ಎಲ್ಲಾ ಕ್ಷೇತ್ರಗಳಲ್ಲಿಯೂ ದಲಿತ ಮತ್ತು ದುರ್ಬಲ ವರ್ಗದವರ ನಾಯಕತ್ವವನ್ನು ನೋಡಲು ಕಾಯುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಜೊತೆಗೆ ದೇಶದಾದ್ಯಂತ ಜಾತಿ ಗಣತಿ ಮಾಡುವ ಅಗತ್ಯವನ್ನು ಪುನರುಚ್ಛರಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಮತ್ತು ದಲಿತ ನಾಯಕ ಜಗಲಾಲ್ ಚೌಧರಿ ಜನ್ಮದಿನ ಸ್ಮರಣೆ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ದಲಿತರು ಮತ್ತು ದಮನಿತರಿಗೆ ಸಂವಿಧಾನ ಹಕ್ಕು ನೀಡುವ ಕಾರಣದಿಂದಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅದರ ವಿರುದ್ಧವಾಗಿದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಯಮುನಾ ನದಿಯ ನೀರನ್ನು ಕುಡಿದು ತೋರಿಸಿ: ಅರವಿಂದ್ ಕೇಜ್ರಿವಾಲ್‌ಗೆ ಸವಾಲೆಸೆದ ರಾಹುಲ್ ಗಾಂಧಿ
“ಸದ್ಯ ಆಡಳಿತದಲ್ಲಿ ಆಗಲಿ ಅಥವಾ ದೇಶದ ಇತರೆ ಸಂಸ್ಥೆಗಳಲ್ಲಿ ಆಗಲಿ ದಲಿತ ಮತ್ತು ದುರ್ಬಲರ ಸಹಭಾಗಿತ್ವವಿಲ್ಲ. ದೇಶದಲ್ಲಿ ನಿಖರವಾಗಿ ಎಷ್ಟು ಮಂದಿ ದಲಿತರು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗದವರು ಇದ್ದಾರೆ ಎಂದು ತಿಳಿಯಲು ಜಾತಿ ಗಣತಿಯನ್ನು ನಡೆಸುವ ಅಗತ್ಯವಿದೆ” ಎಂದು ತಿಳಿಸಿದ್ದಾರೆ.
ದೇಶದ ಎಲ್ಲಾ ವಿಭಾಗದಲ್ಲಿಯೂ ದಲಿತರು ಮತ್ತು ದುರ್ಬಲ ವರ್ಗಕ್ಕೆ ಸೇರಿದ ಜನರು ನಾಯಕತ್ವವನ್ನು ವಹಿಸಿಕೊಳ್ಳುವುದನ್ನು ನಾನು ನೋಡಲು ಕಾಯುತ್ತಿರುವೆ. ಧಮನಿತರ ಪರವಾಗಿ ನನ್ನ ಹೋರಾಟವನ್ನು ನಾನು ಮುಂದುವರೆಸುತ್ತೇನೆ” ಎಂದು ತಿಳಿಸಿದ್ದಾರೆ.
