ಏನಿದು ಮುಡಾ – ವಾಲ್ಮೀಕಿ ನಿಗಮ ಅಕ್ರಮ; ಈ ಹಿಂದೆ ಯಾವೆಲ್ಲಾ ಹಗರಣಗಳು ನಡೆದಿವೆ?

Date:

Advertisements

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಸದ್ದು ಮಾಡುತ್ತಿವೆ. ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ನಿಗಮದಲ್ಲಿನ ಅಕ್ರಮ ಬೆಳಕಿಗೆ ಬಂದಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಅವರನ್ನು ಇಡಿ ಬಂಧಿಸಿದೆ.

ಇನ್ನು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ (ಮುಡಾ) ಅಕ್ರಮ ನಡೆದಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ತಳಕು ಹಾಕಿಕೊಂಡಿದೆ. ಈ ಎರಡೂ ಅಕ್ರಮಗಳನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್‌ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಗದ್ದಲ ಸೃಷ್ಟಿಸಿವೆ. ಸದನಕ್ಕೆ ಅಡ್ಡಿಯುಂಟುಮಾಡಿವೆ. ಅಹೋರಾತ್ರಿ ಧರಣಿ ನಡೆಸಿವೆ. ಬಿಜೆಪಿ-ಜೆಡಿಎಸ್‌ ವಿರುದ್ಧ ಪ್ರತ್ಯಾರೋಪ ಮಾಡುತ್ತಿರುವ ಕಾಂಗ್ರೆಸ್‌ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಹಾಗಾದರೆ, ಕಳೆದ ಹಲವು ವರ್ಷಗಳಲ್ಲಿ ರಾಜ್ಯದಲ್ಲಿ ಯಾವೆಲ್ಲ ಅಕ್ರಮಗಳು ನಡೆದಿವೆ. ಏನೆಲ್ಲಾ ಆಗಿದೆ, ನೋಡೋಣ…

ಏನಿದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ?

Advertisements

ನಿಗಮದ ಮುಖ್ಯ ಖಾತೆಯಲ್ಲಿ 2023-24 ಮತ್ತು 2024-25ನೇ ಆರ್ಥಿಕ ವರ್ಷದಲ್ಲಿ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ರೂ. ಮೊತ್ತದಲ್ಲಿ 88 ಕೋಟಿ ರೂ. ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ತರದೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಅಕ್ರಮದಲ್ಲಿ ನಿಗಮದ ಎಂಡಿ ಜೆ.ಜಿ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣನವರ್, ಯೂನಿಯನ್ ಬ್ಯಾಂಕ್‌ ಮ್ಯಾನೇಜರ್ ಶುಚಿಸ್ಮಿತಾ ರವುಲ್ ಪಾತ್ರವಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆರೋಪಿಸಿದ್ದಾರೆ. ಜೊತೆಗೆ, ಆ ಹಣವನ್ನು ಲೋಕಸಭಾ ಚುನಾವಣೆ ವೇಳೆ ಮದ್ಯ ಖರೀದಿಗಾಗಿ ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ. ಅಕ್ರಮದಲ್ಲಿ ಕಾಂಗ್ರೆಸ್‌ ಶಾಸಕ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಪಾತ್ರವೂ ಇರುವುದಾಗಿ ಆರೋಪಿಸಲಾಗಿದ್ದು, ಅವರನ್ನೂ ಇಡಿ ವಶಕ್ಕೆ ಪಡೆದಿದೆ.

ಇಡಿ ತನಿಖೆಯ ಪ್ರಕಾರ, ಮೇ 29ರಂದು 94,73,08,500 ರೂ.ಗಳನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ ರಾಜಶೇಖರ್ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣದ 18 ನಕಲಿ ಖಾತೆಗಳಿಗೆ ವರ್ಗಾಯಿಸಿದ್ದಾರೆ.

