- ಸ್ವಪಕ್ಷೀಯರ ವಿರುದ್ದವೇ ಕಿಡಿ ಕಾರಿದ ಮಾಜಿ ಸಿಎಂ ಸದಾನಂದಗೌಡ
- ರಾಷ್ಟ್ರೀಯ ಹಾಗೂ ರಾಜ್ಯದ ಬಿಜೆಪಿ ನಾಯಕರು ಮಧ್ಯಪ್ರವೇಶಕ್ಕೆ ಆಗ್ರಹ
ನನ್ನನ್ನೂ ಒಳಗೊಂಡಂತೆ ರಾಜ್ಯದಲ್ಲಿ ಆಯ್ಕೆಯಾಗಿರುವ 25 ಬಿಜೆಪಿ ಸಂಸದರ ಪೈಕಿ 13 ಮಂದಿ ನಾಲಾಯಕ್ ಸಂಸದರು ಎಂದು ತೇಜೋವಧೆ ಮಾಡುವ ಕೆಲಸ ನಮ್ಮ ಪಕ್ಷದವರಿಂದಲೇ ಆಗುತ್ತಿರುವುದು ಬೇಸರದ ಸಂಗತಿ ಎಂದು ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬೇಸರ ವ್ಯಕ್ತಪಡಿಸಿದರು.
ಇಂದು (ಜೂನ್ 6) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿದೆ. ಈ ಹಂತದಲ್ಲಿರುವಾಗಲೇ ಸಂಸದರನ್ನು ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಮಾನಹಾನಿ ಹಿಂದೆ ಯಾರಿದ್ದಾರೋ ಗೊತ್ತಿಲ್ಲ” ಎಂದರು.
“ಆಯ್ಕೆಯಾಗಿರುವ 25 ಸಂಸದರ ಪೈಕಿ 13 ಮಂದಿ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮಾಡಿಲ್ಲ. ಇನ್ನೂ ಕೆಲ ಸಂಸದರು ಅನಾರೋಗ್ಯ ಪೀಡಿತರಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ರೀತಿಯಲ್ಲಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಮತದಾರರಿಂದ ಆಯ್ಕೆಗೊಂಡ ಸಂಸದರನ್ನು ತೇಜೋವಧೆ ಮಾಡುವ ಕೆಲಸ ಎಷ್ಟು ಸರಿ? ಈ ಬಗ್ಗೆ ನನಗೆ 12 ಮಂದಿ ಸಂಸದರು ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಇತಿಶ್ರೀ ಹಾಡಬೇಕಿದೆ” ಎಂದು ಒತ್ತಾಯಿಸಿದ್ದಾರೆ.“ಹಲವು ವಿಚಾರಗಳ ಬಗ್ಗೆ ತ್ವರಿತವಾಗಿ ಪ್ರಕಟಣೆ ಅಥವಾ ಸ್ಪಷ್ಟನೆ ನೀಡುವ ಬಿಜೆಪಿ ನಾಯಕರು, 13 ಮಂದಿ ಸಂಸದರ ಮಾನಹಾನಿ ಆಗುತ್ತಿರುವುದು ನೋಡಿಯೂ ಸ್ಪಷ್ಟನೆ ನೀಡದಿರುವುದು ತರವಲ್ಲ. ಇದರಿಂದ ರಾಜ್ಯಕ್ಕೆ ಬೇರೆ ರೀತಿಯ ಸಂದೇಶ ಹೋಗಲಿದೆ. ಆಗುತ್ತಿರುವ ಗೊಂದಲವನ್ನು ಕೂಡಲೇ ಪರಿಹರಿಸುವ ಕೆಲಸವನ್ನು ಸಂಬಂಧಪಟ್ಟ ನಾಯಕರು ಮಾಡಬೇಕಿದೆ” ಎಂದು ಆಗ್ರಹಿಸಿದರು.
“ಚುನಾವಣಾ ಸೋಲು ನಮಗೇನು ಹೊಸದಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಸೋಲು ಕಂಡಿದ್ದರು. ಅನಂತರ ಗೆದ್ದಿದ್ದು ಇತಿಹಾಸ. ಸೋಲಿನಿಂದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ನಮಗೆ ತಾತ್ಕಾಲಿಕ ಹಿನ್ನೆಡೆಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ ಬಿಜೆಪಿ
“ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಮತದಾರರು ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ. ಆಗಿರುವ ಲೋಪ ಸರಿಪಡಿಸಿಕೊಳ್ಳಬೇಕಿದೆ. ಸೋಲು ಕಂಡಾಗ ಆತ್ಮಾವಲೋಕನ ಮಾಡಿಕೊಳ್ಳುವುದು ವಾಡಿಕೆಯಿದೆ. ಇಂದಿನ ದಿನಗಳಲ್ಲಿ ಆತ್ಮಾಲೋಕನ ಮಾಡಿಕೊಳ್ಳುವುದಕ್ಕೆ ಆತ್ಮಗಳೇ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕಾರ್ಯಕರ್ತರ ಮನೋಬಲ ಕುಸಿಯದಂತೆ ನೋಡಿಕೊಳ್ಳುವುದು ರಾಜ್ಯ ಬಿಜೆಪಿ ನಾಯಕರ ಕೆಲಸವಾಗಿದ್ದು, ಅದನ್ನು ಮಾಡುವ ಕೆಲಸ ಆಗಬೇಕಿದೆ. ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕಾರ್ಯವೈಖರಿ ಬಗ್ಗೆ ಕಾದು ನೋಡಿ ಅನಂತರವಷ್ಟೇ ಮುಂದಿನ ಹೋರಾಟಗಳಿಗೆ ಕಾರ್ಯಕರ್ತರನ್ನು ಅಣಿಗೊಳಿಸುವ ಕೆಲಸ ಮಾಡಬೇಕಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರುಬೇಕು” ಎಂದು ಡಿವಿಎಸ್ ಕಿವಿಮಾತು ಹೇಳಿದರು.