ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ನವರು ಮಾತನಾಡಿದರೆ ಮಾಧ್ಯಮಗಳು ಬಿತ್ತರಿಸುತ್ತಿಲ್ಲ. ಕೇವಲ ಬಿಜೆಪಿಯವರ ಆರೋಪಗಳನ್ನು ಮಾತ್ರ ನೀವು ತೋರಿಸುತ್ತಿದ್ದೀರಿ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ವಕ್ಫ್ ವಿಚಾರದಲ್ಲಿ ಬಿಜೆಪಿಯ ಎಲ್ಲ ಕೈವಾಡವನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಸದಾಶಿನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಇದು ಬಿಜೆಪಿಯ ಮೂರ್ಖತನ. ರೈತರ ಪಹಣಿಗಳಲ್ಲಿ ವಕ್ಫ್ ಎಂದು ಬಿಜೆಪಿ ಕಾಲದಲ್ಲಿ ನಮೂದಾಗಲು ಪ್ರಾರಂಭವಾಯಿತು. ನಮ್ಮವರು ಇದನ್ನು ತಡವಾಗಿ ಗಮನಿಸಿದರು. ಈ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಚುನಾವಣೆಗಳು ಇದ್ದಿದ್ದರಿಂದ ಇವುಗಳನ್ನು ಬಹಿರಂಗಪಡಿಸಲು ಆಗಿಲ್ಲ. ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ” ಎಂದು ಹೇಳಿದರು.
“ದೇಶದಲ್ಲಿ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿಗೆ ಅರ್ಥವಾಗಿರುವ ಕಾರಣಕ್ಕೆ ಅವರೂ ಸಹ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದು, ಕರ್ನಾಟಕ ಮಾದರಿಯನ್ನು ಹಿಂಬಾಲಿಸುತ್ತಿದ್ದಾರೆ. ಅದಕ್ಕೆ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ 1,500 ರೂಪಾಯಿ ನೀಡುತ್ತಿದ್ದಾರೆ. ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ ₹ 2,100 ಕೊಡುವುದಾಗಿ ಹೇಳಿದೆ. ನಾವು ₹ 3,000, ಯುವಕರಿಗೆ ₹ 4,000 ಹಾಗೂ 25 ಸಾವಿರ ಮೊತ್ತದ ಜೀವವಿಮೆ ನೀಡುವುದಾಗಿ ಭರವಸೆ ನೀಡಿದ್ದೇವೆ” ಎಂದರು.
“ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿಯೇ ಇಲ್ಲ ಎಂದು ಸುಳ್ಳು ಪ್ರಚಾರ ಮಾಡಿದ್ದರು. ಅದಕ್ಕೆ ನಾವು ಅಲ್ಲಿನ ಆಡಳಿತಾರೂಢ ಪಕ್ಷಗಳಿಗೆ ಕರ್ನಾಟಕಕ್ಕೆ ಭೇಟಿ ನೀಡುವಂತೆ ಸವಾಲು ಹಾಕಿದ್ದೆವು. ಅಲ್ಲದೇ, ವಿಶೇಷ ಬಸ್ ಹಾಗೂ ವಿಮಾನ ಕಾಯ್ದಿರಿಸುವುದಾಗಿ ಹೇಳಿದ್ದೆವು. ನಮ್ಮ ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ 160 ಸ್ಥಾನಗಳನ್ನು ಗೆಲ್ಲುವ ವರದಿಯಿದೆ. ಶುಕ್ರವಾರ ಪ್ರಚಾರ ಮಾಡಿದ್ದು, ಶನಿವಾರ ಹಾಗೂ ಭಾನುವಾರ ಪ್ರಚಾರದಲ್ಲಿ ಭಾಗವಹಿಸುವೆ” ಎಂದು ತಿಳಿಸಿದರು.
ಯತ್ನಾಳ್ ಆರೋಪಕ್ಕಿಂತ ಬೇರೆ ಸಾಕ್ಷಿ ಬೇಕೆ?
ಬಿಜೆಪಿ ವಕ್ಫ್ ಅಭಿಯಾನದಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ಅವರ ಎರಡು ಬಣಗಳಾಗಿರುವ ಬಗ್ಗೆ ಕೇಳಿದಾಗ, “ಅವರ ಎರಡು ಬಣಗಳ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ಆಮಿಷದ ಬಗ್ಗೆ ಹೇಳಿದರು. ಇದೇ ಯತ್ನಾಳ್ ಅವರು ಸರ್ಕಾರ ಬೀಳಿಸಲು 1 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!
ಶಾಸಕರು ಕುರಿಗಳಲ್ಲವೇ?
