ವಿಜಯಪುರ ಜಿಲ್ಲೆಯ ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಜಿಲ್ಲೆಯಲ್ಲಿ ಈಗ ಬರೀ ವಕ್ಫ್ ಭೂಮಿಯದ್ದೇ ಚರ್ಚೆಯಾಗುತ್ತಿದೆ. ಮುಸ್ಲಿಂ ದ್ವೇಷ ರಾಜಕಾರಣಕ್ಕೆ ಬಿಜೆಪಿಗೆ ಹೊಸ ಅಸ್ತ್ರವೊಂದು ಸಿಕ್ಕಂತಾಗಿದೆ. ಬಿಜೆಪಿಯ ಪ್ರಮುಖ ನಾಯಕರು ಇಂದು (ಅ.29) ವಿಜಯಪುರದಲ್ಲೇ ಬೀಡು ಬಿಟ್ಟಿದ್ದಾರೆ.
ಕಳೆದ ಅ.7, 8 ರಂದು ವಿಜಯಪುರ ಜಿಲ್ಲೆಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ ವೇಳೆ ವಕ್ಫ್ ಅದಾಲತ್ ನಡೆಸಿ ವಕ್ಫ್ ಆಸ್ತಿಗಳ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದರು. ನಂತರ ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಕ್ಫ್ ಆಸ್ತಿಗಳ ಖಾತಾ ಆಗದಿರುವ ಆಸ್ತಿಗಳ ಖಾತೆಗಳನ್ನು ಮುಂದಿನ 30 ದಿನಗಳಲ್ಲಿ ಮಾಡಬೇಕು ಎಂದು ಮೌಖಿಕ ಸೂಚನೆ ನೀಡಿದ್ದರು.
ಸಚಿವ ಜಮೀರ್ ಅಹಮ್ಮದ್ ವಿಜಯಪುರಕ್ಕೆ ಬಂದು ಹೋಗುತ್ತಿದ್ದಂತೆ ವಕ್ಫ್ ವಿವಾದ ಕಿಡಿ ಹೊತ್ತಿಕೊಂಡಿತು. ಸಚಿವ ಜಮೀರ್ ಸೂಚನೆ ವಿರೋಧಿಸಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜಿಲ್ಲೆಯಲ್ಲಿ ರೈತರನ್ನು ಸೇರಿಸಿ ದೊಡ್ಡ ಸಮಾವೇಶವನ್ನೇ ಮಾಡಿದರು. ಅಲ್ಲಿಗೆ ವಕ್ಫ್ ವಿವಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ವೇದಿಕೆಯನ್ನು ಸೃಷ್ಟಿಸಿತು.
ಸಚಿವ ಜಮೀರ್ ಅಹ್ಮದ್ ಖಾನ್ ಅವರು ವಕ್ಫ್ ಆಸ್ತಿಗಳ ಭೂಮಿ ಸರ್ವೆ, ಫ್ಲ್ಯಾಗಿಂಗ್ ಕಾರ್ಯ, ಖಾತೆ ಬದಲಾವಣೆಗೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದರಿಂದ ವಕ್ಫ್ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ನೂರಾರು ರೈತರಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಸಚಿವರ ಸೂಚನೆ ಮತ್ತು ಅಧಿಕಾರಿಗಳ ತಪ್ಪು ಮಾಹಿತಿಯಿಂದ ಸರ್ವೇ ಕಾರ್ಯ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ರೈತರು ಆತಂಕಗೊಂಡಿದ್ದಾರೆ.
ಕೆಲ ಗ್ರಾಮಗಳ ರೈತರು ಪೂರ್ವಿಕರಿಂದ ಬಂದ ಜಮೀನಿನಲ್ಲಿ ವಕ್ಫ್ ಸೇರಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ 1200 ಎಕರೆ ಜಮೀನನ್ನು ವಕ್ಫ್ ಬೋರ್ಡ್ಗೆ ಸೇರಿಸಲು ಜಿಲ್ಲಾಡಳಿತ ಸದ್ದಿಲ್ಲದೇ ತಯಾರಿ ನಡೆಸಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೇ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ ಕೆಲವು ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ರೈತರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡು, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಬಿಜೆಪಿಯಿಂದ ತಂಡ ರಚನೆ
ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ತೊಂದರೆಗೆ ಒಳಗಾಗಿರುವ ರೈತರ ಅಹವಾಲು ಆಲಿಸಲು ರಾಜ್ಯ ಬಿಜೆಪಿ ತಂಡವೊಂದನ್ನು ರಚಿಸಿದೆ. ಸಂಸದ ಗೋವಿಂದ ಕಾರಜೋಳ, ಶಾಸಕ ಹರೀಶ್ ಪೂಂಜ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಹಾಗೂ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನು ಒಳಗೊಂಡ ತಂಡವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರಚಿಸಿದ್ದಾರೆ. ಈ ತಂಡವು ಮಂಗಳವಾರ (ಅ.29) ಜಿಲ್ಲೆಗೆ ಭೇಟಿ ರೈತರ ಜೊತೆ ಸಮಾಲೋಚಿಸುತ್ತಿದೆ.
