ಕೋಮುದ್ವೇಷ ಭಾಷಣ, ಅವಹೇಳನಕಾರಿ, ವಿವಾದಾತ್ಮಕ ಹೇಳಿಕೆಗಳು ಹಾಗೂ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸುತ್ತಲೇ ಸದಾ ಸುದ್ದಿಯಲ್ಲಿರುತ್ತಿದ್ದ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಈಗ ಯತ್ನಾಳ್ ಪರಿಸ್ಥಿತಿ ಅತಂತ್ರವಾಗಿದೆ. ಆದರೂ, ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲಿನ ವಾಗ್ದಾಳಿಯನ್ನು ಯತ್ನಾಳ್ ಮುಂದುವರೆಸಿದ್ದಾರೆ.
ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲೇಬೇಕು ಎಂದು ಯತ್ನಾಳ್ ಪಟ್ಟುಹಿಡಿದಿದ್ದರು. ತಮ್ಮದೇ ಬಣ ಕಟ್ಟಿಕೊಂಡು ಯಡಿಯೂರಪ್ಪ ಕುಟುಂಬದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದರು. ಪರಿಣಾಮ, ರಾಜ್ಯದಲ್ಲಿ ಬಣ ರಾಜಕಾರಣವು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿತ್ತು. ಯತ್ನಾಳ್ ವಿಚಾರವನ್ನು ಪಕ್ಷದ ಶಿಸ್ತು ಕಮಿಟಿಗೆ ವಹಿಸಲಾಗಿತ್ತು. ಎರಡು ಬಾರಿ ಎಚ್ಚರಿಕೆಯನ್ನೂ, ನೋಟಿಸ್ ಅನ್ನೂ ಕೊಟ್ಟಿದ್ದ ಕಮಿಟಿ, ಈಗ ಅವರನ್ನು ಪಕ್ಷದಿಂದ ಹೊರಹಾಕಿದೆ.
ಈ ಬೆಳವಣಿಗೆ ಯತ್ನಾಳ್ ಅವರಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ರಾಜಕೀಯ ಉಳಿವು ಮತ್ತು ಭವಿಷ್ಯಕ್ಕಾಗಿ ಹಿಂದುತ್ವದ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುತ್ತಿದ್ದ ಯತ್ನಾಳ್ ಅವರ ರಾಜಕೀಯ ಭವಿಷ್ಯ ಏನು ಎಂಬ ಪ್ರಶ್ನೆ ಸದ್ಯ ಮುನ್ನೆಲೆಗೆ ಬಂದಿದೆ. ಯತ್ನಾಳ್ ಅವರು ಹೊಸ ಪಕ್ಷ ಸ್ಥಾಪಿಸುತ್ತಾರಾ? ಬಿಜೆಪಿಗೆ ಮರಳುತ್ತಾರಾ? ಅಥವಾ ಕಾಂಗ್ರೆಸ್ ಬಾಗಿಲು ತಟ್ಟುತ್ತಾರಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈ ವರದಿ ಓದಿದ್ದೀರಾ?: ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ ಎಂಥವರು?
ಯತ್ನಾಳ್ ಅವರು ತಮ್ಮ ರಾಜಕೀಯದ ಮೊದಲಾರ್ಧ ಮುಸ್ಲಿಂ ಸಮುದಾಯದ ಜತೆಗೆ ಬಕ್ರಿದ್, ರಂಜಾನ್ ಹಬ್ಬ ಆಚರಣೆ ಮಾಡಿ, ಸೌಹಾರ್ದತೆಯ ಮಾತನಾಡುತ್ತಿದ್ದರು. ಆದರೆ, ಬಿಜೆಪಿ ಸೇರಿದ ಬಳಿಕ ತಾನೊಬ್ಬ ‘ಹಿಂದು ಹುಲಿ’ ಎಂದು ಹೇಳಿಕೊಂಡಿದ್ದರು. ಮುಸ್ಲಿಂ ವಿರುದ್ಧ ದ್ವೇಷ ಭಾಷಣ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿ ಸುದ್ದಿಯಲ್ಲಿರುತ್ತಿದ್ದರು. ಜೊತೆಗೆ, ಸ್ವಪಕ್ಷೀಯ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸುತ್ತಿದ್ದರು. ತಮ್ಮದೇ ಬಣವನ್ನೂ ಕಟ್ಟಿಕೊಂಡು, ತಾವೇ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಎಂದೂ ಹೇಳಿಕೊಳ್ಳುತ್ತಿದ್ದರು.
