ಅಮೆರಿಕದಲ್ಲಿ ಟ್ರಂಪ್, ಭಾರತದಲ್ಲಿ ಮೋದಿ- ಇವರನ್ನು ನಾಯಕರನ್ನಾಗಿ ಪಡೆದ ದೇಶಗಳು- ಆಡಲೂ ಆಗದೆ, ಅನುಭವಿಸಲೂ ಆಗದೆ ಒದ್ದಾಡುತ್ತಿವೆ. ದಿಕ್ಕೆಟ್ಟ ಸ್ಥಿತಿಯತ್ತ ದಾಂಗುಡಿ ಇಡುತ್ತಿವೆ.
ಸೆಪ್ಟೆಂಬರ್ 19, 2025 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ‘ರಿಸ್ಟ್ರಿಕ್ಷನ್ ಆನ್ ಎಂಟ್ರಿ ಆಫ್ ಸರ್ಟನ್ ನಾನ್‌ಇಮಿಗ್ರಂಟ್ ವರ್ಕರ್ಸ್’ ನಿಯಮಕ್ಕೆ ಸಹಿ ಮಾಡಿದರು. ಅದು ಸೆಪ್ಟೆಂಬರ್ 21, 2025 ರಿಂದ ಜಾರಿಗೂ ಬಂದಿದೆ.
ಈ ಹೊಸ ನಿಯಮದ ಪ್ರಕಾರ ಅಮೆರಿಕಾದಲ್ಲಿ, ವಿಶೇಷವಾಗಿ- ಐಟಿ, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ವಿದೇಶಿ ಉದ್ಯೋಗಸ್ಥರು- ಹೊಸ ಎಚ್1ಬಿ ಪೆಟಿಷನ್ ಸಲ್ಲಿಸುವವರು 1 ಲಕ್ಷ ಡಾಲರ್(ಸುಮಾರು 90 ಲಕ್ಷ) ಶುಲ್ಕವನ್ನು ಪಾವತಿಸಬೇಕು. 1 ಲಕ್ಷ ಡಾಲರ್ ನೀಡುವವರಿಗೆ ಮಾತ್ರ ನಾನ್-ಇಮಿಗ್ರಂಟ್ ವೀಸಾ ನೀಡಲಾಗುವುದು ಎಂದು ಹೊಸ ನಿಯಮ ಹೇಳುತ್ತದೆ.
ಈ ಮೊದಲು ಎಚ್1ಬಿ ವೀಸಾಕ್ಕಾಗಿ 18 ಸಾವಿರ ಪಾವತಿಸಬೇಕಿತ್ತು. ಈಗ ಅದನ್ನು 90 ಲಕ್ಷಕ್ಕೆ ಏರಿಸಲಾಗಿದೆ. ಎಚ್1ಬಿ ವೀಸಾ ಶುಲ್ಕ ಹೆಚ್ಚಳದ ಕ್ರಮವು, ಈಗಾಗಲೇ ವೀಸಾ ಹೊಂದಿರುವವರ ಮೇಲೆ ಪರಿಣಾಮ ಬೀರುವುದಿಲ್ಲ. ಹೊಸ ಅರ್ಜಿಗಳಿಗೆ, ಒಂದು ಬಾರಿ ಮಾತ್ರ ಶುಲ್ಕ ಅನ್ವಯಿಸುತ್ತದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆದರೆ ದೂರಗಾಮಿ ಹೊಡೆತಗಳು ಯಾರ ಊಹೆಗೂ ನಿಲುಕದಾಗಿವೆ.
ಅಮೆರಿಕ ಅಧ್ಯಕ್ಷ ಟ್ರಂಪ್ ‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ಎಂದು ಹೇಳಿಕೊಂಡೇ ಅಧಿಕಾರಕ್ಕೆ ಬಂದವರು. ಬಂದನಂತರ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಅದರಲ್ಲೂ ಎಚ್1ಬಿ ವೀಸಾ ಹೊಸ ನಿಯಮ ಜಾರಿಗೊಳಿಸಿದ್ದರಿಂದ, ವಲಸೆ ವಿರೋಧಿಸುವ ಅಮೆರಿಕನ್ನರು ಟ್ರಂಪ್ ನಡೆಯನ್ನು ಸ್ವಾಗತಿಸಿದ್ದಾರೆ. ಅಮೆರಿಕಾದ ನಿರುದ್ಯೋಗಿಗಳಿಗೆ ಕೆಲಸ ಸಿಗುವಂತಾಗಿದೆ.
