ಅಚ್ಯುತಾನಂದನ್ ಕೇರಳ ರಾಜಕಾರಣದಲ್ಲಿ ಒಂದು ಶಕ್ತಿಯಾಗಿದ್ದರು. ಅವರ ಜನಪರ ಆಡಳಿತ, ಭ್ರಷ್ಟಾಚಾರ ವಿರುದ್ಧದ ಹೋರಾಟ ಹಾಗೂ ಕಾರ್ಮಿಕ-ರೈತರ ಕಲ್ಯಾಣಕ್ಕಾಗಿ ಅವರು ಮಾಡಿದ ಕೆಲಸಗಳು ಅವರನ್ನು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದೆ.
ವಿ.ಎಸ್. ಅಚ್ಯುತಾನಂದನ್ (ವೆಲಿಯಂ ಭಾರ್ಗವನ್ ಶಿವಶಂಕರನ್ ಅಚ್ಯುತಾನಂದನ್) ಕೇರಳ ರಾಜಕೀಯ ಇತಿಹಾಸದಲ್ಲಿ ಅಗ್ರಗಣ್ಯ ರಾಜಕಾರಣಿ. ಭ್ರಷ್ಟಾಚಾರ ವಿರೋಧಿ ಯೋಧ, ಸಾಮಾನ್ಯ ಜನರ ಧ್ವನಿ, ಕಟ್ಟಾ ಕಮ್ಯುನಿಸ್ಟ್ ನಾಯಕ, ಶಿಸ್ತಿನ ಜೀವನಶೈಲಿಯ ಮಾಸ್ಟರ್, ಮಲಯಾಳಿಗಳ ‘ರಾಕ್‌ಸ್ಟಾರ್’ ಖ್ಯಾತಿಯಾಗಿದ್ದವರು. ಕೇರಳದ ಮುಖ್ಯಮಂತ್ರಿಯಾಗಿ (2006-2011) ಮತ್ತು ಸಿಪಿಐ(ಎಂ)ನ ಹಿರಿಯ ನಾಯಕರಾಗಿ ರಾಜಕೀಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದವರು. 101 ವರ್ಷಗಳ ಕಾಲ ಕೆಂಬಾವುಟದೊಂದಿಗೆ ಸಮರ್ಥನೀಯವಾಗಿ ಬದುಕಿದ್ದ ಕಮ್ಯುನಿಸ್ಟ್ ನಾಯಕ ಅಚ್ಯುತಾನಂದನ್ – ಈಗ ಇನ್ನಿಲ್ಲ.
ಅಚ್ಯುತಾನಂದನ್ ಜುಲೈ 21ರಂದು ಕೊನೆಯುಸಿಳೆದಿದ್ದಾರೆ. ತಮ್ಮ ಹೋರಾಟ, ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ. ಅಚ್ಯುತಾನಂದನ್ ಅವರು ಜನಿಸಿದ್ದ 1923ರ ಅಕ್ಟೋಬರ್ 20ರಂದು. ಅವರ ಊರು ಕೇರಳದ ಆಲಪ್ಪುಳ ಜಿಲ್ಲೆಯ ಪುನ್ನಪ್ರ ಗ್ರಾಮ. ತಂದೆ ವೆಲಿಯಂ ಭಾರ್ಗವನ್ ಮತ್ತು ತಾಯಿ ಅಕ್ಕಮ್ಮ ದಂಪತಿಗಳಿಗೆ ಜನಿಸಿದ ಏಳು ಮಕ್ಕಳಲ್ಲಿ ಅಚ್ಯುತಾನಂದನ್ ಕೂಡ ಒಬ್ಬರು. ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬದಲ್ಲಿ ಜನಿಸಿದ ಅಚ್ಯುತಾನಂದನ್, ಕಷ್ಟಗಳ ನಡುವೆ ಬೆಳೆದವರು. ಕಿರಿಯ ವಯಸ್ಸಿನಲ್ಲಿಯೇ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿಯೆತ್ತಿದವರು.
11ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಅವರು, 7ನೇ ತರಗತಿಗೇ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಬಾಲ್ಯದಲ್ಲಿಯೇ ಸಿಪಿಐನಲ್ಲಿ ತೊಡಗಿಸಿಕೊಂಡಿದ್ದ ಅವರು, ಶಿಕ್ಷಣದ ಕೊರತೆಯ ಹೊರತಾಗಿಯೂ ರಾಜಕೀಯ ಮತ್ತು ಸಾಮಾಜಿಕ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಪಡೆದುಕೊಂಡಿದ್ದರು. ಓದು, ಅಧ್ಯಯನಗಳ ಮೂಲಕ ಅವರ ಜ್ಞಾನ ವಿಸ್ತರಿಸಿತು. ಕಮ್ಯುನಿಸ್ಟ್ ಚಳವಳಿಯಲ್ಲಿ ಕಾರ್ಯಕರ್ತನಿಂದ ನಾಯಕನಾಗಿ ಬೆಳೆದುಬಂದರು.
