ವೀರಪ್ಪ ಮೊಯ್ಲಿ ಮರೆಯಲಾರದ ರಾಜಕಾರಣಿಯೂ ಹೌದು ಮತ್ತು ಲೇಖಕರೂ ಹೌದು ಎಂದು ಡಾ.ಪುರುಷೋತ್ತಮ ಬಿಳಿಮಲೆ ಬಣ್ಣಿಸಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ವೀರಪ್ಪ ಮೊಯ್ಲಿ ವಿರಚಿತ ‘ವಿಶ್ವಸಂಸ್ಕೃತಿಯ ಮಹಾಯಾನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. “ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಶಾಸಕರಾಗಿ ನಾಡಿಗೆ ಸಲ್ಲಿಸಿರುವ ಸೇವೆ ಶ್ಲಾಘನೀಯ. ಈ ಪುಸ್ತಕದ ಉಳಿದ ಸಂಪುಟಗಳನ್ನೂ ಅವರು ಬರೆಯುವಂತಾಗಲಿ” ಎಂದು ಆಶಿಸಿದರು.
“ವಿಶ್ವಸಂಸ್ಕೃತಿಯ ಮಹಾಯಾನ ಪುಸ್ತಕದಲ್ಲಿ 20 ಅಧ್ಯಾಯಗಳಿದ್ದು, ವಸುದೈವ ಕುಟುಂಬಕಂ ಅಧ್ಯಾಯದಲ್ಲಿ ಭೂಮಿಯ ಉದಯವನ್ನು, ಮಾನಸ ಗಂಗೋತ್ರಿ ಅಧ್ಯಾಯದಲ್ಲಿ ಹಿಂದಿನ ಪರಂಪರೆಯನ್ನು, ಮಾನವತೆಯ ವಿಕಾಸವನ್ನು, ನಾಶವಾಗುತ್ತಿರುವ ಕೊರಗ ಭಾಷೆಯ ವಿಚಾರವನ್ನು ತಮ್ಮ ದಟ್ಟವಾದ ಸಾಮಾಜಿಕ ಪ್ರಜ್ಞೆಯ ಮೂಲಕ ಪುಸ್ತಕದಲ್ಲಿ ವಿವರಿಸಿದ್ದಾರೆ” ಎಂದು ಹೇಳಿದರು.
“ಜಗತ್ತಿನ ನ್ಯಾಯ ಪದ್ಧತಿ ಹಾಗೂ ಖಂಡಾಂತರ ಮಾಹಿತಿಯನ್ನು ಅರಿಯಲು ಮೊಯ್ಲಿ ಅವರ ಕಾವ್ಯ ಸಹಕಾರಿಯಾಗಲಿದೆ. ಹೊಸನೋಟದ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಇದು ಅವರ ಅವತರಣಿಕೆ. ಪುಸ್ತಕವನ್ನು ಓದುವ ಜತೆಗೆ ಜಗತ್ತಿನ ರಕ್ಷಣೆಗೆ ನಾವೆಲ್ಲರೂ ತಯಾರಾಗೋಣ” ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, “ರಾಜಕೀಯವಾಗಿ ಸಕ್ರಿಯವಾಗಿದ್ದು, ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವವರು ಅತಿ ವಿರಳ. ಅಂತಹವರಲ್ಲಿ ಮೊಯ್ಲಿಯವರು ಕೂಡ ಒಬ್ಬರು ಎಂದರು” ಎಂದರು.
ಡಾ. ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, “ಮೊಯ್ಲಿ ಅವರ ಸಾಧನೆ ಶ್ಲಾಘನೀಯ. ತನಗೆ ಜಗತ್ತು ಹೇಗೆ ಇರಬೇಕೆಂದು ಭಾವಿಸುತ್ತಾರೋ, ಅಂತಹ ಕೃತಿಯನ್ನು ರಚಿಸಿ, ಜಗತ್ತಿಗೆ ಅರ್ಪಿಸುತ್ತಾರೆ. ಮೊಯ್ಲಿ ಅವರು ಶ್ರೇಷ್ಠ ರಾಜಕಾರಣಿ, ಶ್ರೇಷ್ಠ ಸಾಹಿತಿಯೂ ಆಗಿದ್ದಾರೆ. ಅನೇಕ ಗೌರವ, ಪ್ರಶಸ್ತಿಗಳು ಸಂದಿವೆ. ಮನಸ್ಸನ್ನು ತೊಳೆಯುವ ಕೆಲಸವನ್ನು ಒಬ್ಬ ಸಾಹಿತಿಯಾಗಿ ವೀರಪ್ಪ ಮೊಯ್ಲಿ ಮಾಡಿದ್ದಾರೆ” ಎಂದು ಹೊಗಳಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, “ವಿಶ್ವದ ಸಂಸ್ಕೃತಿ ಹಾಳಾಗುತ್ತಿರುವ ಬಗ್ಗೆ ಚಿಂತನೆ ಮಾಡಬೇಕಿದೆ. ಜಗತ್ತಿನ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಇರಬೇಕು. ಸಭೆ ಒಂದು, ನಿಮ್ಮ ಮನಸ್ಸು ಒಂದು, ನಿಮ್ಮ ನಿರ್ಣಯ ಒಂದು. ಇದೆಲ್ಲವನ್ನೂ ಅಳವಡಿಸಿಕೊಂಡಾಗ ಮಾತ್ರ ದೇಶದ ಪ್ರಜಾಪ್ರಭುತ್ವ ಉಳಿವು ಸಾಧ್ಯ” ಎಂದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಮಂಜುನಾಥ್ ಸ್ವಾಮೀಜಿ, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ಪ್ರೊ.ರಾಧಾಕೃಷ್ಣ, ಕಾಂಗ್ರೆಸ್ ಮುಖಂಡರಾದ ಕೇಶವರೆಡ್ಡಿ, ಯರವಳ್ಳಿ ರಮೇಶ್, ಎಸ್.ಎಂ.ಮುನಿಸ್ವಾಮಿ, ಮುನಿಯಪ್ಪ, ಸಿ.ಆರ್.ಗೌಡ, ಆಂಜಿನಪ್ಪ, ಕೆ.ಆರ್.ನಾಗರಾಜು ಸೇರಿದಂತೆ ಗಣ್ಯ ಮುಖಂಡರು ಹಾಜರಿದ್ದರು.