- ಇಂದಿರಾ ಕ್ಯಾಂಟೀನ್ ಸುಸ್ಥಿತಿ, ಕಾರ್ಯನಿರ್ವಹಣೆ ಕುರಿತು ವರದಿ ಸಲ್ಲಿಸಲು ಸೂಚನೆ
- ‘ಟೆಂಡರ್ ಪ್ರಕ್ರಿಯೆ ವಿಕೇಂದ್ರೀಕರಣಗೊಳಿಸಿ ಎಂಟು ವಲಯಗಳಲ್ಲಿ ಟೆಂಡರ್ ಕರೆಯಿರಿ’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಇರುವ ಇಂದಿರಾ ಕ್ಯಾಂಟೀನ್‌ಗಳ ಬಲವರ್ಧನೆಗೆ ಮುಂದಾಗಿದ್ದಾರೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಕುರಿತಂತೆ ಮುಖ್ಯಮಂತ್ರಿಗಳು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 175 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿತ್ತು. ಹಾಗೆಯೇ ಹಲವು ಜಿಲ್ಲಾ ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಇಂದಿರಾ ಕ್ಯಾಂಟೀನ್‌ಗಳು ಬಹುತೇಕ ಮುಚ್ಚುವ ಹಂತಕ್ಕೆ ಬಂದಿದ್ದವು. ಸಿದ್ದರಾಮಯ್ಯ ಅವರು ಈಗ ತಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಈಗ ಮತ್ತೆ ಮರು ಜೀವ ತುಂಬುತ್ತಿದ್ದಾರೆ.
“ಬೆಂಗಳೂರಿನ ಪ್ರತಿ ವಾರ್ಡಿಗೆ ಒಂದರಂತೆ ಕನಿಷ್ಠ 250 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದ್ದು, ಇಲ್ಲಿವರೆಗೂ ಇಂದಿರಾ ಕ್ಯಾಂಟಿನ್ ಗೆ ಬಿಬಿಎಂಪಿ ವತಿಯಿಂದ 70%, ಹಾಗೂ ಸರ್ಕಾರದಿಂದ ಶೇ.30 ರಷ್ಟು ವೆಚ್ಚ ಭರಿಸಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿಯು ಶೇ. 50 ರಷ್ಟು ಹಾಗೂ ಸರ್ಕಾರ ಶೇ. 50 ರಷ್ಟು ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
“ಬೆಂಗಳೂರು ಹೊರತು ಪಡಿಸಿ ರಾಜ್ಯದ ವಿವಿಧೆಡೆಗಳಲ್ಲಿ ಇಂದಿರಾ ಕ್ಯಾಂಟೀನ್ ವೆಚ್ಚದಲ್ಲಿ ಸರ್ಕಾರ ಶೇ. 70 ರಷ್ಟು ಹಾಗೂ ಸ್ಥಳೀಯ ನಗರ ಸಭೆಗಳು ಶೇ. 30 ರಷ್ಟು ಭರಿಸಬೇಕೆಂದು ತೀರ್ಮಾನಿಸಲಾಗಿದೆ. ರಾಜ್ಯದ ಯಾವೆಲ್ಲ ಸ್ಥಳಗಳಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆನ್ನುವ ಸ್ಥಳಗಳ ಪಟ್ಟಿಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದರು.
ಇಂದಿರಾ ಕ್ಯಾಂಟೀನ್ ಆಹಾರಕ್ರಮದಲ್ಲಿ ಬದಲಾವಣೆ
“ಇಂದಿರಾ ಕ್ಯಾಂಟೀನ್ ನಲ್ಲಿ ದೊರೆಯುವ ಆಹಾರದ ಕ್ರಮವನ್ನು ಬದಲಾಯಿಸುತ್ತಿದ್ದು, ಆಹಾರದ ಗುಣಮಟ್ಟ, ಪ್ರಮಾಣ ಹಾಗೂ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ. ದರ ಪರಿಷ್ಕರಣೆ ಇಲ್ಲ. ವಲಯವಾರು ಕರೆಯಲಾಗುವ ಟೆಂಡರ್ ಪ್ರಕ್ರಿಯೆ ನಂತರ ಇಂದಿರಾ ಕ್ಯಾಂಟೀನ್ ಯೋಜನೆಗೆ ಪುನಃ ಚಾಲನೆ ನೀಡಲಾಗುವುದು” ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ, ಸುಸ್ಥಿತಿ ಮತ್ತು ಕಾರ್ಯನಿರ್ವಹಣೆ ಕುರಿತು ವರದಿ ಸಲ್ಲಿಸಲು ಅಧಿಕಾರಿಗಳಿಗೆ ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಅವರು ಸೂಚಿಸಿದರು. ದುರಸ್ತಿ ಅಗತ್ಯ ಇರುವಲ್ಲಿ ಕೂಡಲೇ ಕ್ರಮ ಕೈಗೊಂಡು, ಸುಸ್ಥಿತಿಯಲ್ಲಿಡಬೇಕು. ಆಹಾರದ ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಗದಿಪಡಿಸಿದ ಮೆನುವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸದಾಗಿ ಟೆಂಡರ್ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸಿ ಎಂಟು ವಲಯಗಳಲ್ಲಿ ಟೆಂಡರ್ ಕರೆಯಿರಿ. ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸ್ವಚ್ಛತೆ, ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಯಾವುದೇ ರಾಜಿ ಮಾಡಬಾರದು. ಉತ್ತರ ಕರ್ನಾಟಕದಲ್ಲಿ ಸ್ಥಳೀಯ ಆಹಾರ ಒದಗಿಸಬೇಕು ಎಂದು ಸಿಎಂ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಳೆಗಾಲವೆಂದರೆ ಮೇಯುವವರ ಸುಗ್ಗಿಕಾಲವೇ?
ಸಚಿವರು, ಶಾಸಕರನ್ನು ಆಗಾಗ ಇಂದಿರಾ ಕ್ಯಾಂಟೀನ್‌ಗಳಿಗೆ ಹೋಗಿ ಉಪಾಹಾರ ಸ್ವೀಕರಿಸಲು ಆಹ್ವಾನಿಸಿ. ಅದರಿಂದ ಗುಣಮಟ್ಟ ಕಾಪಾಡಲು ಅನುಕೂಲವಾಗುತ್ತದೆ. ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ, ತಾಲ್ಲೂಕು ಕಚೇರಿಗಳಂತಹ ಜನ ಸೇರುವ ಸ್ಥಳಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.