ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಬೆಂಗಳೂರು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಂಘರ್ಷದ ಕಿಚ್ಚು ಹೊತ್ತಿಸುತ್ತಿದ್ದು, ಕಾಂಗ್ರೆಸ್ಸಿಗರ ಮೇಲಿನ ಆರೋಪವನ್ನು ಬಿಜೆಪಿ ರಾಯಕೀಯ ದಾಳವಾಗಿ ಬಳಸಲು ಯತ್ನಿಸುತ್ತಿದೆ. ಇದೀಗ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿನಯ್ ಸೋಮಯ್ಯ(40) ಸಾವಿಗೆ ಕೊಡಗು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಅವರ ಬೆಂಬಲಿಗರೊಬ್ಬರು ಕಾರಣವೆಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಆತ್ಮಹತ್ಯೆ ಸಂಬಂಧ, ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ಎಂಬುವವರ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.
ವಿನಯ್ ತಮ್ಮ ಆತ್ಮಹತ್ಯೆಗೂ ಮುನ್ನ ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಅದರ ಆಧಾರದಲ್ಲಿ ಮೇಲೆ ಬಿಜೆಪಿ ನಾಯಕರು ಪ್ರತಿಭಟನೆಗಿಳಿದಿದ್ದಾರೆ. ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಮತ್ತು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಶಾಸಕರಾದ ಎ.ಎಸ್ ಪೊನ್ನಣ್ಣ, ಮಂಥರ್ ಗೌಡ ಹಾಗೂ ತನ್ನೀರಾ ಮೈನಾ ಅವರ ಹೆಸರನ್ನು ವಿನಯ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರೆಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ “2 ತಿಂಗಳಿನಿಂದ ನನ್ನ ಮನಸ್ಸೇ ಹತೋಟಿಗೆ ಬರುತಿಲ್ಲ, ಯಾರೋ ಒಬ್ಬರು ʼಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳುʼ whatsapp ಗ್ರೂಪ್‌ನಲ್ಲಿ ಹಾಕಿದ whatsapp ಮೆಸೇಜ್‌ಗೆ ಅಡ್ಮಿನ್ ಆದ ನಮ್ಮನ್ನು(ನನ್ನ ಅಡ್ಮಿನ್ ಮಾಡಿದ್ದು 5 ದಿನಗಳ ಹಿಂದಷ್ಟೇ) ಹೊಣೆ ಮಾಡಿ, ರಾಜಕೀಯ ಪ್ರೇರಿತ FIR ಹಾಕಿ ಸಮಾಜಕ್ಕೆ ನಮ್ಮನ್ನು ಕಿಡಿಗೇಡಿಗಳು ಅಂತ ಪರಿಚಯಿಸಿ, ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜತೆ ಆಟ ಆಡಿದ Tenneera Maheena ಅವರು ನನ್ನ ಸಾವಿಗೆ ನೇರ ಹೊಣೆ” ಎಂದು ಬರೆಯಲಾಗಿದೆ.

“ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟು ಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವಂತಹ ಆಕ್ಷೇಪಾರ್ಹ ಸಂದೇಶವನ್ನು ಗ್ರೂಪ್‌ನಲ್ಲಿ ಹಾಕಿದ ರಾಜೇಂದ್ರ ಪಾಪು ಹಾಗೂ ಅದಕ್ಕೆ ಸಹಕರಿಸಿದ ಅಡ್ಮಿನ್‌ಗಳಾದ ವಿಷ್ಣು ನಾಚಪ್ಪ ಹಾಗೂ ವಿನಯ್ ಸೋಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ತನ್ನೀರಾ ಮೈನಾ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಪ್ರಕಟವಾದ ಪೋಸ್ಟ್ ಆಧರಿಸಿ, ಮಡಿಕೇರಿ ನಗರ ಠಾಣೆಯಲ್ಲಿ ವಿನಯ್ ಸೋಮಯ್ಯ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) 353(2), 3(5) ಅಡಿ ಫೆಬ್ರುವರಿ 5ರಂದು ಎಫ್‌ಐಆರ್ ದಾಖಲಾಗಿತ್ತು.
ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮದ ವಿನಯ್ ಅವರು ಪತ್ನಿ ಹಾಗೂ ಪುತ್ರಿಯ ಜತೆಗೆ ಬೆಂಗಳೂರು ನಗರದ ಎಚ್‌ಬಿಆರ್ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ನಗರದ ಕಂಪೆನಿಯೊಂದರಲ್ಲಿ ಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ‘ಕೊಡಗಿನ ಸಮಸ್ಯೆಗಳು ಮತ್ತು ಪರಿಹಾರ’ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ಕೂಡ ಆಗಿದ್ದರು. ಅದರಲ್ಲಿ ಪೋಸ್ಟ್ ಮಾಡಲಾದ ಸಂದೇಶವೊಂದರ ಸಂಬಂಧ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದರಿಂದ ಮನನೊಂದ ವಿನಯ್ ಆತ್ಮಹತ್ಯೆಗೂ ಮುನ್ನ ತನ್ನೀರಾ ಮೈನಾ ವಿರುದ್ಧ ಬರೆದು ಪೋಸ್ಟ್ ಮಾಡಿದ್ದು, ನಾಗವಾರದ ಕಂಪನಿಯ ಗೋದಾಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಡಾ. ಅಂಬೇಡ್ಕರ್ ಆಸ್ಪತ್ರೆ ಎದುರು ಬಿಜೆಪಿ ನಾಯಕರ ಪ್ರತಿಭಟನೆ
ಆತ್ಮಹತ್ಯೆಯ ವಿಷಯ ಶುಕ್ರವಾರ ಬೆಳಿಗ್ಗೆ ಗೊತ್ತಾಗುತ್ತಿದ್ದಂತೆಯೇ ಕೊಡಗು ಮತ್ತು ಬೆಂಗಳೂರಿನಲ್ಲಿ ಬಿಜೆಪಿ ನಾಯಕರು, ಹೋರಾಟ ಆರಂಭಿಸಿದರು. ಮೃತ ಶರೀರ ಇರಿಸಿದ್ದ ಡಾ. ಅಂಬೇಡ್ಕರ್ ಆಸ್ಪತ್ರೆಗೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ಮತ್ತು ಇತರ ನಾಯಕರು ಧಾವಿಸಿದ್ದು, “ಕಾಂಗ್ರೆಸ್ ನಾಯಕರ ಬೆದರಿಕೆಯಿಂದ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ರಾಜಕೀಯ ದ್ವೇಷದ ಹತ್ಯೆ. ಜಿಲ್ಲೆಯ ಕಾಂಗ್ರೆಸ್ ಶಾಸಕರ ಕುಮ್ಮಕ್ಕಿನಿಂದಲೇ ಅಲ್ಲಿಯ ಪೊಲೀಸ್ ಇಲಾಖೆ ಕಾಂಗ್ರೆಸ್ ಶಾಸಕರ ತಾಳಕ್ಕೆ ಕುಣಿಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಿಂದ ಬಂದಿದ್ದ ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡರು ಸೇರಿ ಆಸ್ಪತ್ರೆಯ ಎದುರೇ ಪ್ರತಿಭಟನೆ ನಡೆಸಿದ್ದು, ಪೊನ್ನಣ್ಣ, ಮಂಥರ್‌ಗೌಡ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾ ಅಧ್ಯಕ್ಷ ತನ್ನೀರಾ ಮೈನಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದರು.

ಪೊನ್ನಣ್ಣ, ಮಂಥರ್‌ಗೌಡ, ತನ್ನೀರಾ ಮೈನಾ ಅವರ ಕಿರುಕುಳ ಹಾಗೂ ಬೆದರಿಕೆಯಿಂದ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಅವರ ಸಹೋದರ ಕೆ.ಎಸ್ ಜೀವನ್ ಅವರು ಹೆಣ್ಣೂರು ಠಾಣೆಗೆ ಶುಕ್ರವಾರ ಮಧ್ಯಾಹ್ನ ದೂರು ನೀಡಿದರು. ತನ್ನೀರಾ ಮೈನಾ ಮತ್ತು ಇತರರ ವಿರುದ್ಧ ಹೆಣ್ಣೂರು ಪೊಲೀಸರು ಎಫ್‌ಐಆರ್ ದಾಖಲಿಸಿದರು. ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸದೇ ಇರುವುದು ಪೊಲೀಸರ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ ಹೆಚ್ಚುವಂತೆ ಮಾಡಿದ್ದು, ‘ಸರ್ಕಾರ ಹೇಳಿದಂತೆ ಕೇಳುತ್ತಿದ್ದೀರಾ’ ಎಂದು ಪೊಲೀಸರ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿನಯ್ ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿರುವ ಎಲ್ಲ ಅಂಶಗಳ ಕುರಿತೂ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಮೇರೆಗೆ ಶುಕ್ರವಾರ ರಾತ್ರಿ ಪ್ರತಿಭಟನೆ ಕೈಬಿಟ್ಟಿದ್ದಾರೆ. ಬಳಿಕ ಕುಟುಂಬದ ಸದಸ್ಯರಿಗೆ ಮೃತದೇಹ ಹಸ್ತಾಂತರ ಮಾಡಿದ್ದು, ಬಿಗಿ ಭದ್ರತೆಯಲ್ಲಿ ಮೃತದೇಹವನ್ನು ಸ್ವಗ್ರಾಮ ಗೋಣಿಮರೂರಿನತ್ತ ಕೊಂಡೊಯ್ಯಲಾಗಿದೆ.
