ಸ್ವಾಭಿಮಾನ ಮತ್ತು ಧೈರ್ಯ ಎಂದರೆ ಏನು ಎಂಬುದನ್ನು ಇರಾನ್ ತೋರಿಸಿದೆ. ಯಾರ ಮುಂದೆಯೂ ತಲೆಬಾರದೆ ಇರುವುದನ್ನು ಭಾರತವು ಇರಾನ್‌ನಿಂದ ಕಲಿಯಬೇಕು ಎಂದು ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಅಮೆರಿಕ ದಾಳಿಗೆ ಪ್ರತ್ಯುತ್ತರವಾಗಿ ಸೋಮವಾರ ರಾತ್ರಿ ಕತಾರ್‌ನಲ್ಲಿರುವ ಅಮೆರಿಕ ವಾಯುನೆಲೆಯ ಮೇಲೆ ಇರಾನ್ ದಾಳಿ ಮಾಡಿತು. ಟ್ರಂಪ್ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿದ್ದನ್ನು ಅಲ್ಲಗಳೆದು, ಇಸ್ರೇಲ್ ಮೇಲೆ ದಾಳಿ ಮಾಡಿ ಬಳಿಕ ಇರಾನ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿತು. ಇದೆಲ್ಲದರ ಬೆನ್ನಲ್ಲೇ, ಇರಾನ್ ಬಗ್ಗೆ ಸಂಜಯ್ ರಾವತ್ ಮಾತನಾಡಿದ್ದಾರೆ.
“ಕಾಶ್ಮೀರ ಸಮಸ್ಯೆಯಾಗಲಿ ಅಥವಾ ಪಾಕಿಸ್ತಾನದೊಂದಿಗಿನ ಸಂಘರ್ಷವಾಗಲಿ, ಇರಾನ್ ಯಾವಾಗಲೂ ಭಾರತದ ಪರವಾಗಿ ನಿಂತಿದೆ. ನಾವು ಯಾವುದೇ ತೊಂದರೆಯನ್ನು ಎದುರಿಸಿದಾಗ ಇರಾನ್ ಯಾವಾಗಲೂ ಭಾರತದ ಪರವಾಗಿ ನಿಂತ ದೇಶ. ಆ ದೇಶವು ಯಾರ ಮುಂದೆಯೂ ತಲೆಬಾಗಿಲ್ಲ. ನಾವು ಇರಾನ್‌ನಿಂದ ಕಲಿಯಬೇಕು” ಎಂದು ರಾವತ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷ | ಭಾರತದ ಬಾಸ್ಮತಿ ಬೆಳೆವ ರೈತರು-ರಫ್ತುದಾರರಿಗೆ ಸಂಕಷ್ಟ
ಸದ್ಯ, ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದಾಗ್ಯೂ, ಮಧ್ಯಪ್ರಾಚ್ಯ ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಪರಿಣಾಮ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಭಾರತದ ನಡುವೆ ಹಾರಾಟ ನಡೆಸಬೇಕಿದ್ದ 48 ವಿಮಾನಗಳು ರದ್ದಾಗಿವೆ. ಏತನ್ಮಧ್ಯೆ, ಮಂಗಳವಾರ, ‘ಆಪರೇಷನ್ ಸಿಂಧು’ ಅಡಿಯಲ್ಲಿ ಮಶಾದ್‌ನಿಂದ ನವದೆಹಲಿಗೆ ಬಂದ ವಿಶೇಷ ವಿಮಾನದಲ್ಲಿ ಒಟ್ಟು 292 ಭಾರತೀಯ ಪ್ರಜೆಗಳು ಇರಾನ್‌ನಿಂದ ಭಾರತಕ್ಕೆ ಮರಳಿದ್ದಾರೆ.
ಈವರೆಗೆ, ಇರಾನ್‌ನಿಂದ 2,295 ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.