“ಶಾಸಕರ ಖರೀದಿ ಬಗ್ಗೆ ತನಿಖೆ ಮಾಡಿ. ಖರೀದಿ ಮಾಡಲು ಶಾಸಕರು ಕುರಿಗಳೇ ಎಂದು ಬಿಜೆಪಿಯವರು ಕೇಳಿದ್ದಾರೆ. ಹಾಗಾದರೆ ಈ ಹಿಂದೆ ಖರೀದಿ ಮಾಡಿದ್ದ ಶಾಸಕರು ಕುರಿಗಳಲ್ಲವೇ? ಬಿಜೆಪಿಯವರು ಕುರಿಗಳನ್ನೇ ಖರೀದಿ ಮಾಡಿದ್ದು. ದನ ಕುರಿಗಳನ್ನು ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡಿದ್ದಿರಲ್ಲವೇ ಎಂದು ಈ ಹಿಂದೆಯೂ ಪ್ರಶ್ನಿಸಿದ್ದೆವು. ಸಿ.ಪಿ.ಯೋಗೇಶ್ವರ್ ಅವರು ಅಶ್ವತ್ ನಾರಾಯಣ್ ಜೊತೆಗೂಡಿ ಶ್ರೀನಿವಾಸ್ ಗೌಡರ ಮನೆಗೆ ಹೋಗಿ ಹಣವಿಟ್ಟು ಬಂದೇ ಎಂದು ಸದನದಲ್ಲಿಯೇ ಹೇಳಿಲ್ಲವೇ” ಎಂದು ಹರಿಹಾಯ್ದರು.
1 ಸಾವಿರ ಕೋಟಿಯ ಬಗ್ಗೆ ಸಾಕ್ಷಿ ಕೊಡಿ
ಆಪರೇಷನ್ ಕಮಲದ ಬಗ್ಗೆ ಸಾಕ್ಷಿ ಕೊಡಿ ಎನ್ನುವ ಆರ್.ಅಶೋಕ್ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, “₹1 ಸಾವಿರ ಕೋಟಿ ಎಲ್ಲಿಂದ ಬಂತು ಎಂದು ಹೇಳಿರುವ ಯತ್ನಾಳ್ ಅವರು ಸಾಕ್ಷಿ ಕೊಡಬೇಕು. ಇಷ್ಟೊಂದು ಹಣವನ್ನು ಸಂಗ್ರಹ ಮಾಡಿದವರು ಯಾರು? ಇದರ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು, ಅಲ್ಲಿಗೆ ತೆರಳಿ ಈ ಹೇಳಿಕೆಯನ್ನು ನೀಡಿದವರು ಯಾರು ಎಂದು ಆರ್. ಅಶೋಕ್ ಅವರು ತಿಳಿಸಬೇಕು” ಎಂದರು.
ಯತ್ನಾಳ್ ಅವರು ದಡ್ಡರೇ?
“ಈ ಹಿಂದೆ ಆಡಳಿತದಲ್ಲಿ ಇದ್ದಾಗ ಬಿಜೆಪಿಯವರು ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ನೀಡಿದ್ದರು ಎಂದು ಈ ಹಿಂದೆ ಯತ್ನಾಳ್ ಅವರು ಆರೋಪ ಮಾಡಿದ್ದರು. ಈಗ ವಿರೋಧ ಪಕ್ಷದ ಸದಸ್ಯರಾಗಿದ್ದಾಗಲೂ ಇದೇ ಆರೋಪ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮಾಜಿ ಸಚಿವರಾಗಿದ್ದವರು, ಈ ರೀತಿಯ ಹೇಳಿಕೆಯನ್ನು ನೀಡಲು ಯತ್ನಾಳ್ ಅವರು ದಡ್ಡರೇ?” ಎಂದರು.
ಆಪರೇಷನ್ ಮೊದಲು ಅಲ್ಲಿಂದ ಪ್ರಾರಂಭವಾಗಲಿ
ಆಪರೇಷನ್ ಕಮಲದ ಬೆನ್ನಲ್ಲೇ, ಆಪರೇಷನ್ ಹಸ್ತ ನಡೆಯುತ್ತಿದೆ ಎನ್ನುವ ಬಿಜೆಪಿ ಶಾಸಕರ ಆರೋಪದ ಬಗ್ಗೆ ಕೇಳಿದಾಗ, “₹1 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ ಎಂದು ಹೇಳಿದ್ದು ಬಿಜೆಪಿಯವರು. ಆಪರೇಷನ್ ಮೊದಲು ಅಲ್ಲಿಂದ ಪ್ರಾರಂಭವಾಗಲಿ. ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಮತ್ತೆ ಸಮರ್ಥಿಸುತ್ತೇನೆ” ಎಂದರು.
ಕೊರೋನ ಹಗರಣದ ಹಣ ವಸೂಲಿ ಬಗ್ಗೆ ಚರ್ಚೆ
ರಾಜ್ಯದ ಕೊರೋನ ಹಗರಣಗಳ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಲಾಗುವುದು ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ, ಮೈಕಲ್ ಕುನ್ಹ ಅವರು ಕೊರೋನ ಹಗರಣಗಳ ಬಗ್ಗೆ ಮಾಡಿರುವ ತನಿಖೆಯ ವರದಿ ನಮಗೆ ಬಂದಿದೆ. ಇದರ ಬಗ್ಗೆ ಒಂದು ಸಭೆ ನಡೆಸಲಾಗಿದೆ. ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಕುನ್ಹ ಅವರು ಹಗರಣದ ಹಣವನ್ನು ವಸೂಲಿ ಮಾಡಿ ಎಂದು ಹೇಳಿದ್ದಾರೆ. ಈ ರೀತಿ ಮಾಡಲು ಒಂದಷ್ಟು ನೀತಿ ನಿಯಮಗಳಿರುವ ಕಾರಣ ಇದರ ಬಗ್ಗೆ ಚರ್ಚಿಸಲಾಗುವುದು” ಎಂದು ತಿಳಿಸಿದರು.