ಇದಕ್ಕೆ ಪೂರಕವಾಗಿ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮತ್ತು ಭಾರತೀಯ ಮೂಲದ ಕಂಪನಿಗಳು ಎಚ್1ಬಿ ವೀಸಾಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಅಮೆರಿಕನ್ನರು ಹೆಚ್ಚು ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಐಟಿ ಪರಿಣಿತರನ್ನು ತಮ್ಮಲ್ಲಿಗೆ ಕರೆಯಿಸಿಕೊಳ್ಳುವ ಬದಲು, ಅಲ್ಲಿಗೇ ಕೆಲಸವನ್ನು ವರ್ಗಾಯಿಸುವ ಅಥವಾ ಸ್ಥಳೀಯ ನೇಮಕಾತಿ ಹೆಚ್ಚಿಸಿಕೊಳ್ಳುವ ಕ್ರಮಕ್ಕೆ ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಸ್ಥಳೀಯರಲ್ಲಿ ಕೌಶಲ ವೃದ್ಧಿಗಾಗಿ ಅಮೆರಿಕ ಸರ್ಕಾರ ಕೂಡ 1 ಶತಕೋಟಿ ಡಾಲರ್ ಖರ್ಚು ಮಾಡುತ್ತಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಮೂಲದ ವೃತ್ತಿಪರರು ಹೆಚ್ಚಿನ ಪ್ರಮಾಣದ ಎಚ್1ಬಿ ವೀಸಾ ಹೊಂದಿದ್ದಾರೆ. ಇದರ ಪ್ರಮಾಣ ಶೇ. 70ಕ್ಕಿಂತ ಹೆಚ್ಚಾಗಿರುವುದರಿಂದ ಇದನ್ನು ಇಂಡಿಯಾ ಐಟಿ ವೀಸಾ ಎಂದು ಕರೆಯುತ್ತಾರೆ. 2025ರಲ್ಲಿ ಅಮೆಜಾನ್ ಕಂಪೆನಿ 10,044 ಎಚ್1ಬಿ ವೀಸಾ ಪಡೆದಿದೆ. ಟಾಪ್ 10 ಪಟ್ಟಿಯಲ್ಲಿ ಟಿಸಿಎಸ್ 5,505, ಮೈಕ್ರೊಸಾಫ್ಟ್ 5,189, ಮೆಟಾ 5,123, ಆ್ಯಪಲ್ 4,202, ಗೂಗಲ್ 4,181, ಕಾಗ್ನಿಜೆಂಟ್ 2,493, ಜೆಪಿ ಮಾರ್ಗನ್ ಚೇಸ್ 2,440, ವಾಲ್‌ಮಾರ್ಟ್ 2,390 ಮತ್ತು ಡೆಲಾಯ್ಟ್ ಕನ್ಸಲ್ಟಿಂಗ್ 2,353 ಅಗ್ರಸ್ಥಾನದಲ್ಲಿವೆ. ಟಾಪ್ 20ರ ಪಟ್ಟಿಯಲ್ಲಿ ಇನ್ಫೊಸಿಸ್ 2004, ಎಲ್‌ಟಿಐಮೈಂಡ್‌ಟ್ರೀ 1870 ಮತ್ತು ಎಚ್‌ಸಿಎಲ್ 1728 ವೀಸಾಗಳನ್ನು ಹೊಂದಿವೆ. ಆದರೆ ಈಗ ಟ್ರಂಪ್ ವಿಧಿಸಿರುವ ಶುಲ್ಕ 90 ಲಕ್ಷವನ್ನು ಕಟ್ಟುವಷ್ಟು ಸಾಮರ್ಥ್ಯವಿರುವವರು ಕೇವಲ 10% ಮಾತ್ರ. ಮಿಕ್ಕವರು ಅಲ್ಲಿಗಲ್ಲಿಗೆ ಸರಿಹೋಗುವ ಸಂಬಳದವರು.
ಅಮೆರಿಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುತ್ತಿರುವುದರಿಂದ ಮತ್ತು ಸ್ಥಳೀಯವಾಗಿ ನೇಮಕಾತಿ ಪ್ರಕ್ರಿಯೆಗೆ ಒಲವು ತೋರಿದ ಪರಿಣಾಮ ಶೇ 20ರಷ್ಟು ಉದ್ಯೋಗಿಗಳು ಸದ್ಯ ಆನ್‌ಸೈಟ್‌ನಲ್ಲಿ ಉದ್ಯೋಗ ಪಡೆದಿದ್ದಾರೆ. ದತ್ತಾಂಶಗಳ ಪ್ರಕಾರ, 2015ರಲ್ಲಿ 14,792 ಇದ್ದ ಎಚ್1ಬಿ ವೀಸಾ 2024ರಲ್ಲಿ 10,162ಕ್ಕೆ ಕುಸಿದಿದೆ.
ಅಧ್ಯಕ್ಷ ಟ್ರಂಪ್ ಅವರ ಈ ಹೊಸ ನಿಯಮದಿಂದ ಅತಿ ಹೆಚ್ಚು ಆಘಾತಕ್ಕೊಳಗಾಗಿರುವವರು ಭಾರತೀಯ ಐಟಿ(ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಡೇಟಾ ಸೈಂಟಿಸ್ಟ್‌ಗಳು) ವೃತ್ತಿಪರರು. ಅಮೆರಿಕಾದ ಟೆಕ್ ಕಂಪನಿಗಳಾದ ಗೂಗಲ್, ಅಮೆಜಾನ್, ಮೈಕ್ರೋಸಾಫ್ಟ್‌ಗಳಲ್ಲಿ ಭಾರತೀಯರು ಉತ್ತಮ ವೇತನದ ಉನ್ನತ ಉದ್ಯೋಗಗಳನ್ನು ಗಿಟ್ಟಿಸಿದ್ದರು. ಇದರಿಂದಾಗಿ ಪ್ರತಿವರ್ಷ ಭಾರತಕ್ಕೆ ವಿದೇಶಿ ವಿನಿಮಯ ದೊಡ್ಡಮಟ್ಟದಲ್ಲಿ ಹರಿದು ಬರುತ್ತಿತ್ತು. ಒಂದು ಅಂದಾಜಿನ ಪ್ರಕಾರ, 2023ರಲ್ಲಿ ಭಾರತಕ್ಕೆ 100 ಬಿಲಿಯನ್ ಡಾಲರ್‍ಗಿಂತ ಹೆಚ್ಚು ಹಣ ಐಟಿ ವೃತ್ತಿಪರರಿಂದ ಹರಿದು ಬಂದಿದೆ ಎನ್ನುವ ಅಂದಾಜಿದೆ.
ಅಷ್ಟೇ ಅಲ್ಲ, ಭಾರತೀಯ ಕೆಲಸಗಾರರು ಅಮೆರಿಕಾದ ಹೆಸರಾಂತ ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಜಾಗತಿಕ ಮಟ್ಟದ ಕೌಶಲ್ಯ(ಎಐ, ಕ್ಲೌಡ್ ಕಂಪ್ಯೂಟಿಂಗ್)ಗಳನ್ನು ಕಲಿಯುತ್ತಿದ್ದರು. ಉನ್ನತ ಮಟ್ಟದ ತಂತ್ರಜ್ಞರಾಗಿ ಹೊರಹೊಮ್ಮುತ್ತಿದ್ದರು. ಅವರು ಭಾರತಕ್ಕೆ ಮರಳಿದಾಗ, ತಾವು ಗಳಿಸಿದ ಕೌಶಲ್ಯವನ್ನು ಭಾರತದ ಟೆಕ್ ಇಂಡಸ್ಟ್ರಿಗೆ ಕೊಡುಗೆಯಾಗಿ ನೀಡುತ್ತಿದ್ದರು. ತಮ್ಮದೇ ಆದ ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸುತ್ತಿದ್ದರು. ಜಾಗತಿಕ ಸಂಪರ್ಕ ಬಳಸಿ ದೇಶ-ವಿದೇಶಗಳ ಕಂಪನಿಗಳಿಂದ ವ್ಯವಹಾರ ಕುದುರಿಸುತ್ತಿದ್ದರು. ಈಗ ಬದಲಾದ ನಿಯಮದಿಂದಾಗಿ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. ಭಾರತೀಯ ಐಟಿ ಪರಿಣಿತರು ಕೆನಡಾ, ಯುಕೆ, ಆಸ್ಟ್ರೇಲಿಯಾ ಮತ್ತು ಚೀನಾದತ್ತ ನೋಡುವಂತಾಗಿದೆ.
