ಲೋಕಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಮಹತ್ವದ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿಯವರ ಬದಲು ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಆರಂಭಿಕ ಭಾಷಣ ಮಾಡಿದರು.
ಆರಂಭಿಕ ಭಾಷಣದಲ್ಲಿ ಪ್ರಧಾನಿಯ ಮೌನವನ್ನು ಪ್ರಶ್ನಿಸಿದ ಗೌರವ್ ಗೊಗೋಯ್, ‘ಸಂಸತ್ತಿನಲ್ಲಿ ಮಾತನಾಡದಂತೆ ಪ್ರಧಾನಿ ಮೌನವ್ರತ ಕೈಗೊಂಡಿದ್ದಾರೆ. ಹಾಗಾಗಿ ಅವರ ಮೌನ ಮುರಿಯಲು ನಾವು ಅವಿಶ್ವಾಸ ನಿರ್ಣಯ ಮಂಡಿಸಬೇಕಾಯಿತು’ ಎಂದು ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿಯವರಿಗೆ ನಮಗೆ ಮೂರು ಪ್ರಶ್ನೆಗಳಿವೆ. ಇಲ್ಲಿಯವರೆಗೆ ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ? ಮಣಿಪುರದ ಬಗ್ಗೆ ಕೇವಲ 30 ಸೆಕೆಂಡ್ ಮಾತನಾಡಲು ಸುಮಾರು 80 ದಿನಗಳು ಏಕೆ ಬೇಕಾಯಿತು? ಯಾಕೆ ಇನ್ನೂ ಮಣಿಪುರದ ಮುಖ್ಯಮಂತ್ರಿಯನ್ನು ಆ ಸ್ಥಾನದಿಂದ ಕೇಳಗೆ ಇಳಿಸಲಿಲ್ಲ?’ ಎಂದು ಅವರು ಪ್ರಶ್ನಿಸಿದರು.
‘ಮಣಿಪುರದಲ್ಲಿ ಶಾಂತಿ ನೆಲೆಸಬೇಕೆಂಬುದು ನಮ್ಮ ಅಪೇಕ್ಷೆಯಾಗಿತ್ತು. ಆದರೆ ಲೋಕಸಭೆ ಅಥವಾ ರಾಜ್ಯಸಭೆಗೆ ಪ್ರಧಾನಿ ನರೇಂದ್ರ ಮೋದಿ ಯಾಕೆ ಬಂದು ಮಾತನಾಡುತ್ತಿಲ್ಲ. ಅವರ ಮೌನವ್ರತವನ್ನು ನಾವು ಪ್ರಶ್ನೆ ಮಾಡಬೇಕಿದೆ. ರಾಹುಲ್ ಗಾಂಧಿ, ವಿಪಕ್ಷಗಳ ನಿಯೋಗ, ಗೃಹ ಸಚಿವರು ಮಣಿಪುರಕ್ಕೆ ಹೋಗಿದ್ದಾರೆ. ಆದರೆ, ಇಷ್ಟೆಲ್ಲ ಬೆಳವಣಿಗೆಯಾಗುತ್ತಿದ್ದರೂ ದೇಶದ ಪ್ರಧಾನಿಯಾಗಿದ್ದುಕೊಂಡು ನರೇಂದ್ರ ಮೋದಿಯವರು ಯಾಕೆ ಹೋಗಿಲ್ಲ’ ಎಂದು ಅವರು ಪ್ರಶ್ನಿಸಿದರು.