- ಸಂವಿಧಾನಕ್ಕೆ ವಿರುದ್ಧವಾದ ಕಾಯ್ದೆ ಹಿಂಪಡೆದಿದ್ದೇವೆ
- ಕಷ್ಟವೋ ಸುಖವೋ ಪ್ರಣಾಳಿಕೆ ಭರವಸೆ ಈಡೇರಿಸುತ್ತೇವೆ
ಸಂವಿಧಾನ ಭಾರತೀಯ ಪ್ರಜೆಗಳಿಗೆ ಧರ್ಮ ಗ್ರಂಥ ಇದ್ದಂತೆ, ಇದಕ್ಕೆ ಬದ್ದರಾಗಿ ನಡೆದುಕೊಳ್ಳವುದು ನಮ್ಮ ಕರ್ತವ್ಯ. ಆದರೆ ಬಿಜೆಪಿಯವರು ಇದರ ಆಶಯಕ್ಕೆ ವ್ಯತಿರಿಕ್ತವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ತಂದಿದ್ದರು. ನಾವೀಗ ಅದನ್ನು ಹಿಂಪಡೆದಿದ್ದೇವೆ ಅಷ್ಟೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಈಗ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಿರುವ ಬಗ್ಗೆ ಮಾತನಾಡುತ್ತಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನವೇ ಭಗವದ್ಗೀತೆ, ಬೈಬಲ್, ಕುರಾನ್. ಈ ಸಂವಿಧಾನದ ಕಲಂ 25ರಲ್ಲಿ ಪ್ರತಿಯೊಬ್ಬರಿಗೂ ಧರ್ಮ ಆಯ್ಕೆಯ ಹಕ್ಕು ನೀಡಿದೆ, ಇದನ್ನು ಸಿದ್ದಾಂತದ ಹೆಸರಿನಲ್ಲಿ ಬದಲಾಯಿಸುವುದು ಎಷ್ಟು ಸರಿ ಎಂದು ಪರಮೇಶ್ವರ್ ಪ್ರಶ್ನಿಸಿದರು.
ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದರು. ಕಾಯ್ದೆ ಬಂದಾಗಲೇ ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು. ಈಗ ಸಂವಿಧಾನದ ಮೇಲೆ ನಂಬಿಕೆ ಇಡುವ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ನಾವು ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತಿದ್ದೇವೆ ಎಂದು ಡಾ ಜಿ ಪರಮೇಶ್ವರ್ ಹೇಳಿದರು.
ಈ ಸುದ್ದಿ ಓದಿದ್ದೀರಾ?:ಸಭಾಧ್ಯಕ್ಷ ಯು ಟಿ ಖಾದರ್ ಅಭಿನಂದಿಸಿ ಹಾಕಿದ್ದ ಫ್ಲೆಕ್ಸ್ ಮೇಲೆ ವಿಕೃತಿ ಮೆರೆದ ಕಿಡಿಗೇಡಿಗಳು
ಇನ್ನು ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರನ್ನ ಕೇಳಿಕೊಂಡು ಅಧಿಕಾರ ಮಾಡಲು ಆಗುವುದಿಲ್ಲ. ನಾವು ಈಗಾಗಲೇ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ. ಅದರಂತೆ ಗ್ಯಾರಂಟಿಗಳನ್ನ ಜಾರಿಗೊಳಿಸುತ್ತೇವೆ ಎಂದು ಹೇಳಿದರು.
ಯೋಜನೆ ಜಾರಿ ವಿಚಾರದಲ್ಲಿ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ. ಎಷ್ಟೇ ಕಷ್ಟವಾದರೂ ಯೋಜನೆಗಳನ್ನು ಜಾರಿಗೊಳಿಸುತ್ತೇವೆ. ಜನಪರ ಆಡಳಿತ ಕೊಡುವ ವಿಚಾರವಾಗಿ ರಾಜಿ ಪ್ರಶ್ನೆಯೇ ಇಲ್ಲ ಎಂದ ಪರಮೇಶ್ವರ್ ಬಿಜೆಪಿಯವರನ್ನು ಕೇಳಿಕೊಂಡು ನಾವು ಆಡಳಿತ ಮಾಡಬೇಕೆ ? ಎಂದರು.
ಹಾಗೆಯೇ ರಾಜ್ಯದಲ್ಲಿ ಮರಳು ಮಾಫಿಯಾ ತಲೆ ಎತ್ತಿದೆ ಎನ್ನುವ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಬಿಜೆಪಿಯವರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ. ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯಗೆ ದನ ಮೇಯಿಸಿಯೂ ಗೊತ್ತು
ಮತ್ತೊಂದೆಡೆ ಹಿಂಪಡೆದ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಪಠ್ಯ ಪರಿಷ್ಕರಣೆ ವಿಚಾರವಾಗಿನ ಬಿಜೆಪಿ ಪ್ರತಿಕ್ರಿಯೆಗೆ ಮೈಸೂರಿನಲ್ಲಿ ತಿರುಗೇಟು ನೀಡಿದ ಸಚಿವ ಎಚ್ ಸಿ ಮಹದೇವಪ್ಪ,ನಾವೆಲ್ಲರೂ ಸಂವಿಧಾನದ ಹೆಸರಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದವರು. ಸಂವಿಧಾನ ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ ಎಂದರು.
ಪಠ್ಯದಲ್ಲಿ ಚರಿತ್ರೆಯನ್ನು ಸರಿಯಾಗಿ ಹೇಳಬೇಕು. ಚರಿತ್ರೆ ತಪ್ಪಾಗಿ ಹೇಳಿದರೆ ಯುವಕರು ದಾರಿ ತಪ್ಪುತ್ತಾರೆ. ಗೋಹತ್ಯೆ ನಿಷೇಧ ಕಾಯ್ದೆ 1964ರಿಂದಲೇ ಇದೆ. ಗೋ ಹತ್ಯೆ ವಿಚಾರ ಎಲ್ಲವನ್ನೂ ಪ್ರಸ್ತಾಪಿಸಲಾಗಿದೆ. ದನ ಮೇಯಿಸದೇ, ಗಂಜಲ ಹಿಡಿಯದ ಯಾರ್ಯಾರೋ ಮಾತನಾಡುತ್ತಾರೆ. ಆದರೆ ಸಿದ್ದರಾಮಯ್ಯ, ನಾನು ಬಿದ್ದು ಒದ್ದಾಡಿದವರು. ದನ ಮೇಯಿಸುವ ಹಾಗೂ ಅದರ ಗಂಜಲದ ಬಗ್ಗೆ ಸಿದ್ದರಾಮಯ್ಯ, ನನಗೆ ಚೆನ್ನಾಗಿ ಗೊತ್ತು. ಇಂದು ಯಾರು ಯಾರೋ ಕೇಳಲು ಬರುತ್ತಿದ್ದಾರೆ ಎಂದರು.