ಇದನ್ನು ಮತ್ತೊಂದು ಬಗೆಯಲ್ಲಿ ನೋಡುವುದಾದರೆ, ಅಮೆರಿಕದ ಎಚ್1ಬಿ ವೀಸಾ ಮೇಲಿದ್ದ ಐಟಿ ಪರಿಣತರು, ಬಹುಪಾಲು ಮೋದಿ ಭಕ್ತರಾಗಿದ್ದರು. ಈಗ ಅವರ ಬದುಕಿಗೆ ನೇರ ಹೊಡೆತ ಬಿದ್ದಿದೆ. ಅವರು ಅಲ್ಲಿ ಉಳಿಯುವಂತೆಯೂ ಇಲ್ಲ, ಇಲ್ಲಿಗೆ ಬರಲೂ ಆಗುತ್ತಿಲ್ಲ. ಏಕೆಂದರೆ, ಅವರೆಲ್ಲ ಮೋದಿಯನ್ನು ಮೆಚ್ಚಿಕೊಂಡಿದ್ದು ಭ್ರಷ್ಟಾಚಾರವಿಲ್ಲದ, ವಂಶ ಪಾರಂಪರ್ಯ ಆಡಳಿತವಿಲ್ಲದ ಮೋದಿಯನ್ನು. ಆದರೆ, ಈಗ ಭಾರತದಲ್ಲಿ ಅಡಿಗಡಿಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಲ್ಲದೆ, ಅಮಿತ್ ಶಾ, ಗಡ್ಕರಿ, ರಾಜನಾಥ್ ಸಿಂಗ್ ಮಕ್ಕಳು ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಕ್ರೋನಿ ಕ್ಯಾಪಿಟಲಿಸ್ಟ್‌ಗಳಾದ ಅದಾನಿ-ಅಂಬಾನಿಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಅಮೆರಿಕದಲ್ಲಿರುವ ಮೋದಿ ಭಕ್ತರು ಇಲ್ಲಿಗೆ ಬರುವುದುಂಟೇ?

ಇನ್ನು ಅಮೆರಿಕದಲ್ಲಿ, ಯಾವುದೇ ಸರ್ಕಾರವಾದರೂ ಹೊಸ ನಿಯಮ ಜಾರಿಗೆ ಬಂದಾಗ ಸಾಮಾಜಿಕ ತಲ್ಲಣ, ಆರ್ಥಿಕ ಪಲ್ಲಟಗಳಾಗುವುದು ಸಹಜ. ಈ ಮೊದಲು ಬೇರೆ ಬೇರೆ ದೇಶಗಳ ಪರಿಣಿತರು ಅಮೆರಿಕದಲ್ಲಿ ಕೆಲಸ ಗಿಟ್ಟಿಸಿದ್ದರಿಂದ, ಅವರಿಂದ ಇವರಿಗೆ, ಇವರಿಂದ ಅವರಿಗೆ ಅನುಕೂಲವಿತ್ತು. ಅದು ಅಭಿವೃದ್ಧಿಗೆ, ಆರ್ಥಿಕ ಚಲನೆಗೆ ಸಹಕಾರಿಯಾಗಿತ್ತು. ಹಾಗೆಯೇ ಅಮೆರಿಕದ ಬಿಳಿಯರು ಕಂಫರ್ಟ್ ಝೋನ್‌ನಲ್ಲಿದ್ದು ಆರಾಮಖೋರ ಜೀವನ ನಡೆಸುತ್ತಿದ್ದರು. ವಿದೇಶಿ ಪರಿಣತರು, ತಂತ್ರಜ್ಞರು, ವ್ಯಾಪಾರಸ್ಥರು, ಉದ್ದಿಮೆದಾರರು ನಿಧಾನವಾಗಿ ಎಲ್ಲ ಕ್ಷೇತ್ರಗಳನ್ನು ಆಕ್ರಮಿಸಿಕೊಂಡಂತೆಲ್ಲ, ಐಟಿ ಚೀಫ್‌ನಿಂದ ಹಿಡಿದು ಡ್ರೈವರ್‍ವರೆಗೆ ಎಲ್ಲರೂ ವಲಸಿಗರೇ ಆಗಿದ್ದರು. ಅದು ಸಹಜವಾಗಿಯೇ ಅಮೆರಿಕನ್ನರನ್ನು ನಿರುದ್ಯೋಗಿಗಳನ್ನಾಗಿಸಿತ್ತು.
ಸದ್ಯದ ಅಮೆರಿಕಾ ಸ್ಥಿತಿ ಕೂಡ ಉತ್ತಮವಾಗಿಲ್ಲ. ಡಾಲರ್ ಕುಸಿತ ಕಾಣುತ್ತಿದೆ. ಜಾಗತಿಕ ದೊಡ್ಡಣ್ಣನ ಸ್ಥಾನ ಅಲುಗಾಡತೊಡಗಿದೆ. ಬೇರೆ ದೇಶದ ತಂತ್ರಜ್ಞರು, ವೈದ್ಯರು, ಐಟಿ ಪರಿಣತರ ಮೇಲೆ ಅವಲಂಬಿತವಾಗಿರುವ ಅಮೆರಿಕ, ವಲಸೆಯಿಂದಾಗಿ ಹಲವು ಕ್ಷೇತ್ರಗಳಲ್ಲಿ ಉತ್ಪಾದನಾ ಕೊರತೆ ಎದುರಿಸುತ್ತಿದೆ. ಎಚ್–1ಬಿ ವೀಸಾ ಶುಲ್ಕ ಹೆಚ್ಚಳದ ನಿರ್ಧಾರದ ಪರಿಣಾಮವಾಗಿ ದೇಶದ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರು ಮೌಲ್ಯ ಇಳಿದಿದೆ. ಆರ್ಥಿಕತೆ ಏರುಪೇರಾಗಿದೆ. ರಿಸಷನ್ ಎದುರಾಗುವ ಸಂಭವವಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.
ಜೊತೆಗೆ, ಅಮೆರಿಕದಲ್ಲಿ ವಲಸಿಗರ ಅಟಾಟೋಪವೂ ಅತಿಯಾಗಿದೆ. ಅದರಲ್ಲೂ ಭಾರತೀಯರ ಸಾರ್ವಜನಿಕ ಸಭ್ಯತೆ ಪ್ರಶ್ನಾರ್ಹವಾಗಿದೆ. ಭಾರತೀಯರ ಡಬಲ್ ಸ್ಟ್ಯಾಂಡರ್ಡ್- ಅಮೆರಿಕದ ಎಡಪಂಥೀಯರು ಮತ್ತು ಬಲಪಂಥೀಯರು- ಇಬ್ಬರಿಗೂ ರೇಜಿಗೆ ಹಿಡಿಸಿದೆ. ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುವ, ಶ್ರೇಷ್ಠ ಎನ್ನುವ ಹುಚ್ಚಾಟವೂ ಅತಿಯಾಗಿದೆ.
