- ಸರ್ಕಾರ ಒಂದು ಜಾತಿ, ಒಂದು ಧರ್ಮಕ್ಕೆ ಸೇರಿದ್ದಲ್ಲ, ಸರ್ವರದ್ದು
- ಬಿಜೆಪಿ ಪರಿವಾರ ತಾರತಮ್ಯವನ್ನು ಕಾಂಗ್ರೆಸ್ ದೂರ ಸರಿಸಿದೆ
ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ನೈತಿಕ ಪೊಲೀಸ್‌ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮತೀಯ ಗಲಭೆಯಿಂದ ಸಾವನ್ನಪ್ಪಿದ ಆರು ಮಂದಿಯ ಕುಟುಂಬದ ಸದಸ್ಯರಿಗೆ ತಲಾ 25 ಲಕ್ಷ ಮೊತ್ತದ ಪರಿಹಾರ ಚೆಕ್‌ಗಳನ್ನು ಸಿಎಂ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಸರ್ಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂದರು.
ನಮಗೆ ಎಲ್ಲರ ಹಿತ ಮುಖ್ಯ. ಹೀಗಾಗಿ ನಮ್ಮ ಅವಧಿಯಲ್ಲಿ ಕಾನೂನು ಮೀರಿ ಸಾಗುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ಸುದ್ದಿ ಓದಿದ್ದೀರಾ? :ಅಸಲಿ ಹಿಂದುತ್ವಕ್ಕೆ ‘ಶಕ್ತಿ ಯೋಜನೆ’ ಶಕ್ತಿ ತುಂಬಿದೆ: ಸಚಿವ ರಾಮಲಿಂಗಾ ರೆಡ್ಡಿ
ಬಿಜೆಪಿಯ ದ್ವೇಷ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಧ್ವನಿ ಎತ್ತಿದ್ದೆ. ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಅಷ್ಟು ಸಾಲದು ಎನ್ನುವಂತೆ ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಹಿಂದಿನ ಸರ್ಕಾರ ತಾರತಮ್ಯ ಮಾಡಿತ್ತು. ಈಗ ನಾವದನ್ನು ಸರಿ ಪಡಿಸಿದ್ದೇವೆ ಎಂದು ಸಿಎಂ ಹೇಳಿದರು.