ವಕ್ಫ್‌ಗೆ ಒಂದಿಂಚು ಭೂಮಿ ಬಿಟ್ಟುಕೊಡೆವು: ಯತ್ನಾಳ
“ರಾಜ್ಯದಲ್ಲಿ ಒಂದೇ ಒಂದು ಇಂಚು ರೈತರ ಭೂಮಿಯನ್ನು ವಕ್ಫ್‌ಗೆ ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ರಾಜ್ಯದಾದ್ಯಂತ ಜನಜಾಗೃತಿಗಾಗಿ ಹೋರಾಟ ರೂಪಿಸುತ್ತೇವೆ. ಸಚಿವ ಜಮೀರ್ ಅಹಮ್ಮದ್ ಖಾನ್ ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ವ್ಯವಸ್ಥಿತವಾದ ಹುನ್ನಾರ. ವಕ್ಫ್ ಕಾನೂನು ಸಂಪೂರ್ಣ ತೊಲಗಬೇಕಿದೆ. ವಕ್ಫ್ ಬೋರ್ಡ್‌ನಿಂದ ನೋಟಿಸ್ ಬಂದಿರುವ ಎಲ್ಲ ರೈತರಿಗೆ ಉಚಿತವಾಗಿ ಕಾನೂನು ಸಲಹೆ ನೀಡಲಾಗುವುದು. ಕೋರ್ಟ್‌ನಲ್ಲಿ ಇದರ ವಿರುದ್ಧ ಪಿಐಎಲ್ ಸಲ್ಲಿಸಲಾಗುವುದು” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದ್ದಾರೆ.

ಹೊನವಾಡ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ವಕ್ಫ್ ಆಸ್ತಿಯೆಂದು ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಈ ವಿಚಾರದಲ್ಲಿ ಬಿಜೆಪಿ ಬೇಕೆಂದೇ ರಾಜಕೀಯ ಮಾಡಿ, ಇದನ್ನು ವಿವಾದ ಮಾಡುತ್ತಿದೆ ಎಂದು ಸರಕಾರದ ಪರವಾಗಿ ಮೂವರು ಸಚಿವರು ಸ್ಪಷ್ಟನೆ ನೀಡಿದ್ದಾರೆ.
“ವಿಜಯಪುರ ಜಿಲ್ಲೆಯಲ್ಲಿ ಒಂದು ಕಾಲಕ್ಕೆ 14,201.32 ಎಕರೆ ವಕ್ಫ್ ಮಂಡಳಿಯದಾಗಿತ್ತು. ಈ ಪೈಕಿ ಭೂ ಸುಧಾರಣಾ ಕಾಯ್ದೆಯಡಿ 11,835.29 ಎಕರೆ ಮತ್ತು ಇನಾಂ ರದ್ದತಿ ಕಾಯ್ದೆಯಡಿ 1,459.26 ಎಕರೆಯನ್ನು ರೈತರಿಗೆ ಮಂಜೂರು ಮಾಡಲಾಗಿದೆ. 137 ಎಕರೆಯನ್ನು ವಿವಿಧ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮಿಕ್ಕ 773 ಎಕರೆ ಮಾತ್ರ ವಕ್ಫ್ ಸಂಸ್ಥೆಗಳ ಅಡಿಯಲ್ಲಿದೆ. ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ರೈತರಿಗೆ ವಕ್ಫ್ ಆಸ್ತಿಯೆಂದು ಯಾವುದೇ ನೋಟಿಸ್ ನೀಡಿಲ್ಲ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಕ್ಫ್ ಆಸ್ತಿ ದೇವರ ಹೆಸರಿನಲ್ಲಿ ಮುಸ್ಲಿಮರೇ ನೀಡಿದ ದಾನ; ರಾಜಕೀಯ ಕಾರಣಕ್ಕೆ ಕೆಸರೆರಚಾಟ ಸಲ್ಲದು
“1974ರ ಗೆಜೆಟ್ ಅಧಿಸೂಚನೆಯಲ್ಲಿ ವಿಜಯಪುರದ ಮಹಾಲಬಾಗಾಯತದ ಪಕ್ಕದಲ್ಲಿ ಬ್ರ್ಯಾಕೆಟ್ ಒಳಗೆ ವಕ್ಫ್ ಆಸ್ತಿಯಡಿಯಲ್ಲಿ ಹೊನವಾಡ ಎಂದು ತಪ್ಪಾಗಿ ನಮೂದಿಸಲಾಗಿತ್ತು. 1977ರಲ್ಲಿ ವಕ್ಫ್ ಮಂಡಳಿಯೇ ತನ್ನ ತಪ್ಪನ್ನು ಸರಿಪಡಿಸಿದೆ. ಇದು ವಿವಾದವೇ ಅಲ್ಲ. ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಬಸವರಾಜ ಪಾಟೀಲ ಯತ್ನಾಳ ನಡುವೆ ನಡೆಯುತ್ತಿರುವ ತಿಕ್ಕಾಟದಿಂದ ಇದು ರಾಜಕೀಯ ಬಣ್ಣ ಪಡೆದುಕೊಂಡಿದೆ” ಎಂದಿದ್ದಾರೆ.