ಟೈಂ ಸ್ಕ್ವೇರ್‍ನಲ್ಲಿ ಟ್ರಾಫಿಕ್ ಬಂದ್ ಮಾಡಿ ಸಾವಿರಾರು ಈಡುಗಾಯಿ ಹೊಡೆಯುವುದು; ದೇವರ ಮೆರವಣಿಗೆಯಲ್ಲಿ ಸದ್ದುಗದ್ದಲ ಮಾಡುವುದು; ಧರ್ಮದ ಆಚರಣೆಗಳಿಂದ ಸ್ಥಳೀಯರ ಶಾಂತಿಗೆ ಭಂಗ ತರುವುದು; ಮೋದಿ ಬಂದಾಗ, ಭಾರತದಲ್ಲಿ ಆಡಿದಂತೆಯೇ ಸೈಕೋಫ್ಯಾಂಟ್‌ಗಳ ರೀತಿ ಆಡುವುದು; ಅಲ್ಲಿನ ಕಾಯ್ದೆ-ಕಾನೂನುಗಳನ್ನು ಪಾಲಿಸದೆ ಉಲ್ಲಂಘಿಸುವುದು; ಎಲ್ಲೆಂದರಲ್ಲಿ ಕಸ ಬಿಸಾಡುವುದು- ಎಲ್ಲವೂ ಅಮೆರಿಕನ್ನರಿಗೆ ಅತಿ ಅನ್ನಿಸಿದೆ.
ಒಂದು ಕಡೆ ಕೆಲಸ ಕಿತ್ತುಕೊಂಡಿದ್ದಾರೆ, ಮತ್ತೊಂದು ಕಡೆ ಸಂಯಮ, ಸಭ್ಯತೆಯ ಎಲ್ಲೆ ಮೀರಿದ್ದಾರೆ. ಈ ಎಲ್ಲ ಕಾರಣದಿಂದ ವಲಸಿಗರನ್ನು ಹೊರಹಾಕದೆ ಬಿಡುವುದಿಲ್ಲ ಎಂದಿದ್ದ ಅಧ್ಯಕ್ಷ ಟ್ರಂಪ್, ಎಚ್1ಬಿ ವೀಸಾ ಶುಲ್ಕವನ್ನು ಊಹಿಸಲು ಆಗದಷ್ಟು ಏರಿಸಿ, ವಲಸೆಗೆ ತಡೆಯೊಡ್ಡಿದ್ದಾರೆ. ಭಾರತದಿಂದ ಬರುವ ಸರಕುಗಳಿಗೆ ಅತಿಯಾದ ಸುಂಕ ವಿಧಿಸುವ ಮೂಲಕ, ಕೃತಕ ಅಭಾವ ಸೃಷ್ಟಿಸಿದ್ದಾರೆ. ಇದರಿಂದ ಭಾರತೀಯ ಸರಕುಗಳನ್ನು ಅವಲಂಬಿಸಿದ್ದ ಹೋಟೆಲ್, ಮಾಲ್‌ಗಳ ವ್ಯಾಪಾರ ದಿಢೀರ್ ಕುಸಿತ ಕಂಡಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಇಳಿಕೆಯಾಗಿದೆ.
ಇದನ್ನು ಓದಿದ್ದೀರಾ?: ದಿನೇಶ್ ಅಮೀನ್ ಮಟ್ಟು ಅವರಿಗೆ ಪರಿಷತ್ ಸ್ಥಾನ ಕೈತಪ್ಪಿದ್ದು ಹೇಗೆ?
ಈ ಬದಲಾದ ಸನ್ನಿವೇಶದಿಂದಾಗಿ, ವಲಸಿಗರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಅವರನ್ನು ಅವಲಂಬಿಸಿದ್ದ ಸ್ಥಳೀಯ ಉದ್ಯೋಗದಾತರಿಗೆ ಈಗ ಕಷ್ಟ ಎದುರಾಗಿದೆ. ಮನೆ ಕೆಲಸದವರಿಂದ ಹಿಡಿದು ಗಾರ್ಡನರ್‍ವರೆಗೆ, ಸಣ್ಣಪುಟ್ಟ ಕೌಶಲ್ಯಾಧಾರಿತ ಕೆಲಸಗಾರರಿಲ್ಲದೆ, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲಾಗದೆ, ಹೊಸ ಬದುಕಿಗೆ ಒಗ್ಗಿಕೊಳ್ಳಲಾಗದೆ ಒದ್ದಾಟದಲ್ಲಿದ್ದಾರೆ. ಅದರಲ್ಲೂ ಕೃಷಿ ಮತ್ತು ಮಾಂಸೋದ್ಯಮ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಅಮೆರಿಕನ್ನರ ಬದುಕು ಕೂಡ ಅತಂತ್ರವಾಗಿದೆ.
ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ್ದು ಏನೆಂದರೆ, ಅಮೆರಿಕದ ಬುದ್ಧಿವಂತರು ಟ್ರಂಪ್ ಎಂಬ ತಿಕ್ಕಲು ಆಸಾಯಿಯನ್ನು ಆಯ್ಕೆ ಮಾಡಿಕೊಂಡಿರುವುದು. ಆತ ರಾಜಕಾರಣಿಯಲ್ಲ, ರಾಜತಾಂತ್ರಿಕತೆಯ ಅರಿವಿಲ್ಲ. ಆತ ಅಪ್ಪಟ ವ್ಯಾಪಾರಿ. ರಿಯಲ್ ಎಸ್ಟೇಟ್ ಉದ್ಯಮಿ. ಆತ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಏಕೈಕ ಕಾರಣದಿಂದಾಗಿ ಆತನ ಅಧ್ವಾನದ ಆಡಳಿತವನ್ನು ಅಮೆರಿಕನ್ನರು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿದೆ. ಕಷ್ಟವಾದರೂ ಸಮರ್ಥಿಸಿಕೊಳ್ಳಬೇಕಾಗಿದೆ.

ಹಾಗೆಯೇ ಭಾರತದ ಪ್ರಧಾನಿ ಮೋದಿಯವರು ಕೂಡ. ಟ್ರಂಪ್ ನನ್ನ ಸ್ನೇಹಿತ ಎಂದು ಹೇಳಿಕೊಂಡಂತೆಲ್ಲ ಆತ ಸುಂಕ, ಶುಲ್ಕ ಏರಿಸುತ್ತ ಭಾರತೀಯರಿಗೆ ಹೊಡೆತ ನೀಡುತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ. ಪಾಕಿಸ್ತಾನ-ಭಾರತ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳುತ್ತಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹಿಟ್ಲರ್ ರೀತಿ ಆಜ್ಞೆ ಮಾಡುತ್ತಿದ್ದಾರೆ. ಮೋದಿಯ ಭಕ್ತರಂತಿದ್ದ ಐಟಿ ಪರಿಣಿತರ ವೀಸಾ ಶುಲ್ಕ ಏರಿಸಿದ್ದಾರೆ. ಅಮೆರಿಕದ ದುಷ್ಟತನವನ್ನು ಬಹಿರಂಗವಾಗಿ ಟೀಕಿಸಲೂ ಆಗದೆ, ಒಪ್ಪಿಕೊಳ್ಳಲೂ ಆಗದೆ ಒದ್ದಾಡುತ್ತಿರುವ ಮೋದಿ, ಪರ್ಯಾಯ ಕಾಣದೆ ಪರದಾಡುತ್ತಿದ್ದಾರೆ. ಮಾತಿನಲ್ಲಿ ‘ಮೇಕ್ ಇನ್ ಇಂಡಿಯಾ’ ಎನ್ನುತ್ತಿದ್ದಾರೆ. ಆದರೆ ಅಡಿಯಿಂದ ಮುಡಿಯವರೆಗೆ ವಿದೇಶಿ ವಸ್ತುಗಳ ವ್ಯಾಮೋಹಕ್ಕೆ ಒಳಗಾಗಿದ್ದಾರೆ.
ಒಟ್ಟಿನಲ್ಲಿ ಅಲ್ಲಿ ಟ್ರಂಪ್, ಇಲ್ಲಿ ಮೋದಿ- ಇವರನ್ನು ನಾಯಕರನ್ನಾಗಿ ಪಡೆದ ದೇಶಗಳು- ಆಡಲೂ ಆಗದೆ, ಅನುಭವಿಸಲೂ ಆಗದೆ ಒದ್ದಾಡುತ್ತಿವೆ. ದಿಕ್ಕೆಟ್ಟ ಸ್ಥಿತಿಯತ್ತ ದಾಂಗುಡಿ ಇಡುತ್ತಿವೆ.

ಲೇಖಕ, ಪತ್ರಕರ್ತ