ಕರ್ನಾಟಕ ಕೈಗಾರಿಕ ಪ್ರದೇಶಾಭಿವೃಧ್ದಿ ಮಂಡಳಿಯು ನೈಸ್ ಸಂಸ್ಥೆಗೆ ನೀಡಿದ್ದ 554 ಎಕರೆ ಹೆಚ್ಚವರಿ ಜಮೀನನ್ನು ಶೀಘ್ರವಾಗಿ ಹಿಂಪಡೆಯುವ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶರಣ ಬಸಪ್ಪ ದರ್ಶನಾಪುರ ಹೇಳಿದರು.
ವಿಧಾನ ಪರಿಷತ್ ಮಂಗಳವಾರ ಸದಸ್ಯ ಎಸ್. ಮುನಿರಾಜು ಗೌಡ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆ 25ಕ್ಕೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರ ಪರವಾಗಿ ಅವರು ಉತ್ತರಿಸಿದರು.
‘ಬಿಎಂಐಸಿಪಿ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನುಗಳ ಪೈಕಿ 554 ಎಕರೆ ಹೆಚ್ಚುವರಿ ಜಮೀನುಗಳನ್ನು ಹಿಂಪಡೆಯುವ ಕುರಿತಂತೆ , ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳನ್ನು ಗುರುತಿಸಿ ಸರ್ವೆ ನಂಬರ್‌ಗಳೊಂದಿಗೆ ವಿವರವಾದ ಮಾಹಿತಿ ಸಲ್ಲಿಸುವಂತೆ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ(ದಕ್ಷಿಣ) ಇವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಸ್ಪಷ್ಟವಾದ ವರದಿ ಪಡೆದು ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲು ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲಾಗುವುದು ಹಾಗೂ ಸದ್ರಿ ಭೂಮಿಯನ್ನು ಹಿಂಪಡೆದ ನಂತರ ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದರು.
ಯಶಸ್ವಿನಿ ಯೋಜನೆಯ ಮಾನದಂಡಗಳ ಬದಲಾವಣೆಗೆ ಪರಿಶೀಲನೆ: ಸಚಿವ ಕೆ.ಎನ್.ರಾಜಣ್ಣ
ಯಶಸ್ವಿನಿ ಯೋಜನೆ ಅನುಷ್ಠಾನದ ಉದ್ದೇಶದಿಂದ ಅವಶ್ಯಕತೆ ಕಂಡು ಬಂದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಬದಲಾಯಿಸಲು ಪರಿಶೀಲಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘2022-23ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಘೋಷಿಸಲಾಗಿದೆ. ಅದರಂತೆ ಸದಸ್ಯರ ನೋಂದಣಿಯನ್ನು 2022ರ ನವೆಂಬರ್ 1ರಿಂದ ಪ್ರಾರಂಭಿಸಿದ್ದು ನೋಂದಾಯಿಸಿದ ಸದಸ್ಯರಿಗೆ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ 2023ರ ಜನವರಿ 1 ರಿಂದ 2024ರ ಮಾರ್ಚ 31ರವರೆಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
‘ಈಗಿನ ಪರಿಷ್ಕೃತ ಯಶಸ್ವಿನಿ ಯೋಜನೆಯಡಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ನೆಟ್‌ವರ್ಕ್ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ನಿಗದಿತವಾಗಿ ಪಾವತಿಸುತ್ತ ಬಂದಿದ್ದು ಜನವರಿ 2023ರಿಂದ ಆಗಸ್ಟ್ 2023ರವರೆಗೆ 8 ಕಂತುಗಳಲ್ಲಿ 39 ಕೋಟಿ ರೂ ಮೊತ್ತವನ್ನು ಪಾವತಿಸಲಾಗಿದೆ’ ಎಂದು ಸಚಿವರು ಇದೆ ವೇಳೆ ಉತ್ತರಿಸಿದರು.