ರಾಜ್ಯದಲ್ಲಿ ಒಂದಿಲ್ಲೊಂದು ವಿಚಾರ ಮುನ್ನೆಲೆಗೆ ಬರುತ್ತಿವೆ, ಚರ್ಚೆಯಾಗುತ್ತಿವೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಕಪೋಲಕಲ್ಪಿತ ಹಸಿ-ಹಸಿ ಸುಳ್ಳು ಸುದ್ದಿಗಳನ್ನ ಬಿಜೆಪಿ ಹರಡುತ್ತಿದೆ. ಸಿದ್ದರಾಮಯ್ಯ ಅವರ ರಾಜಕೀಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದ ಬಿಜೆಪಿ, ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲದ ಮುಡಾ ಪ್ರಕರಣದಲ್ಲಿ ಅವರನ್ನು ಸಿಲುಕಿಸಿದೆ. ಆದರೆ, ಅದು ಬಿಜೆಪಿಗೇ ತಿರುಗು ಬಾಣವಾಗಿದ್ದು, ಮುಡಾ ಪ್ರಕರಣದ ಬಗ್ಗೆ ಮಾತನಾಡುವುದನ್ನು ಬಿಜೆಪಿ ಕೈಬಿಟ್ಟಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸಲು ಬಿಜೆಪಿ ನಾನಾ ತಂತ್ರ ಹೆಣೆಯುತ್ತಿದೆ. ಅದಕ್ಕಾಗಿ, ಬಿಜೆಪಿ ಹುಟ್ಟುಹಾಕಿದ ವಿವಾದ – ಸಮಸ್ಯೆಗಳೇ ಇಲ್ಲದ, ಯಾರಿಗೂ ತೊಂದರೆಯೂ ಆಗದ ವಿಜಯಪುರದ ವಕ್ಫ್ ಆಸ್ತಿ ವಿಚಾರ.
ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಮುಸ್ಲಿಮರನ್ನು ಕಂಡರೇ ಆಗಲ್ಲ ಎಂಬುದು ಅವರ ನಡೆ-ನುಡಿಯಲ್ಲಿಯೇ ಕಾಣುತ್ತದೆ. ಕೋಮುದ್ವೇಷ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಇಲ್ಲ-ಸಲ್ಲದ ಹೇಳಿಕೆ ನೀಡಿ ಕೇಸರಿ ಧ್ವಜ ಹಿಡಿದು ಜನಾಂಗಗಳನ್ನ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಅದರ ಭಾಗವಾಗಿಯೇ ಈಗ ವಕ್ಫ್ ವಿಚಾರವನ್ನು ಮುನ್ನೆಲೆಗೆ ತಂದಿರುವ ಬಿಜೆಪಿ ಇಲ್ಲಸಲ್ಲದ ಹೇಳಿಕೆಗಳನ್ನ ನೀಡುವಲ್ಲಿ ನಿರತವಾಗಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ಕೋಮುದ್ವೇಷದ ಭಾಷಣದಿಂದಲೇ ಹೆಸರುವಾಸಿಯಾದವರು. ಹಿಂದುತ್ವದ ಹೆಸರಿನಲ್ಲಿ ಸ್ಥಳೀಯ ಯುವಕರಲ್ಲಿ ಕೋಮುದ್ವೇಷ ಬಿತ್ತುವವರು. ಎರಡು ಕೋಮುಗಳ ನಡುವೆ ಗಲಭೆ, ಸಂಘರ್ಷ ನಡೆಯಬೇಕೆಂದು ಬಯಸುವವರು. ರಾಜಕೀಯವಾಗಿ ಪಕ್ಷದಿಂದ ಹಿಂದೆ ತಳ್ಳಲ್ಪಟ್ಟಿರುವ ಯತ್ನಾಳ್ ಇಂತಹ ಕೋಮುದ್ವೇಷ ಪೂರಿತ ಹೇಳಿಕೆಗಳನ್ನ ನೀಡುತ್ತಾ ಮುನ್ನೆಲೆಗೆ ಬರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ದಾಳವಾಗಿ ಸಿಕ್ಕಿರುವುದೇ ಈ ವಕ್ಫ್ ವಿವಾದ…
ಈ ದಾಳವನ್ನ ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಎಳೆದು ತಂದು ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಇನ್ನು ಯಾವಾಗಲೂ ಸತ್ಯ, ನ್ಯಾಯದ ಪರವಾಗಿರಬೇಕಾದ ಮಾಧ್ಯಮಗಳು ಕೂಡ ಜನರಿಗೆ ತಪ್ಪು ಸಂದೇಶವನ್ನೇ ರವಾನೆ ಮಾಡಿ ಈ ಕೋಮುದ್ವೇಷದ ವಿಷವನ್ನು ಮತ್ತಷ್ಟು ಬಿತ್ತುವಲ್ಲಿ ಪಾತ್ರವಹಿಸುತ್ತಿವೆ.
