ಸಂವಿಧಾನ, ಸಮಾಜಿಕ ನ್ಯಾಯ, ಮೀಸಲಾತಿಯನ್ನು ವಿರೋಧಿಸುವವರು ನಮ್ಮೆಲ್ಲರ ವೈರಿಗಳು. ನಮ್ಮ ಮಿತ್ರರು ಯಾರು, ವೈರಿಗಳು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಂವಿಧಾನ ವಿರೋಧಿಗಳ ಜೊತೆ ನಾವು ಯಾವುದೇ ಕಾರಣಕ್ಕೂ ನಿಲ್ಲಬಾರದು. ಸಂವಿಧಾನದ ಪರ ಇರುವವರ ಜೊತೆ ನಿಲ್ಲಬೇಕು. ಆಗ ಮಾತ್ರ ನಮ್ಮ ಕೈಗೆ ಅಧಿಕಾರ ಬರುತ್ತದೆ ಎಂಬುದನ್ನು ಮರೆಯಬಾರದು. ಜಾತಿ ಸಮೀಕ್ಷೆ ನಡೆಸಿರುವ ಕಾಂತರಾಜ ವರದಿಯನ್ನು ಸ್ವೀಕರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಒಕ್ಕೂಟ, ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಆಯೋಜಿಸಿದ್ದ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು. “ಸಮಾವೇಶವನ್ನು ಸಂಘಟನೆ ಮಾಡಿದ ರಾಮಚಂದ್ರಪ್ಪ, ಶಂಕರ್, ಸೀತಾರಾಮ್, ನಜೀರ್ ಅಹಮ್ಮದ್ ಸೇರಿದಂತೆ ಅನೇಕ ಮುಖಂಡರಿಗೆ ಅಭಿನಂದನೆಗಳು. ಇದು ರಾಜಕೀಯ ಪಕ್ಷದ ಸಮಾವೇಶವಲ್ಲ. ಶೋಷಿತ ಸಮುದಾಯಗಳು ಏರ್ಪಡಿಸುವ ಸಮಾವೇಶ” ಎಂದರು.
“ಕಾಂತರಾಜ ಆಯೋಗದ ವರದಿಯನ್ನು ಜಾರಿ ಮಾಡಬೇಕು ಎಂದು ಹಕ್ಕೋತ್ತಾಯ ಮಾಡಿದ್ದೀರಿ. ನಾನೇ ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜ್ ಅವರಿಗೆ ಸಮಾಜದ ಜಾತಿ ಸಮೀಕ್ಷೆ ಮಾಡಲು 128 ಕೋಟಿ ರೂ. ಕೊಟ್ಟಿದ್ದೆ. ಸಮೀಕ್ಷೆ ನನ್ನ ಅವಧಿಯಲ್ಲಿ ಪೂರ್ಣ ಆಗಲಿಲ್ಲ. ವರದಿ ಸಿದ್ದವಾದ ಮೇಲೆ ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ, ನಂತರ ಬಿಎಸ್‌ವೈ, ಬೊಮ್ಮಾಯಿ ತಗೊಳ್ಳಲಿಲ್ಲ. ವರದಿ ನೋಡದೆ, ತಿಳಿದುಕೊಳ್ಳದೆ ವಿರೋಧವನ್ನು ಮಾಡುತ್ತಾರೆ. ಈ ವರದಿಯಲ್ಲಿ ಏನಿದೆ ಎಂಬುದು ನನಗೂ ಗೊತ್ತಿಲ್ಲ. ಆ ವರದಿಯನ್ನು ಸ್ವೀಕಾರ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“ಶೋಷಿತ ಸಮುದಾಯದ ಜನರು ಇಡೀ ಸಮಾಜದ ಜನಸಂಖ್ಯೆಯಲ್ಲಿ ಸಿಂಹಪಾಲು ಇದ್ದಾರೆ. ಈ ಸಿಂಹಪಾಲು ಇರುವ ಜನರು ಶತಶತಮಾನಗಳಿಂದ ಶೋಷಣೆ, ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಶೋಷಣೆ, ದೌರ್ಜನ್ಯಗಳಿಗೆ ಜಾತಿ ವ್ಯವಸ್ಥೆ ಕಾರಣ. ಶೋಷಿತ ಸಮುದಾಯಗಳ ಬಹುಸಂಖ್ಯಾತ ಜನರು ಜಾತಿ ವ್ಯವಸ್ಥೆಯ ಕಾರಣಕ್ಕೆ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಹೀಗಾಗಿಯೇ, ಸಮಾಜದಲ್ಲಿ ಅಸಮಾನತೆ ಕಾಣುತ್ತಿದ್ದೇವೆ. ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಅಸಮಾನತೆಗಳು ನಡೆಯುತ್ತಿದೆ. ಅಸಮಾನತೆಯ ಕಾರಣಕ್ಕಾಗಿ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ನಮ್ಮ ದೇಶಕ್ಕೆ ಬಾಬಾ ಸಾಹೇಬರು ಸಂವಿಧಾನ ನೀಡಿ ಸರ್ವರಿಗೂ ಸಮಬಾಳು, ಸಮಪಾಲು ನೀಡಬೇಕೆಂದು ಹೇಳಿದ್ದಾರೆ” ಎಂದು ತಿಳಿಸಿದರು.
“ಇಲ್ಲಿ ಬುದ್ಧ, ಬಸವ, ಅಂಬೇಡ್ಕರ್, ನಾರಾಯಣಗುರು, ಕನಕದಾಸರು, ಶಾಹು ಮಹಾರಾಜನರು, ಜ್ಯೋತಿ ಬಾ ಪುಲೆ ಅವರೆಲ್ಲರೂ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನ ಮಾಡಿದರು. ಜಾತಿ ವ್ಯವಸ್ಥೆಯನ್ನು ತೊಳೆದು ಹಾಕಲು ಪ್ರಯತ್ನ ಮಾಡಿದರು. ನಮ್ಮ ಸಂವಿಧಾನವೂ ಕೂಡ ಎಲ್ಲರೂ ಸಮಾನವಾಗಿ ಬದುಕಲು ಹೇಳಿತು. ಸಂವಿಧಾನ ಇರುವುದರಿಂದ ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ ಕಡಿಮೆ ಆಗಿದೆ. ಪಟ್ಟಭದ್ರ ಹಿತಾಸಕ್ತಿಗಳನ್ನು ಇದನ್ನು ಸಹಿಸುವುದಿಲ್ಲ. ಹೀಗಾಗಿ ಸಂವಿಧಾನ ಬದಲಾವಣೆಯ ಮಾತನಾಡುತ್ತಿವೆ. ಸಮಾಜದಲ್ಲಿ ಎಲ್ಲರೂ ಸಮಾನವಾಗಿ ಇರಬಾರದು, ಮನುಷ್ಯರಾಗಿ ಇರಬಾರದು ಎಂಬುದು ಪಟ್ಟಭದ್ರರ ಧೋರಣೆ” ಎಂದು ಹೇಳಿದರು.
“ಸಮಾಜದಲ್ಲಿ ಸಮಸಮಾಜ ನಿರ್ಮಾಣವಾದರೆ ಶೋಷಣೆಗೆ ದೌರ್ಜನ್ಯಕ್ಕೆ ಅವಕಾಶವಿಲ್ಲ. ಅದಕ್ಕಾಗಿ ಬುದ್ಧನ ಕಾಲದಿಂದ ಬಸವಣ್ಣನವರ ಕಾಲದಿಂದ ನಾಲ್ವಡಿ, ಶಾಹುಮಹಾರಾಜರ ಕಾಲದಿಂದ ಈ ಸಮಾಜದಲ್ಲಿ ಸಮಾನತೆ ತರಲು, ಬದಲಾವಣೆ ತರಲು ಮೀಸಲಾತಿಯನ್ನು ತಂದರು. ಇದನ್ನು ಕೂಡ ಚರಿತ್ರೆಯಲ್ಲಿ ನೋಡಲು ಸಾಧ್ಯವಾಗುತ್ತದೆ. ಮೈಸೂರು ರಾಜ್ಯದಲ್ಲಿ ಮಿಲ್ಲರ್ ಆಯೋಗವನ್ನು ರಚನೆ ಮಾಡಿ ಬ್ರಾಹ್ಮಣೇತರರಿಗೆ 75% ಮೀಸಲಾತಿಯನ್ನು ನಾಲ್ವಡಿಯವರು 1925ರಲ್ಲಿ ಜಾರಿಗೆ ತಂದರು. ಶಾಹು ಮಹಾರಾಜರು ಕೂಡ ಕೂಡ ಇದೇ ರೀತಿ ಸಮಾನತೆಗಾಗಿ ಮೀಸಲಾತಿ ತಂದರು” ಎಂದು ವಿವರಿಸಿದರು.
