ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು ಮತ್ತೆ ಆರೋಪಿಸಿರುವ ಲೋಕಸಭೆ ವಿರೋಧ ಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ, “ಮಹಾಘಟಬಂಧನವು(ಮಿತ್ರಕೂಟ) ಬಿಹಾರದಲ್ಲಿ ಒಂದೇ ಒಂದು ಮತವನ್ನು ಸಹ ಕದಿಯಲು ಬಿಡುವುದಿಲ್ಲ” ಎಂದು ಪ್ರತಿಪಾದಿಸಿದರು.
ಬಿಹಾರದಲ್ಲಿ ಮತದಾರರ ಅಧಿಕಾರ ಯಾತ್ರೆಯ ಮೂರನೇ ದಿನದಂದು ಭಗತ್ ಸಿಂಗ್ ಚೌಕ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಸಂವಿಧಾನವು ಜನರಿಗೆ ಮತದಾನದ ಹಕ್ಕನ್ನು ನೀಡಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಚುನಾವಣಾ ಆಯುಕ್ತರು ಈ ಹಕ್ಕನ್ನು ಜನರಿಂದ ಕಿತ್ತುಕೊಳ್ಳುತ್ತಿದ್ದಾರೆ. ಆದರೆ ತೇಜಸ್ವಿ ಯಾದವ್, ನಾನು, ಇತರೆ ನಾಯಕರು ಒಂದೇ ಒಂದು ಮತವನ್ನು ಕದಿಯಲು ಬಿಡುವುದಿಲ್ಲ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಬಿಹಾರದಲ್ಲಿ ಅದೇ ರೀತಿ ಆಗಲು ಬಿಡಲ್ಲ: ರಾಹುಲ್ ಗಾಂಧಿ
ಹರಿಯಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಚುನಾವಣಾ ಆಯೋಗ ಮತ್ತು ಬಿಜೆಪಿ ಜೊತೆಯಾಗಿ ಚುನಾವಣೆಗಳನ್ನು ಕದ್ದಿದೆ. ಮಹಾರಾಷ್ಟ್ರದಲ್ಲಿ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ ಸುಮಾರು 1 ಕೋಟಿ ಮತದಾರರನ್ನು ನಿಗೂಢವಾಗಿ ಸೇರಿಸಲಾಗಿದೆ. ಮತದಾರರ ಪಟ್ಟಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಕೇಳಿದೆ. ಆದರೆ ಚುನಾವಣಾ ಸಂಸ್ಥೆ ನಿರಾಕರಿಸಿದೆ ಎಂದು ರಾಹುಲ್ ಪುನರುಚ್ಛರಿಸಿದರು.
“ಈಗ ಬಿಹಾರದಲ್ಲಿ ಹೊಸ ರೀತಿಯಲ್ಲಿ ಮತ ಕಳವು ನಡೆಯುತ್ತಿದೆ. ನಿಮ್ಮ ಕಣ್ಣೆದುರೇ ಈ ಕಳ್ಳತನ ಮಾಡುತ್ತಿದ್ದಾರೆ. ಆದರೆ ನಾವು ಅವರು ಮತಗಳನ್ನು ಕದಿಯಲು ಬಿಡುವುದಿಲ್ಲ. ಮೊದಲು ನಿಮ್ಮ ಮತದಾರರ ಚೀಟಿ ಹೋಗುತ್ತದೆ. ನಂತರ ನಿಮ್ಮ ಪಡಿತರ ಚೀಟಿ ಹೋಗುತ್ತದೆ. ಅಂತಿಮವಾಗಿ ನಿಮ್ಮ ಭೂಮಿಯನ್ನು ಅದಾನಿ ಮತ್ತು ಅಂಬಾನಿಗೆ ಹಸ್ತಾಂತರಿಸಲಾಗುತ್ತದೆ” ಎಂದು ಜನರಿಗೆ ಎಚ್ಚರಿಕೆ ನೀಡಿದರು.
ಮಂಗಳವಾರ ಯಾತ್ರೆಯು ಗಯಾದ ವಜೀರ್‌ಗಂಜ್‌ನಿಂದ ಪ್ರಾರಂಭವಾಗಿದ್ದು, ನವಡಾವನ್ನು ಪ್ರವೇಶಿಸಿದೆ. ಈ ಯಾತ್ರೆಯು ಸೆಪ್ಟೆಂಬರ್ 1ರಂದು ಪಟನಾದಲ್ಲಿ ಕೊನೆಯಾಗಲಿದೆ. ಈ ಯಾತ್ರೆಯು ನಳಂದ, ಶೇಖ್‌ಪುರ, ಲಖಿಸರಾಯ್, ಮುಂಗೇರ್, ಭಾಗಲ್ಪುರ, ಕಟಿಹಾರ್, ಪೂರ್ಣಿಯಾ, ಅರಾರಿಯಾ ಮತ್ತು ಸುಪೌಲ್ ಮೂಲಕವೂ ಹಾದು ಹೋಗುತ್ತದೆ.
