ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಡುಗಡೆ ಮಾಡಿರುವ ದಾಖಲೆಗಳ ಬಗ್ಗೆ ಹೇಳಿಕೆ ನೀಡಿರುವ ಬಹುಭಾಷಾ ನಟ ಕಿಶೋರ್ ಕುಮಾರ್, “ನಾವು ಬಾಯಿ ಮುಚ್ಚಿಕೊಂಡೇ ಇದ್ದರೆ ನಮ್ಮ ಮತದಾನದ ಹಕ್ಕನ್ನು ಇವರು ಸಂಪೂರ್ಣವಾಗಿ ಕಸಿದುಕೊಳ್ಳುವ ದಿನ ದೂರವಿಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಆಪರೇಷನ್ ಮಹದೇವಪುರ ಭಾರತೀಯ ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನವನ್ನು ಕಗ್ಗೊಲೆ ಮಾಡಿದ ದೇಶದೊಳಗಿನ ಭಯೋತ್ಪಾದಕರನ್ನು ಬಯಲಿಗೆಳೆದಿದೆ” ಎಂದು ಜರೆದಿದ್ದಾರೆ.
“ಎಲ್ಲಾ ಭಾರತೀಯರ ಪರವಾಗಿ, ಡಿಜಿಟಲ್ ಡೇಟಾ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸದ ಚುನಾವಣಾ ಆಯೋಗದ ಎಲ್ಲಾ ಮೋಸದ ತಂತ್ರಗಳನ್ನು ಮೀರಿಸಿ, ಟನ್ನುಗಟ್ಟಲೆ ಮೋಸದ ದಾಖಲೆಗಳನ್ನು ಪರಿಶೀಲಿಸಿ ಪ್ರಜಾಪ್ರಭುತ್ವದ ಅಡಿಪಾಯವಾದ ನಮ್ಮ ಮತದ ಅಧಿಕಾರವನ್ನು ನಾಶಮಾಡುವ, ಅತಿದೊಡ್ಡ ದೇಶದ್ರೋಹವನ್ನು ಸಾಬೀತುಪಡಿಸಲು ಶ್ರಮಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ವಂದನೆಗಳು. ಇದು ರಾಹುಲ್ ಗಾಂಧಿ ಅಥವಾ ವಿರೋಧ ಪಕ್ಷದ ಹೋರಾಟವಲ್ಲ. ನಮ್ಮ ಹೋರಾಟ. ನಮ್ಮ ಹಕ್ಕನ್ನು ಕಗ್ಗೊಲೆ ಮಾಡಲಾಗಿದೆ” ಎಂದು ನಟ ಕಿಶೋರ್ ಕುಮಾರ್ ತಿಳಿಸಿದ್ದಾರೆ.
“ಈಗಲೂ ನಾವು ಎದ್ದು ನಿಲ್ಲುವುದಿಲ್ಲವೇ? ಈಗಲೂ ಯಾವುದೇ ತನಿಖೆ ಇರುವುದಿಲ್ಲವೇ? ಇದು ಹೊಸ ಸಾಮಾನ್ಯವಾಗುತ್ತದೆಯೇ? ಉಪರಾಷ್ಟ್ರಪತಿಯ ಹುದ್ದೆಯಂತಹ ಉನ್ನತ ಹುದ್ದೆಯ ರಾಜೀನಾಮೆಯಂತೆ. ಚುನಾವಣಾ ಬಾಂಡ್ಗಳಂತಹ ದೊಡ್ಡ ಮತ್ತು ಅಸಾಂವಿಧಾನಿಕ ಹಗರಣದಂತೆ ? ಹಾಗಿದ್ದರೆ ನಮ್ಮ ಆರ್ಥಿಕತೆ ಸತ್ತಿದೆಯೋ ಇಲ್ಲವೋ, ಆದರೆ ನಮ್ಮ ಪ್ರಜಾಪ್ರಭುತ್ವ ಖಂಡಿತವಾಗಿಯೂ ಸತ್ತಿದೆ” ಎಂದು ಪೋಸ್ಟ್ನಲ್ಲಿ ಬಹುಭಾಷಾ ನಟ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ರಸಗೊಬ್ಬರ ಅಭಾವ: ಎರಡನೇ ದಿನವೂ ದಿಢೀರ್ ರಸ್ತೆಗಿಳಿದು ಪ್ರತಿಭಟಿಸಿದ ರೈತರು
ನಾವು ಬಾಯಿ ಮುಚ್ಚಿಕೊಂಡೇ ಇದ್ದರೆ ನಮ್ಮ ಮತದಾನದ ಹಕ್ಕನ್ನು ಇವರು ಸಂಪೂರ್ಣವಾಗಿ ಕಸಿದುಕೊಳ್ಳುವ ದಿನ ದೂರವಿಲ್ಲ. ದೇಶದ ಜನ, ಮಾಧ್ಯಮಗಳು, ನ್ಯಾಯಾಂಗ, ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಈ ದೇಶದ್ರೋಹದ ಭಾಗವಾಗಲು ನಿರಾಕರಿಸಿ ಈ ದೇಶದ್ರೋಹಿಗಳ ವಿರುದ್ಧ ನಿಲ್ಲಬೇಕು ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ತಿಳಿಸಿದ್ದಾರೆ.