ಬಿ ಆರ್ ಪಾಟೀಲ್ ಅವರು ಮಾಡಿರುವುದು ಗಂಭೀರ ಆರೋಪವಲ್ಲ. ಅವರು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ, ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್ ಕೆ ಪಾಟೀಲ್ ಅವರು ಗಣಿ ಅಕ್ರಮದ ಪತ್ರ ಬರೆದಿದ್ದಾರೆ. ಗಣಿ ಅಕ್ರಮದಲ್ಲಿ 1.5 ಲಕ್ಷ ಕೋಟಿ ರೂ. ದುರುಪಯೋಗವಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಲೂಟಿ ಮಾಡಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಲಹೆ ನೀಡಿ ಈ ಪತ್ರ ಬರೆದಿದ್ದಾರೆ. ನಾವು ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಹೇಳಿದ್ದೇವೆ, ನಾನು ಎಂದಿಗೂ ಯಾರ ಮೇಲೂ ಉತ್ತಡ ಹೇರಿಲ್ಲ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಹೊರಟಿದ್ದೇವೆ. ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಮತ್ತು ಆನೆಗೊಂದಿ ಭಾಗದಲ್ಲಿ ಅವಶ್ಯಕತೆ ಇದ್ದರೆ, ಪೊಲೀಸ್ ಠಾಣೆ ಸ್ಥಾಪಿಸುತ್ತೇವೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿ.ಆರ್ ಪಾಟೀಲ್ ಆರೋಪಗಳೂ, ಸರ್ಕಾರದ ನೈತಿಕತೆಯೂ
ನಾವು ರಾಜ್ಯದಲ್ಲಿ ಎರಡು ವರ್ಷದಿಂದ ಜನಪರ ಕೆಲಸ ಮಾಡುತ್ತಿದ್ದೇವೆ. ಕೊಟ್ಟ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ಲಕ್ಷ ಕೋಟಿ ರೂ. ಖರ್ಚು ಮಾಡಿದ್ದೇವೆ. ಆದರೆ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿಲ್ಲ, ಸಬ್ ಇನ್ಸ್‌ಪೆಕ್ಟರ್ ಹಗರಣದ ನಂತರ ನೇಮಕಾತಿಯಾಗಿಲ್ಲ, ರಾಜ್ಯದಲ್ಲಿ ಸಾವಿರಾರು ಪಿಎಸ್ಐಗಳ ಸ್ಥಾನಗಳು ಖಾಲಿಯಾಗಿವೆ. ಶೀಘ್ರ ನೇಮಕ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಭೋಸರಾಜು, ಸಂಸದ ರಾಜಶೇಖರ್ ಹಿಟ್ನಾಳ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ್ ಹಿಟ್ನಾಳ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೃಷ್ಣ ಇಟ್ಟಂಗಿ ಮತ್ತು ನಗರ ಸಭೆ ಸ್ಥಾಯಿ ಸಮಿತಿ ಸದಸ್ಯ ಅಕ್ಬರ್ ಪಾಷ ಪಲ್ಟನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.