ಬಿ ಎಸ್ ಯಡಿಯೂರಪ್ಪ ಕುಟುಂಬಕ್ಕೆ ಈಗಲೂ ಸಿ ಎಸ್ ಷಡಾಕ್ಷರಿ ನಿಷ್ಠರಾಗಿದ್ದಾರೆ. ಷಡಾಕ್ಷರಿ ವರ್ಗಾವಣೆ ಮೂಲಕ ಬಿಎಸ್‌ವೈ ಕುಟುಂಬಕ್ಕೆ ಮಧು ಬಂಗಾರಪ್ಪ ಚೆಕ್ ಮೇಟ್ ಇಟ್ಟರಾ ಎನ್ನುವ ಮಾತು ಶಿವಮೊಗ್ಗದಾದ್ಯಂತ ಹರಿದಾಡುತ್ತಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಶಿವಮೊಗ್ಗದ ಲೆಕ್ಕ ಪರಿಶೋಧನ ಜಂಟೀ ನಿರ್ದೇಶಕ ಕಚೇರಿಯ ಲೆಕ್ಕಾಧೀಕ್ಷಕರಾಗಿದ್ದ ಸಿ ಎಸ್ ಷಡಾಕ್ಷರಿ ಅವರನ್ನು ಸರ್ಕಾರ ಶಿವಮೊಗ್ಗದಿಂದ ವರ್ಗಾವಣೆ ಮಾಡಿದೆ. ಕೋಲಾರದ ಸಮಾಜಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕ ಹುದ್ದೆಗೆ ಷಡಾಕ್ಷರಿ ವರ್ಗಾವಣೆ ಆಗಿದ್ದು, ರಾಜ್ಯ ಸರ್ಕಾರದ ಕ್ರಮದ ಸುತ್ತ ಸರ್ಕಾರಿ ನೌಕರರ ವಲಯ ಮತ್ತು ರಾಜಕೀಯ ಪಡಸಾಲೆಯಲ್ಲಿ ತರಹೇವಾರಿ ಚರ್ಚೆ ಗರಿಗೆದರಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿ ಅದರಿಂದ ಬಿಡುಗಡೆಗೊಂಡು ಎಂಟು ವರ್ಷ ಕಳೆದಿದ್ದರೂ ಬಿಎಸ್‌ವೈ ಕುಟುಂಬಕ್ಕೆ ಈಗಲೂ ಸಿ ಎಸ್ ಷಡಾಕ್ಷರಿ ನಿಷ್ಠರಾಗಿದ್ದಾರೆ. ಷಡಾಕ್ಷರಿ ವರ್ಗಾವಣೆ ಮೂಲಕ ಬಿಎಸ್‌ವೈ ಕುಟುಂಬಕ್ಕೆ ಮಧು ಬಂಗಾರಪ್ಪ ಚೆಕ್ ಮೇಟ್ ಇಟ್ಟರಾ ಎನ್ನುವ ಮಾತು ಈತ ಶಿವಮೊಗ್ಗದಾದ್ಯಂತ ಹರಿದಾಡುತ್ತಿದೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಗೋಶಾಲೆಗಳಿಗೆ ಸರ್ಕಾರಿ ನೌಕರರ ಒಂದು ದಿನದ ಸಂಬಳವಾದ ಕೋಟಿಗಟ್ಟಲೆ ಹಣವನ್ನು ಸರ್ಕಾರಕ್ಕೆ ದೇಣಿಗೆ ನೀಡುವ ಮೂಲಕ ಸಿ ಎಸ್ ಷಡಾಕ್ಷರಿ ವಿವಾದಕ್ಕೆ ಗುರಿಯಾಗಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷಗಿರಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರು ಹಾಗೂ ಸಂಘವನ್ನು ಸರ್ಕಾರಕ್ಕೆ ಅಡ ಇಟ್ಟಿದ್ದರು ಎನ್ನುವ ಗಂಭೀರ ಆರೋಪಗಳು ಷಡಾಕ್ಷರಿ ವಿರುದ್ಧ ಕೇಳಿಬಂದಿದ್ದವು.
ಮುಂದುವರೆದು, ಒಬ್ಬ ಸಾಮಾನ್ಯ ಸರ್ಕಾರಿ ನೌಕರ ಕಳೆದ ವಿಧಾನಸಭಾ ಚುನಾವಣೆ ವೇಳೆ ಶಿವಮೊಗ್ಗ ನಗರದಿಂದ ಬಿಜೆಪಿ ಟಿಕೆಟ್ ಕೇಳುವ ಮಟ್ಟಕ್ಕೆ ಬೆಳೆದಿದ್ದ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಈ ಕಾರಣಕ್ಕಾಗಿಯೇ ಷಡಾಕ್ಷರಿ ಬಿಜೆಪಿ ಸರ್ಕಾರಕ್ಕೆ ಬಹಳ ಆತ್ಮೀಯರಾಗಿ ಗುರುತಿಸಿಕೊಂಡಿದ್ದರು ಎನ್ನುವುದೂ ಇದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲುಗಳಲ್ಲಿ ಪುರುಷರಿಗೆ ನೀಡುವ ಸೌಲಭ್ಯಗಳು ಮಹಿಳೆಯರಿಗೇಕಿಲ್ಲ?
