- ವಿಧಾನಪರಿಷತ್‌ನ ತೆರವಾದ ಸ್ಥಾನಗಳಿಗೆ ಚುನಾವಣೆ
- ಜೂನ್ 30ಕ್ಕೆ ನಡೆಯಲಿರುವ ಚುನಾವಣಾ ಮತದಾನ
ವಿಧಾನ ಪರಿಷತ್‌ನ ತೆರವಾದ ಮೂರು ಸ್ಥಾನಗಳಿಗಾಗಿನ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಬಾಬುರಾವ್ ಚಿಂಚನಸೂರು, ಆರ್.ಶಂಕರ್ ಮತ್ತು ಲಕ್ಷ್ಮಣ್ ಸವದಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಪಕ್ಷ ತೊರೆದು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿಈ ಉಪ ಚುನಾವಣೆ ನಡೆಯುತ್ತಿದೆ.
ಜೂನ್ 30ರಂದು ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಂಖ್ಯಾಬಲದ ದೃಷ್ಟಿಯಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ಮೂರು ಸ್ಥಾನಗಳು ಲಭಿಸುವುದು ನಿಶ್ಚಿತವಾಗಿದೆ.
ಸೋಲಿನ ಖಾತರಿ ಇದ್ದರೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜೆಡಿಎಸ್ ನಿರ್ಧಾರ ಇನ್ನೂ ಹೊರಬೀಳಬೇಕಿದೆ.
ಒಂದೇ ದಿನ ಪ್ರತ್ಯೇಕ ಚುನಾವಣೆ
ವಿಧಾನಪರಿಷತ್‌ನ ಮೂರು ಸ್ಥಾನಗಳೂ ಬೇರೆ ಬೇರೆ ಅವಧಿಯಲ್ಲಿ ಮುಕ್ತಾಯಗೊಳ್ಳುವುದರಿಂದ ಇವಕ್ಕೆ ಪ್ರತ್ಯೇಕವಾಗಿ ಮೂರು ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಒಂದೇ ದಿನ ಈ ಮೂರು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆಯಲಿದೆ.
ಈ ಚುನಾವಣೆಗಾಗಿನ ನಾಮಪತ್ರ ಸಲ್ಲಿಕೆಗೆ ಜೂನ್ 20 ಕೊನೆಯ ದಿನವಾದರೆ, 23ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ಗಡುವು. ಈ ನಡುವೆ ಅಂದರೆ ಜೂನ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಈ ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ, ಜೂನ್ 30ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಯಾರ್‍ಯಾರ ಅವಧಿ ಎಲ್ಲಿವರೆಗೆ?
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಬಾಬುರಾವ್ ಚಿಂಚನಸೂರು ಅವಧಿಯು 2024ರ ಜೂ.17ರವರೆಗೆ ಇದ್ದರೆ, ಮತ್ತೋರ್ವ ಶಾಸಕ ಆರ್.ಶಂಕರ್ ಅವಧಿಯು 2026ರ ಜೂ.30ಕ್ಕೆ ಮುಕ್ತಾಯವಾಗುತ್ತಿತ್ತು.
ಹಾಗೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವಧಿಯು 2028ರ ಜೂ.14ರವರೆಗೆ ಇತ್ತು. ಆದರೆ ಇವರೆಲ್ಲರೂ ಪಕ್ಷ ಬದಲಿಸಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಈ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ?: ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ: ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ
ಯಾರು ಯಾರು ಕೈ ಸ್ಪರ್ಧಿಗಳು?
ಸದ್ಯದ ಮಾಹಿತಿಗಳ ಪ್ರಕಾರ ಕಾಂಗ್ರೆಸ್ ಸರ್ಕಾರದ ಸಚಿವರಾಗಿರುವ ಎನ್ಎಸ್ ಬೋಸರಾಜು ಒಂದು ಸ್ಥಾನದ ಉಮೇದುವಾರರು.
ಏಕೆಂದರೆ ಉಭಯ ಸದನಗಳ ಸದಸ್ಯರಲ್ಲದ ಇವರನ್ನು ಪಕ್ಷಕ್ಕೆ ನೀಡಿದ ಕೊಡುಗೆ ಪರಿಗಣಿಸಿ, ಹೈಕಮಾಂಡ್ ಆದೇಶದ ಮೇರೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರನ್ನಾಗಿ ಮಾಡಲಾಗಿತ್ತು ಹೀಗಾಗಿ ಇವರಿಗೊಂದು ಸ್ಥಾನ ಪಕ್ಕ.
ಇನ್ನು ಎಐಸಿಸಿ ಅಧ್ಯಕ್ಷರ ಮೇಲಿನ ವಿಶ್ವಾಸದಿಂದ ಮರಳಿ ಪಕ್ಷ ಸೇರಿದ ಮಾಜಿ ಸಚಿವ, ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಅವರನ್ನು ಕಾಂಗ್ರೆಸ್ ಆಯ್ಕೆ ಮರು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಉಳಿದ ಇನ್ನೊಂದು ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮೈಸೂರು ಕಾಂಗ್ರೆಸ್ ಮುಖಂಡೆ, ಮಾಜಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹಾಗೂ ಮಾಜಿ ಸಚಿವೆ ಉಮಾಶ್ರೀ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.