ತಮ್ಮ ತಂದೆ, ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಹತ್ಯೆಯಾದಾಗ ಅನುಭವಿಸಿದ್ದಕ್ಕಿಂತ ವಯನಾಡ್ ಜನತೆಯ ನೋವು ತೀವ್ರವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ರಾಹುಲ್ ಗಾಂಧಿ ಹೇಳಿದ್ದಾರೆ.
ಗುರುವಾರ ಭೂಕುಸಿತದಿಂದ ಬದುಕುಳಿದವರನ್ನು ಮತ್ತು ಭೂಕುಸಿತದ ಸ್ಥಳಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, “ನನ್ನ ತಂದೆ ತೀರಿಕೊಂಡಾಗ ನನಗೆ ಹೇಗೆ ಅನಿಸಿತು ಎಂದು ನನಗೆ ಈಗ ಅನಿಸುತ್ತಿದೆ. ಇಲ್ಲಿಯ ಜನರು ಕೇವಲ ತಮ್ಮ ತಂದೆಯನ್ನು ಕಳೆದುಕೊಂಡಿಲ್ಲ, ಆದರೆ ಅವರ ಕುಟುಂಬದ ಅನೇಕ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಅವರ ನೋವು ನಾನು ಅನುಭವಿಸಿದ್ದಕ್ಕಿಂತ ತೀವ್ರವಾಗಿದೆ. ಅನೇಕ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಜನರೊಂದಿಗೆ ಮಾತನಾಡಲು ತುಂಬಾ ಕಷ್ಟಕರವಾಗಿತ್ತು” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, “ತಮ್ಮ ಸಹೋದರ ರಾಹುಲ್ ಅನುಭವಿಸಿದ ಭಾವನೆ ನನಗೂ ಇದೆ. ಹೆಚ್ಚಿನ ಸಂತ್ರಸ್ತರು ಮತ್ತೆ ಅದೇ ಪ್ರದೇಶದಲ್ಲಿ ವಾಸಿಸಲು ಬಯಸುವುದಿಲ್ಲ. ಆದ್ದರಿಂದ ಅವರನ್ನು ಇತರ ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾಂತರಿಸಿ, ಪುನರ್ವಸತಿ ಒದಗಿಸಬೇಕು” ಎಂದು ಹೇಳಿದರು.
“ನನಗೆ ವಯನಾಡ್ ಭೂಕುಸಿತವು ರಾಷ್ಟ್ರೀಯ ವಿಪತ್ತು ಎಂದು ಅನಿಸಿದೆ. ಈ ವಿಷಯದ ಬಗ್ಗೆ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತೇನೆ. ಇಡೀ ರಾಷ್ಟ್ರಕ್ಕೆ ಇದೊಂದು ಭೀಕರ ದುರಂತವಾಗಿದೆ. ಬದುಕುಳಿದವರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವಂತೆ ನೋಡಿಕೊಳ್ಳಬೇಕು’’ ಎಂದು ರಾಹುಲ್ ಹೇಳಿದರು.
ಈ ಸಮಯದಲ್ಲಿ ನಾನು ರಾಜಕೀಯದ ಬಗ್ಗೆ ಚರ್ಚಿಸಲು ಬಯಸುವುದಿಲ್ಲ ಎಂದು ರಾಹುಲ್ ಹೇಳಿದರು. 2019ರಿಂದ ವಯನಾಡ್ ಕ್ಷೇತ್ರದ ಸಂಸದರಾಗಿದ್ದ ರಾಹುಲ್, 2024ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯಬರೇಲಿ – ಎರಡೂ ಕ್ಷೇತ್ರದಲ್ಲೂ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರ, ರಾಯಬರೇಲಿ ಉಳಿಸಿಕೊಂಡು ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ವಯನಾಡ್ ಕ್ಷೇತ್ರದ ಲೋಕಸಭೆಯ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.
ವಯನಾಡ್‌ನ ಮುಂಡಕೈ ಹಾಗೂ ಚೂರಲ್ ಮಲದಲ್ಲಿ ಗುರುವಾರ ಭಾರೀ ಭೂಕುಸಿತ ಸಂಭವಿಸಿದ್ದು, 156ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅವರ ಪೈಕಿ ಕರ್ನಾಟಕದ 6 ಮಂದಿ ಕೂಡ ಸಾವಿಗೀಡಾಗಿದ್ದಾರೆ. ನೂರಾರು ಜನರು ಮನೆ, ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಭೂಕುಸಿತದಿಂದ ತತ್ತರಿಸಿ ಹೋಗಿದ್ದಾರೆ. ಪರಿಹಾರ, ಪುನರ್ವಸತಿಗಾಗಿ ಎದುರು ನೋಡುತ್ತಿದ್ದಾರೆ.
ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆಯು ಕಷ್ಟಕರವಾಗಿದ್ದರೂ, ರಕ್ಷಣಾ ತಂಡಗಳು ಸಾಧ್ಯವಿರುವ ಎಲ್ಲ ಮಾರ್ಗಗಳ ಮೂಲಕ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಪರಿಹಾರ, ನೆರವು ಕಾರ್ಯಗಳಲ್ಲಿ ಹಲವಾರು ಮಂದಿ ಕೈಜೋಡಿಸಿದ್ದಾರೆ. ಭೂಕುಸಿತವಾದ ಬಳಿಕ, ಗುಂಡ್ಲುಪೇಟೆ-ವಯನಾಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ.