ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಗೆ ನನಗೂ ಏನು ಸಂಬಂಧ ಎಂದಿದ್ದಾರೆ?ನನ್ನ ಹತ್ರ ಟನ್ ಗಟ್ಟಲೆದಾಖಲೆಗಳಿವೆ. ಸುಖಾಸುಮ್ಮನೆ ನನ್ನನ್ನು ಕೆಣಕಬೇಡಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಸುದ್ದದಿಗೋಷ್ಠಿ ಕರೆದು ಮಾತನಾಡಿದ ಅವರು, “ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ ನಾನು, ಇರುವ ಸತ್ಯ ಹೇಳುತ್ತಿದ್ದೇನೆ. ಈ ಸರಕಾರಕ್ಕೆ ನಾನು ನೇರವಾಗಿ ಹೇಳುತ್ತಿದ್ದೇನೆ; ನನ್ನ ಮೇಲಷ್ಟೇ ರಾಜಕೀಯ ಹಗೆತನ ಸಾಧಿಸುತ್ತಿರುವುದು ಸರಿಯಲ್ಲ” ಎಂದು ಎಚ್ಚರಿಸಿದರು.
“ಇಂದಿನಿಂದ ಈ ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ದ ಆರಂಭ ಮಾಡುತ್ತಿದ್ದೇನೆ. 2003- 2004ರಲ್ಲಿ ಅವರು ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು? ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ” ಎಂದು ಡಿಕೆಶಿ ವಿರುದ್ಧ ಅರೋಪಗಳನ್ನು ಮಾಡಿದರು.
ಡಿ ಕೆ ಶಿವಕುಮಾರ್ ಅವರ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ. ಅವರು ಹಗರಣಗಳ ಮಹಾನಾಯಕ. ಈ ಕ್ಷಣದಿಂದ ಈ ಸರ್ಕಾರದ ವಿರುದ್ಧ ಸಮರ ಆರಂಭ ಮಾಡಿದ್ದೇನೆ. ಉಪ ಮುಖ್ಯಮಂತ್ರಿ ಎನ್ನುವ ವ್ಯಕ್ತಿ ಏಳು ಕಂಪನಿಗಳ ಹೆಸರಿನಲ್ಲಿ ಪತ್ರ ವ್ಯವಹಾರ ನಡೆಸಿದ್ದಾರೆ. ಎಲ್ಲಾ ದಾಖಲೆಗಳು ಇವೆ. ಅದಷ್ಟು ಬೇಗ ಬಿಡುಗಡೆ ಮಾಡುತ್ತೇನೆ” ಎಂದು ಹೇಳಿದರು.
ಕಸ ಗುತ್ತಿಗೆಯಲ್ಲಿಯೂ ಕೋಟಿ ಕೋಟಿ ಹೊಡೆಯಲು ಹೊರಟಿದ್ದರು!
“ಬಿಬಿಎಂಪಿ ಕಸದ ಗುತ್ತಿಗೆ ನೀಡುವುದರಲ್ಲಿಯೂ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ಹೊರಟಿದ್ದರು. ಮೂವತ್ತು ವರ್ಷಗಳಷ್ಟು ಸುದೀರ್ಘ ಅವಧಿಗೆ ಬೆಂಗಳೂರಿನ ಕಸ ಎತ್ತಲು ಚೆನ್ನೈನ ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡುವ ಹಗರಣಕ್ಕೆ ಮುಂದಾಗಿದ್ದರು. ಪ್ರತಿ ಟನ್ ಕಸ ಎತ್ತಲು ₹6500 ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿ ಮಾಡಿ ಅಲ್ಲಿಂದ ಕಮಿಷನ್ ಹೊಡೆಯಲು ಮುಂದಾಗಿದ್ದರು. ಇಲ್ಲಿ ಕಡಿಮೆ ಎಂದರೂ ₹15,000 ಕೋಟಿ ಹೊಡೆಯಲು ಹೊರಟಿದ್ದರು ಎಂದು ನಾನು ಹೇಳಿದ ಮೇಲೆ ₹6500 ಮೊತ್ತವನ್ನು ₹3, 000ಕ್ಕೆ ಕಡಿಮೆ ಮಾಡಿದರು. ಎರಡೂ ಮೊತ್ತಗಳ ನಡುವೆ ಎಷ್ಟು ಅಂತರ ಇದೆ ಎಂಬುದನ್ನು ನೀವು ಗಮನಿಸಬೇಕು” ಎಂದರು.