“ಮೀಸಲಾತಿ, ಸಾಮಾಜಿಕ ನ್ಯಾಯ ಎಂಬುದು ಯಾರಿದೋ ಆಸ್ತಿಯನ್ನು ಯಾರಿಗೆ ಕಿತ್ತು ಕೊಡುವುದಲ್ಲ. ಈ ದೇಶದ ಸಂಪತ್ತು, ಈ ದೇಶದ ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುತ್ತದೆ. ಹಂಚಿಕಯಾಗದೇ ಇರುವುದರಿಂದ ನಾವು ಅಸಮಾನತೆಯನ್ನು ಕಾಣುತ್ತಿದ್ದೇವೆ. ಸಮಾನತೆಗೆ ಬಿಜೆಪಿ ಮಾತೃಪಕ್ಷವಾದ ಆರ್‌ಎಸ್‌ಎಸ್ ಇದೆ. ಮಂಡಲ್ ವರದಿ ಜಾರಿಯಾದಾಗ ಮಂಡಲ್ ವಿರುದ್ಧ ರಥೆಯಾತ್ರೆ ಮಾಡಿದರು. ಮಂಡಲ್ ವಿರುದ್ಧ ಕಮಂಡಲ್ ಮಾಡುವುದಾಗಿ ಹೇಳಿದರು. ಇದು ರಾಮನ ಹೆಸರು ಹೇಳುತ್ತಿರುವುವರು ಮಂಡಲ್ ವಿರುದ್ಧ ಇದ್ದರು” ಎಂದರು.
“ಮೊದಲಿನಿಂದಲೂ ಕೂಡ ಮೀಸಲಾತಿಯನ್ನು ಆರ್‌ಎಸ್‌ಎಸ್, ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಮಂಡಲ್ ಕಮಿಷನ್ ವರದಿಯನ್ನು ಜಾರಿಗೆ ಕೊಡಬೇಕು. ಶಿಕ್ಷಣ ಆರೋಗ್ಯ, ಅಧಿಕಾರ ಸಂಪತ್ತಿನಲ್ಲಿ ಪಾಲು ಸಿಗಬೇಕು. ಕೆಲವರು ಕೈಲಿ ಮಾತ್ರ ಅಧಿಕಾರ ಇರಬಾರದು. ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಶೋಷಿತ ವರ್ಗಗಳಿಗೆ ಮಾರಕ ಎಂದಿದ್ದರು ಬಾಬಾ ಸಾಹೇಬರು” ಎಂದು ತಿಳಿಸಿದರು.
“ನನ್ನನ್ನು ಕೆಲುವು ಶಕ್ತಿಗಳು ವಿರೋಧ ಮಾಡುತ್ತವೆ. ಯಾಕೆಂದರೆ, ಕುರಿಕಾಯುವವನ ಮಗ ಮುಖ್ಯಮಂತ್ರಿ ಆಗಿಬಿಟ್ಟಿದ ಅಂದ. ಸಿದ್ದರಾಮಯ್ಯ ಹದಿನರು ಬಜೆಟ್ ಮಂಡಿಸದವನು. ನಾವು ಮಾಡಿದ ತಪ್ಪೇನು? ಎಲ್ಲ ಜಾತಿಯ ಪರವಾಗಿ ಕಾರ್ಯಕ್ರಮ ತಂದಿದ್ದು ತಪ್ಪಾ? ಶೂ ಭಾಗ್ಯ, ಪಶುಭಾಗ್ಯ, ಅನ್ನಭಾಗ್ಯ ಈ ಎಲ್ಲ ಕಾರ್ಯಕ್ರಮವನ್ನು ಮಾಡಿದ್ದು ಸಿದ್ದರಾಮಯ್ಯ ಅಲ್ವಾ? ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಸಿದ್ದರಾಮಯ್ಯ ಅಲ್ವಾ? ಕಾಂಗ್ರೆಸ್ ಅಲ್ವಾ? ಅದಕ್ಕೆ ವಿರೋಧಿಸುತ್ತಾರೆ” ಎಂದರು.