”ಲೋಕಸಭಾ ಚುನಾವಣೆಗೂ (ಏಪ್ರಿಲ್‌-ಮೇ) ಮುನ್ನ ಗಣನೀಯ ಪ್ರಮಾಣದ ಮದ್ಯವನ್ನು ಸಂಗ್ರಹಿಸಲು ನಿಗಮದ ಹಣವನ್ನು ಬಳಸಲಾಗಿದೆ. ಹೆಚ್ಚುವರಿಯಾಗಿ, ಹಗರಣದಿಂದ ಬಂದ ಆದಾಯವನ್ನು ಬಳಸಿಕೊಂಡು ಲ್ಯಾಂಬೋರ್ಗಿನಿ ಸೇರಿದಂತೆ ಉನ್ನತಮಟ್ಟದ ವಾಹನಗಳನ್ನು ಖರೀದಿಸಲಾಗಿದೆ” ಎಂದು ಇಡಿ ಹೇಳಿದೆ.

ನಾಗೇಂದ್ರ ಮತ್ತು ದದ್ದಲ್ ಅವರ ನಿವಾಸಗಳು, ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ, ಲೋಕಸಭಾ ಚುನಾವಣೆ ಸಮಯದಲ್ಲಿ ನಿಗಮದ ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮತ್ತು ನಿರ್ವಹಣೆಗೆ ಸಂಬಂಧಿಸಿ ಆರೋಪಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ದದ್ದಲ್ ಅವರ ನಿವಾಸದಲ್ಲಿ ಅಕ್ರಮ ನಿಧಿಯ ನಿರ್ವಹಣೆಗೆ ಸಂಬಂಧಿಸಿದ ಕೆಲವು ‘ದೋಷಪೂರಿತ’ ಪುರಾವೆಗಳು ಪತ್ತೆಯಾಗಿವೆ.

ಆರಂಭದಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಹೆಚ್ಚಿನ ಒತ್ತಡದಿಂದಾಗಿ ನಾಗೇಂದ್ರ ಅವರು ಮೇ 29ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ, ಪ್ರಕರಣದ ತನಿಖೆಗೆ ಕಾಂಗ್ರೆಸ್ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಎಸ್‌ಐಟಿ ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಿದೆ.

ಇನ್ನು, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕಲ್ಲೇಶ್ ಬಿ ಅವರು ಇಡಿ ವಿರುದ್ಧವೇ ಆರೋಪ ಮಾಡಿದ್ದು, ”ಎಂ.ಜಿ.ರೋಡ್ ಬ್ಯಾಂಕ್​ ಖಾತೆಗೆ ಅನುದಾನ ಜಮಾ ಮಾಡಲು ನಾಗೇಂದ್ರ, ಎಫ್​ಡಿ ಇಲಾಖೆಯಿಂದ ಸೂಚನೆ ಇತ್ತೆಂದು ಒಪ್ಪಿಕೊಳ್ಳಬೇಕು. ಮುಖ್ಯಮಂತ್ರಿ ಮತ್ತು ನಾಗೇಂದ್ರ ನಿರ್ದೇಶನದಂತೆ ಖಾತೆಗೆ ಹಣವನ್ನು ವರ್ಗಾಯಿಸಿದ್ದೇನೆಂದು ಬರೆದುಕೊಡಬೇಕೆಂದು ಇಡಿ ಅಧಿಕಾರಿಗಳು ಒತ್ತಡ ಹೇರಿದ್ದರು” ಎಂದು ದೂರು ನೀಡಿದ್ದಾರೆ. ಇಡಿ ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದೆ.

ಏನಿದು ಮುಡಾ ಹಗರಣ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಹಂಚಿಕೆಯಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಂಚಿಕೆಯಲ್ಲಿ ತಮ್ಮ ಪತ್ನಿಗೆ ನಿಯಮಬಾಹಿರವಾಗಿ ನಿವೇಶನ ಕೊಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ಆರೋಪಿಸಲಾಗಿದೆ. ಮುಡಾದಲ್ಲಿ 5,000 ಕೋಟಿ ರೂ.ಗೂ ಹೆಚ್ಚು ಹಗರಣ ನಡೆದಿದೆ ಎಂದು ಬಿಜೆಪಿ-ಜೆಡಿಎಸ್‌ ಆರೋಪಿಸಿವೆ.

