ಕರ್ನಾಟಕದ ಬಿಜೆಪಿ ಶಾಸಕರಾದ ಸಿ.ಟಿ.ರವಿ, ಮನಿರತ್ನ ಅವರು ಮಾಡುತ್ತಿರುವ ಹೈಡ್ರಾಮಾಗಳಿಗಿಂತ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮಾಡುತ್ತಿರುವ ಹೈಡ್ರಾಮಾವು ಅವಿವೇಕದ ಪರಮಾವಧಿಯಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ತನಿಖೆಯೂ ನಡೆಯುತ್ತಿದೆ. ಈ ವಿಚಾರವಾಗಿ ಹೋರಾಟ ಮಾಡಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ ಕೂಡ ಹೌದು. ಆದರೆ ಅದು ವೈಜ್ಞಾನಿಕ ಮನೋಭಾವ ಬಿತ್ತುವ ಮಾದರಿಯಲ್ಲಿ ಇರಬೇಕು. ಈ ವಿಚಾರವಾಗಿ ಅಣ್ಣಾಮಲೈ ಮಾಡುತ್ತಿರುವ ಸ್ಟಂಟ್‌ಗಳು ವಿಚಿತ್ರಕಾರಿಯಾಗಿಯೂ, ಮೌಢ್ಯ ವಿರೋಧಿಸಿ ಬಹುದೊಡ್ಡ ಚಳವಳಿ ಕಟ್ಟಿದ ಪೆರಿಯಾರ್ ನೆಲಕ್ಕೆ ವಿರುದ್ಧವಾಗಿಯೂ ಇವೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.
ಡಿಎಂಕೆ ನೇತೃತ್ವದ ಸರ್ಕಾರ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ, ಕೊಯಮತ್ತೂರಿನಲ್ಲಿ ಪ್ರತಿಭಟನೆ ನಡೆಸಿದ ರೀತಿ ನಗೆಪಾಟಲಿಗೆ ಈಡಾಗಿದೆ. ಹಸಿರು ಧೋತಿಯನ್ನು ಧರಿಸಿ, ಅರೆಬೆತ್ತಲಾಗಿ ನಿಂತು ತಮ್ಮ ನಿವಾಸದ ಮುಂದೆ ಚಾಟಿಯಲ್ಲಿ ಹೊಡೆದುಕೊಂಡಿದ್ದಾರೆ. ಹಾಗೆ ಹೊಡೆದುಕೊಳ್ಳುವಾಗ ಅಣ್ಣಾಮಲೈ ಬೆಂಬಲಿಗನೊಬ್ಬರು ಬಂದು, ‘ಬೇಡ ಅಣ್ಣಾ, ಬೇಡ’ ಎಂದು ತಬ್ಬಿಕೊಳ್ಳುತ್ತಾನೆ. ಈ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕದ ಜನರೂ ಈ ವಿಡಿಯೊ ಹಂಚಿಕೊಂಡು, ‘ಐಪಿಎಸ್ ಅಧಿಕಾರಿಯಾಗಿದ್ದ ವ್ಯಕ್ತಿ ಕಾಮಿಡಿ ಪೀಸ್ ಆಗಿಬಿಟ್ಟರು’ ಎಂದು ಕಾಲೆಳೆದಿದ್ದಾರೆ.
What kinda drama is this 🤦🏻♂️
— 👑Che_ಕೃಷ್ಣ🇮🇳💛❤️ (@ChekrishnaCk) December 27, 2024
Why are they stopping him in between. pic.twitter.com/kdy2DKTz5L #Annamalai
ಅಣ್ಣಾಮಲೈ ಗುರುವಾರ ಸುದ್ದಿಗೋಷ್ಠಿ ನಡೆಸುತ್ತಾ, “ಡಿಎಂಕೆ ಸರ್ಕಾರವನ್ನು ಕಿತ್ತೊಗೆಯುವರೆಗೂ ಪಾದರಕ್ಷೆಗಳನ್ನು ಧರಿಸುವುದಿಲ್ಲ” ಎಂಬ ಪ್ರತಿಜ್ಞೆಯನ್ನು ಮಾಡಿದ್ದರು. ಇಂದು ಬರಿಗಾಲಿನಲ್ಲಿ ನಿಂತು ಚಾಟಿಯಲ್ಲಿ ಹೊಡೆದುಕೊಂಡಿದ್ದಾರೆ.
