ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ.
ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.
‘ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವ ಅಗತ್ಯವಿಲ್ಲ. ಕಾಶ್ಮೀರದ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸು ಕ್ರಮ ಕೈಗೊಳ್ಳಬೇಕು’ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿ, ಟೀಕಾಪ್ರಹಾರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದಾರೆ.
“ಯುದ್ಧದ ಕುರಿತು ನಾನು ನೀಡಿದ ಹೇಳಿಕೆಯ ಬಗ್ಗೆ ಪರ – ವಿರೋಧದ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಪಹಲ್ಗಾಮ್ ನಲ್ಲಿ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಗೆ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವುದು ದೇಶದ ಜನತೆಗೆ ಮತ್ತು ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆಯಾಗಿದೆ. ಮೊದಲು ಈ ಲೋಪವನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ” ಎಂದಿದ್ದಾರೆ.
“ಸಿಂಧೂ ನದಿ ಒಪ್ಪಂದದ ರದ್ದತಿಯೂ ಸೇರಿದಂತೆ ಕೇಂದ್ರ ಸರ್ಕಾರ ಕೆಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಮುಂದೆ ಇದಕ್ಕಿಂತಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆ ನಮಗಿದೆ. ಅವುಗಳನ್ನೆಲ್ಲ ಬಹಿರಂಗ ಪಡಿಸುವ ಅಗತ್ಯವಿಲ್ಲ. ಅಂತಹ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ” ಎಂದು ತಿಳಿಸಿದ್ದಾರೆ.
“ಇದೇ ವೇಳೆ ಕೆಲವು ಕಿಡಿಗೇಡಿಗಳು ಯುದ್ಧೋನ್ಮಾದವನ್ನು ಸೃಷ್ಟಿಸಿ ದೇಶದೊಳಗಿನ ಸೌಹಾರ್ದತೆಯನ್ನು ಕಲಕುವ ಪ್ರಯತ್ನ ಮಾಡುತ್ತಿದ್ದು ಇಂತಹವರ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಂದು ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಾಹ್ಯ ಶತ್ರುವನ್ನು ಎದುರಿಸಬೇಕಾದರೆ ಆಂತರಿಕವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಾಗುತ್ತದೆ” ಎಂದು ಕರೆ ನೀಡಿದ್ದಾರೆ.
“ಪಾಕಿಸ್ತಾನ ಇಂದು ಆರ್ಥಿಕವಾಗಿ ದಿವಾಳಿಯಾಗಿರುವ ರೋಗಗ್ರಸ್ತ ದೇಶವಾಗಿದೆ. ಅವರು ಕಳೆದುಕೊಳ್ಳುವುದೇನೂ ಇಲ್ಲ, ಈ ಕಾರಣದಿಂದಾಗಿಯೇ ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಈ ಸಂದರ್ಭದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳು ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಖಂಡಿಸಿ ಭಾರತದ ಪರವಾಗಿ ನಿಂತಿವೆ. ಈ ಬೆಳವಣಿಗೆಯನ್ನು ಭಾರತ ಸದುಪಯೋಗಪಡಿಸಿಕೊಂಡು ಪಾಕಿಸ್ತಾನ ಮುಂದೆಂದೂ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ತಕ್ಕ ಪಾಠ ಕಲಿಸಬೇಕಾಗಿದೆ” ಎಂದು ಹೇಳಿದ್ದಾರೆ.