“ಇಂಡಿ ತಾಲ್ಲೂಕಿನಲ್ಲಿ ಮಾತ್ರ ಅಲ್ಲಿಯ ತಹಸೀಲ್ದಾರರು ಯಾವುದೇ ನೋಟಿಸ್ ನೀಡದೆ, 41 ಆಸ್ತಿಗಳನ್ನು ಇಂಡೀಕರಣ ಮಾಡಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈತರು 1974ಕ್ಕಿಂತ ಮೊದಲಿನ ದಾಖಲೆ ಕೊಟ್ಟರೆ ಅಂತಹ ಆಸ್ತಿಗಳನ್ನು ವಕ್ಫ್ ಅಧಿಸೂಚನೆಯಿಂದ ಕೈಬಿಡಲಾಗುವುದು. ಬಾಧಿತ ರೈತರು ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ, ಅವರು ಪರಿಶೀಲಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ” ಎಂದು ಕೃಷ್ಣ ಬೈರೇಗೌಡ ವಿವರಿಸಿದ್ದಾರೆ.
ಇದಕ್ಕೆ ಪೂರಕವಾಗಿ ಮಾತನಾಡಿರುವ ಸಚಿವ ಎಂ ಬಿ ಪಾಟೀಲ, “ವಕ್ಫ್ ವಿವಾದ ಕುರಿತು ವಿಚಾರಣೆ ನಡೆಸಲು ಜಿಲ್ಲಾಧಿಕಾರಿಗಳ ನೇತೃತ್ವದ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ವಿಜಯಪುರ ಪ್ರಕರಣದಲ್ಲಿ 1964ರಿಂದ 1973ರವರೆಗಿನ ಕಂದಾಯ ಮತ್ತು ವಕ್ಫ್ ದಾಖಲೆಗಳನ್ನು ತೌಲನಿಕವಾಗಿ ಪರಿಶೀಲಿಸಲು ಆದೇಶ ನೀಡಲಾಗಿದೆ. ರೈತರಿಗೆ ಭಯಬೇಡ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಜನರ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಬಿಜೆಪಿ ಮುಖಂಡರಿಂದ ಆಗುತ್ತಿದೆ. ಇದರಲ್ಲಿ ಧ್ರುವೀಕರಣದ ಸಂಚಿದೆ. ಸತ್ಯ ಶೋಧನೆಗೆ ಬಿಜೆಪಿ ಸಮಿತಿ ಬಂದರೆ ಕಾಫಿ- ಟೀ ಕೊಟ್ಟು ಪೂರ್ಣ ಮಾಹಿತಿ ನೀಡಲು ಜಿಲ್ಲಾಡಳಿತಕ್ಕೂ ಸೂಚಿಸಲಾಗಿದೆ” ಎಂದಿದ್ದಾರೆ.