ಗುರುವಾರದ ಸುದ್ದಿಗೋಷ್ಠಿಯಲ್ಲಿ ಅಣ್ಣಾಮಲೈ ಕೇಳಿದ ಕೆಲವು ಪ್ರಶ್ನೆಗಳು ಮೌಲಿಕವಾಗಿದ್ದವು. “ಅತ್ಯಾಚಾರದಂತಹ ಪ್ರಕರಣದ ಎಫ್‌ಐಆರ್, ಸಾರ್ವಜನಿಕವಾಗಿ ಲಭ್ಯವಾಗಿದ್ದು ಹೇಗೆ? ಆ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗ ಮಾಡಲಾಗಿದೆ. ಅಣ್ಣಾ ಯೂನಿವರ್ಸಿಟಿಯಲ್ಲಿ ಸಿ.ಸಿ.ಟಿ.ವಿ ಯಾಕೆ ಕೆಲಸ ಮಾಡುತ್ತಿಲ್ಲ” ಎಂದು ಸರ್ಕಾರ ಮತ್ತು ಕಾನೂನು ಸಚಿವರ ವಿರುದ್ಧ ಅವರು ಮುಗಿಬಿದ್ದಿರುವುದು ಸರಿಯಾದದ್ದೇ ಆಗಿದೆ. “ಎಫ್ಐಆರ್ ಲೀಕ್ ಆಗಿರುವುದಕ್ಕೆ ಯಾರು ಕಾರಣ ಎಂಬುದನ್ನು ತನಿಖೆಯಿಂದ ದೃಢಪಡಿಸಬೇಕು, ಹೆಣ್ಣುಮಕ್ಕಳ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವಂತೆ ಹೋರಾಡಬೇಕು. ಆದರೆ ಸರ್ಕಾರದ ವಿರುದ್ಧದ ಹೋರಾಟದ ನೆಪದಲ್ಲಿ ಮೌಢ್ಯದ ಹಾದಿಯನ್ನು ಅಣ್ಣಾಮಲೈ ಹಿಡಿದಿರುವುದು, ಆ ಮೂಲಕ ಮುಗ್ಧ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ” ಎಂಬುದು ಪ್ರಜ್ಞಾವಂತ ಸಮುದಾಯದ ಆಕ್ಷೇಪ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಪ್ರತಿಕ್ರಿಯಿಸಿ, “ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ತಮಿಳುನಾಡಲ್ಲಿ ಬಿಜೆಪಿ ಸೇರಿದ ನಂತರ ಅವರ ಸ್ಥಿತಿ ನೋಡಿ! ಆತನಿಗೆ ಬಂದ ಗತಿಯನ್ನು ನೋಡಿ ಪಾರಂಪರಿಕವಾಗಿ ಚಾಟಿಯಲ್ಲಿ ಹೊಡಕೊಂಡು ಭಿಕ್ಷೆ ಬೇಡುತ್ತಿದ್ದ ನಮ್ಮ ಅಲೆಮಾರಿ ಸಿಂದೊಳ್ಳು ಕೂಡ ಮರುಕ ಪಡುತ್ತಿದ್ದಾರೆ” ಎಂದು ಕುಟುಕಿದ್ದಾರೆ.