50:50 ಪ್ರೋತ್ಸಾಹ ಧನ ಯೋಜನೆಯಡಿ ಬಡಾವಣೆಗಳ ಅಭಿವೃದ್ಧಿಗೆ ಮುಡಾ ಮುಂದಾಗಿತ್ತು. ಯೋಜನೆಯಡಿ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರಿಗೆ 50% ನಿವೇಶನ ಅಥವಾ ಪರ್ಯಾಯ ನಿವೇಶನಗಳನ್ನು ನೀಡುವುದು ಮುಡಾದ ಉದ್ದೇಶವಾಗಿತ್ತು.

ಆದರೆ, ಪರಿಹಾರವಾಗಿ ನಿವೇಶನ ಹಂಚಿಕೆ ವೇಳೆ, ಯೋಜನೆಗಾಗಿ ಭೂಮಿ ನೀಡಿದವರಿಗೆ, ಅರ್ಹತೆಗಿಂತ ಹೆಚ್ಚಿನ ಮೊತ್ತದ ಪರ್ಯಾಯ ನಿವೇಶನಗಳನ್ನು ನೀಡಲಾಗಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮೈಸೂರಿನ ಕೆಸರೆ ಗ್ರಾಮದಲ್ಲಿ 3 ಎಕರೆ ಜಮೀನು ಹೊಂದಿದ್ದರು. ಈ ಭೂಮಿಯನ್ನು ಮುಡಾ ಸ್ವಾಧೀನಕ್ಕೆ ಪಡೆದಿತ್ತು. ಅದಕ್ಕೆ ಪರಿಹಾರವಾಗಿ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಆ ನಿವೇಶನಗಳ ಮೌಲ್ಯವು ಪಾರ್ವತಿ ಅವರಿಂದ ಸ್ವಾಧೀನಕ್ಕೆ ಪಡೆದ ಭೂಮಿಯ ಮೌಲ್ಯಕ್ಕಿಂತ ಅಧಿಕವಾಗಿದೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ತಮ್ಮ ಭೂಮಿಯನ್ನು ಮುಡಾಗೆ ನೀಡಿ, ಪರ್ಯಾಯ ನಿವೇಶನಗಳನ್ನು ಪಡೆದವರು ಹೆಚ್ಚಿನ ಮೌಲ್ಯದ ನಿವೇಶನಗಳನ್ನು ಪಡೆದಿದ್ದಾರೆ. ಫಲಾನುಭವಿಗಳು ನೀಡಿದ ಭೂಮಿಯ ಮೌಲ್ಯಕ್ಕೆ ಹೋಲಿಸಿದರೆ, ಅವರು ಪರಿಹಾರವಾಗಿ ಪಡೆದಿರುವ ನಿವೇಶನಗಳ ಮೌಲ್ಯವು ಅಧಿಕವಾಗಿವೆ ಎಂದ ಆರೋಪಿಸಲಾಗಿದೆ. ಇದು ಭೂಸ್ವಾಧೀನ ಮತ್ತು ಪರಿಹಾರದ ನಿಮಯಗಳನ್ನು ಉಲ್ಲಂಘಿಸಿದೆ ಎನ್ನಲಾಗಿದೆ.

ಇದಲ್ಲದೆ, ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸುವವರೆಗೆ 50:50 ಯೋಜನೆಯಡಿ ಎಲ್ಲ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದನ್ನು ರದ್ದುಗೊಳಿಸುವಂತೆ ಆರು ತಿಂಗಳ ಹಿಂದೆಯೇ ಸರ್ಕಾರ ಆದೇಶ ನೀಡಿತ್ತು. ಆದಾಗ್ಯೂ, ನಿವೇಶನಗಳ ಹಂಚಿಕೆ ಮುಂದುವರೆದಿದೆ ಎಂದು ವರದಿಯಾಗಿದೆ.

