ಶಿವಸೇನೆ ಸ್ಥಾಪಕ ಬಾಲಾಸಾಹೇಬ ಠಾಕ್ರೆ ಅವರ ಸಿದ್ಧಾಂತ ತ್ಯಜಿಸಿ ಪಾಪ ಮಾಡಿದವರ ಪಾಪವನ್ನು ತೊಳೆಯಲು ತಾನು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿರುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ತಿರುಗೇಟು ನೀಡಿದ್ದಾರೆ.
ಶಿಂದೆ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನವನ್ನು ಮಾಡಿದ್ದಾರೆ. ಇದನ್ನು ಟೀಕಿಸಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು “ಗಂಗಾ ನದಿಯಲ್ಲಿ ಮುಳುಗಿ ಏಳುವುದರಿಂದ ಮಹಾರಾಷ್ಟ್ರಕ್ಕೆ ದ್ರೋಹ ಬಗೆದ ಪಾಪ ಹೋಗುವುದಿಲ್ಲ” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ ಇಂದು ಶಿವರಾತ್ರಿಯೊಂದಿಗೆ ಮುಕ್ತಾಯ
ಉದ್ಧವ್ ಠಾಕ್ರೆ ಹೇಳಿಕೆಗೆ ಸಂತ ರವಿದಾಸ ಮಹಾರಾಜ ಜಯಂತಿ ತಿರುಗೇಟು ನೀಡಿದ ಶಿಂದೆ, “ಸುಮಾರು 65 ಕೋಟಿ ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದು, ಗಂಗಾ, ಯಮುನ ಮತ್ತು ಸರಸ್ವತಿ ನದಿ ಕೂಡುವ ತ್ರೀವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಯಾಗ್‌ರಾಜ್ ಮತ್ತು ಮಹಾ ಕುಂಭಮೇಳದೊಂದಿಗೆ ಯಾವುದೇ ಸಂಬಂಧವಿಲ್ಲದವರ ಬಗ್ಗೆ ನಾನು ಏನು ಹೇಳುವುದು” ಎಂದು ಠಾಕ್ರೆಯನ್ನು ಕುಟುಕಿದ್ದಾರೆ.
“ನಾನು ನನ್ನ ಪಾಪವನ್ನು ತೊಳೆಯಲು ಕುಂಭಮೇಳಕ್ಕೆ ಹೋದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಆದರೆ ನಾನು ಅಲ್ಲಿಗೆ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆಯಲು ಹೋದೆ. ಹಾಗೆಯೇ ಬಾಲಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ, ಶಿವಸೇನೆ ಮತ್ತು ತಮ್ಮ ಪೂರ್ವಜರ ಪಕ್ಷವನ್ನು ತ್ಯಜಿಸಿದವರ ಪಾಪವನ್ನು ತೊಳೆಯಲು ನಾನು ಮಹಾ ಕುಂಭಮೇಳಕ್ಕೆ ಹೋದೆ” ಎಂದು ತಿಳಿಸಿದ್ದಾರೆ.
“ನಾನು ಅವರ ಪಾಪವನ್ನು ತೊಳೆಯಲು ಅಲ್ಲಿಗೆ ಹೋದೆ. ಆದರೆ ಅವರು ತಮ್ಮ ಪಾಪವನ್ನು ಮುಚ್ಚಿಡಲು ಲಂಡನ್‌ಗೆ ಹೋದರು. ಈಗ ಮಹಾ ಕುಂಭಮೇಳವನ್ನು ಕೂಡಾ ಅಪಮಾನ ಮಾಡುತ್ತಿದ್ದಾರೆ. ಸುತ್ತಲೂ ನಡೆಯುವ ಉತ್ತಮ ಕಾರ್ಯವನ್ನು ನೋಡಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು (ಉದ್ಧವ್ ಠಾಕ್ರೆ) ನಮ್ಮನ್ನು ದ್ರೋಹಿಗಳೆಂದು ಕರೆಯುತ್ತಾರೆ. ಆದರೆ ನೀವು ಶಿವಸೇನೆಯ 60 ಶಾಸಕರಿಗೆ ಮತ ನೀಡಿ ಆಯ್ಕೆ ಮಾಡಿದ ಜನರನ್ನು ನೀವು ಏನು ಕರೆಯುತ್ತೀರಿ” ಎಂದು ಪ್ರಶ್ನಿಸಿದರು.