1940ರ ದಶಕದಲ್ಲಿ ಆಲಪ್ಪುಳದ ಕಾರ್ಮಿಕ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಪುನ್ನಪ್ರ-ವಯಲಾರ್ ರೈತ ಕಾರ್ಮಿಕರ ಹೋರಾಟದಲ್ಲಿ (1946) ಪ್ರಮುಖ ಪಾತ್ರ ವಹಿಸಿದರು. ಈ ಚಳವಳಿಯ ಸಂದರ್ಭದಲ್ಲಿ ಅವರು ಬಂಧನಕ್ಕೊಳಗಾಗಿ, ಜೈಲು ಶಿಕ್ಷೆಯನ್ನೂ ಅನುಭವಿಸಿದರು.
1964ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದಿಂದ ಬೇರ್ಪಟ್ಟು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಮಾರ್ಕ್ಸ್‌ವಾದಿ [ಸಿಪಿಐ(ಎಂ)] ಸ್ಥಾಪನೆಯಾದಾಗ ಅಚ್ಯುತಾನಂದನ್ ಅವರು ಸಿಪಿಐ ತೊರೆದು, ಸಿಪಿಐ(ಎಂ) ಕಟ್ಟುವಲ್ಲಿ ಸಕ್ರಿಯರಾಗಿದ್ದರು. 70 ವರ್ಷಗಳ ಕಾಲ ರಾಜಕೀಯದಲ್ಲಿ ತೊಡಗಿದ್ದ ಅಚ್ಯುತಾನಂದನ್ ಅವರು ಬರೋಬ್ಬರಿ 10 ಚುನಾವಣೆಗಳಲ್ಲಿ ಸ್ಪರ್ಧಿಸಿ, ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಾತ್ರವಲ್ಲದೆ, ಕೇರಳ ವಿಧಾನಸಭೆಯಲ್ಲಿ ಮೂರು ಬಾರಿ ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, 2006ರಿಂದ 2011ರವರೆಗೆ ಕೇರಳದ ಮುಖ್ಯಮಂತ್ರಿಯಾಗಿಯೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತವೇ ಅಥವಾ ಶಿಕ್ಷಣದ ಗುಣಮಟ್ಟವೇ?
ಕೇರಳ ರಾಜಕಾರಣದಲ್ಲಿ ಜನಸಾಮಾನ್ಯರ ಸಂಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದ ನಾಯಕ ಎಂಬ ಹೆಗ್ಗಳಿಕೆಯೂ ಅಚ್ಯುತಾನಂದನ್ ಅವರಿಗಿದೆ. ಅವರ ಸರಳತೆ, ಭ್ರಷ್ಟಾಚಾರ ವಿರುದ್ಧದ ಹೋರಾಟ ಹಾಗೂ ಕಾರ್ಮಿಕ-ರೈತರ ಹಕ್ಕುಗಳಿಗಾಗಿ ಹೋರಾಟದಿಂದಾಗಿ ಜನರ ಮನಸ್ಸಿನಲ್ಲಿ ಅಚ್ಯುತಾನಂದನ್ ಮೇಲಿನ ಪ್ರೀತಿಯು ಹೇರಳವಾಗಿತ್ತು. ಕೇರಳ ಕಮ್ಯುನಿಸ್ಟ್ ಚಳವಳಿಯಲ್ಲಿ ಅವರೊಬ್ಬ ದಂತಕಥೆಯಾಗಿ ಬೆಳೆಯುವಂತೆ ಮಾಡಿತು.