ವಿನಯ್ ವಿರುದ್ಧದ ಎಫ್‌ಐಆರ್‌ಗೆ ಕಾರಣ?
ದುಃಸ್ಥಿತಿಯಲ್ಲಿರುವ ಶೌಚಾಲಯದ ಚಿತ್ರದ ಮೇಲೆ, ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿದ್ದ ಶಾಸಕ ಎ.ಎಸ್ ಪೊನ್ನಣ್ಣ ಅವರ ಚಿತ್ರ ಹಾಕಿ, ‘ಸ್ವಚ್ಛ ಭಾರತ್’, ‘ಸ್ವಚ್ಛ ವಿರಾಜಪೇಟೆ’, ‘ಪೊನ್ನಣ್ಣ ಶೌಚಾಲಯ’ ಎಂದು ಬರೆದು ರಾಜೇಂದ್ರ ಪಾಪು ಎಂಬುವವರು ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿದ್ದವರಿಗೆ ಅವಮಾನ ಮಾಡಲಾಗಿದೆಯೆಂದು ಆರೋಪಿಸಿ ಕೊಡಗಿನಲ್ಲಿ ಪ್ರತಿಭಟನೆಗಳು ನಡೆದಿದ್ದವು. ಬಳಿಕ ವಿನಯ್ ಸೋಮಯ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಿಂದ ಮನನೊಂದ ವಿನಯ್ ಸುದೀರ್ಘ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಬಳಿಕ ನೇಣಿಗೆ ಶರಣಾಗಿದ್ದಾರೆ.
ವಿನಯ್ ಬರೆದಿರುವ ಪತ್ರದಲ್ಲಿ ಏನಿತ್ತು?
“ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟವಾಡಿದ ತನ್ನೀರಾ ಮೈನಾ ಅವರು ನನ್ನ ಸಾವಿಗೆ ನೇರ ಹೊಣೆ. ನಮ್ಮ ಮೇಲೆ ಎಫ್‌ಐಆರ್ ಹಾಕಿಸಿ, ʼಕಿಡಿಗೇಡಿಗಳುʼ ಅಂತ ಇಡೀ ಕೊಡಗಿಗೆ ವೈರಲ್ ಮಾಡಿರುವನೂ ಕೂಡಾ ಇವನೆ. ಎಫ್‌ಐಆರ್ ಆದ ದಿನದಿಂದ ಜಾಮೀನು ಸಿಗುವ ತನಕ ನಾನು, ನನ್ನ ಅಮ್ಮನ ಜತೆಗೂ ಮಾತನಾಡಿಲ್ಲ. ತನ್ನೀರಾ ಮೈನಾನ ಕಾರಣಕ್ಕಾಗಿ ಜೀವ ಕಳೆದುಕೊಳ್ಳುತ್ತಿರುವ ವ್ಯಕ್ತಿ ನಾನು ಮೊದಲಿಗನಲ್ಲ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆತ್ಮಹತ್ಯೆಯ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು” ಎಂದು ಬರೆಯಲಾಗಿದೆ.
“ಜಾಮೀನು ಸಿಕ್ಕಿದರೂ ವಿರಾಜಪೇಟೆಯ ಶಾಸಕ ಪೊನ್ನಣ್ಣನ ಆದೇಶದಂತೆ ಮಡಿಕೇರಿಯ ಪೊಲೀಸರು ನನ್ನನ್ನು ಹುಡುಕಾಟ ನಡೆಸುತ್ತಿದ್ದರು. ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪ್ರಶ್ನಿಸಿದ್ದಕ್ಕೆ ಮಡಿಕೇರಿ ಶಾಸಕ ಮಂಥರ್‌ಗೌಡ ಗದರಿದ್ದರು. ಗ್ರೂಪ್‌ನಲ್ಲಿ ಹಾಕಿದರೆ ಸರಿ ಇರಲ್ಲ ಎಂದೂ ಕೂಡ ಹೇಳಿದ್ದರು” ಎಂದು ಉಲ್ಲೇಖವಾಗಿದೆ. ಇದೀಗ ವಿನಯ್ ಅವರ ಹೆಸರಿನಲ್ಲಿರುವ ಬರಹವನ್ನು ಪರಿಶೀಲಿಸಲಾಗುತ್ತಿರುವುದಾಗಿ ತಿಳಿದುಬಂದಿದೆ.
