ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಭಾರತವು ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿದಿದೆ. ಇದು ಜಮ್ಮು ಕಾಶ್ಮೀರದಲ್ಲಿ ಮಿಶ್ರ ಪ್ರತಿಕ್ರಯೆಯನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನ್ಯಾಷನಲ್ ಕಾನ್ಫೆರೆನ್ಸ್ ಎಂದಿಗೂ ಒಪ್ಪಂದವನ್ನು ಬೆಂಬಲಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ “ನೀರು ಸಂಘರ್ಷವಲ್ಲ, ಶಾಂತಿಯ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು” ಎಂದು ವಿರೋಧ ಪಕ್ಷದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಈ ಒಪ್ಪಂದ ಅಮಾನತುಗೊಂಡ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ಸಿಎಂ, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಎಂದಿಗೂ ಸಿಂಧೂ ಜಲ ಒಪ್ಪಂದದ ಪರವಾಗಿರಲಿಲ್ಲ. ಅಮಾನತುಗೊಂಡಿರುವ ಈ ಒಪ್ಪಂದವು ಜಮ್ಮು ಕಾಶ್ಮೀರದ ಜನರಿಗೆ ಅತ್ಯಂತ ಅನ್ಯಾಯ ಮಾಡಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಕಾಶ್ಮೀರದ ಪಕ್ಷಗಳು, ಸಂಘಟನೆಗಳಿಂದ ಖಂಡನೆ; ಸಂವೇದನೆ ಮರೆತ ಮಾಧ್ಯಮಗಳು
ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಮೆಹಬೂಬಾ ಮುಫ್ತಿ ಅವರು, “ನಮ್ಮ ಜಲ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಾಗದ ಕಾರಣ ನಾವು ಒಪ್ಪಂದದ ಕೆಟ್ಟ ಸಂತ್ರಸ್ತರು. ಅದಕ್ಕಾಗಿಯೆ ಪಿಡಿಪಿ ಈ ನಷ್ಟಗಳಿಗೆ ಪರಿಹಾರ ಮತ್ತು ನಮ್ಮ ವಿದ್ಯುತ್ ಯೋಜನೆಗಳ ವರ್ಗಾವಣೆಯನ್ನು ಒತ್ತಾಯಿಸುತ್ತದೆ” ಎಂದು ಹೇಳಿದರು.
“ಆದರೂ ನಮ್ಮ ಸಂಪನ್ಮೂಲಗಳು ಶಾಂತಿಯನ್ನು ತರಬೇಕೆಂದು ನಾವು ಬಯಸುತ್ತೇವೆ. ಯಾಕಂದರೆ ಅದು ಭಿನ್ನಾಭಿಪ್ರಾಯ ಅಥವಾ ಯುದ್ಧಕ್ಕೆ ಕಾರಣವಾಗಬಾರದು ಎಂದು ನಾನು ಭಾವಿಸುತ್ತೇನೆ. ಉಳಿದದ್ದು ಭಾರತ ಸರ್ಕಾರಕ್ಕೆ ಬಿಟ್ಟದ್ದು. ಆದರೆ ನಮ್ಮ ದೇಶ ಮತ್ತು ಪಾಕಿಸ್ತಾನದ ನಡುವಿನ ದ್ವೇಷದ ಅತ್ಯಂತ ಕೆಟ್ಟ ಬಲಿಪಶುವಾಗಿರುವ ಕಾಶ್ಮೀರಿಯಾಗಿ ಇದು ನಮ್ಮ ಅಭಿಪ್ರಾಯ” ಎಂದು ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಒಟ್ಟು 28 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಇದಾದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಇನ್ನಷ್ಟೂ ಹೆಚ್ಚಾಗಿದೆ.
ಭಾರತ ಬುಧವಾರ 1960ರ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದೆ. ಇದು ದೀರ್ಘಕಾಲದ ಒಪ್ಪಂದವಾಗಿತ್ತು.
