- ಅನ್ನಭಾಗ್ಯ ಯೋಜನೆ ಅಕ್ಕಿ ಪೂರೈಕೆಗೆ ಟೆಂಡರ್ ಮೊರೆ
- ಕೇಂದ್ರ ಸ್ವಾಮ್ಯದ ಮೂರು ಏಜೆನ್ಸಿಗಳೊಂದಿಗೆ ಮಾತುಕತೆ
ಕೇಂದ್ರ ಸ್ವಾಮ್ಯದ ಮೂರು ಏಜೆನ್ಸಿಗಳಿಗೆ ಅನ್ನಭಾಗ್ಯದ ಅಕ್ಕಿ ಪೂರೈಕೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರದ ಏಜೆನ್ಸಿಗಳಿಗೆ ಅಕ್ಕಿ ಪೂರೈಸುವಂತೆ ಕೇಳಿಕೊಳ್ಳಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಶಿರಾಡಿಘಾಟ್ ಮಾರ್ಗದಲ್ಲಿ ಸುರಂಗ ನಿರ್ಮಾಣ; ಕೇಂದ್ರಕ್ಕೆ ಪ್ರಸ್ತಾವನೆ: ಸತೀಶ್ ಜಾರಕಿಹೊಳಿ
“ಅನ್ನಭಾಗ್ಯ ಯೋಜನೆ ಜಾರಿ ಅಕ್ಕಿ ಪೂರೈಕೆ ಸಂಬಂಧ ಇಂದು ಮೂರು ಏಜೆನ್ಸಿಗಳ ಜೊತೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಇಲ್ಲಿ ಅಕ್ಕಿ ಪೂರೈಕೆಗೆ ತಕ್ಷಣ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಕೇಳಿಕೊಳ್ಳಲಾಯಿತು. ಇವರು ಟೆಂಡರ್ ಪ್ರಕ್ರಿಯೆಗೆ ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ಟ್ರೇಡರ್ಸ್, ಮಿಲ್ ಮಾಲೀಕರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಿದ್ದಾರೆ” ಎಂದು ಹೇಳಿದರು.
ಈ ಹಿಂದೆಯೂ ರಾಜ್ಯದಲ್ಲಿ ಇದೇ ಸಂಸ್ಥೆಗಳಿಂದ ಅಕ್ಕಿ ತರಿಸಲಾಗಿತ್ತು. ಸಂಸ್ಥೆಗಳಿಂದ ಪೂರೈಕೆ ಬಳಿಕ ಸರ್ಕಾರ ಅಕ್ಕಿ ಸರಬರಾಜು ಮಾಡುತ್ತದೆ ಎಂದು ಸಚಿವ ಮುನಿಯಪ್ಪ ತಿಳಿಸಿದರು. ರಾಜ್ಯ ಸರ್ಕಾರ ಈ ಮೊದಲು ಜುಲೈ ಮೊದಲ ವಾರ ಅನ್ನಭಾಗ್ಯ ಜಾರಿ ಮಾಡುವುದಾಗಿ ಹೇಳಿತ್ತು. ಈ ಮಾತುಕತೆ ಬಳಿಕ ಮರಳಿ ನಿಗದಿಯಂತೆ ಯೋಜನೆ ಜುಲೈನಲ್ಲಿ ಜಾರಿಯಾಗುವ ಸಾಧ್ಯತೆ ಇದೆ.