ನಮಗೆ ರೈತರ ಯಾವ ಜಮೀನೂ ಬೇಡ: ಸಚಿವ ಜಮೀರ್
“ನಮಗೆ ರೈತರ ಯಾವ ಜಮೀನೂ ಬೇಡ. ನಾನೂ ರೈತನ ಮಗನೇ. ವಕ್ಫ್ ಆಸ್ತಿಗೆ ಇಂಡೀಕರಣ ಮಾಡಿಕೊಡಿ ಎಂದಷ್ಟೇ ಕೇಳಿರುವುದು. ಇಷ್ಟಕ್ಕೂ ಹೊನವಾಡದಲ್ಲಿ 11 ಎಕರೆ ಮಾತ್ರ ವಕ್ಫ್ ಮಂಡಳಿಯದು ವಿನಃ 1,200 ಎಕರೆ ಅಲ್ಲ. ಅದೆಲ್ಲ ರೈತರದೇ ಆಗಿದೆ. ವಿಜಯಪುರದಲ್ಲಿ 1,345 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಇದು ಯಾರಿಗೂ ಅಧಿಕೃತವಾಗಿ ಹಂಚಿಕೆ ಆಗಿಲ್ಲ. ಇದರಲ್ಲಿಯೂ ಸುಮಾರು 26 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ಕೋರ್ಟ್ ನಲ್ಲಿದೆ. ಇದು ಬಿಟ್ಟರೂ 1,319 ಎಕರೆ ವಕ್ಫ್ ಆಸ್ತಿ ಅಕ್ರಮವಾಗಿ ಬೇರೆ ವ್ಯಕ್ತಿ/ಸಂಸ್ಥೆಗಳ ವಶದಲ್ಲಿ ಇದ್ದು ಅದನ್ನು ಸರಿ ಮಾಡಿಕೊಡಲು ಕೇಳಲಾಗಿದೆ. ಇದು ಬಿಟ್ಟರೆ ನಮಗೆ ಬೇರೆ ಯಾರ ಆಸ್ತಿಯೂ ಬೇಡ” ಎಂದು ವಕ್ಫ್ ಸಚಿವ ಜಮೀರ್ ಅಹಮದ್ ಸ್ಪಷ್ಟಪಡಿಸಿದ್ದಾರೆ.
ವಿಜಯಪುರದ ಮುಸ್ಲಿಂ ಮುಖಂಡ ಎಸ್.ಎಸ್ ಖಾದ್ರಿ ಈದಿನ.ಕಾಮ್ ಜೊತೆ ಮಾತನಾಡಿ, “ವಕ್ಪ್ ವಿವಾದ ಬೇಕಿರೋದು ಯತ್ನಾಳ್ ಮತ್ತು ಬಿಜೆಪಿಗೆ ಮಾತ್ರ. ಮುಸ್ಲಿಂ ವಿಷಯ ಬಂದಿದ್ದರಿಂದ ಬಿಜೆಪಿ ಇನ್ವಾಲ್ ಆಗಿದೆ. ಯಾರ ಜಮೀನನ್ನು ಕಸಿದುಕೊಳ್ಳುವ ಯೋಚನೆ ವಕ್ಪ್‌ಗೆ ಇಲ್ಲ. ಇದೊಂದು ವಿವಾದದಿಂದ ನಿಜಕ್ಕೂ ನಷ್ಟ ಆಗಿರುವುದು ವಕ್ಫ್ ಮಂಡಳಿಗೆ ಎಂಬುದನ್ನು ಸರ್ಕಾರ ಯೋಚಿಸಬೇಕು. ನಮ್ಮ ಜಿಲ್ಲೆಯಲ್ಲಿ ಯತ್ನಾಳ್ ಮಾಡುವ ಕೆಲಸವನ್ನು ಜಮೀರ್ ಮಾಡಿದ್ದಾರೆ. ಜಮೀರ್ ಮಾಡುವ ಕೆಲಸವನ್ನು ಯತ್ನಾಳ್ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ” ಎಂದರು.
“ಮೂವರು ಸಚಿವರ ಸ್ಪಷ್ಟನೆಯಿಂದ ವಕ್ಫ್ ಒಳಗಿನ ಅಕ್ರಮ ಕೂಡ ಮುಚ್ಚಿಹೋದಂತಾಗಿದೆ. ರೈತರು ಶೇ.5 ರಷ್ಟು ವಕ್ಫ್ ಆಸ್ತಿಯನ್ನು ಬಳಸಿಕೊಂಡಿರಬಹುದು. ಆದರೆ ವಕ್ಫ್ ಒಳಗಿನ ಭ್ರಷ್ಟರು ಆಸ್ತಿಯನ್ನು ಬಹಳಷ್ಟು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿ” ಎಂದು ಆಗ್ರಹಿಸಿದರು.