ಇದಲ್ಲದೆ, ಈಗ ಸಿ ಎಸ್ ಷಡಾಕ್ಷರಿ ವರ್ಗಾವಣೆಯ ಹಿಂದೆ ರಾಜಕೀಯ ಕಾರಣಗಳು ಒಂದೊಂದಾಗಿ ಬಿಚ್ಚಿಕೊಳ್ಳಲಾರಂಭಿಸಿವೆ. ಶಿವಮೊಗ್ಗ ತಾಲೂಕು ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಲಗೆರೆ ಗ್ರಾಮದ ಸರ್ವೆ ನಂ.119ರಲ್ಲಿ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಖಾಸಗಿ ಲೇಔಟ್ ಗೆ ಸಾಗಿಸಿರುವ ಪ್ರಕರಣದಲ್ಲಿ ಸಿ ಎಸ್ ಷಡಾಕ್ಷರಿ ನಿರ್ದೇಶನದಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಚಿವ ಮಧು ಬಂಗಾರಪ್ಪ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರಕ್ಕೆ ಪಾವತಿಸಬೇಕಾಗಿರುವ ಮಣ್ಣಿನ ಒಟ್ಟು ರಾಯಲ್ಟಿ ಮೊತ್ತವನ್ನು ಪಾವತಿಸದೆ ಸರ್ಕಾರದ ಬೊಕ್ಕಸಕ್ಕೆ ರೂ. 71,45,920/-ಗಳನ್ನು ನಷ್ಟ ಉಂಟು ಮಾಡಲಾಗಿದೆ. ಹಾಗೂ ಸಕ್ರಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರು ವರದಿ ನೀಡಿದ್ದು, ಈ ಪ್ರಕರಣದಲ್ಲಿ ಸಿ ಎಸ್ ಷಡಾಕ್ಷರಿ ನಿರ್ದೇಶನದಂತೆ ಗ್ರಾಮ ಪಂಚಾಯತ್ ಮತ್ತು ಗಣಿ ಇಲಾಖೆಯವರು ನಡೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿ, ವರ್ಗಾವಣೆಗೆ ಸಚಿವರು ಸಿಎಂಗೆ ತಿಳಿಸಿದ್ದಾರೆ. ಈ ಪ್ರಕಾರ ಮುಖ್ಯಮಂತ್ರಿಗಳು ಷಡಾಕ್ಷರಿ ಅವರ ವರ್ಗಾವಣೆಗೆ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.
ಇದು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದುಕೊಂಡು ಮಾಡಿದ ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಕಾರಣವಾದರೆ, ಈ ವರ್ಗಾವಣೆಯ ಹಿಂದೆ ಇನ್ನೊಂದು ಕಾರಣ ಕೂಡ ತಳಕು ಹಾಕಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ವಲಯದಲ್ಲಿ ಹಿಡಿತ ಇಟ್ಟುಕೊಂಡಿರುವ ಷಡಾಕ್ಷರಿ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ಪರ ಪರೋಕ್ಷವಾಗಿ ಕೆಲಸ ಮಾಡುವ ಸಾಧ್ಯತೆಗಳಿವೆ. ಹೀಗಾಗಿಯೇ ಷಡಾಕ್ಷರಿ ಅವರನ್ನು ಶಿವಮೊಗ್ಗದಿಂದ ವರ್ಗಾವಣೆ ಅಸ್ತ್ರ ಪ್ರಯೋಗಿಸಿ ಬೇರೆಡೆಗೆ ಎತ್ತಿಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಲ್ಲದೇ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರಿ ಗೀತಾ ಶಿವರಾಜಕುಮಾರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಲು ಸಚಿವ ಮಧುಬಂಗಾರಪ್ಪ ಹೊರಟಿದ್ದು, ಸಹೋದರಿಯ ಗೆಲುವಿನ ದಾರಿಯನ್ನು ಸುಗಮ ಮಾಡಿಕೊಳ್ಳಲು ಇದ್ದ ತೊಡಕುಗಳಲ್ಲಿ ಒಂದಾದ ಷಡಾಕ್ಷರಿಯನ್ನು ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾಯಿಸಲಾಗಿದೆ ಎನ್ನಲಾಗಿದೆ.