ಲಿಂಗಾಯತ ಸಮುದಾಯದ ಮತ ಬ್ಯಾಂಕ್ ಕಾಪಾಡಿಕೊಳ್ಳಲು ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವಾಗಿದ್ದಾರೆ. ಅವರನ್ನು ಅನಿವಾರ್ಯವಾಗಿ ಪಕ್ಷದಲ್ಲಿಟ್ಟುಕೊಂಡಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿತು. ಅದಕ್ಕೆ, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದೂ ಒಂದು ಕಾರಣ. ಹೀಗಾಗಿ, ಪಕ್ಷದ ಹಿತಕ್ಕಾಗಿ ಅವರ ಮಗ ವಿಜಯೇಂದ್ರ ಅವರನ್ನು ಅಧ್ಯಕ್ಷರಾಗಿ ಮಾಡಿದ್ದಾರೆ” ಎಂದಿದ್ದಾರೆ.
“ಕುಟುಂಬ ರಾಜಕಾರಣ ಅಂತ ನಮ್ಮನ್ನು ಟೀಕಿಸುತ್ತಿದ್ದರು. ಈಗ ಬಿಜೆಪಿಯಲ್ಲೂ ಅದೇ ಜಾರಿಯಲ್ಲಿದೆ. ವಿಜಯೇಂದ್ರ ಅವರು ಯಡಿಯೂರಪ್ಪ ಮಗನೆಂದ ಕಾರಣಕ್ಕೆ ಎಲ್ಲವೂ ಅವರೊಂದಿಗೆ ಬರುವುದಿಲ್ಲ. ಯಡಿಯೂರಪ್ಪರಂತೆ ಅವರೂ ಎಲ್ಲವನ್ನೂ ಕಲಿಯಬೇಕು” ಎಂದಿದ್ದಾರೆ.
“ಪ್ರಸ್ತುತ ನಡೆಯುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ರಾಜಸ್ಥಾನದಲ್ಲಿಯೂ ಗೆಲ್ಲುವ ಅವಕಾಶವಿದೆ. ತೆಲಂಗಾಣದಲ್ಲಿ ಪ್ರಬಲ ಪೈಪೋಟಿ ಇದೆ” ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.