ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 6.22 ಲಕ್ಷ ಮತಗಳನ್ನು ಪಡೆದಿದ್ದು, ಬರೋಬ್ಬರಿ 4.10 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಈ ಮೂಲಕ ತಮ್ಮ ಸಹೋದರ ರಾಹುಲ್ ಗಾಂಧಿ ಅವರ ದಾಖಲೆಯನ್ನೂ ಮುರಿದಿದ್ದಾರೆ. ಅಲ್ಲದೆ, ಮೊದಲ ಬಾರಿಗೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಮತ್ತು ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ಎರಡೂ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿದ್ದರು. ಬಳಿಕ, ರಾಯ್‌ಬರೇಲಿಯನ್ನು ಉಳಿಸಿಕೊಂಡು, ವಯನಾಡ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ವಯನಾಡ್ ಸ್ಥಾನಕ್ಕೆ ನವೆಂಬರ್ 13ರಂದು ಮತದಾನ ನಡೆದಿತ್ತು. ಇಂದು (ಶನಿವಾರ) ಫಲಿತಾಂಶ ಪ್ರಕಟವಾಗಿದೆ.
ವಯನಾಡ್ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಪ್ರಿಯಾಂಕಾ ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೊದಲ ಸ್ಪರ್ಧೆಯಲ್ಲೇ ಭರ್ಜರಿ ಗೆಲುವು ಕಂಡಿದ್ದಾರೆ.
ಪ್ರಿಯಾಂಕಾ ಅವರು ಒಟ್ಟು 6,22,338 ಮತಗಳನ್ನು ಗಳಿಸಿದ್ದಾರೆ. ಕ್ಷೇತ್ರದಲ್ಲಿ ಪ್ರಿಯಾಂಕಾ ಅವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಸಿಪಿಐನ ಸತ್ಯನ್ ಮೊಕೆರಿ ಅವರು 2,11,401 ಮತಗಳನ್ನು ಪಡೆದಿದ್ದಾರೆ. ಇನ್ನು, ಬಿಜೆಪಿ ಅಭ್ಯರ್ಥಿ ನವ್ಯ ಹರಿದಾಸ್ ಅವರು 1,09,939 ಮತಗಳನ್ನು ಪಡೆದಿದ್ದಾರೆ. ಪ್ರತಿಸ್ಪರ್ಧಿಗಳ ವಿರುದ್ಧ ಪ್ರಿಯಾಂಕಾ ಬರೋಬ್ಬರಿ 4,10,931 ಮತಗಳ ಅಂತರದಲ್ಲಿ ಗೆದಿದ್ದಾರೆ.
ಈ ಹಿಂದೆ, ವಯನಾಡ್‌ನಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ 3.5 ಲಕ್ಷ ಮತಗಳ ಅಂತರದಿಂದ ಗೆದ್ದು, ಭಾರೀ ಅಂತರದ ಗೆಲುವು ಸಾಧಿಸಿದ್ದರು. ಇದೀಗ, ಪ್ರಿಯಾಂಕಾ ಅವರು ರಾಹುಲ್ ಅವರ ದಾಖಲೆಯ ಅಂತರವನ್ನು ಹಿಂದಿಕ್ಕಿ, 4.10 ಲಕ್ಷ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.
ವಯನಾಡಿನಲ್ಲಿ ಒಟ್ಟು 14 ಲಕ್ಷಕ್ಕೂ ಹೆಚ್ಚು ನೋಂದಾಯಿತ ಮತದಾರರಿದ್ದಾರೆ. ಆದರೆ, 64.72% ರಷ್ಟು ಮತದಾರರು ಮತದಾನ ಮಾಡಿದ್ದರು. ಚಲಾವಣೆಯಾದ ಮತಗಳಲ್ಲಿ ಪ್ರಿಯಾಂಕಾ ಅವರು ಅತ್ಯಧಿಕ ಮತಗಳನ್ನು ಗಳಿಸಿದ್ದಾರೆ.