ಸರ್ಕಾರಿ ಆದೇಶದಲ್ಲಿ, ”ಇತ್ತೀಚೆಗಷ್ಟೇ ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ, ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗಿದೆ. ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವ ಬದಲು ಪ್ರಭಾವಿ ವ್ಯಕ್ತಿಗಳಿಗೆ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್‌ಗಳಿಗೆ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ದೂರುಗಳು ಬಂದಿವೆ” ಎಂದು ತಿಳಿಸಲಾಗಿತ್ತು.

ಮುಡಾದಿಂದ ಪರಿಹಾರ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಒಂಬತ್ತು ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು ದೂರು ದಾಖಲಿಸಿದ್ದರು. ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಅವರ ಸೋದರ ಮಾವ ಮಲಿಕಾರ್ಜುನ ಸ್ವಾಮಿ, ದೇವರಾಜ್ ಹಾಗೂ ಅವರ ಕುಟುಂಬದವರು ಅಕ್ರಮ ನಡೆಸಿದ್ದಾರೆ ಎಂದು ಸ್ನೇಹಮಯಿ ಆರೋಪಿಸಿದ್ದರು. ಅವರ ದೂರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ, ಸದನದಲ್ಲಿ ಧರಣಿ ನಡೆಸುತ್ತಿದೆ. ಅಕ್ರಮ ಕುರಿತು ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದೆ.

ಆರೋಪವನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿಯಿಂದ ವಶಪಡಿಸಿಕೊಳ್ಳಲಾದ ಭೂಮಿಯ ಮೌಲ್ಯ 62 ಕೋಟಿ ರೂ. ಆಗಿದ್ದು, ಆ ಹಣವನ್ನು ಕೊಟ್ಟುಬಿಡಿ, ನಾವು ನಿವೇಶನವನ್ನು ಮುಡಾಗೆ ಹಿಂದಿರುಗಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ಮತ್ತೊಂದೆಡೆ, ಹಿಂದುಳಿದ ವರ್ಗದ ನಾಯಕ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೆ, ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಹೆಣೆಯಲಾಗುತ್ತಿದೆ ಎಂದು ಅಹಿಂದ ನಾಯಕರು ದೂರುತ್ತಿದ್ದಾರೆ.

ಅಂದಹಾಗೆ, ನಿಗಮ, ಪ್ರಾಧಿಕಾರಗಳಲ್ಲಿ ನಡೆಯುವ ಅಕ್ರಮಗಳು, ಅವ್ಯವಹಾರಗಳು ಇದೇ ಮೊದಲೇನು ಅಲ್ಲ.  ಬೆಳಕಿಗೆ ಬರುತ್ತಿರುವುದೂ ಹೊಸದಲ್ಲ. ಈ ಹಿಂದೆಯೂ ಹಲವಾರು ಅಕ್ರಮಗಳು, ಅವ್ಯವಹಾರಗಳು ನಡೆದಿವೆ. ನಿಗಮ, ಪ್ರಾಧಿಕಾರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳೇ ನಿಗಮ/ಪ್ರಾಧಿಕಾರಗಳ ಖಾತೆಯಲ್ಲಿ ಇರುತ್ತಿದ್ದ ಹಣವನ್ನು ಇನ್ನಿತರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿವೆ. ಅಧಿಕಾರಿಗಳು, ಅಧ್ಯಕ್ಷರು, ರಾಜಕಾರಣಿಗಳು ನಿಗಮ/ಪ್ರಾಧಿಕಾರ/ಸರ್ಕಾರದ ಹಣವನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಬೇಕಾದಂತೆ ಬಳಸುವುದು, ಬಳಸಿಕೊಳ್ಳುವುದು, ಬೇರೆಡೆಗೆ ವರ್ಗಾಯಿಸುವುದು ನಡೆದೇ ಇದೆ. ಅಂತಹ ಕೆಲವು ಪ್ರಕರಣಗಳು ಇಲ್ಲಿವೆ…

ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣ

ಇತ್ತೀಚೆಗೆ ಬೆಳಕಿಗೆ ಬಂದ ಹಗರಣದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನ ಹಗರಣವೂ ಒಂದು. ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

6 ಲಕ್ಷ ಠೇವಣಿದಾರರಿದ್ದ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 2,500 ಕೋಟಿ ರೂ. ಹಗರಣ ನಡೆದಿದೆ. 15,000 ಕ್ಕೂ ಹೆಚ್ಚು ಠೇವಣಿದಾರರಿಗೆ ಅನ್ಯಾಯವಾಗಿದೆ ಎಂದು ಹೇಳಲಾಗಿದೆ. ಸಂತ್ರಸ್ತರು ಹಲವು ತಿಂಗಳುಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ತನಿಖೆ ನಡೆಸುತ್ತಿರುವ ಐಟಿ, ಇಡಿ, ಸಿಬಿಐ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಸಮಯದಲ್ಲಿ ನಡೆದ ಅಕ್ರಮ/ಹಗರಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವುಗಳ ಪಟ್ಟಿ ಹೀಗಿದೆ:

  1. ಎಪಿಎಂಸಿ ಹಗರಣ (2020-21) – 47.16 ಕೋಟಿ ರೂ.
  2. ಭೋವಿ ಅಭಿವೃದ್ಧಿ ನಿಗಮ (2021-22) – 87.00 ಕೋಟಿ ರೂ.ಗಿಂತಲೂ ಹೆಚ್ಚು
  3. ದೇವರಾಜ ಅರಸು ಟ್ರಕ್ ಟರ್ಮಿನಲ್ (2022-23) – 50.00 ಕೋಟಿ ರೂ.ಗಿಂತ ಅಧಿಕ
  4. ಗಂಗಾ ಕಲ್ಯಾಣ ಯೋಜನೆ – ಅಂಬೇಡ್ಕರ್, ಭೋವಿ, ಆದಿಜಾಂಬವ ಮುಂತಾದ ನಿಗಮಗಳು (2021-22) – 430.00 ಕೋಟಿ ರೂ.ಗಿಂತ ಅಧಿಕ
  5. ಪ್ರವಾಸೋದ್ಯಮ ಇಲಾಖೆ (2021-22) – ಸಿ.ಪಿ ಯೋಗೇಶ್ವರ್ 2.47 ಕೋಟಿ ರೂ.
  6. ಕಿಯೋನಿಕ್ಸ್ ಹಗರಣ (2019-2023) – 500 ಕೋಟಿ ರೂ. – ಸಿಎಜಿ ವರದಿಯಲ್ಲಿ ಉಲ್ಲೇಖ
  7. ಕೋವಿಡ್ ಹಗರಣ (2019-20) – 40,000 ಕೋಟಿ ರೂ.ಗೂ ಹೆಚ್ಚು
  8. 40% ಕಮಿಷನ್ ಹಗರಣ (2019-20) – 2,000 ಕೋಟಿ ರೂ.ಗಿಂತ ಅಧಿಕ
  9. ಪಿಎಸ್‌ಐ ಮತ್ತು ಇತರೆ ನೇಮಕಾತಿ ಹಗರಣ (2019-20 ಮತ್ತು 2022-23) – ನೂರಾರು ಕೋಟಿ ರೂ.
  10. ಪರಶುರಾಮ ಥೀಮ್ ಪಾರ್ಕ್ ಹಗರಣ (2022-23) – 11.00 ಕೋಟಿಗೂ ಹೆಚ್ಚು
  11. ಬಿಟ್‌ಕಾಯಿನ್ ಹಗರಣ (2021-2023) – ಸಾವಿರಾರು ಕೋಟಿ ರೂ. ಹಗರಣ
  12. ಯಡಿಯೂರಪ್ಪ ಅಕ್ರಮ ಆಸ್ತಿ ಗಳಿಕೆ ಪ್ರಕರಣ (2021) – 750 ಕೋಟಿ ರೂ.ಗಿಂತ ಹೆಚ್ಚು
  13. ಯಡಿಯೂರಪ್ಪ ಮತ್ತು ವಿಜಯೇಂದ್ರ ಕುಟುಂಬದ ಆದಾಯ ಮೀರಿದ ಆಸ್ತಿ ಪ್ರಕರಣ – ನೂರಾರು ಕೋಟಿ
  14. ಕೆಕೆಆರ್‌ಡಿಬಿ ಹಗರಣ (2019-2023 ಏಪ್ರಿಲ್) 200 ಕೋಟಿಗೂ ಹೆಚ್ಚು
  15. ಕಂದಾಯ ಇಲಾಖೆಯ ಹಗರಣ (2019-2023 ಏಪ್ರಿಲ್) – ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
  16. ಕೃಷಿ ಇಲಾಖೆಯಲ್ಲಿ ಹಗರಣ (2021-2023) – ಕೃಷಿ ಇಲಾಖೆಯ ನೌಕರರೇ ಲಂಚ ವಸೂಲಿ ಮಾಡುತ್ತಿದ್ದ ಆರೋಪ.
  17. ಮೊಟ್ಟೆ ಹಗರಣ (2019-2021)
  18. ಕೆಐಎಡಿಬಿ (2008-2013)
  19. ಗಣಿ ಹಗರಣ, ಬಿಡಿಎ ಮತ್ತು ಕೆಐಎಡಿಬಿ ಡಿನೋಟಿಫಿಕೇಶನ್ ಹಗರಣ – ಬಿಎಸ್‌ವೈ ಸೇರಿ ಹಲವು ಸಚಿವರು ಜೈಲಿಗೆ ಹೋಗಿದ್ದರು.

