ರಾಜ್ಯದಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ದುರುದ್ದೇಶಪೂರ್ವಕ ಮತ್ತು ಅನಗತ್ಯವಾಗಿ ಬಿಜೆಪಿ ವಿವಾದ ಹುಟ್ಟುಹಾಕುತ್ತಿದೆ. ಉಪಚುನಾವಣೆಯ ಸಮಯದಲ್ಲಿ ವಕ್ಫ್ ಆಸ್ತಿ ವಿಚಾರವನ್ನು ಮುನ್ನೆಲೆಗೆ ತಂದು, ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪಗಳನ್ನು ಮಾಡುತ್ತಿದೆ. ಅನವಶ್ಯಕ ವಿವಾದಗಳನ್ನು ಸೃಷ್ಟಿಸುತ್ತಿರುವ ಬಿಜೆಪಿ ಎದುರು ಕಾಂಗ್ರೆಸ್ ಹಲವು ಪ್ರಶ್ನೆಗಳನ್ನಿಟ್ಟಿದೆ. ವಕ್ಫ್ ಆಸ್ತಿ ಸಂಬಂಧ ಬಿಜೆಪಿ ಆಡಳಿತಾವಧಿಯಲ್ಲಿ ಹೊರಡಿಸಿರುವ ನೋಟಿಸ್‌ಗಳೂ ಸೇರಿದಂತೆ ಮಹತ್ವದ ದಾಖಲೆಗಳನ್ನು ಕಾಂಗ್ರೆಸ್ ಬಹಿರಂಗಗೊಳಿಸಿದೆ.
ವಿಜಯಪುರದಲ್ಲಿ ಕಾಂಗ್ರೆಸ್ ಮಾಜಿ ಮಾಜಿ ಶಾಸಕ ರಾಜು ಆಲಗೂರ ಪತ್ರಿಕಾಗೋಷ್ಠಿ ನಡೆಸಿದ್ದಾರೆ. “ಬಿಜೆಪಿ ಸರ್ಕಾರವಿದ್ದಾಗ ವಕ್ಫ್‌ಗೆ ನೀಡಲಾದ ಆಸ್ತಿ ಎಷ್ಟು? ಬಿಜೆಪಿ ಆಡಳಿತಾವಧಿಯಲ್ಲಿ ವಕ್ಫ್ ಆಸ್ತಿ ಸಂಬಂಧ ನೀಡಿದ ನೊಟೀಸ್ ಎಷ್ಟು? ಗೆಜೆಟ್ ನೊಟಿಫಿಕೇಶನ್ ಪ್ರಮಾಣ ಎಷ್ಟು? ನಡೆಸಿದ ಸಭೆ ಎಷ್ಟು?” ಎಂದು ಪ್ರಸ್ನಿಸಿದ್ದಾರೆ.
“ವಕ್ಫ್ ಎಂಬ ಸಂಸ್ಥೆ ಸ್ವತಂತ್ರ ಸ್ಥಾನಮಾನ ಹೊಂದಿದೆ. ಅದರಲ್ಲಿ ಯಾವುದೇ ಹಸ್ತ ಕ್ಷೇಪ ಮಾಡಲು ಸಾಧ್ಯವಿಲ್ಲ. ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿದ್ದ ರೈತರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಮರಳಿ ವಕ್ಫ್‌ಗೆ ನೀಡಲಾಗಿದೆ. ಈಗ ರಾಜ್ಯದಲ್ಲಿ ಗುಲ್ಲೆಬ್ಬಿಸಲು ಬಿಜೆಪಿ ವಕ್ಫ್ ಆಸ್ತಿ ವಿಚಾರದ ಬಗ್ಗೆ ಮಾತನಾಡುತ್ತಿದೆ” ಎಂದು ಹೇಳಿದ್ದಾರೆ.
“2022ರಲ್ಲಿಯೂ ವಕ್ಫ್ ಆಸ್ತಿ ಸಂಬಂಧ ರೈತರಿಗೆ ನೋಟಿಸ್ ನೀಡಲಾಗಿದೆ. ಆಗ ಬಿಜೆಪಿಯೇ ಅಧಿಕಾರದಲ್ಲಿತ್ತು. ಬಿಜೆಪಿ ಸರ್ಕಾರ ನೋಟಿಸ್ ನೀಡಿದವರಲ್ಲಿ ಎಲ್ಲರೂ ಹಿಂದುಗಳೇ ಆಗಿದ್ದಾರೆ. ಅವರು ನೋಟಿಸ್ ನೀಡುವಾಗ ರೈತರ ಬಗ್ಗೆ ಅವರಿಗೆ ಕಾಳಜಿ ಇರಲಿಲ್ಲವೇ” ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪ್ರಶ್ನಿಸಿದ್ದಾರೆ.
“ವಕ್ಫ್ ಮತ್ತು ವಕ್ಫ್ ಆಸ್ತಿ ಬಗ್ಗೆ ಬಿಜೆಪಿಗರಿಗೆ ಸರಿಯಾದ ಜ್ಞಾನವೇ ಇಲ್ಲ. ಯಾವ ರೀತಿ ಮುಜರಾಯಿ ಇಲಾಖೆ ಅಡಿ ಜಮೀನುಗಳು ಇವೆಯೋ, ಅದೇ ರೀತಿ ವಕ್ಫ್‌ಗೂ ಜಮೀನುಗಳಿವೆ. ಈ ಹಿಂದೆ, ಉಳುವವನೇ ಭೂಮಿಯ ಒಡೆಯ ಕಾಯ್ದೆ ಬಂದ ಬಳಿಕ ಬಹುತೇಕ ಜಮೀನು ಆ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದ ರೈತರ ಹೆಸರಿಗೆ ಖಾತೆಯಾಗಿವೆ. ಬಹಳ ವರ್ಷಗಳಿಂದ ವಕ್ಫ್ ದಾಖಲೆ ಸರಿಪಡಿಸಿರಲಿಲ್ಲ. ಇದೀಗ, ಆ ಪ್ರಕ್ರಿಯೆ ನಡೆಯುತ್ತಿದೆ” ಎಂದು ವಿವರಿಸಿದ್ದಾರೆ.
“ನೋಟಿಸ್ ನೀಡುವುದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ನೋಟಿಸ್ ಬಂದರೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬಳಿ ಹೋಗದೆ, ಬಸನಗೌಡ ಪಾಟೀಲ ಯತ್ನಾಳ, ತೇಜಸ್ವಿ ಸೂರ್ಯ ಬಳಿ ಹೋಗಬೇಕೇ? ವಕ್ಫ್ ಆಸ್ತಿ ವಿಚಾರದಲ್ಲಿ ಯಾವುದೇ ರೀತಿ ಅನ್ಯಾಯ ಆಗಿಲ್ಲ ಎಂಬುದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಆದರೂ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.