ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಬುಧವಾರ ಮತದಾನ ನಡೆಯುತ್ತಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ವಯನಾಡ್ನಲ್ಲಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿದಿದ್ದು, ಅವರ ರಾಜಕೀಯ ಭವಿಷ್ಯವನ್ನು ಕ್ಷೇತ್ರದ ಮತದಾರರು ಇಂದು ನಿರ್ಧರಿಸಲಿದ್ದಾರೆ.
ಚುನಾವಣಾ ಕಣದಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಅಭ್ಯರ್ಥಿಯಾಗಿದ್ದಾರೆ. ತಮ್ಮ ಸಹೋದರನನ್ನು ಗೆಲ್ಲಿಸಿದ್ದ ವಯನಾಡ್ ಜನರು ತಮ್ಮ ಕೈಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ. ವಯನಾಡ್ನಲ್ಲಿ ಗೆದ್ದು, ಸಂಸತ್ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.
ಕೇರಳದಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಸಾಥ್ ಕೊಟ್ಟಿದೆ. ಎಡ ಪಕ್ಷಗಳ ಮೈತ್ರಿ ಎಲ್ಡಿಎಫ್ನಿಂದ ಸತ್ಯನ್ ಮೊಕೇರಿ ಮತ್ತು ಬಿಜೆಪಿಯಿಂದ ನವ್ಯಾ ಹರಿದಾಸ್ ಸ್ಪರ್ಧೆಯಲ್ಲಿದ್ದು, ಪೈಪೋಟಿ ನೀಡುತ್ತಿದ್ದಾರೆ.
ಕೆಳದ ಒಂದು ತಿಂಗಳಿನಿಂದ ಭಾರೀ ಪ್ರಚಾರ ನಡೆಸಿರುವ ಪ್ರಿಯಾಂಕಾ ಗಾಂಧಿ, ತಮ್ಮ ಮೊದಲ ಪ್ರಯತ್ನದ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ಸದ್ಯ, ವಯನಾಡ್ ಕ್ಷೇತ್ರವು ಕಾಂಗ್ರೆಸ್ಗೆ ಭದ್ರಕೋಟೆಯಂತಿದ್ದು, ಗೆಲ್ಲುವ ವಿಶ್ವಾಸವಿದೆ. ಆದರೂ, ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗಳ ಕಾರಣದಿಂದ ಯಾವುದನ್ನೂ ಸರಾಗವಾಗಿ ತೆಗೆದುಕೊಳ್ಳಲಾಗದು ಎಂಬ ಎಚ್ಚರಿಕೆಯೂ ಕಾಂಗ್ರೆಸ್ ನಾಯಕರಲ್ಲಿದೆ.
2019ರಲ್ಲಿ ಮೊದಲ ಬಾರಿಗೆ ರಾಹುಲ್ ಗಾಂಧಿ ವಯನಾಡಿನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2024ರಲ್ಲಿ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಹುಲ್, ಎರಡೂ ಕ್ಷೇತ್ರಗಳಲ್ಲಿಯೂ ಗೆದ್ದಿದ್ದರು. ಬಳಿಕ, ವಯನಾಡ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.