“ಕಾಂಗ್ರೆಸ್ ಜಾತಿ ರಾಜಕಾರಣ ಮಾಡುತ್ತಿದೆ. ಜಾತಿ ಗಣತಿ ಮಾಡಿ ಏನು ಉಪಯೋಗ. ಇದರಿಂದ ಇವರು ಏನು ಸಾಧನೆ ಮಾಡುತ್ತಾರೆ. ಜನರ ಮಧ್ಯೆ ದ್ವೇಷ ಬಿತ್ತಲು, ಸಮಾಜವನ್ನು ಒಡೆಯಲು ಈ ಜಾತಿ ಗಣತಿ ಮಾಡುತ್ತೀರೋ ಅಥವಾ ಜಾತಿ ಎಂಬುದನ್ನು ಪಕ್ಕಕ್ಕೆ ಇಟ್ಟು ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುತ್ತೀರೋ ಎಂಬುದನ್ನು ಮೊದಲು ರಾಜ್ಯದ ಜನತೆಗೆ ತಿಳಿಸಿ” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಡ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬಿಡದಿಯ ಕೇತಗಾನಹಳ್ಳಿಯಲ್ಲಿ ಭಾನುವಾರ ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಜಾತಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ನವರು ಜಾತ್ಯತೀತ ಎನ್ನುತ್ತಾರೆ. ಇನ್ನೊಂದು ಕಡೆ ಜಾತಿ ಗಣತಿ ವರದಿ ಇಟ್ಟುಕೊಂಡು ಜಾತಿಗಳ ಮಧ್ಯೆ ಇಷ ಬೀಜ ಬಿತ್ತಲು ಹೊರಟಿದ್ದಾರೆ” ಎಂದರು.
“ಕಾಂತರಾಜು ಎಂಬುವವರು ವರದಿ ನೀಡಿದ್ದಾರೆ. ಇದನ್ನು ಕುಮಾರಸ್ವಾಮಿ ಅವರು ಒಪ್ಪಲಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳುತ್ತಾರೆ. ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ ಆ ವರದಿಯನ್ನು ಹೇಗೆ ಸ್ವೀಕಾರ ಮಾಡಬೇಕು. ಈ ಸಾಮಾನ್ಯ ಅರಿವು ಮುಖ್ಯಮಂತ್ರಿ ಅವರಿಗೆ ಇಲ್ಲ” ಎಂದು ವ್ಯಂಗ್ಯವಾಡಿದರು.
“ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ, ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ಅವರು ಇದ್ದರು. 14 ತಿಂಗಳ ನನ್ನ ಅವಧಿಯಲ್ಲಿ ಒಮ್ಮೆಯೂ ಕಾಂತರಾಜು ವರದಿ ಬಗ್ಗೆ ಚರ್ಚೆ ಮಾಡಿಲ್ಲ. ಜಾತಿಗಣತಿ ಬದಲಾಗಿ, ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಿ. ಜಾತಿ ಎಂಬ ಪದವನ್ನು ತೆಗೆದುಹಾಕಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಲಸದಿಂದ ತೆಗೆದು ಹಾಕಿ ಸಂಬಳ ನೀಡಿಲ್ಲವೆಂದು ಕೋಪದಿಂದ ಕಂಪನಿಗೆ ಬೆಂಕಿ ಇಟ್ಟ ಉದ್ಯೋಗಿಗಳು
“ಕಾಂಗ್ರೆಸ್‌ನವರು ಜಾತ್ಯತೀತ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಹೇಳುತ್ತಾರೆ. ಇದೀಗ ಜಾತಿ ಗಣತಿ ಮಾಡುತ್ತಿದ್ದಾರೆ. ಜಾತ್ಯತೀತ ಎಂದರೆ ಜಾತಿ ವ್ಯವಸ್ಥೆಯನ್ನು ತೆಗೆದುಹಾಕಬೇಕು. ಕಾಂಗ್ರೆಸ್‌ಗೆ ಜಾತಿ ವ್ಯವಸ್ಥೆ ಎಂಬುದು ಮತಬ್ಯಾಂಕ್” ಎಂದು ಟೀಕಿಸಿದರು.
ಪಕ್ಷದ ರಾಮನಗರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.