- ಮಕ್ಕಳ ಆಟವೆಂದು ನಾನು ಹೇಳಿಲ್ಲ: ಸಚಿವ ಪರಮೇಶ್ವರ್ ಸ್ಪಷ್ಟನೆ
- ‘ಈಗಾಗಲೇ ಪೊಲೀಸರು ಸುಮೋಟೋ ದಾಖಲಿಸಿಕೊಂಡಿದ್ದಾರೆ’
ಉಡುಪಿ ವಿಡಿಯೋ ಚಿತ್ರೀಕರಣದಂತಹ ಘಟನೆಗಳು ಸ್ನೇಹಿತರ ವಲಯದಲ್ಲಿ ಸಾಮಾನ್ಯವಾಗಿ ನಡೆಯುತ್ತವೆ. ಅದೆಲ್ಲ ಅಲ್ಲಿಗೆ ಬಿಟ್ಟು ಹೋಗುತ್ತಿತ್ತು. ಈ ಬಗ್ಗೆ ಸುಮ್ಮನೇ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಾನು ಎಲ್ಲೂ ಈ ಪ್ರಕರಣವನ್ನು ಮಕ್ಕಳ ಆಟವೆಂದು ಹೇಳಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, “ಕಾಲೇಜು ಘಟನೆಗಳನ್ನು ಪ್ರಿನ್ಸಿಪಾಲ್ಗೆ ಬಿಡಬೇಕು. ಅದಕ್ಕೆ ಅವರು ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡೋದು ಅಥವಾ ಇನ್ನು ಹೆಚ್ಚಿನ ಕ್ರಮ ಬೇಕು ಅಂದರೆ ತೆಗೆದುಕೊಳ್ಳುತ್ತಾರೆ. ನಾವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು” ಎಂದರು.
“ಇನ್ನು ಘಟನೆ ಕುರಿತು ಈಗಾಗಲೇ ಪೊಲೀಸರು ಸುಮೋಟೋ ದಾಖಲಿಸಿಕೊಂಡಿದ್ದಾರೆ. ತನಿಖೆ ಆಗುತ್ತಿದೆ. ಸತ್ಯಾಸತ್ಯತೆ ಹೊರ ಬರುತ್ತೆ” ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ
ಉಡುಪಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸುತ್ತಿದ್ದು, ಗೃಹ ಸಚಿವ ಪರಮೇಶ್ವರ್ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.