ಒಟ್ಟಾರೆ ಎಲ್ಲರೂ ಕಳ್ಳರೇ, ಎಲ್ಲ ಸರ್ಕಾರಗಳ ಅವಧಿಯಲ್ಲೂ ಹಗರಣಗಳು ನಡೆಯುತ್ತವೆ. ಯಾವಾಗಲೋ ಒಮ್ಮೆ, ಯಾವುದೋ ಒಂದು ಹಗರಣ, ಯಾವುದೋ ಕಾರಣಕ್ಕೆ ಬೆಳಕಿಗೆ ಬಂದುಬಿಡುತ್ತದೆ. ಆಗ, ಪಕ್ಷಗಳು ಬೀದಿಗಿಳಿಯುತ್ತವೆ. ಸಮರ್ಥನೆಗಿಳಿಯುತ್ತವೆ. ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತವೆ. ಹಿಂದೆ ನಡೆದ ಹಗರಣಗಳ ಪಟ್ಟಿಗಳನ್ನು ಬಿಡುಗಡೆ ಮಾಡುತ್ತವೆ. ಇದು ಜನರಲ್ಲಿ ಸಖೇದಾಶ್ಚರ್ಯ ಉಂಟು ಮಾಡುತ್ತದೆ. ಆ ನಂತರ ಜನರೂ ಮರೆಯುತ್ತಾರೆ, ಸರ್ಕಾರಗಳೂ ಸುಮ್ಮನಾಗುತ್ತವೆ. ಭ್ರಷ್ಟಾಚಾರ, ಅಕ್ರಮ ಎನ್ನುವುದು ನಿತ್ಯ ಮತ್ತು ನಿರಂತರವಾಗಿ ಮುಂದುವರೆಯುತ್ತದೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಜನರು ನಿರಂತರವಾಗಿ ಸಕ್ರಿಯರಾಗಿರಬೇಕು. ನಿರಂತರವಾಗಿ ಸರ್ಕಾರಗಳನ್ನು ಪ್ರಶ್ನಿಸಬೇಕು…!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X