ತನ್ನೀರಾ ಮೈನಾ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ), ಸೆಕ್ಷನ್ 3(5) (ಅಪರಾಧಿಕ ಸಂಚು), 351(2)(ಬೆದರಿಕೆ) ಹಾಗೂ 352ರ (ಉದ್ದೇಶ ಪೂರ್ವಕವಾಗಿ ಅವಮಾನ) ಅಡಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಾಪ್ ಸಿಂಹ ನೇತೃತ್ವದಲ್ಲಿ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಪೊಲೀಸ್ ಬಿಗಿ ಭದ್ರತೆಯಲ್ಲಿ ಪ್ರತಾಪ್ ಸಿಂಹ ನೇತ್ರತ್ವದೊಂದಿಗೆ ಇದೀಗ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ ಆರಂಭಿಸಿದ್ದು,
“ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಕಾಂಗ್ರೆಸ್ ನಾಯಕರ ಮಾನಸಿಕ ಹಿಂಸೆಯೇ ನೇರ ಕಾರಣ, ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಮಂಥರ್ ಗೌಡ ಕೂಡ ಇದಕ್ಕೆ ಕಾರಣರಾಗಿದ್ದಾರೆ” ಎಂದು ಬಿಜೆಪಿ ಮುಖಂಡರು ಅರೋಪ ಮಾಡುತ್ತಿದ್ದಾರೆ.

ಕೊಡಗು ಎಸ್‌ಪಿ ಅವರು ಎ.ಎಸ್ ಪೊನ್ನಣ್ಣನವರ ಆಪ್ತ ಕಾರ್ಯದರ್ಶಿಯಂತೆ ವರ್ತನೆ ಮಾಡುತ್ತಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದರು.
ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಪ್ರತಿಕ್ರಿಯೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಪ್ರತಿಕ್ರಿಯಿಸಿದ್ದು, “ತನ್ನೀರಾ ಮೈನಾ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರು. ತಮ್ಮ ಪಕ್ಷದ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ನಾಯಕರನ್ನು ಪದೇ ಪದೆ ಅವಹೇಳನ ಮಾಡುತ್ತಿದ್ದವರ ಮೇಲೆ ಪಕ್ಷದ ಪರವಾಗಿ ದೂರು ನೀಡುವುದು ಅವರ ಜವಾಬ್ದಾರಿ, ಅದನ್ನು ಅವರು ನಿಭಾಯಿಸಿದ್ದಾರೆ. ದೂರು ದಾಖಲಾದ ಮೇಲೆ ಆರೋಪಿತರು ಹೈಕೋರ್ಟ್‌ನಲ್ಲಿ ಎಫ್‌ಐಆರ್ ವಿರುದ್ದ ತಡೆಯಾಜ್ನೆಯನ್ನೂ ಕೂಡ ತಂದಿದ್ದಾರೆ. ಇದರ ಮಧ್ಯೆ ʼತನ್ನೀರಾ ಮೈನಾ ಅವರು ನನ್ನ ಫೋಟೊ ಬಳಸಿ ಕಿಡಿಗೇಡಿಗಳುʼ ಲೇಖನ ಬರೆದಿದ್ದಾರೆಂದು ತನ್ನ ಕೊನೆಯ ಬರಹ ಎನ್ನಲಾದ ವಾಟ್ಸ್‌ಆ್ಯಪ್ ಮೆಸೇಜ್‌ನಲ್ಲಿ ಉಲ್ಲೇಖಿಸಿದ್ದಾರೆ. ಕೇವಲ ಕಿಡಿಗೇಡಿಗಳು ಎಂಬ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಆಶ್ಚರ್ಯಕರವಾಗಿದೆ” ಎಂದು ಹೇಳಿದರು.