ವಿಜಯಪುರದಲ್ಲಿ ಮಾತ್ರ ಇದ್ದ ವಕ್ಫ್ ಭೂಮಿ ಚರ್ಚೆ ಇದೀಗ ತೇರದಾಳ, ಕೋಲಾರ, ಮಂಡ್ಯ, ಯಾದಗಿರಿ, ಹಾವೇರಿ ಮತ್ತು ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಹಬ್ಬುವಂತೆ ಬಿಜೆಪಿ ಮಾಡುತ್ತಿದೆ. ಈ ವಕ್ಫ್ ಎನ್ನುವ ವಿವಾದ ಅಕ್ಟೋಬರ್ 7 ಮತ್ತು 8ರಂದು ವಿಜಯಪುರ ಜಿಲ್ಲೆಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ ಸಂಧರ್ಭದಲ್ಲಿ ಮುನ್ನೆಲೆಗೆ ಬಂದಿತು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, “ವಕ್ಫ್ ಆಸ್ತಿಗಳ ಖಾತಾ ಆಗದಿರುವ ಆಸ್ತಿಗಳ ಖಾತೆಗಳನ್ನ ಮುಂದಿನ 30 ದಿನಗಳಲ್ಲಿ ಮಾಡಬೇಕು” ಎಂಬ ಮೌಖಿಕ ಸಂದೇಶವನ್ನ ನೀಡಿದ್ದರು. ಅವರು ಈ ಹೇಳಿಕೆ ಕೊಡುತ್ತಿದ್ದಂತೆಯೇ ವಿಜಯಪುರದಲ್ಲಿ ವಕ್ಫ್ ವಿವಾದದ ಕಿಡಿ ಹೊತ್ತಿಕೊಂಡಿತು.
ಜಮೀರ್ ಅಹ್ಮದ್ ವಿಜಯಪುರಕ್ಕೆ ಬಂದು ಹೋಗಿದ್ದು, ಅವರು ನೀಡಿದ್ದ ಮೌಖಿಕ ಸೂಚನೆಯನ್ನ ವಿರೋಧಿಸಿದ ಯತ್ನಾಳ ಜಿಲ್ಲೆಯಲ್ಲಿರುವ ರೈತರನ್ನ ಸೇರಿಸಿ ದೊಡ್ಡ ಸಮಾವೇಶ ಮಾಡಿದರು. ಇದು ಮುಡಾ ವಿಚಾರವನ್ನು ಕೈಬಿಟ್ಟಿದ್ದ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಜನರನ್ನ ಎತ್ತಿಕಟ್ಟಲು ಮತ್ತೊಂದು ಅಸ್ತ್ರವಾಗಿ ದೊರೆಯಿತು. ಉಪಚುನಾವಣೆಗೂ ಈ ವಿವಾದ ನೆರವಾಗುತ್ತದೆ ಎಂದು ಬಿಜೆಪಿ ವಕ್ಫ್ ಸುತ್ತ ವಿವಾದವನ್ನು ಸೃಷ್ಟಿಸಿತು.
ವಕ್ಫ್ ಆಸ್ತಿಗಳ ಭೂಮಿ ಸರ್ವೇ, ಪ್ಲ್ಯಾಗಿಂಗ್ ಕಾರ್ಯ, ಖಾತೆ ಬದಲಾವಣೆ ಮಾಡಬೇಕೆಂದು ಸಚಿವ ಜಮೀರ್ ಅಹ್ಮದ್ ಸೂಚನೆ ನೀಡಿದ್ದರಿಂದ ವಕ್ಫ್ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ನೂರಾರು ರೈತರಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಸಚಿವರ ಸೂಚನೆ ಮತ್ತು ಅಧಿಕಾರಿಗಳ ತಪ್ಪು ಮಾಹಿತಿಯಿಂದ ಸರ್ವೇ ಕಾರ್ಯ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ರೈತರು ಆತಂಕಗೊಂಡಿದ್ದಾರೆ. ಇನ್ನು ಕೆಲ ಗ್ರಾಮಗಳ ರೈತರು ಪೂರ್ವಿಕರಿಂದ ಬಂದ ಜಮೀನನ್ನು ವಕ್ಫ್‌ಗೆ ಸೇರಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಇನ್ನು, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ 1,200 ಎಕರೆ ಜಮೀನನ್ನು ವಕ್ಫ್ ಬೋರ್ಡ್‌ಗೆ ಸೇರಿಸಲು ಜಿಲ್ಲಾಡಳಿತ ಸದ್ದಿಲ್ಲದೇ ತಯಾರಿ ನಡೆಸಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಹೊನವಾಡ ಗ್ರಾಮದಲ್ಲಿನ ಕೆಲವು ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ಬಂದಿರುವ ಹಿನ್ನೆಲೆ ಎಲ್ಲ ರೈತರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆಯ ಮಾತುಗಳನ್ನು ಕೂಡ ಆಡಿದ್ದಾರೆ.