ಹಿಂದುತ್ವದ ಹೆಸರಿನಲ್ಲಿ ಯುವಜನರನ್ನು ಪ್ರಚೋದಿಸುವ ಯತ್ನಾಳ್, ತಮ್ಮ ಮಕ್ಕಳನ್ನು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಓದಿಸುತ್ತಿದ್ದಾರೆ. ವಿಜಯಪುರದಲ್ಲಿ ತಮ್ಮದೇ ಶಿಕ್ಷಣ ಸಂಸ್ಥೆಗಳು, ಕಲಬುರಗಿಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ. ಆಸ್ತಿ-ಸಂಪತ್ತು ಇರುವ ತಾವು ಬಿಜೆಪಿಯ ಉನ್ನತ ಹುದ್ದೆ ಪಡೆಯಬೇಕೆಂದು ಯತ್ನಾಳ್ ಬಯಸಿದ್ದರು. ಅದಕ್ಕಾಗಿಯೇ, ರಾಜಕೀಯ ಪಡಸಾಲೆಯಲ್ಲಿ ಮುಸ್ಲಿಮರ ವಿರುದ್ಧ ಕೋಮುದ್ವೇಷ ಬಿತ್ತುವುದರಲ್ಲಿ ನಿರತರಾಗಿದ್ದರು.
ತಾವು ಪಕ್ಷದಲ್ಲಿ ಮತ್ತಷ್ಟು ಬೆಳೆಯಲು ತಮಗೆ ಯಡಿಯೂರಪ್ಪ ಕುಟುಂಬವೇ ಅಡ್ಡಿ ಎಂದು ಭಾವಿಸಿದ್ದ ಯತ್ನಾಳ್, ಬಿಜೆಪಿಯಲ್ಲಿರುವ ಸಂಘಪರಿವಾರದ ಹಿನ್ನೆಲೆಯ ನಾಯಕರಿಗೆ ದಾಳವಾದರು. ಬಿ.ಎಲ್ ಸಂತೋಷ್ ಅವರು ಯಡಿಯೂರಪ್ಪ ವಿರುದ್ಧ ಯತ್ನಾಳ್ ಅನ್ನು ಮುಂದೆ ಬಿಟ್ಟಿದ್ದರು ಎಂಬುದು ಚರ್ಚೆಯಲ್ಲಿರುವ ವಿಚಾರ. ಯಡಿಯೂರಪ್ಪ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದ ಯತ್ನಾಳ್, ‘ಯಡಿಯೂರಪ್ಪ ತನ್ನ ಮಕ್ಕಳನ್ನು ಮಾತ್ರವೇ ಬೆಳೆಸುತ್ತಿದ್ದಾರೆ. ಉಳಿದವರನ್ನು ಮೂಲೆಗೆ ದೂಡುತ್ತಿದ್ದಾರೆ’ ಎಂದು ಆರೋಪಿಸುತ್ತಲೇ ಬಂಂದಿದ್ದರು. ತಮ್ಮದೇ ಮಿತ್ರ ಪಡೆ ಕಟ್ಟಿಕೊಂಡು ಬಿ.ವೈ ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು.
