‘ವಕ್ಫ್’ ಎಂಬ ದೇವರ ಆಸ್ತಿ ಸುತ್ತ ದುಷ್ಟ ರಾಜಕೀಯ ಹುತ್ತ!

Date:

Advertisements

ರಾಜ್ಯದಲ್ಲಿ ವಕ್ಫ್‌ ಭೂಮಿ ವಿವಾದ ಮತ್ತೆ ದೊಡ್ಡ ಸಂಚಲನ ಮೂಡಿಸಿದೆ. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ‘ತಮಗೆ ವಕ್ಫ್ ವರದಿ ಮುಚ್ಚಿಹಾಕಲು ಬಿ ವೈ ವಿಜಯೇಂದ್ರ 150 ಕೋಟಿ ರೂ. ಆಫರ್ ಮಾಡಿದ್ದರು’ ಎನ್ನುವ ಹಳೆಯ ವಿಡಿಯೋ ಕ್ಲಿಪ್ಪಿಂಗ್ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ವಿಡಿಯೋ ಕ್ಲಿಪ್ಪಿಂಗ್‌ನಲ್ಲಿ “ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಫ್ ಆಸ್ತಿ ಕಬಳಿಕೆಯ ತನಿಖೆ ನಡೆಸಿ ನೀಡಿರುವ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದರು. ಅಷ್ಟೇ ಅಲ್ಲ ಅದಕ್ಕಾಗಿ 150 ಕೋಟಿ ರೂ. ಆಮಿಷವೊಡ್ಡಿದ್ದರು. ನಾನು ಅವರಿಗೆ ಗದರಿಸಿ ಮನೆಯಿಂದ ಓಡಿಸಿದ್ದೆ. ನಂತರ ಈ ಎಲ್ಲ ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ” ಎಂದು ಅನ್ವರ್ ಮಾಣಿಪ್ಪಾಡಿ ಹೇಳಿಕೊಂಡಿರುವುದು ಬಹಿರಂಗವಾಗಿದೆ.

ಅನ್ವರ್ ಮಾಣಿಪ್ಪಾಡಿ ವಿಡಿಯೋ ಕ್ಲಿಪ್ಪಿಂಗ್‌ ಆಧರಿಸಿ ಸಿಎಂ ಸಿದ್ದರಾಮಯ್ಯ, “ಕೂಡಲೇ ಪ್ರಧಾನಿ ಮೋದಿ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಸಿಬಿಐ ತನಿಖೆಗೆ ಆದೇಶಿಸಬೇಕು” ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಹೊರಬೀಳುತ್ತಿದ್ದಂತೆ ಅನ್ವರ್ ಮಾಣಿಪ್ಪಾಡಿ ಮಾಧ್ಯಮಗಳ ಮುಂದೆ “ನಾನು ಆ ರೀತಿ ಮಾತನಾಡಿಯೇ ಇಲ್ಲ” ಎಂದು ವಿಜಯೇಂದ್ರ ಕುರಿತ ತಮ್ಮ ಆರೋಪವನ್ನು ತಳ್ಳಿಹಾಕಿದರು.