“ಈ ಹಿಂದೆ ಡಾ. ಮಂಥರ್ ಗೌಡ ಅವರೊಂದಿಗೆ ಮಾತನಾಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ಡಲ್ಲದೆ ನನಗೂ ವೈಯಕ್ತಿಕವಾಗಿ ಕಳುಹಿಸಿದ್ದರು. ರಾಷ್ಟ್ರನಾಯಕರನ್ನು ಅವಹೇಳನ ಮಾಡುವಾಗ ಪೊಲೀಸ್ ಕೇಸ್ ಆಗುತ್ತೆ, ಅದಕ್ಕೆ ಕಠಿಣ ಕಾನೂನುಗಳಿವೆ ಎಂಬುದನ್ನು ರಾಜಕೀಯ ಪಕ್ಷಗಳು ತನ್ನ ಸೋಷಿಯಲ್ ಮೀಡಿಯಾ ನಿರ್ವಹಣೆ ಮಾಡುವವರಿಗೆ ಅರಿವು ಮೂಡಿಸಬೇಕು. ತನ್ನ ಮತ ಬ್ಯಾಂಕ್ ಹೆಚ್ಚಿಸಿಕೊಳ್ಳುವ ಭರದಲ್ಲಿ ಮುಗ್ದ ವಿದ್ಯಾವಂತ ಯುವಕರನ್ನು ಹುರಿದುಂಬಿಸಿ ಅವರಲ್ಲಿ ಸುಳ್ಳು ವಿಚಾರಗಳನ್ನು ಸತ್ಯವೆಂದು ನಂಬಿಸಿ ನಂತರ ಪೊಲೀಸ್ ಎಫ್‌ಐಆರ್ ಸಂಧರ್ಭದಲ್ಲಿ ಕಾರ್ಯಕರ್ತರನ್ನು ಕೈಬಿಡುವ ಕೆಟ್ಟ ಚಾಳಿ ಬಿಜೆಪಿಯ ರಕ್ತದಲ್ಲಿ ಬಂದು ಬಿಟ್ಟಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ; ಕಾಂಗ್ರೆಸ್ ಶಾಸಕರೇ ಕಾರಣವೆಂದು ಬಿಜೆಪಿ ಆರೋಪ
“ಯಾರದೋ ಅಧಿಕಾರ ದಾಹಕ್ಕೆ ಮುಗ್ದ ಯುವಕ ಬಲಿಯಾದ. ಅವರ ಹೆಂಡತಿ, ಮಗು ಮತ್ತು ಕುಟುಂಬವು ಇಂದು ಅನಾಥವಾಗಿದೆ.
ಚಿತೆಯು ಆರುವ ಮೊದಲೇ ಬಿಜೆಪಿ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ತಾ ಮುಂದು ನಾ ಮುಂದು ಎಂದು ಹೋರಾಟ ಪ್ರಾರಂಭಿಸಿದ್ದಾರೆ. ಹೆಣಗಳ ಮೇಲೆ ಅಧಿಕಾರದ ರುಚಿಕಂಡಿರುವ ಭಾರತೀಯ ಜನತಾ ಪಾರ್ಟಿ ಮುಗ್ದರ ಹೆಣ ಬೀಳುವುದನ್ನೇ ರಣ ಹದ್ದುಗಳಂತೆ ಕಾಯುತ್ತಿರುತ್ತದೆ” ಎಂದು ಹೇಳಿದ್ದಾರೆ.
“ಎರಡು ದಶಕಗಳ ನಂತರ ಕೊಡಗಿನ ಎರಡೂ ಕ್ಷೇತ್ರ ಕಳೆದುಕೊಂಡ ಬಿಜೆಪಿ ಬುದ್ಧಿಭ್ರಮಣೆಗೆ ಒಳಗಾಗಿದೆ. ಗ್ಯಾರಂಟಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರೊಂದಿಗೆ, ಹಿಂದೆಂದೂ ಕಾಣದ ಅಭಿವೃದ್ದಿಯತ್ತ ಕೊಡಗು ದಾಪುಗಾಲಿಕ್ಕುವಲ್ಲಿ ಯಶಸ್ಸು ಕಂಡಿರುವ ನಮ್ಮ ಇಬ್ಬರು ಶಾಸಕರನ್ನು ಹಣಿಯಲು ಬಿಜೆಪಿ ಹಗಲು ಕನಸು ಕಾಣುತ್ತಿದೆ. ಇಂತಹ ವ್ಯರ್ಥ ಪ್ರಯತ್ನವನ್ನು ಬಿಜೆಪಿ ಕೈ ಬಿಡಬೇಕು ಮತ್ತು ಶಾಸಕರನ್ನು ಅವಹೇಳನ ಮಾಡುವುದು ಖಂಡನೀಯ” ಎಂದು ಪ್ರತಿಕ್ರಿಯಿಸಿದ್ದಾರೆ.