ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ವಿರೋಧಿ ಬಣದ ನಾಯಕರು ಶತಪ್ರಯತ್ನ ಮಾಡಿಯಾದರೂ ಹೊಸ ಅಧ್ಯಕ್ಷರ ಪ್ರತಿಷ್ಠಾಪನೆಗೆ ಗುಪ್ತ ಸಮರ ನಡೆಸುತ್ತಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ತೀಕ್ಷ್ಣವಾಗಿ ಮಾತನಾಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವುದೇ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಜೊತೆಗೆ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬ ಕಾರಣಕ್ಕೆ ನಾನು 2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದೆ. ಎಷ್ಟೇ ಅಪಮಾನವಾದರೂ, ರಾಜಕೀಯವಾಗಿ ತುಳಿಯಲು ಯತ್ನಿಸಿದರೂ ಪಕ್ಷವನ್ನು ಬಿಡಲಿಲ್ಲ. ನಂತರ ನಾನು ಸೋತರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಬಿಜೆಪಿ ಪಾಲಿಗೆ ಮರಳುಭೂಮಿಯಾಗಿರುವ ಈ ಪ್ರದೇಶದಲ್ಲಿ ಪಕ್ಷವನ್ನು ಬೆಳೆಸಲು ಶ್ರಮಿಸಿದ್ದೇನೆ. ಈಗ ವಿಜಯೇಂದ್ರನನ್ನು ಬದಲಿಸಲು ವರಿಷ್ಠರಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.
“ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಎಲ್ಲರ ಅಭಿಪ್ರಾಯ ಕೇಳಬೇಕು. ಆದರೆ ಏಕಚಕ್ರಾಧಿಪತ್ಯ ಎನ್ನುವಂತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನ್ನ ಮಾತೇ ನಡೆಯಬೇಕೆಂಬಂತೆ ವರ್ತಿಸಿದ್ದಾರೆ. ‘ಜೀ ಹುಜೂರ್, ಯೆಸ್ ಬಾಸ್’ ಎನ್ನುವವರನ್ನು ಪದಾಧಿಕಾರಿಗಳಿಗೆ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಿಗೆ ತಿಳಿಸಿದ್ದೇನೆ. ಎಷ್ಟೇ ನೋವಾದರೂ ನಾನು ಪಕ್ಷದ ವಿರುದ್ಧವಾಗಿ ಮಾಧ್ಯಮಗಳ ಮುಂದೆ ಈವರೆಗೂ ಬಂದು ಮಾತನಾಡಿರಲಿಲ್ಲ” ಎಂದರು.
“ವಿಜಯೇಂದ್ರ ಅವರ ಧೋರಣೆ ಅನೇಕ ಮುಖಂಡರಿಗೆ ನೋವು ತಂದಿದೆ. ಕೇಂದ್ರದ ನಾಯಕರು ಅವರಿಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆದರೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರಲ್ಲಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾರೆಯೇ ಅಥವಾ ಅದಕ್ಕೂ ಮೇಲಿನ ಹುದ್ದೆಯಲ್ಲಿದ್ದಾರೆಯೇ ಗೊತ್ತಿಲ್ಲ. ನಾನು ಎಂಟು ಕ್ಷೇತ್ರಗಳನ್ನು ಪ್ರತಿನಿಧಿಸುವ ಸಂಸತ್ ಸದಸ್ಯನಾಗಿದ್ದೇನೆ. ಕಾಂಗ್ರೆಸ್ ಆಡಳಿತ ಇದ್ದಾಗಲೂ ನಾನು ಇಲ್ಲಿ ಗೆದ್ದಿದ್ದೇನೆ. ಇವರ ಹಿಂಬಾಲಕರು ನನ್ನನ್ನು ಸೋಲಿಸಲು ಯತ್ನಿಸಿದ್ದರು. ಆದರೆ ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ಇನ್ನು ಸಮಾಧಾನ ಇಲ್ಲ, ಇನ್ನೇನಿದ್ದರೂ ಯುದ್ಧ” ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶರ್ಜೀಲ್- ಉಮರ್ ಗೆ ಜಾಮೀನು; ಅಗೋಚರ ಕದಗಳ ಮೇಲೆ ‘ನಾಳೆ ಬಾ’ ಎಂದು ನ್ಯಾಯಾಂಗ ಬರೆದ ಬರೆಹ!
