ರೈತರು ಮತ್ತು ಗ್ರಾಹಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ವಿಧಾನಪರಿತ್‌ನಲ್ಲಿ ಮಂಗಳವಾರ ತಿಳಿಸಿದ್ದಾರೆ.
ಸದಸ್ಯರಾದ ಉಮಾಶ್ರೀ ಮತ್ತು ಎಂ.ಜಿ. ಮೂಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಲಿನ ದರವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ರೈತರಿಂದ ಕೇಳಿ ಬಂದಿದೆ. ಪ್ರತಿ ಲೀಟರ್‌ಗೆ 10 ರೂ. ಹೆಚ್ಚಳ ಮಾಡಬೇಕೆಂದು ರೈತರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ಹಾಲು ಉತ್ಪಾದನಾ ಸಂಘಗಳು ಸಹಾ ಸಮ್ಮತಿಸಿವೆ” ಎಂದರು.
“ಅಂತಿಮವಾಗಿ ರೈತರು ಮತ್ತು ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಎಷ್ಟು ಸಾಧ್ಯವೋ ಅಷ್ಟು ಬೇಗ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಈಗಾಗಲೇ ರಾಜ್ಯದಲ್ಲಿ ಹಾಲು ಉತ್ಪಾದನೆ ಪ್ರತಿ ದಿನಕ್ಕೆ ಒಂದು ಕೋಟಿ ಲೀಟರ್‌ಗೆ ಹೆಚ್ಚಳವಾಗಿದೆ. ಹಿಂದೆ 95 ಲಕ್ಷ ಇತ್ತು. ಈಗ ಒಂದು ಕೋಟಿಗೂ ಅಧಿಕವಾಗಿದೆ. ಉತ್ಪಾದನಾ ವೆಚ್ಚವು ಹೆಚ್ಚಾಗುತ್ತಿದೆ. ಇದೆಲ್ಲಾ ಅಂಶಗಳನ್ನು ಪರಿಗಣಿಸಿ ನಾವು ಯಾರಿಗೂ ಹೊರೆಯಾಗದಂತೆ ದರ ಪರಿಷ್ಕರಣೆ ಮಾಡುತ್ತೇವೆ” ಎಂದು ಹೇಳಿದರು.
“ರೈತರಿಗೆ 665.07 ಕೋಟಿ ಬಾಕಿ ಹಣವಿದೆ. ಪ್ರೋತ್ಸಾಹ ಧನ ನೀಡುವುದರಿಂದ ರೈತರಿಗೆ ಅನುಕೂಲವಾಗಲಿದೆ. ಕಳೆದ ಅಕ್ಟೋಬರ್ ತಿಂಗಳಿನಿಂದ ರೈತರ ಖಾತೆಗೆ ಪ್ರೋತ್ಸಾಹ ಹಣ ತಲುಪಿಲ್ಲ. ಹೀಗಾದರೆ ರೈತರು ಏನು ಮಾಡಬೇಕು” ಎಂದು ಸದಸ್ಯರು ಪ್ರಶ್ನಿಸಿದಾಗ, “ಹಾಲು ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಉತ್ಪಾದನೆಗೆ ತಕ್ಕಂತೆ ಬಜೆಟ್‌ನಲ್ಲಿ ಅನುದಾನವನ್ನು ನಿಗದಿಪಡಿಸಿಲ್ಲ. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು 1300ರಿಂದ 1500 ಕೋಟಿ ರೂ. ಅನುದಾನವನ್ನು ಒದಗಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಮಾತ್ರ ಪ್ರೋತ್ಸಾಹ ಹಣ ಬಾಕಿಯಿಲ್ಲ. ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಅವಧಿಯಲ್ಲಿ ಹಾಲಿನ ಪ್ರೋತ್ಸಾಹವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಅವರು ಸರಿಯಾಗಿ ಪಾವತಿ ಮಾಡಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಬಾಕಿ ಇರುತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಂತ ಹಂತವಾಗಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿದ್ದೇವೆ. ರೈತರಿಗೆ ಬಾಕಿ ಹಣವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಬಿಡುಗಡೆ ಮಾಡುತ್ತೇವೆ” ಎಂದು ಉತ್ತರಿಸಿದರು.