Advertisements

“2012-13ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ಸಿದ್ಧಮಾಡುತ್ತಿದ್ದಾಗ ವಿಜಯೇಂದ್ರ ಏನೂ ಆಗಿರಲಿಲ್ಲ. ಯಡಿಯೂರಪ್ಪ ಪುತ್ರ ಅಷ್ಟೇ ಆಗಿದ್ದರು. 2019ರಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗ ವಕ್ಫ್ ಆಸ್ತಿ ಕುರಿತ ವರದಿ ಜಾರಿಗೊಳಿಸಬೇಕೆಂದು ಆಗ್ರಹ ಮಾಡಿದ್ದೆ. ಈ ವಿಷಯದಲ್ಲಿ ಬಿಜೆಪಿ ನಾಯಕರ ಬಗ್ಗೆಯೂ ಕೋಪಗೊಂಡಿದ್ದು ನಿಜ. ಆಗ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ನನ್ನ ಜೊತೆಗೆ ಮಾತುಕತೆ ನಡೆಸಿದ್ದರು. ಆದರೆ, ಯಾವುದೇ ಆಮಿಷವೊಡ್ಡಿರಲಿಲ್ಲ” ಎಂದು ಮಾಣಿಪ್ಪಾಡಿ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, “ವಕ್ಫ್‌ ವರದಿ ಬಹಿರಂಗ ಮಾಡದಂತೆ ಕಾಂಗ್ರೆಸ್ಸಿನ ನಾಯಕರೇ ನನಗೆ ಸಾವಿರಾರು ಕೋಟಿ ಆಫರ್ ಮಾಡಿದ್ದರು. ಏಕೆಂದರೆ, ವಕ್ಪ್ ಆಸ್ತಿ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರುಗಳೇ ಸಿಂಹಪಾಲಿನಲ್ಲಿವೆ. ವರದಿ ಜಾರಿಯಾಗಿದ್ದರೆ ಕಾಂಗ್ರೆಸ್ಸಿಗೇ ಮುಳುವಾಗುತ್ತಿತ್ತು. ಹಲವು ನಾಯಕರು ಇಷ್ಟೊತ್ತಿಗೆ ಜೈಲಿನಲ್ಲಿರುತ್ತಿದ್ದರು. ಇದರಿಂದ ಬಚಾವ್ ಆಗಲು ನನಗೆ ಬಹಳಷ್ಟು ಆಮಿಷ ಒಡ್ಡಿದ್ದರು.‌ 150 ಕೋಟಿ ಅಲ್ಲ, ಸಾವಿರಾರು ಕೋಟಿ ಕೊಡುವುದಕ್ಕೂ ರೆಡಿ ಇದ್ದರು. ಅಮೆರಿಕದಲ್ಲಿ ಹೋಗಿ ಸೆಟ್ಲ್ ಆಗುವುದಿದ್ದರೂ ವ್ಯವಸ್ಥೆ ಮಾಡುತ್ತೇವೆ ಎಂದಿದ್ದರು. ಆದರೆ, ನಾನು ಎಲ್ಲವನ್ನೂ ನಿರಾಕರಿಸಿದ್ದೇನೆ. ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದೇನೆ. ಇದರ ಬಗ್ಗೆ ಪ್ರಧಾನಿಯವರಿಗೂ ಪತ್ರ ಬರೆದಿದ್ದೇನೆ” ಎಂದು ಮಾಣಿಪ್ಪಾಡಿ ಕಾಂಗ್ರೆಸ್‌ನತ್ತ ಕಲ್ಲು ಎಸೆದಿದ್ದಾರೆ.

ಅನ್ವರ್‌ ಮಾಣಿಪ್ಪಾಡಿ
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ

ಈಗ ಕಾಂಗ್ರೆಸ್ಸಿಗರ ಮೇಲೆ ಮಾಣಿಪ್ಪಾಡಿ ಮಾಡಿರುವ ಗಂಭೀರ ಆರೋಪಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಅಸ್ತ್ರವಾಗಿಸಿಕೊಂಡಿದೆ. “ನನ್ನ ಮೇಲಿನ 150 ಕೋಟಿ ರೂ. ಆಮಿಷ ಆರೋಪವನ್ನು ಸಿಎಂ ಸಿದ್ದರಾಮಯ್ಯ ಅವರೇ ಸಿಬಿಐ ತನಿಖೆಗೆ ಕೊಡಲಿ. ಅನ್ವರ್ ಮಾಣಿಪ್ಪಾಡಿಯವರ ವರದಿ ಸ್ವೀಕರಿಸಿ ಅದರ ಬಗ್ಗೆಯೂ ಸಿಬಿಐ ತನಿಖೆಯಾಗಲಿ, ವಕ್ಫ್ ಜಾಗದ ವಿಚಾರದಲ್ಲಿ ಲಕ್ಷ ಲಕ್ಷ ಕೋಟಿಯ ಅವ್ಯವಹಾರ ಆಗಿದೆ ಎಂಬ ವರದಿ ಇದ್ದು ಅದರ ಸಮಗ್ರ ತನಿಖೆ ನಡೆಯಲಿ” ಎಂದು ಬಿ ವೈ ವಿಜಯೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಸಿಡಿಸಿದ ಚೆಂಡು ಮರಳಿ ಸರ್ಕಾರದ ಅಂಗಳಕ್ಕೆ ಬಿದ್ದಿದೆ. ರಾಜಕೀಯ ಒತ್ತಡದಿಂದ ಅನ್ವರ್‌ ಮಾಣಿಪ್ಪಾಡಿ ಯೂಟರ್ನ್‌ ತೆಗೆದುಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆದಿಯಾಗಿ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸುತ್ತಿದ್ದಾರೆ.

ಒಟ್ಟಾರೆ ವಕ್ಫ್‌ ಪ್ರಕರಣ ರಾಜ್ಯದ ಜನರಿಗೆ ಗೊಂದಲದ ಗೂಡಾಗಿದೆ. ಉದ್ದೇಶಪೂರ್ವಕವಾಗಿಯೂ ಈ ಗೊಂದಲ ಸೃಷ್ಟಿಸಲಾಗಿದೆ. ಇರುವ ಮೂರು ಪಕ್ಷಗಳಲ್ಲಿ ಸಾಚಾಗಳು, ಕಳ್ಳರು, ವಕ್ಫ್‌ ಆಸ್ತಿಯನ್ನು ನುಂಗಿ ನೀರು ಕುಡಿದವರು, ಮುಸ್ಲಿಂ ಸಮುದಾಯಕ್ಕೆ ವಂಚಿಸುತ್ತಿರುವ ದ್ರೋಹಿಗಳು ಯಾರು ಎಂಬುದನ್ನು ವ್ಯವಸ್ಥಿತವಾಗಿ ನಿಗೂಢವಾಗಿ ಇಡಲಾಗಿದೆ. ಮುಸ್ಲಿಂ ಸಮುದಾಯ ಕುರಿತು ನೈಜ ಕಳಕಳಿ ಯಾವ ಪಕ್ಷ ಹೊಂದಿದೆ ಎನ್ನುವ ಸ್ಪಷ್ಟತೆಗೆ ಉತ್ತರವಿಲ್ಲ. ಎಲ್ಲದಕ್ಕೂ ರಾಜಕೀಯ ಹೊದಿಕೆ ಆವರಿಸಿದೆ.

ಈ ಸುದ್ದಿ ಓದಿದ್ದೀರಾ? ಸಮಗ್ರ ವರದಿ | ವಕ್ಫ್ ಬಗ್ಗೆ ಬಿಜೆಪಿ ಬಿತ್ತಿದ ಭಯಾನಕ ಸುಳ್ಳುಗಳು!

ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಮತ್ತು ಮರುವಶಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಸರ್ಕಾರ ರೈತರಿಗೆ ನೋಟಿಸ್ ನೀಡುತ್ತಿದ್ದಂತೆ ವಕ್ಫ್‌ ವಿವಾದದ ಕಿಡಿ ಹೊತ್ತಿಕೊಂಡಿದೆ. 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಿಜೆಪಿಗೆ ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ವಕ್ಫ್‌ ಅಸ್ತ್ರವನ್ನು ಹುಡುಕಿಕೊಟ್ಟಿದ್ದು ಬೇರಾರು ಅಲ್ಲ; ಮುಸ್ಲಿಂ ಸಮುದಾಯದ ವಿರುದ್ಧ ಸದಾ ದ್ವೇಷಕಾರುವ, ಸಂಘಪರಿವಾದ ಹಾರ್ಡ್‌ಕೋರ್ ನಾಯಕ ಬಸನಗೌಡ ಪಾಟೀಲ ಯತ್ನಾಳ್‌.

ವಕ್ಫ್‌ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ವಿಜಯಪುರದಲ್ಲಿ ವಕ್ಫ್‌ ಅದಾಲತ್‌ ನಡೆಸಿ, ಅಧಿಕಾರಿಗಳಿಗೆ ಸರ್ವೇ ನಡೆಸುವಂತೆ ಮೌಖಿಕ ಆದೇಶ ನೀಡುತ್ತಿದ್ದಂತೆ ಅಧಿಕಾರಿಗಳು ತರಾತುರಿಯಲ್ಲಿ ಕೆಲವು ರೈತರಿಗೆ ನೋಟಿಸ್‌ ನೀಡಿದರು. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲೇ ವಕ್ಫ್‌ ಅದಾಲತ್‌ ನಡೆಯುತ್ತದೆ. ಆದರೆ, ಅದಾಲತ್‌ಗೆ ಹಾಜರಾಗಿ ತಮ್ಮ ಅಭಿಪ್ರಾಯ ತಿಳಿಸಿ, ಸರ್ವೇ ಕಾರ್ಯಕ್ಕೆ ತಡೆಯೊಡ್ಡಬಹುದಾಗಿದ್ದ ಯತ್ನಾಳ್‌ ಅವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅದಾಲತ್‌ಗೆ ಗೈರಾಗಿ, ನಾಲ್ಕು ದಿನ ಪ್ರತಿಭಟನೆ ಮಾಡಿ, “ರೈತರ 1,200 ಎಕರೆ ಭೂಮಿಯನ್ನು ಕಾಂಗ್ರೆಸ್ ‌ಸರ್ಕಾರ ಕಬಳಿಸುತ್ತಿದೆ” ಎನ್ನುವ ಆರೋಪವನ್ನು ಮುಂದುಮಾಡಿದರು. ಉಪ ಚುನಾವಣೆ ಇದ್ದ ಕಾರಣ ರಾಜ್ಯದ ಇತರೆಡೆಗೂ ವಕ್ಫ್‌ ವಿವಾದ ಹಬ್ಬಿತು.

ಯತ್ನಾಳ್‌ 7
ಬಸನಗೌಡ ಪಾಟೀಲ ಯತ್ನಾಳ್‌ ಅವರು ವಿಜಯಪುರದಲ್ಲಿ ನಡೆಸಿದ ವಕ್ಫ್‌ ಹೋರಾಟ

ಹಾಗೆ ನೋಡಿದರೆ ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಮತ್ತು ಮರುವಶಕ್ಕೆ ಸಂಬಂಧಿಸಿದಂತೆ 2008ರಿಂದ 2024ರವರೆಗೆ ರಾಜ್ಯದಾದ್ಯಂತ ಒಟ್ಟು 3,519 ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಅತಿಹೆಚ್ಚು 2,001 ನೋಟಿಸ್‌ಗಳನ್ನು ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲೇ ನೀಡಲಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈವರೆಗೂ 1,404 ನೋಟಿಸ್‌ಗಳನ್ನು ನೀಡಲಾಗಿದೆ.

ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 2008ರಲ್ಲಿ ಅಧಿಕಾರಕ್ಕೆ ಬಂದಾಗ ಕೆಲವೇ ದಿನಗಳಲ್ಲಿ ವಕ್ಫ್‌ ಆಸ್ತಿ ಅಕ್ರಮ ಪರಭಾರೆ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಆಸಕ್ತಿ ವಹಿಸಿ ನೋಟಿಸ್ ನೀಡುವ ಪ್ರಕ್ರಿಯೆ ಮುಖ್ಯಮಂತ್ರಿಯವರ ತವರು ಜಿಲ್ಲೆ ಶಿವಮೊಗ್ಗದಿಂದಲೇ ಆರಂಭವಾಯಿತು. ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಆಗ ಅಧ್ಯಕ್ಷರಾಗಿದ್ದ ಅನ್ವ‌ರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವಕ್ಫ್‌ ಆಸ್ತಿಗಳ ಅಕ್ರಮ ಪರಭಾರೆ ಮತ್ತು ಒತ್ತುವರಿಗೆ ಸಂಬಂಧಿಸಿದಂತೆ ಸಮಿತಿ ಕೂಡ ರಚನೆಯಾಗುತ್ತದೆ.

ಅನ್ವ‌ರ್ ಮಾಣಿಪ್ಪಾಡಿ ಅವರು ವಕ್ಸ್ ಆಸ್ತಿಗಳ ಸ್ಥಿತಿಗತಿಗಳ ಸಂಬಂಧ ವರದಿ ಸಿದ್ದಪಡಿಸಿ, ಯಡಿಯೂರಪ್ಪ ಸರ್ಕಾರಕ್ಕೆ 2012ರ ಫೆಬ್ರುವರಿ 24ರಂದು ಸಲ್ಲಿಸುತ್ತಾರೆ. ಆದರೆ ಬಿಜೆಪಿ ಸರ್ಕಾರ ಮಾಣಿಪ್ಪಾಡಿ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಸಿಎಂ ಇಬ್ರಾಹಿಂ, ರೋಷನ್‌ ಬೇಗ್‌, ಇಕ್ಬಾಲ್‌ ಅನ್ಸಾರಿ, ಎನ್‌ ಎ ಹ್ಯಾರಿಸ್‌ ಸಹಿತ ಕಾಂಗ್ರೆಸ್‌ನ ಹಲವು ನಾಯಕರು, ಉದ್ಯಮಿಗಳು ಅಕ್ರಮವಾಗಿ ವಕ್ಫ್‌ ಆಸ್ತಿಗಳನ್ನು ಕಬಳಿಸಿದ್ದಾರೆ. ಅವರಿಂದ ಆ ಆಸ್ತಿಗಳನ್ನು ಮರುವಶಕ್ಕೆ ಪಡೆದುಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು ಎಂಬ ಅಂಶ ಮಾಧ್ಯಮಗಳಲ್ಲಿ ಸೋರಿಕೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದಾಯಿತು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2013ರಲ್ಲಿ ಅಧಿಕಾರಕ್ಕೆ ಬಂದಾಗ ಮಾಣಿಪ್ಪಾಡಿ ವರದಿಯನ್ನು ಪರಿಶೀಲಿಸಿ, 2016ರ ಮಾರ್ಚ್ 3ರಂದು ವರದಿಯ ಶಿಫಾರಸುಗಳನ್ನು ತಿರಸ್ಕರಿಸಿ ಅಧಿಸೂಚನೆ ಹೊರಡಿಸಿತು. ಜೊತೆಗೆ ನೋಟಿಸ್ ನೀಡುವ ಪ್ರಕ್ರಿಯೆ ಸ್ವಲ್ಪ ಕಾಲ ಸ್ಥಗಿತಗೊಳಿಸಿತ್ತು. 2015ರಲ್ಲಿ ವಕ್ಫ್‌ ಆಸ್ತಿಗಳ ಎರಡನೇ ಭೂಮಾಪನ ಪ್ರಕ್ರಿಯೆ ಆರಂಭಿಸಿದ ನಂತರ, ಕಾಂಗ್ರೆಸ್ ಸರ್ಕಾರವೂ ನೂರಾರು ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಲು ಆರಂಭಿಸಿತು. ವಕ್ಫ್‌ ಆಸ್ತಿಗಳ ಎರಡನೇ ಭೂಮಾಪನ ಪ್ರಕ್ರಿಯೆ 2019ರಲ್ಲಿ ಪೂರ್ಣಗೊಂಡಿತ್ತು. ಇದರಿಂದ ರಾಜ್ಯದಾದ್ಯಂತ ಎಷ್ಟು ಆಸ್ತಿಗಳು ಒತ್ತುವರಿಯಾಗಿವೆ ಮತ್ತು ಒತ್ತುವರಿಯಾದ ಜಮೀನುಗಳ ವಿಸ್ತೀರ್ಣದ ನಿಖರ ಮಾಹಿತಿ ಸರ್ಕಾರಕ್ಕೂ ದೊರೆತಿದೆ.

2020ರಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದಾಗ, ಅನ್ವರ್ ಮಾಣಿಪ್ಪಾಡಿ ವರದಿಯ ಶಿಫಾರಸುಗಳ ಜಾರಿಗೆ ಕ್ರಮವಹಿಸಲಾಯಿತು. 2020ರ ಸೆಪ್ಟೆಂಬರ್ 23ರಂದು ವಿಧಾನಸಭೆಯಲ್ಲಿ ಮತ್ತು ಅದೇ 25ರಂದು ವಿಧಾನ ಪರಿಷತ್ತಿನಲ್ಲಿ ವರದಿಯನ್ನು ಮಂಡಿಸಲಾಯಿತು. ವರದಿಯ ಬಗ್ಗೆ ಎರಡೂ ಸದನಗಳಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಆದರೆ ವರದಿಯನ್ನು ಸ್ವೀಕರಿಸಿದ್ದ ಕಾರಣಕ್ಕೆ, ವಕ್ಫ್ ಆಸ್ತಿಗಳನ್ನು ಮರುವಶಕ್ಕೆ ಪಡೆದುಕೊಳ್ಳಲು ಕ್ರಮ ತೆಗೆದುಕೊಳ್ಳಲು ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿತ್ತು.

ಆ ಪ್ರಕಾರ ರಾಜ್ಯದಾದ್ಯಂತ ಎಲ್ಲ ವಕ್ಫ್‌ ಆಸ್ತಿಗಳ ಸರ್ವೇಯನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮಟ್ಟದಲ್ಲಿ ಹಲವು ಆದೇಶಗಳನ್ನು ಹೊರಡಿಸಲಾಗಿತ್ತು. 2023ರಲ್ಲಿ ಸರ್ಕಾರ ಬದಲಾದರೂ ಈ ಕೆಲಸಗಳು ನಡೆಯುತ್ತಲೇ ಇದ್ದವು. ತಮ್ಮದೇ ಪಕ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಮತ್ತು ಮರುವಶಕ್ಕೆ ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಿದಾಗ ಯತ್ನಾಳ್‌ ನಾಲಿಗೆಗೆ ಹೊಲಿಗೆ ಬಿದ್ದಿತ್ತಾ? ಇಲ್ಲೇ ಜನಸಾಮಾನ್ಯರು ಬಿಜೆಪಿಯ ಹುನ್ನಾರಗಳನ್ನು ಅರ್ಥಮಾಡಿಕೊಳ್ಳಬಹುದು.

ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಮತ್ತು ಮರುವಶಕ್ಕೆ ನೋಟಿಸ್‌ ನೀಡುವುದು ಅದೊಂದು ಸಾಮಾನ್ಯ ಸಂಗತಿ ಎಂಬ ಅರಿವು ಯತ್ನಾಳ್‌ಗೆ ಇದ್ದಿದ್ದರಿಂದಲೇ ತಮ್ಮ ಸರ್ಕಾರದ ಅವಧಿಯಲ್ಲಿ ನೋಟಿಸ್‌ ನೀಡದ್ದನ್ನು ನೋಡಿಯೂ ಅವರು ಜಾಣಮೌನ ಪ್ರದರ್ಶಿಸಿದ್ದರು. ಹಿಂದೂ ಮತ್ತು ಮುಸ್ಲಿಂ ಸಮುದಾಯ ಕೇಂದ್ರಿತ ವಿಚಾರಗಳು ಸದಾ ಜೀವಂತವಾಗಿರಬೇಕು ಎಂಬುದು ಬಿಜೆಪಿ ಅಜೆಂಡಾ. ಹಿಂದೂ ಧರ್ಮದ ಗುಡಿ-ಗುಂಡಾರ ಸಂಗತಿಗಳು, ದತ್ತಪೀಠ, ರಾಮಮಂದಿರ, ಆಂಜನೇಯ ಬೆಟ್ಟ, ಟಿಪ್ಪು ಸುಲ್ತಾನ್‌, ದರ್ಗಾ- ಮಸೀದಿ ವಿಷಯ, ಈದ್ಗಾ ಮೈದಾನ, ವಕ್ಫ್‌ ವಿವಾದ ಹಾಗೂ ಹಿಂದೂ-ಮುಸ್ಲಿಂ ಗಲಭೆ ಇವೆಲ್ಲವೂ ರಾಜಕಾರಣದಲ್ಲಿ ಜೀವಂತ ಇದ್ದರೆ ಮಾತ್ರ ಬಿಜೆಪಿಗೆ ಅಸ್ತಿತ್ವ ಎಂಬುದು ಗುಟ್ಟಾಗಿಲ್ಲ.

ಮೂವರು ಸಿಎಂ

ಮುಸ್ಲಿಂ ತುಷ್ಟೀಕರಣದ ಆರೋಪವನ್ನು ಕಾಂಗ್ರೆಸ್‌ ಸರ್ಕಾರದ ಮೇಲೆ ಬಿಜೆಪಿ ವ್ಯವಸ್ಥಿತವಾಗಿ ಹರಡುತ್ತಿದೆ. ಇದರ ಭಾಗವಾಗಿಯೇ ವಕ್ಫ್‌ ಸಂಗತಿಯನ್ನು ಮುಸ್ಲಿಂ ತುಷ್ಟೀಕರಣದ ಮುಂದುವರಿಕೆಯಾಗಿ ಬಗೆ ಬಗೆಯಲ್ಲಿ ಹೇಳುವ ಪ್ರಯತ್ನ ನಡೆದಿದೆ. ಮುಸ್ಲಿಂ ಸಮುದಾಯದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಖಚಿತವಾಗಿ ಹೇಳದ ಬಿಜೆಪಿ, ಸಾಧ್ಯವಾದಷ್ಟು ಕಾಂಗ್ರೆಸ್ಸಿನ ಮತವಿಭಜನೆಗೆ ಮುಸ್ಲಿಂ ಸಂಗತಿಗಳನ್ನೇ ಇಟ್ಟುಕೊಂಡು ಏನೆಲ್ಲಾ ಮಾಡಬೇಕೋ ಅದನ್ನೆಲ್ಲ ಕ್ರಮಬದ್ಧವಾಗಿ ಸಣ್ಣ ಸಣ್ಣ ಸಂಗತಿಗಳನ್ನೂ ಬಿಡದೇ ಮುಸ್ಲಿಂ ತುಷ್ಟೀಕರಣ ಆರೋಪವನ್ನು ಕಾಂಗ್ರೆಸ್‌ ಸುತ್ತ ಕಟ್ಟಲಾಗುತ್ತಿದೆ.

ಬಿಜೆಪಿಯೇ ಹುಟ್ಟು ಹಾಕಿದ ಅನ್ವರ್‌ ಮಾಣಿಪ್ಪಾಡಿ ಸಮಿತಿಯ ವರದಿ ಬಿಜೆಪಿಗೆ ಬೇಡವಾಗಿದೆ. ಆ ವರದಿಯಲ್ಲಿ ವಕ್ಫ್‌ ಆಸ್ತಿ ಕಬಳಿಕೆಯಲ್ಲಿ ಕಾಂಗ್ರೆಸ್‌ ನಾಯಕರ ಪಾತ್ರ ಎಷ್ಟು ಇದೆಯೋ ಅದೇ ರೀತಿಯಲ್ಲಿ ಬಿಜೆಪಿ ನಾಯಕರ ಪಾತ್ರಗಳು ಇವೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕರ ಪೈಕಿ ವಕ್ಫ್‌ ಆಸ್ತಿಯನ್ನು ಯಾರು ಹೇಗೆ ಕದ್ದಿದ್ದಾರೆ ಎಂಬುದು ಬಯಲಾಗದೇ ಉಳಿದಿರುವ ಸತ್ಯ.

“ಸಿದ್ದರಾಮಯ್ಯ 1.60 ಲಕ್ಷ ಎಕರೆ ಆಸ್ತಿಗೆ ನೋಟಿಸ್ ಕೊಟ್ಟಿದ್ದು ಒಂದು ರೀತಿಯ ಬೋಗಸ್. ನಾವು ಕೊಟ್ಟ ವರದಿಯಲ್ಲಿ 27 ಸಾವಿರ ಎಕರೆ ವಕ್ಪ್ ಆಸ್ತಿ ಕಬಳಿಕೆ ಬಗ್ಗೆ ದಾಖಲೆ ಇದೆ. ಅದು ಬಿಟ್ಟು ಸಿದ್ದರಾಮಯ್ಯ ಒಂದೂವರೆ ಲಕ್ಷ ಎಕರೆಗೆ ನೋಟಿಸ್ ಕೊಟ್ಟಿದ್ದು ಹೇಗೆ? ಆಸ್ತಿ ಕಬಳಿಸಿದ ಪ್ರಭಾವಿಗಳಿಗೆ ನೋಟಿಸ್ ಕೊಟ್ಟಿದ್ದಾರೆಯೇ? ಇವರಿಗೆ ವಕ್ಪ್ ಆಸ್ತಿ ತನಿಖೆ ಮಾಡಬೇಕೆಂಬ ಆಸಕ್ತಿ ಇಲ್ಲ… ಹೀಗೆ ಆರೋಪ ಮಾಡುತ್ತಾರೆಯೇ ಹೊರತು ತನಿಖೆ ಮಾಡಿಸುವುದಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಅವರಿಗೆ ನೈಜ ಕಾಳಜಿ ಇದ್ದರೆ ಸಿಬಿಐ ತನಿಖೆಗೆ ಕೊಡಲಿ” ಎಂದು ಅನ್ವರ್‌ ಮಾಣಿಪ್ಪಾಡಿ ಅವರು ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ಅನ್ವರ್‌ ಮಾಣಿಪ್ಪಾಡಿ ವರದಿಯನ್ನೇ ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮಾಣಿಪ್ಪಾಡಿ ಅವರ ಸವಾಲನ್ನು ಸ್ವೀಕರಿಸುತ್ತಾರೆ ಎನ್ನುವ ಭರವಸೆ ಎಲ್ಲೂ ಕಾಣುತ್ತಿಲ್ಲ. ಸಿಬಿಐಗೆ ಹೋದರೆ ಪ್ರಕರಣ ತೀರ್ಪು ಏನಾಗುತ್ತದೆ ಎಂಬುದು ಸರ್ಕಾರಕ್ಕೂ ಗೊತ್ತು. ವಕ್ಫ್‌ ವಿವಾದಲ್ಲಿ ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ಏಟು ಎದುರೇಟು ನೀಡಲು ಅಷ್ಟೇ ಸಿದ್ದರಾಮಯ್ಯ ಸರ್ಕಾರ ಸೀಮಿತವಾಗಿದೆ. ವಕ್ಫ್‌ ಆಸ್ತಿ ಕಬಳಿಸಿದವರ ಬಗ್ಗೆ ಬಿಸಿ ಮುಟ್ಟಿಸುವ ಸಾಹಸಕ್ಕೆ ಕಾಂಗ್ರೆಸ್‌ ಕೈ ಹಾಕುವುದು ಅನುಮಾನ. ಕಾರಣ ರಾಜ್ಯ ಮತ್ತು ದೆಹಲಿ ಮಟ್ಟದ ಕಾಂಗ್ರೆಸ್‌ ನಾಯಕರ ಹೆಸರುಗಳು ವಕ್ಫ್‌ ಸುಳಿಯಲ್ಲಿ ಸಿಕ್ಕು ಹಾಕಿಕೊಂಡಿವೆ. ಅದರಲ್ಲೂ ವಕ್ಫ್‌ ಆಸ್ತಿ ನುಂಗಿದ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳ ಹುಳುಕನ್ನು ತೆರೆದಿಡುವ ಕಾರ್ಯ ಕಾಂಗ್ರೆಸ್‌ಗೆ ಸೆರಗಿನಲ್ಲಿ ಕೆಂಡ ಸುತ್ತಿಕೊಂಡಂತೆ.

ಒಟ್ಟಾರೆ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಬಿಜೆಪಿ, ಕಾಂಗ್ರೆಸ್, ಮೈತ್ರಿಕೂಟದ ಜೆಡಿಎಸ್‌ ಸರ್ಕಾರಗಳೆಲ್ಲವೂ ವಕ್ಫ್‌ ಆಸ್ತಿ ಮರುವಶಕ್ಕೆ ಪಡೆಯಲು ಹಲವು ಕ್ರಮಗಳನ್ನು ತೆಗೆದುಕೊಂಡಿವೆಯಾದರೂ ಯಾವುದು ತಾರ್ಕಿಕ ಅಂತ್ಯ ಕಂಡಿಲ್ಲ. 1970ರ ದಶಕದಿಂದ ಆರಂಭವಾದ ವಕ್ಫ್ ವಿವಾದ ವಿಸ್ತರಣೆಯಾಗುತ್ತಲೇ ಇದೆ. ಇದಕ್ಕೆ ಅಂತ್ಯ ಯಾವಾಗ ಎಂಬುದು ಯಾವ ಸರ್ಕಾರಕ್ಕೂ ಬೇಡವಾದ ಸಂಗತಿ. ಪ್ರತಿಪಕ್ಷಗಳಿಗೂ ಕೂಡ ಇದೇ ಬೇಕಿದೆ. ಸಾಲು ಸಾಲು ಗೊಂದಲಗಳ ನಡುವೆ ರಾಜಕಾರಣದಲ್ಲಿ ವಕ್ಫ್‌ ವಿವಾದ ಎಂಬುದು ‘ಕೆರೆಯೋಕೆ ಹುಣ್ಣೊಂದು ಇರಬೇಕು’ ಎನ್ನುವ ತರ ಆಗಿ ಹೋಗಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X