಮದೇ ಸರ್ಕಾರದಲ್ಲಿ ಸಚಿವರಾಗಿದ್ದವರೂ, ಶಾಸಕರಾಗಿರುವವರು, ನಿಗಮದ ಅಧ್ಯಕ್ಷರಾಗಿರುವವರು ಅಕ್ರಮದಲ್ಲಿ ಭಾಗಿಯಾಗಿದ್ದರೆ, ಅವರ ವಿರುದ್ಧವೂ ಕ್ರಮ ಜರುಗಿಸಬೇಕು. ದುರ್ಬಳಕೆಯಾದ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಿ, ವಾಲ್ಮೀಕಿ ಸಮುದಾಯದ ಜನರ ಅಭಿವೃದ್ದಿಗೆ ಬಳಸಬೇಕು. ಪರಿಶಿಷ್ಟರಿಗೆ ನ್ಯಾಯ ಒದಗಿಸಬೇಕು.