ವಿಜಯಪುರದ ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಮಾತನಾಡಿ, “ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ರೈತರಿಗೆ ನೋಟಿಸ್ ಬಂದಿದೆ. ಇಷ್ಟು ದಿನ ತಗೊಂಡ ಉತಾರಿನಲ್ಲಿ ಎಲ್ಲೂ ವಕ್ಫ್ ಹೆಸರೂ ನಮೂದಾಗಿರಲಿಲ್ಲ. ಇದೆಲ್ಲ ಸಚಿವ ಜಮೀರ್ ಅಹಮ್ಮದ್ ಬಂದು ಹೋದ ಮೇಲೆ ನಮ್ಮ ಹೊಲದ ಉತಾರಗಳಲ್ಲಿ ಕಾಲಂ 11ರಲ್ಲಿ ವಕ್ಫ್ ಋಣ ಎಂದು ನಮೂದಾಗಿದೆ. ಏಕಾಏಕಿ ಹೀಗೇಕೆ ಆಯಿತು ಎಂಬುದಕ್ಕೆ ಸ್ಪಷ್ಟನೆ ಬೇಕಲ್ವಾ? ನಮ್ಮ ಪೂರ್ವಜರು ಕೊಟ್ಟ ಭೂಮಿಯನ್ನು ನಾವು ಉಳುಮೆ ಮಾಡುತ್ತಿದ್ದೇವೆ. ವಕ್ಫ್‌ಗೆ ನಮ್ಮ ಜಮೀನು ಕೊಟ್ಟ ದಾಖಲೆ ಬೇಕಲ್ವಾ? ವಕ್ಫ್ ಹೆಸರು ತೆಗೆಸಲು ದಾಖಲೆ ತಂದು ಪರಿಶೀಲಿಸಿ ಎನ್ನುತ್ತಿದ್ದಾರೆ. ಆದರೆ ಪ್ರತಿಯೊಬ್ಬ ಅಧಿಕಾರಿ ಇಲ್ಲಿ ಎಷ್ಟೆಷ್ಟು ಲಂಚ ತೆಗೆದುಕೊಳ್ಳುತ್ತಾನೆ ಎಂಬುದು ಸರ್ಕಾರಕ್ಕೆ ಅರಿವಿದೆಯಾ” ಎಂದು ಪ್ರಶ್ನಿಸಿದರು.
ಒಟ್ಟಾರೆ ವಕ್ಫ್ ಆಸ್ತಿ ವಿವಾದ ಬಿಜೆಪಿಗೆ ಮುಸ್ಲಿಂ ದ್ವೇಷ ರಾಜಕಾರಣ ಮಾಡಲು ಮತ್ತೊಂದು ವೇದಿಕೆ ಸಿಕ್ಕಂತಾಗಿದೆ. ನಿಜಕ್ಕೂ ರೈತರಿಗೆ ಅನ್ಯಾಯವಾಗಿದ್ದರೆ ರೈತರ ಜೊತೆ ವಿರೋಧಪಕ್ಷವಾಗಿ ನಿಂತು ಬಿಜೆಪಿ ನಾಯಕರು ನ್ಯಾಯ ದೊರಕಿಸಿ ಕೊಡಬೇಕು. ಅದನ್ನು ಬಿಟ್ಟು “ಲ್ಯಾಂಡ್ ಜಿಹಾದ್” ಎನ್ನುವ ಲೇಬಲ್ ಕೊಟ್ಟು ಮುಸ್ಲಿಂ ದ್ವೇಷ ರಾಜಕಾರಣಕ್ಕೆ ಮತ್ತಷ್ಟು ತುಪ್ಪ ಸುರಿಯಬಾರದು. ಆದರೆ ಜಿಲ್ಲೆಯಲ್ಲಿ ಆಗುತ್ತಿರುವುದು ಅದೇ. ಮುಸ್ಲಿಂ ಸಮುದಾಯ ವಿರುದ್ಧ ರೈತರನ್ನು ಎತ್ತುಕಟ್ಟುವ ಯತ್ನವನ್ನು ಯತ್ನಾಳ್ ಟೀಮ್ ನಡೆಸುತ್ತಿದೆ. ಸರ್ಕಾರ ಕೂಡ ಎಲ್ಲವನ್ನು ಪರಾಮರ್ಶಿಸಿ ರೈತರ ಜಮೀನನ್ನು ರೈತರಿಗೆ, ವಕ್ಫ್ ಜಮೀನನ್ನು ವಕ್ಫ್‌ಗೆ ಕಾನೂನು ಪ್ರಕಾರ ಮಾಡಿಕೊಡಬೇಕು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.