ಈ ವರದಿ ಓದಿದ್ದೀರಾ?: ಯತ್ನಾಳ್, ಬಾಳೆ ಎಲೆ ಮತ್ತು ವಸಿಷ್ಠ-ವಾಲ್ಮೀಕಿಯರು
ಯತ್ನಾಳ್ ರಾದ್ಧಾಂತಗಳನ್ನು ಅರಗಿಸಿಕೊಳ್ಳಲಾಗದ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಮೇಲೆ ಕ್ರಮಕ್ಕೆ ಒತ್ತಡ ಹಾಕಿದ್ದರು. ಪರಿಣಾಮವಾಗಿ, 2024ರ ಡಿಸೆಂಬರ್ 02ರಂದು ಯತ್ನಾಳಗೆ ಬಿಜೆಪಿ ನಾಯಕತ್ವವು ಮೊದಲ ಶೋಕಾಸ್ ನೋಟಿಸ್ ನೀಡಿತ್ತು. ಆಗ ಯತ್ನಾಳ್, ‘ಮತ್ತೆ ಎಂದಿಗೂ ಸ್ವಪಕ್ಷೀಯರ ವಿರುದ್ಧ ಬಹಿರಂಗ ಹೇಳಿಕೆ ಕೊಡುವುದಿಲ್ಲ’ ಎಂದು ಉತ್ತರಿಸಿದ್ದರು. ಆದರೆ, ಅದಾದ ನಂತರವೂ ತಮ್ಮ ಛಾಳಿಯನ್ನು ಮುಂದುವರೆಸಿದ್ದರು. 2025ರ ಫೆಬ್ರವರಿ 10ರಂದು ಬಿಜೆಪಿ ಶಿಸ್ತು ಕಮಿಟಿ 2ನೇ ನೋಟಿಸ್ ಕೊಟ್ಟಿತ್ತು. ಅದಕ್ಕೂ ಹಿಂದಿನ ಉತ್ತರವನ್ನೇ ಯತ್ನಾಳ್ ಕೊಟ್ಟಿದ್ದರು ಎಂದು ಹೇಳಲಾಗಿದೆ.
ಯತ್ನಾಳ್ ಉತ್ತರವು ಸಮಂಜಸವಾಗಿಲ್ಲ ಎಂದು ಶಿಸ್ತು ಕಮಿಟಿ ಈ ಹಿಂದೆ ಹೇಳಿತ್ತು. ಇದೀಗ, ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅಷ್ಟಕ್ಕೂ ಯತ್ನಾಳ್‌ಗೆ ಈ ಉಚ್ಚಾಟನೆಯೇನೂ ಹೊಸದಲ್ಲ. ಈವರೆಗೂ ಬರೋಬ್ಬರಿ ಮೂರು ಬಾರಿ ಯತ್ನಾಳ್ ಉಚ್ಚಾಟನೆಗೊಂಡಿದ್ದಾರೆ.
ಬಿಜೆಪಿಯಿಂದ ಹೊರದೂಡಲ್ಪಟ್ಟಿರುವ ಯತ್ನಾಳ್ ತಮ್ಮ ರಾಜಕೀಯ ಜೀವನವನ್ನು ಮುಂದುವರೆಸಲು ಕಾಂಗ್ರೆಸ್‌ಗೆ ಸೇರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿಲ್ಲ. ಆದರೆ, ಅವರು ಕಾಂಗ್ರೆಸ್‌ಗೆ ಸೇರಿದರೆ, ಅವರ ಕೋಮುವಾದಿ ದ್ವೇಷ ಭಾಷಣಕ್ಕೆ ಕಡಿವಾಣ ಬೀಳುತ್ತದೆ. ಹಿಂದುತ್ವ, ಕೋಮು ರಾಜಕಾರಣವನ್ನು ಯತ್ನಾಳ್ ತ್ಯಜಿಸುವರೇ ಎಂಬುದು ಗಮನಾರ್ಹ. ಹೀಗಾಗಿಯೇ, ಅವರೇ ಪಂಚಮಸಾಲಿ ಸಮುದಾಯದ ಪ್ರಮುಖರನ್ನೂ ಹಾಗೂ ಬಿಜೆಪಿಯಲ್ಲಿ ತಮ್ಮ ಬಣದಲ್ಲಿದ್ದವರನ್ನು ಸೇರಿಸಿಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಪಕ್ಷ ಕಟ್ಟುತ್ತಾರೆಯೇ ಎಂಬ ಪ್ರಶ್ನೆಗಳೂ ಇವೆ. ಯತ್ನಾಳ್ ಮುಂದಿನ ನಡೆ ಏನಿರಲಿದೆ. ಕಾದು ನೋಡಬೇಕಿದೆ.
ಯತ್ನಾಳರ ಭವಿಷ್ಯ ಅಷ್ಟೇ ಡೋಲಾಮಾನ ಅಲ್ಲ ಇಡೀ ಕರ್ನಾಟಕ ಬಿಜೆಪಿ ಭವಿಷ್ಯವೇ ಡೋಲಾಮಾನ ಆಗುವುದು ಹೀಗೆಯೇ ಅಪ್ಪ ಮಕ್ಕಳ ಆಟಕ್ಕೆ ಬ್ರೇಕ್ ಬೀಳದಿದ್ದರೆ 2028ಕ್ಕೆ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