- ‘ಸಭಾಪತಿ ಬಸವರಾಜ ಹೊರಟ್ಟಿ ಅವರ ಜೊತೆಗೂ ಚರ್ಚಿಸಿದ್ದೇನೆ’
- ಸೂಕ್ತ ಸ್ಥಳದಲ್ಲಿ ಸಂಸ್ಥೆಯನ್ನು ಆರಂಭಿಸುತ್ತೇವೆ: ಯು ಟಿ ಖಾದರ್
ಪದವೀಧರ ಯುವಕ ಮತ್ತು ಯುವತಿಯರಿಗೆ ಒಂದು ವರ್ಷದ ರಾಜಕೀಯ ತರಬೇತಿ ನೀಡುವ ಸಂಸ್ಥೆಯನ್ನು ಸ್ಥಾಪಿಸುವ ಪ್ರಸ್ತಾಪ ಇದೆ ಎಂದು ಸಭಾಧ್ಯಕ್ಷ ಯು ಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿ, “ಇಂತಹ ಪ್ರಸ್ತಾವ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಪುಣೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಇಂತಹ ತರಬೇತಿ ನೀಡುತ್ತಿದೆ. ಬೇರೆಲ್ಲೂ ರಾಜಕೀಯ ತರಬೇತಿ ನೀಡುವ ಸಂಸ್ಥೆ ಇಲ್ಲ. ನಮ್ಮಲ್ಲೂ ಇದು ಆರಂಭವಾಗಬೇಕು” ಎಂದರು.
“ರಾಜಕೀಯ ತರಬೇತಿ ಸಂಸ್ಥೆ ಆರಂಭಿಸುವ ಕುರಿತು ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಜೊತೆಗೂ ಚರ್ಚಿಸಿದ್ದೇನೆ. ಸೂಕ್ತ ಸ್ಥಳದಲ್ಲಿ ಸಂಸ್ಥೆಯನ್ನು ಆರಂಭಿಸುತ್ತೇವೆ. ಇದಕ್ಕೆ ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿ ಇರುತ್ತಾರೆ” ಎಂದರು.
“ಆರು ತಿಂಗಳ ತರಬೇತಿ ಹಾಗೂ ಪ್ರಾಯೋಗಿಕ ಅನುಭವಕ್ಕಾಗಿ ಆರು ತಿಂಗಳ ಇಂಟರ್ನ್ ಷಿಪ್‌ಗೆ ಅವಕಾಶ ಕಲ್ಪಿಸುತ್ತೇವೆ. ಶಾಸಕರು, ಸಚಿವರು, ನನ್ನ ಕಚೇರಿಯೂ ಸೇರಿ ವಿವಿಧ ಸರ್ಕಾರಿ ಕಚೇರಿಗಳಲ್ಲೂ ಇಂಟರ್ನ ಷಿಪ್ ಮಾಡಲು ಅವಕಾಶ ನೀಡಬಹುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನತಂತ್ರವೆಂಬುದು ಭಾರತದ ವಂಶವಾಹಿಯಲ್ಲಿದೆಯೇ ಮೋದಿಯವರೇ, ಹೌದೇ?
“ಮುತ್ಸದ್ದಿ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳ ಜೊತೆಗೂ ಆಗಾಗ ಸಂವಾದ ಏರ್ಪಡಿಸಿ, ವಿದ್ಯಾರ್ಥಿಗಳು ಅವರ ಅನುಭವದ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸುತ್ತೇವೆ. ಇನ್ನಷ್ಟು ಸಮಾಲೋಚನೆ ನಡೆಸಿ ಸಂಸ್ಥೆಯನ್ನು ಕಾರ್ಯರೂಪಕ್ಕೆ ತರುತ್ತೇವೆ” ಎಂದರು.
“ಇದಕ್ಕಾಗಿ ಪುಣೆಯ ಸಂಸ್ಥೆಯ ನೆರವು ಪಡೆದು ಪಠ್ಯಕ್ರಮವನ್ನು ಶೀಘ್ರವೇ ರೂಪಿಸಲಾಗುತ್ತದೆ. ಭವಿಷ್ಯದಲ್ಲಿ ಉತ್ತಮ ರಾಜಕಾರಣಿಗಳನ್ನು ರೂಪಿಸಲು ಈ ಸಂಸ್ಥೆ ನೆರವಾಗಬೇಕು ಎಂಬ ಆಶಯ ನಮ್ಮದು” ಎಂದು ವಿವರಿಸಿದರು.
ಜುಲೈ 3ರಿಂದ ಅಧಿವೇಶನ
“ಜುಲೈ 3ರಿಂದ ವಿಧಾನ ಮಂಡಲದ ಅಧಿವೇಶನ ನಡೆಯಲಿದೆ. ಅಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಜಂಟಿ ಸದನ ಉದ್ದೇಶಿಸಿ ಮಾತನಾಡುತ್ತಾರೆ. ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ” ಎಂದು ಇದೇ ವೇಳೆ ಹೇಳಿದರು.