“ಅಣ್ಣಾ ವಿವಿ ಪ್ರಕರಣದ ವಿಚಾರವಾಗಿ ಆರು ಮುರುಗನ್ ದೇವಾಲಯಗಳಿಗೆ ಫೆಬ್ರವರಿಯಲ್ಲಿ ಭೇಟಿ ನೀಡುತ್ತೇನೆ, ದೇವರಿಗೆ ದೂರು ಕೊಡುತ್ತೇನೆ” ಎಂದಿರುವುದೂ ಟೀಕೆಗೆ ಗುರಿಯಾಗಿದೆ. ಧಾರ್ಮಿಕ ಆಯಾಮದಲ್ಲಿ ಹೋರಾಟಗಳನ್ನು ತಮಿಳುನಾಡು ಬಿಜೆಪಿ ಕೈಗೆತ್ತಿಕೊಳ್ಳುತ್ತಿರುವುದನ್ನು ಜನರು ಪ್ರಶ್ನಿಸುತ್ತಿದ್ದಾರೆ. 2022ರಲ್ಲಾದ ಲಾವಣ್ಯ ಸೂಸೈಡ್ ಕೇಸ್ ವಿಚಾರದಲ್ಲಿ ಅಣ್ಣಾಮಲೈ ಸುಳ್ಳು ಆರೋಪವನ್ನು ಮಾಡಿದ್ದರು. ಇದು ಧಾರ್ಮಿಕ ಮತಾಂತರದ ಒತ್ತಾಯದಿಂದಾಗಿ ಆದ ಆತ್ಮಹತ್ಯೆ ಎಂದಿದ್ದರು. ಆದರೆ ಸಿಬಿಐ ತನಿಖೆಯು ಈ ಆಯಾಮವನ್ನು ಅಲ್ಲಗಳೆದಿತ್ತು. ಈ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ಕೂಡ ಇತ್ತೀಚೆಗೆ ಚಾಟಿ ಬೀಸಿತ್ತು. “ಲಾವಣ್ಯ ಪ್ರಕರಣದ ವಿಚಾರದಲ್ಲಿ ಸುಳ್ಳು ಹಬ್ಬಿಸಿದ್ದಕ್ಕಾಗಿ ಅಣ್ಣಾಮಲೈ ಕ್ಷಮೆಯಾಚಿಸಿ, ಅದಕ್ಕಾಗಿ ಚಾಟಿ ಏಟು ಹೊಡೆದುಕೊಳ್ಳಬೇಕು” ಎಂದು ವೀಣಾ ಜೈನ್ ಎಂಬವರು ಆಗ್ರಹಿಸಿದ್ದಾರೆ.
ಇದನ್ನೂ ಓದಿರಿ: ಮುನಿರತ್ನನ ಪರ ನಿಂತ ಸ್ತ್ರೀಯರು ಆತನ ʼಏಡ್ಸ್ ಟ್ರ್ಯಾಪ್ʼ ಕೃತ್ಯವನ್ನು ಬೆಂಬಲಿಸುವರೇ?; ರವಿ ಬೆಂಬಲಿಗರು ಆ ಪದವನ್ನು ಒಪ್ಪುವರೇ?
“ಅಣ್ಣಾಮಲೈ ಒಂದು ಕಾಲದಲ್ಲಿ ಕರ್ನಾಟಕದ ಗೌರವಾನ್ವಿತ ಐಪಿಎಸ್ ಅಧಿಕಾರಿಯಾಗಿದ್ದರು. ಇಂದು ವಿದೂಷಕನಾಗಿ ತನ್ನ ಘನತೆಯನ್ನು ಕಳೆದುಕೊಂಡಿದ್ದಾರೆ” ಎಂದು ಚೆ.ಕೃಷ್ಣ ಎಂಬವರು ವ್ಯಂಗ್ಯವಾಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋತಿರುವ ಅಣ್ಣಾಮಲೈ, ಮೌಢ್ಯಗಳ ಕಸರತ್ತು ನಡೆಸಿ ಪಕ್ಷವನ್ನು ಕಟ್ಟುವ ಕೆಲಸ ನಡೆಸುತ್ತಿದ್ದಾರೆ ಎಂಬ ಕಟು ವಿಮರ್ಶೆಗಳೂ ಬರುತ್ತಿವೆ.
ಅತ್ಯಾಚಾರದಂತಹ ವಿಚಾರದಲ್ಲಿ ಸಂಘಪರಿವಾರ ದ್ವಿಮುಖ ನೀತಿ ಅನುಸರಿಸುತ್ತದೆ ಎಂಬ ಟೀಕೆಗಳೂ ಬಂದಿವೆ. ಬಿಲ್ಕಿಸ್ ಬಾನೋ ಅವರ ಮೇಲೆ ಅತ್ಯಾಚಾರ ಎಸಗಿ, ಅವರ ಕುಟುಂಬದ ಏಳು ಜನರನ್ನು ಕೊಂದ ಅಪರಾಧಿಗಳನ್ನು ಗುಜರಾತ್ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿತ್ತು. ಅಪರಾಧಿಗಳಿಗೆ ಹಾರವನ್ನು ಹಾಕಿ ಸನ್ಮಾನಿಸಿದ್ದ ಘಟನೆಯೂ ನಡೆದಿತ್ತು. ಅಣ್ಣಾಮಲೈ ಈ ವಿಚಾರವಾಗಿ ಏನು ಹೇಳುತ್ತಾರೆ ಎಂಬುದು ಸದ್ಯದ ಪ್ರಶ್ನೆ.