ಇನ್ನು ಬಿಜೆಪಿಯೂ ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ತೊಂದರೆಗೆ ಒಳಗಾಗಿರುವ ರೈತರ ಅಹವಾಲು ಆಲಿಸಲು ಸಂಸದ ಗೋವಿಂದ ಕಾರಜೋಳ, ಶಾಸಕ ಹರೀಶ್ ಪೂಂಜ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಹಾಗೂ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನು ಒಳಗೊಂಡ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಚಿಸಿದ್ದಾರೆ. ಈಗಾಗಲೇ ಈ ತಂಡವು ಜಿಲ್ಲೆಗೆ ಭೇಟಿ ರೈತರ ಜೊತೆ ಸಮಾಲೋಚನೆ ನಡೆಸುತ್ತಿದೆ.
ವಕ್ಫ್ ಜಾಗದಲ್ಲಿ ರೈತರು ಉಳುಮೆ ಮಾಡುತ್ತಿದ್ದರು, ಅವರನ್ನೆಲ್ಲ ಓಡಿಸುತ್ತಿದ್ದಾರೆ ಎಂದು ಮಾಧ್ಯಮಗಳ ಮೂಲಕ ಬಿಜೆಪಿ ಜನರಲ್ಲಿ ವಕ್ಫ್ ಬಗ್ಗೆ ದ್ವೇಷ ಬಿತ್ತುತ್ತಿದೆ. ಆದರೆ, ವಾಸ್ತವವಾಗಿ, ಹೊನವಾಡ ಗ್ರಾಮದಲ್ಲಿ ವಕ್ಫ್ ಆಸ್ತಿಯೆಂದು ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ಅಲ್ಲದೆ, ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆ, 14,201.32 ಎಕರೆ ಭೂಮಿ ವಕ್ಫ್ ಮಂಡಳಿಯದಾಗಿತ್ತು. ಈ ಪೈಕಿ ಭೂ ಸುಧಾರಣಾ ಕಾಯ್ದೆಯಡಿ 11,835.29 ಎಕರೆ ಮತ್ತು ಇನಾಂ ರದ್ದತಿ ಕಾಯ್ದೆಯಡಿ 1,459.26 ಎಕರೆಯನ್ನು ರೈತರಿಗೆ ಮಂಜೂರು ಮಾಡಲಾಗಿದೆ. 137 ಎಕರೆಯನ್ನು ವಿವಿಧ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮಿಕ್ಕ 773 ಎಕರೆ ಮಾತ್ರ ವಕ್ಫ್ ಸಂಸ್ಥೆಗಳ ಅಡಿಯಲ್ಲಿದೆ. ಹೊನವಾಡ ಗ್ರಾಮದ ರೈತರಿಗೆ ವಕ್ಫ್ ಆಸ್ತಿಯೆಂದು ಯಾವುದೇ ನೋಟಿಸ್ ನೀಡಲಾಗಿಲ್ಲ. ಈ ಬಗ್ಗೆ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ.