ಮುಖ್ಯಮಂತ್ರಿಯಾಗಿ ಅಚ್ಯುತಾನಂದನ್
* ಕಾರ್ಮಿಕ ಹೋರಾಟಗಳ ಜೊತೆಗೆ ಪರಿಸರದ ಮೇಲೆ ಹೆಚ್ಚು ಕಾಳಜಿ ಹೊಂದಿದ್ದ ಅಚ್ಯುತಾನಂದನ್ ಅವರು ಮುಖ್ಯಮಂತ್ರಿಯಾಗಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತುನೀಡಿದ್ದರು. 2001-2006 ನಡುವೆ ಪ್ರತಿಪಕ್ಷದ ನಾಯಕರಾಗಿದ್ದ ಅಚ್ಯುತಾನಂದನ್, ಭತ್ತದ ಗದ್ದೆಗಳ ವ್ಯಾಪಕವಾದ ಭೂ ಪರಿವರ್ತನೆಯನ್ನು ತೀವ್ರವಾಗಿ ವಿರೋಧಿಸಿದ್ದರು. 2006ರಲ್ಲಿ ತಾವು ಮುಖ್ಯಮಂತ್ರಿಯಾದ ಬಳಿಕ, 2008ರಲ್ಲಿ, ಕೃಷಿ ಭೂಮಿಯ ರಕ್ಷಣೆಗಾಗಿ ‘ತೇವಭರಿತ ಭೂಮಿ ಸಂರಕ್ಷಣೆ ಕಾಯ್ದೆ-2008’ನ್ನು ಜಾರಿಗೆ ತಂದರು. ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ಬಳಸುವುದಕ್ಕೆ ಕಡಿವಾಣ ಹಾಕಿದರು. ಮುನ್ನಾರ್‌ನ ಜಲವಿದ್ಯುತ್ ಯೋಜನೆಯ ವಿರುದ್ಧ ಧ್ವನಿಯೆತ್ತುವ ಮೂಲಕ, ಕೇರಳದ ಪರಿಸರವಾದಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ಮಾತಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನವನದ ರಕ್ಷಣೆಗಾಗಿನ ಹೋರಾಟ, ಕೋಕಾ-ಕೋಲಾ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
* ಭ್ರಷ್ಟಾಚಾರ ವಿರುದ್ಧ ಕಠಿಣ ನಿಲುವು ಹೊಂದಿದ್ದ ಅವರು, ತಮ್ಮ ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತು ಕೊಟ್ಟಿದ್ದರು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯದಂತೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು.
* ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಅವರು ಕಾರ್ಮಿಕರು ಮತ್ತು ರೈತರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಕಾರ್ಮಿಕರಿಗಾಗಿ; ಅದರಲ್ಲೂ ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲು ಕನಿಷ್ಠ ವೇತನ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರು. ಕಾರ್ಮಿಕ ಕಲ್ಯಾಣ ಮಂಡಳಿಗಳನ್ನು ಬಲಪಡಿಸಿದರು. ಕಾರ್ಮಿಕರಿಗೆ ಆರೋಗ್ಯ ಭದ್ರತೆ, ಪಿಂಚಣಿ ಹಾಗೂ ಇತರ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಹಲವು ಯೋಜನೆಗಳನ್ನು ರೂಪಿಸಿದರು.
* ರೈತರಿಗಾಗಿ: ಕೇರಳದಲ್ಲಿ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸುವ ಮೂಲಕ ಭೂರಹಿತ ರೈತರಿಗೆ ಭೂಮಿಯನ್ನು ವಿತರಿಸುವ ಕ್ರಮಕ್ಕೆ ಒತ್ತು ನೀಡಿದರು. ಪರಿಣಾಮವಾಗಿ, ಸಣ್ಣ ಮತ್ತು ಮಧ್ಯಮ ರೈತರಿಗೆ ಭೂ ಒಡೆತನದ ಭದ್ರತೆ ಒದಗಿತು. ಸಣ್ಣ ರೈತರಿಗೆ ಮಾರುಕಟ್ಟೆ ಸೌಲಭ್ಯ ಮತ್ತು ಸಾಲ ಸೌಕರ್ಯ ಒದಗಿಸಲು ಕೃಷಿ ಸಹಕಾರ ಸಂಘಗಳನ್ನು ಬಲಪಡಿಸಿದರು. ರೈತರ ಸಾಲದ ಒತ್ತಡವನ್ನು ಕಡಿಮೆ ಮಾಡಲು ಸಾಲ ಮನ್ನಾ ಮತ್ತು ಕಡಿಮೆ ಬಡ್ಡಿ ದರದ ಸಾಲ ಒದಗಿಸುವ ಯೋಜನೆಗಳನ್ನು ಜಾರಿಗೆ ತಂದರು. ಕೃಷಿ ಉತ್ಪನ್ನಗಳಿಗೆ ‘ಕನಿಷ್ಠ ಬೆಂಬಲ ಬೆಲೆ’ (MSP) ಒದಗಿಸುವ ಮೂಲಕ ರೈತರಿಗೆ ಆದಾಯದ ಭದ್ರತೆಯನ್ನು ಒದಗಿಸಿದರು. ಕೇರಳದ ಕಾಳುಮೆಣಸು, ಏಲಕ್ಕಿ, ತೆಂಗಿನಕಾಯಿ ಹಾಗೂ ಭತ್ತದಂತಹ ಉತ್ಪನ್ನಗಳನ್ನು ಬೆಳೆಯುವ ರೈತರಿಗೆ ಈ ಯೋಜನೆಯಿಂದ ಲಾಭವಾಯಿತು.
* ಗ್ರಾಮೀಣಾಭಿವೃದ್ಧಿಗಾಗಿ: ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಲು ಗ್ರಾಮೀಣ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ಖಾತರಿ ನೀಡುವ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯನ್ನು (ಮನರೇಗಾ) ಕೇರಳದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸುಧಾರಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಿದರು.
ಅಚ್ಯುತಾನಂದನ್ ಸುತ್ತಲಿನ ವಿವಾದಗಳು ಮತ್ತು ಆರೋಪಗಳು
* ಕೇರಳದ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಚ್ಯುತಾನಂದನ್ ನಡುವೆ ಸಿಪಿಐ(ಎಂ)ನಲ್ಲಿ ಆಂತರಿಕ ಕಲಹ ಮುನ್ನಲೆಗೆ ಬಂದಿತ್ತು. ಇಬ್ಬರ ನಡುವಿನ ತಿಕ್ಕಾಟವು ಕೇರಳ ರಾಜಕಾರಣದಲ್ಲಿ ದೊಡ್ಡ ವಿವಾದವಾಗಿ ಸುದ್ದಿಯಾಗಿತ್ತು. 2007ರಲ್ಲಿ ಪಿಣರಾಯಿ ವಿಜಯನ್ ವಿರುದ್ಧ ಲಾವಲಿನ್ ಭ್ರಷ್ಟಾಚಾರ ಆರೋಪ ಕೇಳಿಬಂದಾಗ, ಅಚ್ಯುತಾನಂದನ್ ತಮ್ಮದೇ ಪಕ್ಷದ ವಿರುದ್ಧ ಧ್ವನಿಯೆತ್ತಿದ್ದರು. ಪರಿಣಾಮವಾಗಿ, 2008ರಲ್ಲಿ, ಪಕ್ಷದಿಂದ ಶಿಸ್ತು ಕ್ರಮಕ್ಕೆ ಒಳಗಾಗಿ, ಅವರನ್ನು ಸಿಪಿಐ(ಎಂ) ಪಾಲಿಟ್‌ಬ್ಯೂರೊದಿಂದ ತಾತ್ಕಾಲಿಕವಾಗಿ ಹೊರಹಾಕಲಾಗಿತ್ತು.
* 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಅಚ್ಯುತಾನಂದನ್, ಭೂ ಸುಧಾರಣೆಯನ್ನು ಜಾರಿಗೆ ತಂದಾಗ, ಅವರ ವಿರುದ್ಧ ಗಂಭೀರ ಭೂವಿವಾದದ ಆರೋಪಗಳು ಕೇಳಿಬಂದಿದ್ದವು. ಆದರೆ, ಅವು ಕಾನೂನಾತ್ಮಕವಾಗಿ ಸಾಬೀತಾಗಲಿಲ್ಲ.
* 2011ರ ಚುನಾವಣೆಯ ವೇಳೆ ಕೇರಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಅಮುಲ್ ಬೇಬಿ’ ಎಂದು ಅಚ್ಯುತಾನಂದನ್ ಗೇಲಿ ಮಾಡಿದ್ದರು. ಅವರ ಈ ಹೇಳಿಕೆ ದೇಶಾದ್ಯಂತ ಭಾರೀ ವೈರಲ್ ಆಗಿತ್ತು. ಅಚ್ಯುತಾನಂದನ್ ಅವರ ಹೇಳಿಕೆಯ ಬಗ್ಗೆ ಪರ-ವಿರೋಧ ಚರ್ಚೆಯೂ ಆಗಿತ್ತು.
ಅಚ್ಯುತಾನಂದನ್ ಅವರ ಕಡೆಯ ವರ್ಷಗಳು
2019ರಲ್ಲಿ ಅಚ್ಯುತಾನಂದನ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅಂದಿನಿಂದ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದರು. ಕಳೆದ ತಿಂಗಳು (2025ರ ಜೂನ್) 23ರಂದು ಅವರು ಹೃದಯಾಘಾತಕ್ಕೆ ಒಳಗಾಗಿ, ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಜುಲೈ 21ರಂದು ತಮ್ಮ 101ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅಚ್ಯುತಾನಂದನ್ ಕೇರಳದ ರಾಜಕಾರಣದಲ್ಲಿ ಒಂದು ಶಕ್ತಿಯಾಗಿದ್ದರು. ಅವರ ಜನಪರ ಆಡಳಿತ, ಭ್ರಷ್ಟಾಚಾರ ವಿರುದ್ಧದ ಹೋರಾಟ ಹಾಗೂ ಕಾರ್ಮಿಕ-ರೈತರ ಕಲ್ಯಾಣಕ್ಕಾಗಿ ಅವರು ಮಾಡಿದ ಕೆಲಸಗಳು ಅವರನ್ನು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದೆ.