ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ನಡೆಯುತ್ತಿವೆ. ಅಧಿಕಾರಿ ಬದಲಾವಣೆಯ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬೆಂಬಲಿಗರು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಇತ್ತೀಚೆಗೆ, ಇಬ್ಬರೂ ನಾಯಕರ ಬೆಂಬಲಿಗರ ಬಾಯಿಗೆ ಕಾಂಗ್ರೆಸ್ ಹೈಕಮಾಂಡ್ ಬೀಗ ಹಾಕಿತ್ತು. ಆದಾಗ್ಯೂ, ಅಧಿಕಾರಿ ಬದಲಾವಣೆಯ ಬಗ್ಗೆ ಮತ್ತೆ ಡಿಕೆ ಶಿವಕುಮಾರ್ ಬೆಂಬಲಿತ ಶಾಸಕರು ಮಾತನಾಡುತ್ತಿದ್ದಾರೆ. ‘ಡಿಸೆಂಬರ್‌ವರೆಗೆ ಕಾದು ನೋಡಿ’ ಎಂದು ಶಾಸಕ ಬಸವರಾಜು ಶಿವಗಂಗಾ ಹೇಳಿದ್ದಾರೆ.
ಸುದ್ದಿಗಾರರು ಕೇಳಿದ, ‘ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆಯೇ, ತಮಗೆ ಸಚಿವ ಸ್ಥಾನ ಸಿಗುವುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಬಸವರಾಜು, “ಈ ವರ್ಷದ ಅಂತ್ಯದ ವೇಳೆಗೆ ಬದಲಾವಣೆಗಳು ಸಂಭವಿಸುತ್ತವೆ” ಎಂದು ಹೇಳಿದ್ದಾರೆ.
“ನನ್ನ ಹಣೆಬರಹದಲ್ಲಿ ಏನು ಬರೆಯಲಾಗಿದೆ ಎಂಬುದರ ಬಗ್ಗೆ ತಿಳಿಯಲು ಡಿಸೆಂಬರ್ ನಂತರ ಮಾತನಾಡೋಣ. ನನ್ನ ಬಾಸ್ ಮುಖ್ಯಮಂತ್ರಿಯಾದರೆ, ನಾನು ಮಂತ್ರಿಯಾಗಬಹುದು. ನನ್ನ ಭವಿಷ್ಯದ ಬಗ್ಗೆ ನಾನು ಡಿಸೆಂಬರ್ ನಂತರ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಯುದ್ಧ | ಟ್ರಂಪ್ ತಿಕ್ಕಲುತನದಿಂದ ಜಾಗತಿಕ ಆರ್ಥಿಕ ಮಾರುಕಟ್ಟೆ ಕುಸಿತದ ಭೀತಿ
2023ರಲ್ಲಿ ಕಾಂಗ್ರೆಸ್ ಗೆದ್ದಾಗ, ಡಿ.ಕೆ ಶಿವಕುಮಾರ್ ಕೂಡ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಆದರೆ, ಉಪಮುಖ್ಯಮಂತ್ರಿ ಹುದ್ದೆ ಪಡೆಯುವಂತೆ ಕಾಂಗ್ರೆಸ್ ಹೈಕಮಾಂಡ್ ಮನವೊಲಿಸಿತ್ತು. ಆದಾಗ್ಯೂ, 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂಬ ಚರ್ಚೆಗಳು ಆಗಿನಿಂದಲೂ ನಡೆಯುತ್ತಿವೆ. ಒಂದು ವೇಳೆ, ಅದು ನಿಜವಾಗಿದ್ದರೆ, 2.5 ವರ್ಷಗಳ ಬಳಿಕ, ಅಂದರೆ, ಈ ವರ್ಷದ ಡಿಸೆಂಬರ್‌ನಲ್ಲಿ ಅಧಿಕಾರ ಬದಲಾವಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಹೀಗಾಗಿಯೇ, ಡಿ.ಕೆ ಶಿವಕುಮಾರ್ ಪಾಳಯದಲ್ಲಿರುವ ಬಸವರಾಜು ಸೇರಿದಂತೆ ಹಲವರು ಅಧಿಕಾರ ಬದಲಾವಣೆಯ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ. ಆದಾಗ್ಯೂ, ಸಿದ್ದರಾಮಯ್ಯ ಅವರೇ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸಿದ್ದರಾಮಯ್ಯ ಅವರ ಬೆಂಬಲಿಗರು ಹೇಳುತ್ತಿದ್ದಾರೆ.