ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಸ್‌ಸಿ, ಎಸ್‌ಟಿಯವರ ಮೀಸಲಾತಿ ತೆಗೆಯಬೇಕು ಎಂದು ಅಮೆರಿಕಾದಲ್ಲಿ ಹೇಳಿದ್ದಾರೆ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಸಂವಾದದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ವಿ ಎಸ್ ಉಗ್ರಪ್ಪ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಗೋಕುಲಾಷ್ಟಮಿಗೂ ಇಮಾಮ್ ಸಾಬೀಗೂ ಏನು ಸಂಬಂಧ ಎಂದು ಕೇಳುವಂತೆ ಸಾಮಾಜಿಕ ನ್ಯಾಯ, ಮೀಸಲಾತಿಗೂ ಬಿಜೆಪಿಗೂ ಏನು ಸಂಬಂಧ” ಎಂದು ಪ್ರಶ್ನಿಸಿದರು.
“ಎಲ್ಲ ಹಂತಗಳಲ್ಲೂ ಆರ್‌ಎಸ್‌ಎಸ್ ಪ್ರಣೀತ ಮನುವಾದವನ್ನು ತೂರಿಸಲು ಪ್ರಯತ್ನ ಪಡುತ್ತಿದೆ ಬಿಜೆಪಿ. ಆರ್‌ಎಸ್‌ಎಸ್ ಎರಡನೇ ಸರಸಂಘ ಚಾಲಕರಾಗಿದ್ದ ಗೋಲವಳ್ಕರ್ ಅವರು ತಮ್ಮ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಶ್ರೇಣಿಕೃತ ವ್ಯವಸ್ಥೆ ಇರಬೇಕು ಎಂದು ಪ್ರತಿಪಾದನೆ ಮಾಡಿದ್ದಾರೆ. ಶೋಷಿತ ವರ್ಗದ ಜನರು ಮುಂದುವರೆಯದೆ ಹಾಗೆಯೇ ಇರಬೇಕು ಎಂಬುದು ಬಿಜೆಪಿ ಹಾಗೂ ಸಂಘದ ಚಿಂತನೆ” ಎಂದು ವಾಗ್ದಾಳಿ ನಡೆಸಿದರು.
“ಸಂವಿಧಾನ ರಚಣೆಯಲ್ಲಿ ಆರ್‌ಎಸ್‌ಎಸ್ ಅವರ ಕೊಡುಗೆ ಏನಿದೆ? ಅಂಬೇಡ್ಕರ್ ಅವರ ವಿಚಾರದಲ್ಲಿ ನಂಬಿಕೆಯಿಟ್ಟು ಸಂವಿಧಾನ ಜಾರಿಗೆ ತಂದ ಪಕ್ಷ ಕಾಂಗ್ರೆಸ್. ಬಾಬಾ ಸಾಹೇಬರನ್ನು ಸಂವಿಧಾನ ಕರಡು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬುಲ್ಡೋಜರ್, ತಲವಾರು ಹೇಳಿಕೆ; ಬಿಜೆಪಿ ಮುಖಂಡರಿಗೆ ಸೌಹಾರ್ದ ಕರ್ನಾಟಕ ಬೇಕಿಲ್ಲವೇ?!
“ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಕಾಯ್ದೆ 1950 ಮೂಲಕ ಮೀಸಲಾತಿ ತಂದಿದ್ದು ಕಾಂಗ್ರೆಸ್ ಸರ್ಕಾರ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಮೀಸಲಾತಿ ತರಲು ಮುಂದದಾಗ ಸಮಾಜವನ್ನು ಒಡೆದು ಆಳುವ ನೀತಿಗೆ ನೂಕಬೇಕು ಎಂದು ಪ್ರಯತ್ನಪಟ್ಟಿದ್ದು ಇದೇ ಬಿಜೆಪಿ” ಎಂದು ಆರೋಪಿಸಿದರು.
“ಅನಂತ್ ಕುಮಾರ್ ಹೆಗಡೆ, ಯತ್ನಾಳ್ ಅವರು ಸೇರಿದಂತೆ ಅನೇಕ ಬಿಜೆಪಿ ನಾಯಕರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಕಿತ್ತು ಹಾಕುವುದಾಗಿ ಹೇಳಿದ್ದಾರೆ. ಮೀಸಲಾತಿಯನ್ನು ಮುಂದುವರಿಸಿಕೊಂಡು ಬರುವಂತೆ ಮಾಡಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಎಂದಿಗೂ ಮೀಸಲಾತಿ ಪರವಾಗಿ ಹೋರಾಟ ಮಾಡಿಲ್ಲ. ಅದು ಪರೋಕ್ಷವಾಗಿ ಮೀಸಲಾತಿ ತೆಗೆಯಬೇಕು ಎಂದು ಹುನ್ನಾರ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
“ರಾಹುಲ್ ಗಾಂಧಿ ಅವರು ಅವಕಾಶ ವಂಚಿತರಿಗೆ ಸೌಲಭ್ಯ ಸಿಗಬೇಕು ಎಂದು ಹೇಳಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಸೇರಿದಂತೆ ಎಲ್ಲ ರೀತಿಯ ಹಕ್ಕು ಸಿಗಬೇಕು ಎಂದು ಹೇಳುತ್ತಾ ಇದ್ದಾರೆ. ಬಡವರ, ದಲಿತರ ವಿರೋಧಿ ಪಕ್ಷ ಯಾವುದಾದರು ಇದ್ದರೆ ಅದು ಬಿಜೆಪಿ ಮಾತ್ರ. ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿರುವ ಬಿಜೆಪಿ ಅವರ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದರು.