ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರದಲ್ಲಿ ಉಂಟಾದ ವಿಳಂಬ ಧೋರಣೆಯಿಂದ ಈಗಾಗಲೇ ಸಾಕಷ್ಟು ಮುಜುಗರವಾಗಿದೆ. ಎರಡು ದಿನದಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತಿಳಿಸಿದರು.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವಲ್ಲಿ ಹಿಂದೆ ಸರಿಯಲ್ಲ. ಎರಡು ದಿನಗಳಲ್ಲಿ ವಿಪಕ್ಷ ನಾಯಕರ ಆಯ್ಕೆಯಾಗುತ್ತದೆ. ನೇಮಕ ವಿಳಂಬದಿಂದ ಮುಜುಗರ ಆಗುತ್ತಿದೆ. ಚುನಾವಣಾ ಸೋಲಿನಿಂದಲೂ ಮುಜುಗರ ಅನುಭವಿಸಿದ್ದೇವೆ” ಎಂದರು.
“ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವಲ್ಲಿ ನಮ್ಮ ಪಕ್ಷ ಹಿಂದೆ ಸರಿದಿಲ್ಲ. ರಾಜ್ಯದ ಜನರ ಪರವಾಗಿ ಬಿಜೆಪಿ ನಿಲ್ಲಲಿದೆ. ಬಿಜೆಪಿ ಸರ್ಕಾರದ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಕೈ ಬಿಟ್ಟು, ದ್ವೇಷದ ರಾಜಕಾರಣವನ್ನು ಸಿದ್ದರಾಮಯ್ಯ ಮಾಡಿದ್ದಾರೆ” ಎಂದು ದೂರಿದರು.
ರಾಜ್ಯದ ಇತಿಹಾಸದಲ್ಲಿಯೇ ವಿರೋಧ ಪಕ್ಷದ ನಾಯಕ ಇಲ್ಲದೆ ಇದೇ ಮೊದಲ ಬಾರಿ ಬಜೆಟ್ ಕೂಡಾ ಮಂಡನೆಯಾಗಿದೆ. ಈ ಅಂಶವೂ ಕೂಡಾ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ದೊಡ್ಡ ಮುಜುಗರ ತಂದಿದೆ.
ಸದ್ಯ ವಿಪಕ್ಷ ನಾಯಕ ಆಯ್ಕೆಯಲ್ಲಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಆರ್ ಅಶೋಕ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬುವುದು ಕುತೂಹಲ ಹಾಗೇ ಉಳಿದಿದೆ.