ಸರಕಾರದಲ್ಲಿ ಘಜ್ನಿ, ಘೋರಿ ಮಹಮ್ಮದ್ ಇದ್ದಾರೆ
“ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು, ದರೋಡೆಗಳು ಮಿತಿಮೀರಿವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಹಾಗೂ ಮಲ್ಲಿಕ್ ಖಫೂರ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ” ಇವರು ಕಿಡಿಕಾರಿದರು.
ನಾನು ಮಾಜಿ ಪ್ರಧಾನಿ ಮಗ, 4 ಎಕರೆ ಜಮೀನು ಒತ್ತುವರಿ ಮಾಡ್ಬೇಕಾ?
“40 ವರ್ಷಗಳ ಹಿಂದೆಯೇ ನಾನು ಬಿಡದಿಯಲ್ಲಿ ಭೂಮಿ ಖರೀದಿ ಮಾಡಿದ್ದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬಂದು ನನ್ನ ಭೂಮಿಯನ್ನು ಅಳತೆ ಮಾಡುತ್ತಾರೆ. ತೆರವಿನ ಹೈಡ್ರಾಮಾ ಮಾಡುತ್ತಾರೆ. ನಾನು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ನಾನು ನಾಲ್ಕು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಳ್ಳುಬೇಕಾ? 70 ಎಕರೆ ಒತ್ತುವರಿ ಎಂದು ಯಾರೋ ಸಮಾಜ ಪರಿವರ್ತನೆ ಮಾಡುವ ವ್ಯಕ್ತಿ ಹೇಳಿದ್ದಾನೆ. ಬಂದು ತೋರಿಸಲಿ” ಎಂದು ಸವಾಲು ಹಾಕಿದರು.
ಜೆಡಿಎಸ್ – ಬಿಜೆಪಿ ಹೊಂದಾಣಿಕೆ ಸಮಸ್ಯೆ ಇಲ್ಲ
“ಜೆಡಿಎಸ್ – ಬಿಜೆಪಿ ಬಿನ್ನಾಭಿಪ್ರಾಯ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವರು, ಬಿಜೆಪಿ ಜೊತೆ ಮೈತ್ರಿ ಉತ್ತಮವಾಗಿದೆ. ಯಾವ ಹೊಂದಾಣಿಕೆಯ ಕೊರತೆಯು ಇಲ್ಲ. ಸಮನ್ವಯ ಸಮಿತಿ ರಚನೆ ಬಗ್ಗೆ ಸುರೇಶ್ ಬಾಬು ಅವರ ಅಭಿಪ್ರಾಯ ಹೇಳಿದ್ದಾರೆ. ನಿಖಿಲ್ ಕೂಡ ಮಾತನಾಡಿದ್ದಾರೆ. ನಾನು ಈ ಬಗ್ಗೆ ಬಿಜೆಪಿ ಎಲ್ಲಾ ನಾಯಕರ ಜತೆ ಮಾತನಾಡುತ್ತೇನೆ. ಅಲ್ಲದೆ, ನಮ್ಮಲ್ಲಿ ವಿಶ್ವಾಸದ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಕ್ಕೆ ಉತ್ತಮ ಕೆಲಸಗಳು ಆಗುತ್ತಿವೆ” ಎಂದು ತಿಳಿಸಿದರು.