ಭೇಟಿಗೆ ಸಮಯ ನೀಡಿಲ್ಲ
“ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾತನಾಡಲು ಬಿ.ವೈ.ವಿಜಯೇಂದ್ರ ಅವರಿಗೆ ಫೋನ್ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಭೇಟಿ ಮಾಡಲು ಸಮಯ ಕೂಡ ನಿಗದಿ ಮಾಡಲಿಲ್ಲ. ಹಿರಿಯ ಮುಖಂಡರು ಕೂಡ ಮಾತನಾಡಲು ಭೇಟಿಗೆ ಅವಕಾಶ ನೀಡುತ್ತಾರೆ. ಆದರೆ ಇಲ್ಲಿ ಸಮಾಲೋಚನೆಯೇ ಇಲ್ಲ. ಇದೇನು ವಿಜಯೇಂದ್ರ ಅವರ ಸ್ವಂತ ಆಸ್ತಿಯೇ? ಬಯಲುಸೀಮೆಯ ಭಾಗಕ್ಕೆ ಬಂದು ಒಂದು ಸೀಟು ಗೆಲ್ಲಲಿ” ಎಂದು ಸವಾಲು ಹಾಕಿದರು.
ನನ್ನನ್ನು ಸಮಾಧಿ ಮಾಡಲು ಪ್ರಯತ್ನ
“ನಾನು ಪಕ್ಷಕ್ಕಾಗಿ ಶ್ರಮಿಸಿದ್ದರೂ ನನ್ನನ್ನು ಸಮಾಧಿ ಮಾಡಲು ಪ್ರಯತ್ನ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲಸ ಮಾಡಿದವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರೆ. ಗೋವಿಂದ ಕಾರಜೋಳ ಅವರಿಗೆ ಹೊಡೆಯಲು ಬಂದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರೆ. ಯಾವುದೇ ಮುಖಂಡರಿಗೆ ಇವರು ಗೌರವ ನೀಡುತ್ತಿಲ್ಲ” ಎಂದು ದೂರಿದರು.
ಪಕ್ಷ ವಿರೋಧಿಗಳಿಗೆ ಸ್ಥಾನ
“ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಉತ್ತಮವಾಗಿ ನಡೆದಿದೆ. ನಮ್ಮ ಕಾರ್ಯಕರ್ತರು 58 ಸಾವಿರ ಜನರನ್ನು ನೋಂದಣಿ ಮಾಡಿಸಿದ್ದಾರೆ. ಪಕ್ಷಕ್ಕಾಗಿ ಅಹರ್ನಿಶಿಯಾಗಿ ದುಡಿದವರನ್ನು ಕೈ ಬಿಟ್ಟು, ವಿರುದ್ಧವಾಗಿ ಕೆಲಸ ಮಾಡಿದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಚಿಕ್ಕಬಳ್ಳಾಪುರದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದಿಲ್ಲ. 13 ಜಿಲ್ಲೆಗಳ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸದೆ ಏಕಾಏಕಿ ಪಟ್ಟಿ ಪ್ರಕಟ ಮಾಡಲಾಗಿದೆ. ನಾನು ಹೇಳಿದವರನ್ನು ಆಯ್ಕೆ ಮಾಡಿಲ್ಲ ಎಂದಾದರೆ ನಾನು ಕಾರ್ಯಕರ್ತರಿಗೆ ಏನೆಂದು ಉತ್ತರ ನೀಡಲಿ” ಎಂದು ಪ್ರಶ್ನೆ ಮಾಡಿದರು.
ವರಿಷ್ಠರಿಗೆ ತಿಳಿಸುವೆ
“ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಬಳಿಗೆ ಹೋಗಿ ಎಲ್ಲವನ್ನೂ ಹೇಳುತ್ತೇನೆ. ವಿಜಯೇಂದ್ರ ಯಾವ ರೀತಿ ಪಕ್ಷ ಸಂಘಟಿಸುತ್ತಿದ್ದಾರೆ ಎಂದು ವಾಸ್ತವಾಂಶ ತಿಳಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಯಡಿಯೂರಪ್ಪ ಅವರ ನಾಯಕತ್ವವೇ ಬೇರೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ತಂದೆಯವರ ಯಾವುದೇ ಗುಣ ವಿಜಯೇಂದ್ರ ಅವರಿಗೆ ಬಂದಿಲ್ಲ. ನಾನು ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ” ಎಂದರು.
“ನಾನು ಬಿಜೆಪಿಗೆ ಬಂದಿದ್ದಕ್ಕೆ ನನಗೆ ಈ ರೀತಿಯ ಪರಿಸ್ಥಿತಿಯನ್ನು ತಂದಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ನಡೆದಿದೆ. ಅನೇಕರು ಆ ಬಗ್ಗೆ ಮಾತಾಡುತ್ತಿಲ್ಲ. ವಿಜಯೇಂದ್ರ ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಇವರ ಅಹಂಕಾರಕ್ಕೆ, ಧೋರಣೆಗೆ ನನ್ನ ಧಿಕ್ಕಾರ. ಇವರ ಧೋರಣೆಯನ್ನು ಸರಿಪಡಿಸಿ, ಇಲ್ಲವಾದರೆ ಇವರನ್ನೇ ಬದಲಾಯಿಸಿ ಎಂದು ವರಿಷ್ಠರಲ್ಲಿ ಮನವಿ ಮಾಡುತ್ತೇನೆ” ಎಂದು ಹೇಳಿದರು.