ಗಮನಾರ್ಹವಾಗಿ, 1974ರ ಗೆಜೆಟ್ ಅಧಿಸೂಚನೆಯಲ್ಲಿ ವಿಜಯಪುರದ ಮಹಾಲಬಾಗಾಯತದ ಪಕ್ಕದಲ್ಲಿ ಬ್ರ್ಯಾಕೆಟ್ ಒಳಗೆ ವಕ್ಫ್ ಆಸ್ತಿಯಡಿಯಲ್ಲಿ ಹೊನವಾಡ ಎಂದು ತಪ್ಪಾಗಿ ನಮೂದಿಸಲಾಗಿತ್ತು. 1977ರಲ್ಲಿ ವಕ್ಫ್ ಮಂಡಳಿಯೇ ತನ್ನ ತಪ್ಪನ್ನು ಸರಿಪಡಿಸಿದೆ. ಇದು ವಿವಾದವೇ ಅಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ವಕ್ಫ್ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ – ಕಾಂಗ್ರೆಸ್ ನಡುವೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಕೂಡ ಬಿಜೆಪಿಗೆ ಚಾಟಿ ಬೀಸಿದೆ. “2022ರಲ್ಲಿಯೂ ಕೂಡ ವಕ್ಫ್ ಆಸ್ತಿ ಸಂಬಂಧ ರೈತರಿಗೆ ನೋಟಿಸ್ ನೀಡಲಾಗಿದೆ. ಆಗ ಬಿಜೆಪಿಯೇ ಅಧಿಕಾರದಲ್ಲಿತ್ತು. ಬಿಜೆಪಿ ಸರ್ಕಾರ ನೋಟಿಸ್ ನೀಡಿದವರಲ್ಲಿ ಎಲ್ಲರೂ ಹಿಂದುಗಳೇ ಆಗಿದ್ದಾರೆ. ಅವರು ನೋಟಿಸ್ ನೀಡುವಾಗ ರೈತರ ಬಗ್ಗೆ ಅವರಿಗೆ ಕಾಳಜಿ ಇರಲಿಲ್ಲವೇ” ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪ್ರಶ್ನಿಸಿದ್ದಾರೆ. ಅಂದರೆ, ಬಿಜೆಪಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ವಕ್ಫ್ ಆಸ್ತಿ ಸಂಬಂಧ ರೈತರಿಗೆ ನೋಟಿಸ್ ನೀಡಿದರೇ, ಆಗ ಇದು ವಿವಾದ ಆಗಲ್ಲ. ಅದೇ, ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಕೋಮುದ್ವೇಷ ಹರಡುವುದಕ್ಕೆ ಬಿಜೆಪಿಗೆ ಅಸ್ತ್ರವಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಪೂರ್ಣ ಕುಂಭ ಮೇಳಕ್ಕೆ ಲಿಂಗಾಯತರಿಗೆ ವಿಶೇಷ ಆಹ್ವಾನ: ಯೋಗಿ ಆದಿತ್ಯನಾಥ್ ಸಲಹೆಗೆ ಆರೆಸ್ಸೆಸ್ ಸಮ್ಮತಿ
ಸದ್ಯಕ್ಕೆ ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಮತ ಕೇಳಲು ಬಿಜೆಪಿಗೆ ಯಾವುದೇ ವಿಷಯಗಳಿಲ್ಲ. ಹಿಂದಿನ ತನ್ನ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಆರೋಪಗಳಲ್ಲೇ ಮುಳುಗಿದ್ದ ಬಿಜೆಪಿ, ಜನಪರವಾದ ಯಾವುದೇ ಕೆಲಸ ಮಾಡಿಲ್ಲ. ವಿರೋಧ ಪಕ್ಷವಾಗಿಯೂ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.
ಹೀಗಾಗಿ, ಆಡಳಿತಾರೂಢ ಕಾಂಗ್ರೆಸ್ ವಿರುದ್ದ ಜನಾಭಿಪ್ರಾಯ ರೂಪಿಸಿ, ಕಾಂಗ್ರೆಸ್ ವಿರೋಧಿ ಮತಗಳಿಂದಲೇ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳಬೇಕು. ಅದಕ್ಕಾಗಿ, ಈ ಹಿಂದೆ, ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣವನ್ನು ಮುನ್ನೆಲೆಗೆ ತಂದಿತ್ತು. ಆದರೆ, ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ಆರೋಪವು ಬಿಜೆಪಿಗೆ ತಿರುಗು ಬಾಣವಾಯಿತು. ಹೀಗಾಗಿ, ಸಿದ್ದರಾಮಯ್ಯ-ಮುಡಾ ವಿಚಾರವನ್ನು ಬದಿಗಿಟ್ಟ ಬಿಜೆಪಿ, ಬೇರೆ ಯಾವ ಅಸ್ತ್ರ ಸಿಗಬಹುದೆಂದು ಹವಣಿಸುತ್ತಿತ್ತು. ಆ ಸಂದರ್ಭದಲ್ಲಿ ಬಿಜೆಪಿಗೆ ನಿರಾಯಾಸವಾಗಿ ಸಿಕ್ಕಿದ್ದು, ಮುಸ್ಲಿಮರ ವಿರುದ್ಧದ ತನ್ನ ಹಳೆಯ ಅಸ್ತ್ರ. ಆ ಅಸ್ತ್ರಕ್ಕೆ ವಕ್ಫ್ ವಿಚಾರವನ್ನು ಸೇರಿಸಿ, ವಿವಾದವೇ ಅಲ್ಲದ ವಿಚಾರವನ್ನು ವಿವಾದವನ್ನಾಗಿಸಿ, ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸುವ ತಂತ್ರದಲ್ಲಿದೆ. ಸಮುದಾಯಗಳ ನಡುವೆ ಬೆಂಕಿಯ ಕಿಡಿ ಹಚ್ಚಿ ಬೈ ಎಲೆಕ್ಷನ್ ಗೆಲ್ಲಲು ಹವಣಿಸುತ್ತಿದೆ.