“ದಲಿತರಿಗೆ, ಶೋಷಿತರಿಗೆ, ಮಹಿಳೆಯರಿಗೆ ಶಕ್ತಿಯನ್ನು ನೀಡುತ್ತೇವೆ ಎಂಬ ಕಾರಣಕ್ಕೆ ನಮ್ಮನ್ನು ವಿರೋಧ ಮಾಡುತ್ತಾರೆ. ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯ ಇರಬಹುದು. ಆದರೆ, ನಮ್ಮನ್ನು ವಿರೊಧಿಸುತ್ತಿರುವವರು ಸುಖಿಗಳು. ಕೆಲವರಿಗೆ ಜಾತಿ ವ್ಯವಸ್ಥೆಯೇ ಮೀಸಲಾತಿ. ಕೆಲವರಿಗೆ ಡಾಕ್ಟರ್ ಆಗಲು, ಉದ್ಯಮಿ, ಇಂಜಿನಿಯರ್ ಆಗಲು ಅವಕಾಶ. ಆ ಅವಕಾಶ ನಮಗೆ ಇಲ್ಲ. ಜಾತಿ ವ್ಯವಸ್ಥೆಯ ಕಾರಣಕ್ಕೆ ಎಲ್ಲ ಸವಲತ್ತು ಪಡೆದು ಸುಖಿಗಳಾದರು” ಎಂದರು.
“ಜಾತಿ ವ್ಯವಸ್ಥೆ ಹೋಗುವತನಕ ಇಂತಹ ಸಮಾವೇಶಗಳು ಅತ್ಯಂತ ಅಗತ್ಯ. ಸಂಘಟನೆಯ ಮೂಲಕ ಸಮಾನತೆಯನ್ನು ತಂದರೆ ಜಾತಿ ನಿರ್ಮೂಲನೆಯಾಗುತ್ತದೆ ಎಂದಿದ್ದರು ಬಾಬಾ ಸಾಹೇಬರು. ಇವನಾರವ, ಇವ ನಮ್ಮವ ಎಂದು 12ನೇ ಶತಮಾನದಲ್ಲಿ ಹೇಳಿದ್ದರು ಬಸವಣ್ಣ. ಈಗ 21ನೇ ಶತಮಾನದಲ್ಲಿದ್ದೇವೆ. ಕುಲಕುಲಕುಲವೆನ್ನದೆ ಹೊಡೆದಾಡದಿರಿ, ಕುಲದ ನೆಲೆಯನ್ನು ಬಲ್ಲಿರಾ? ಎಂದು ಕೇಳಿದರು ಕನಕದಾಸರು. ಯಾವ ದೇವಸ್ಥಾನದಲ್ಲಿ ಒಳಗೆ ಬಿಡಲಿಲ್ಲವೋ ಆ ದೇವಸ್ತಾನಗಳಿಗೆ ಹೋಗಬೇಡಿ, ನೀವೇ ದೇವಾಲಯ ನಿರ್ಮಾಣ ಮಾಡಿರಿ, ನೀವೇ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ನೀವೇ ಪೂಜೆ ನೀವೇ ಪೂಜಾರಿ ಎಂದಿದ್ದಾರೆ ನಾರಾಯಣಗುರು. ಇಂಥ ಜಾತಿಯವರೇ ಪೂಜಾರಿ ಆಗಬೇಕು ಎಂದು ದೇವರು ಹೇಳಿದ್ದಾನಾ? ದೇವನೊಬ್ಬ ನಾಮ ಹಲವು. ಆದರೆ, ಬಿಜೆಪಿ ಆರ್‌ಎಸ್‌ಎಸ್‌ನವರು ಧರ್ಮ ಜಾತಿ ಹೆಸರಲ್ಲಿ ಸಮಾಜವನ್ನು ಒಡೆದು ಛಿದ್ರ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೇವಸ್ಥಾನಕ್ಕೆ ದಲಿತರು ಬರಬೇಡಿ ಎಂದು ಹೇಳಿದವರು ಯಾರು? ಕನಕನಿಗೆ ಉಡುಪಿಯ ದೇವಾಲಯಕ್ಕೆ ಬಿಡದವರು ಯಾರು? ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕನಕದಾಸ ಸಂತ, ಕವಿ ಅಂಥವರಿಗೆ ಒಳಗೆ ಬಿಡಲಿಲ್ಲ. ಬಾಬಾ ಸಾಹೇಬರು ಹೇಳಿದರು ಇತಿಹಾಸ ಗೊತ್ತಿದ್ದವರು ಮಾತ್ರ ಇತಿಹಾಸ ನಿರ್ಮಾಣ ಮಾಡುತ್ತಾರೆ ಅಂತ. ಬಾಬಾ ಸಾಹೇರು ಹೇಳಿದ ಇನ್ನೊಂದು ಮಾತ ಶಿಕ್ಷಣ ಸಂಘಟನೆ ಹೋರಾಟ. ನಿಮಗೂ ನ್ಯಾಯ ಸಿಗಬೇಕಲ್ಲಾ? ನಿಮಗೆ ನ್ಯಾಯ ಸಿಗಬೇಕಾದರೆ ಶಿಕ್ಷಿತರಾಗಬೇಕು. ನೂರಕ್ಕೆ ನೂರು ಶಿಕ್ಷಣ ಸಿಕ್ಕಿಲ್ಲ. 71% ಮಾತ್ರ ಅಕ್ಷರ ಬಲ್ಲವರು ಇದ್ದಾರೆ. ಇನ್ನೂ 29% ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಇದ್ದಾರೆ. ಸ್ವಾಭಿಮಾನವನ್ನು ಬೆಳೆಸಿಕೊಳ್ಳಿ, ಯಾರೂ ಕೂಡ ಹೆದರಬೇಡಿ, ಧೈರ್ಯವಾಗಿರಿ, ನಿಮಗೆ ಸಂವಿಧಾನ ರಕ್ಷಣೆ ಕೋಡುತ್ತದೆ. ಸಂವಿಧಾನವನ್ನು ನಾವೆಲ್ಲ ರಕ್ಷಿಸಿದರೆ ನಮ್ಮ ರಕ್ಷಣೆ ಸಂವಿಧಾನದಿಂದ ಆಗುತ್ತದೆ” ಎಂದರು.
“ಅಸ್ಲೆಂಬ್ಲಿಯಲ್ಲಿ ಸಿಟಿ ರವಿ, ಅಶೋಕ, ಈಶ್ವರಪ್ಪ- ಅವರಿಗೆ ಹೇಳಿದ್ದೆ ನೀನು ಅಸೆಂಬ್ಲಿಗೆ ಬಂದಿದ್ದರೆ, ಅದಕ್ಕೆ ಕಾರಣ ಸಂವಿಧಾನವೆಂದು. ಸಂವಿಧಾನ ಇಲ್ಲವಾಗಿದ್ದರೆ ಈಶ್ವರಪ್ಪ ಕುರಿ ಕಾಯಬೇಕಿತ್ತು. ಅಶೋಕ, ಸಿಟಿ ಹೊಲ ಉಳಬೇಕಿತ್ತು. ಎಲ್ಲ ಜಾತಿಯ ಜನ, ದಲಿತರು, ಅಲ್ಪಸಂಖ್ಯಾತರು ನಮ್ಮ ಕಾರ್ಯಕ್ರಮಗಳನ್ನು ಜಾತಿ ಧರ್ಮದ ಮೇಲೆ ವಿಗಂಡನೆ ಮಾಡಿಲ್ಲ. ಶಕ್ತಿ ಯೋಜನೆ ಮಾಡಿದ್ದೇವೆ. 141 ಕೋಟಿ ಮಹಿಳೆಯರು ಫ್ರೀಯಾಗಿ ತಿರುಗಾಡಿದ್ದಾರೆ. ಗೃಹ ಜ್ಯೋತಿಯಿಂದ 1.41 ಕೋಟಿ ಕುಟುಂಬಗಳು ವಿದ್ಯುತ್ ಸೌಲಭ್ಯ ಪಡೆದಿವೆ. ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಆದರೆ, ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಒಂದು ಕೋಟಿ ಹದಿನೆಂಟು ಲಕ್ಷ ಮನೆ ಒಡೆತಿಗೆ ಎರಡು ಸಾವಿರ ರೂಪಾಯಿ ಗೃಹ ಲಕ್ಷ್ಮಿ ಯೋಜನೆಯಡಿ ಹಣ ನೀಡುತ್ತಿದ್ದೇವೆ. ನಿರುದ್ಯೋಗಿಗಳಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ, ಡಿಪ್ಲೊಮಾ ಹೋಲ್ಡರ್‌ಗಳಿಗೆ ಒಂದೂವರೆ ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಬಿಜೆಪಿ ಆರ್‌ಎಸ್‌ಎಸ್ ನವರು ಯಾವಾಗಲಾದರೂ ಕೊಟ್ಟಿದ್ರಾ? ಸಿದ್ದರಾಮಯ್ಯನವರ ಸರ್ಕಾರ, ಕಾಂಗ್ರೆಸ್ ಸರ್ಕಾರ ಕೊಟ್ಟಿರುವುದನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ” ಎಂದರು.
“ಗ್ರಾಮ ಪಂಚಾಯತಿಯಲ್ಲಿ ಮೀಸಲಾತಿಯನ್ನು ತಂದಿದ್ದು ಮಹಿಳೆಯರಿಗೆ ಅವಕಾಶವನ್ನು ನೀಡಿದ್ದು ರಾಜೀವ್ ಗಾಂಧಿ. ಇದನ್ನು ವಿರೋಧ ಮಾಡಿದವರು ಯಾರು? ಮಂಡಲ್ ವರದಿಯನ್ನು ವಿರೋಧಿ ಮಾಡಿದವರೇ ಇದನ್ನೂ ವಿರೋಧ ಮಾಡಿದರು. ಈಗ ಎಲ್ಲರನ್ನೂ ತಬ್ಬಿಕೊಳ್ಳಲು ಬರುತ್ತಾರೆ. ಬರ್‍ರೀ ಬರ್‍ರೀ ಎನ್ನುತ್ತಾರೆ. ಶೋಷಿತ ಸಮುದಾಯದರನ್ನು ಆರ್‌ಎಸ್‌ಎಸ್ ಬಿಜೆಪಿಗೆ ಸೇರಿಸಿಕೊಂಡು ನಿಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಈ ಕಾರಜೋಳ ಇದ್ದಾನಲ್ಲ, ದಾರಿ ತಪ್ಪಿಸುತ್ತಾನೆ. ಒಳಮೀಸಲಾತಿಗಾಗಿ ತಿದ್ದುಪಡಿ ತನ್ನಿ ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ಕಾಂಗ್ರೆಸ್ ಸರ್ಕಾರ” ಎಂದರು.
“ತಾಂಡಾಗಳನ್ನು ರವೆನ್ಯೂ ಗ್ರಾಮಗಳನ್ನಾಗಿ ಮಾಡಿದ್ದು ಯಾರು? ಈ ಜನರಿಗೆ ನ್ಯಾಯ ಕೊಡಬೇಕು ಎಂದು ಹೇಳಿ ರೆವ್ಯೂನ್ಯೂ ಗ್ರಾಮ ಮಾಡಿದ್ದು ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ. ಈಗ ಹಕ್ಕುಪತ್ರ ಕೊಡಲು ಮೋದಿ ಬಂದಿದ್ದಾರೆ. ರಾಹುಲ್ ಗಾಂಧಿಯವರು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಒತ್ತಾಯ ಮಾಡಿದ್ದು. ಆದರೆ, ಈಗ ಹಾವು ಸಾಯದಂತೆ, ಕೋಲು ಮುರಿಯದಂತೆ ಮಾಡಿ ಇಟ್ಟಿದ್ದಾರೆ” ಎಂದರು.
“ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ರಾಜ್ಯಗಳಲ್ಲೂ ಜಾತಿಗಣತಿಯನ್ನು ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಹೈಕಮಾಂಡ್ ಕೂಡ ತೀರ್ಮಾಣ ಮಾಡಿದೆ. ನೀವು ಕೊಟ್ಟಿರುವ ಅನೇಕ ಡಿಮ್ಯಾಂಡ್‌ಗಳಿಗೆ ನನ್ನ ಸಹಮತ ಇದೆ. ನಾನು ಡಿಕ್ಟೇಟರ್ ಅಲ್ಲ. ಸಮಾಜದಲ್ಲಿ, ಕ್ಯಾಬಿನೆಟ್‌ನಲ್ಲಿ ಇಟ್ಟು ತೀರ್ಮಾನ ಮಾಡುತ್ತೇನೆ” ಎಂದರು.
“ಬಿಜೆಪಿಗರು ಅವರ ಯೋಗ್ಯತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪಾರ್ಲಿಮೆಂಟ್ ಉದ್ಘಾಟನೆಗೆ, ಅಯೋಧ್ಯೆ ಉದ್ಘಾಟನೆಗೂ ಕರೆಯಲಿಲ್ಲ.ಸಿದ್ದರಾಮಯ್ಯ ಹಿಂದೂ ವಿರೋಧಿ ಎನ್ನುತ್ತಾರೆ. ನಾನು ಯಾರ ವಿರೋಧಿಯಲ್ಲ, ಮನುಷ್ಯಪರ” ಎಂದರು.