ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ ಎಂಥವರು?

Date:

Advertisements
ರಾಮನಗೌಡರ ಐದು ಮಕ್ಕಳಲ್ಲಿ ಎರಡನೆಯವರೇ ಇಂದಿನ ಯತ್ನಾಳ ಬಸನಗೌಡ. ನಾಚಿಕೆ ಸ್ವಭಾವದ, ಮಾತುಗಾರನಲ್ಲದ, ನೆರೆಮನೆಯ ಹುಡುಗ ಬಿಜಾಪುರ ನಗರದ ಶಾಸಕರಾದರು. ಮುಂದೆ ಸಂಸದರಾದರು, ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸರ್ಕಾರದ ಮಂತ್ರಿಯೂ ಆದರು. ಹಾಗೆಯೇ ಬದಲಾದರು...

ವಿಜಾಪುರದಿಂದ 15-20 ಕಿಲೋಮೀಟರ್ ಅಂತರದಲ್ಲಿ ಇರುವ ಊರು ಯತ್ನಾಳ. ಅಷ್ಟೇನು ಫಲವತ್ತಾದ ಜಮೀನುಗಳಿರುವ ಊರಲ್ಲ. ಊರಲ್ಲಿಯ ಬಹುಭಾಗ ಹೊಲಗಳು ಗೌಡ್ರಿಗೆ ಸೇರಿವೆ. ಸಾಕಷ್ಟು ಜಮೀನಿದ್ದರೂ ಆರ್ಥಿಕವಾಗಿ ಕೈ ಹಿಡಿಯುತ್ತಿರಲಿಲ್ಲ ಗೌಡ್ರ ಹೊಲಗಳು. ಈ ಮನೆತನದಲ್ಲಿ ಒಬ್ಬರಾದ ರಾಮನಗೌಡರು ಯತ್ನಾಳ ಬಿಟ್ಟು ವಿಜಾಪುರ ಸೇರಿಕೊಂಡರು. ವಿವಿಧ ದಂಧೆಗಳಿಗೆ ಕೈ ಹಾಕಿದರು. ಅವುಗಳಲ್ಲಿ ಕಾಂಟ್ರಾಕ್ಟ ಬಸ್ಸುಗಳನ್ನು ಓಡಿಸುವುದು ಒಂದು. ಬಸ್ಸುಗಳು ಗೌಡ್ರ ಕೈ ಹಿಡಿದವು. ಕೆಲವೇ ದಿನಗಳಲ್ಲಿ ರಾಮನಗೌಡ್ರು ಹತ್ತಿಪತ್ತು ಬಸ್ಸುಗಳ ಒಡೆಯರಾದರು. ರಾಜ್ಯ ಸರ್ಕಾರದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಟಕ್ಕರ್ ಕೊಡುವಷ್ಟು ಪ್ರಬಲರಾದರು. ಆದರೆ ದೇವರಾಜ ಅರಸ್ ಎಂಬ ಸಾಮಾಜಿಕ ನಾಯಕರು ಪ್ರೈವೆಟ್ ಬಸ್ಸುಗಳನ್ನು ರಾಷ್ಟ್ರೀಕರಣ ಮಾಡಿಬಿಟ್ಟರು. ಗೌಡರ ಎಲ್ಲಾ ಬಸ್ಸುಗಳು ಸರ್ಕಾರದ ವಶವಾದವು.

ರಾಮನಗೌಡ್ರಿಗೆ ಕೆಲಸ ಇಲ್ಲದಾಯಿತು. ರಾಜಕೀಯದಲ್ಲಿ ಕೈ ಆಡಿಸೋಣ ಎಂದು ಆ ಕ್ಷೇತ್ರಕ್ಕೆ ಬಂದರು. ವಿಜಾಪುರದ ರಾಜಕೀಯ ಎಂದರೆ ಗೌಡ್ರ ಗದ್ಲ. ಜಿಲ್ಲೆಯ ಮೀಸಲು ಕ್ಷೇತ್ರಗಳನ್ನು ಬಿಟ್ಟರೆ ಎಲ್ಲ ಕ್ಷೇತ್ರಗಳಲ್ಲಿಯೂ ಗೌಡ್ರೇ ಶಾಸಕರು. ಇವರಲ್ಲಿ ದೈತ್ಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದರು ಚಾಂದಕೋಟೆಗೌಡರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಇಂಡಿ ಕ್ಷೇತ್ರದಲ್ಲಿ ಚಳ್ಳೆಹಣ್ಣು ತಿನಿಸಿ ಸ್ವತಂತ್ರ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದವರು. ಶಾಸಕನಾಗಿ ಮೂರು ವರ್ಷಗಳು ಮುಗಿಯುವದರೊಳಗಾಗಿ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದವು. ಆಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದವರು ಹಿರಿಯ ಮುತ್ಸದ್ದಿ ದುಭೆ ಸಾಹೇಬರು. ದುಭೆ ಸಾಹೇಬರೇನು ಸಾಮಾನ್ಯರಲ್ಲ. ಪ್ರಧಾನಿ ನೆಹರು ಅವರೊಂದಿಗೆ ಸಂಪರ್ಕ ಇಟ್ಟುಕೊಂಡ ಸ್ವಾತಂತ್ರ್ಯಸೇನಾನಿ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ನಾಯಕರು. ಅವರೆದುರು ಸ್ಪರ್ಧಿಸುವ ತಾಕತ್ತು ಯಾರಿಗಿತ್ತು? ಯಾರಿಗೂ ಇಲ್ಲ ಎಂದುಕೊಂಡಿದ್ದರು ಮೈಸೂರು ರಾಜ್ಯದ ಮುಖ್ಯಮಂತ್ರಿ ನಿಜಲಿಂಗಪ್ಪನವರೂ ಸಹ.

ಆದರೆ ಆ ತಾಕತ್ತಿತ್ತು ಚಾಂದಕೋಟೆಗೌಡರಿಗೆ. ಶಾಸಕನಾಗಲು ಈಗಾಗಲೇ 150 ಎಕರೆ ಜಮೀನು ಕಳೆದುಕೊಂಡಿದ್ದರು. “ದುಭೆ ಸಾಹೇಬರನ್ನು ಎದುರಿಸುವ ಶಕ್ತಿ ನಿಮಗೊಬ್ಬರಿಗೆ ಮಾತ್ರ” ಎಂದಿದ್ದರು ಕಾಂಗ್ರೆಸ್ಸೇತರ ಸ್ಥಳೀಯ ನಾಯಕರು. “ಎವ್ವಾ, ನೆಹರೂನ ಕಾಂಗ್ರೆಸ್ ಪಕ್ಷದ ಎದುರು ಇಲೆಕ್ಷನ್ನಿಗೆ ನಿಲ್ಲು ಅಲ್ಲಾಕತ್ತ್ಯಾರ ಏನ ಮಾಡಲಿ” ಎಂದು ತಾಯಿಯನ್ನು ಕೇಳಿದರು ಶಾಸಕರು.

Advertisements

“ಆಳೂ ಗಂಡಸಿಗೆ ನೂರು ಮಂದಿ ಹೆಂಡ್ರಂತ… ನನ್ನೇನ ಕೇಳತಿ… ಇನ್ನೊಂದು ದೊನಸೆ ಎಕರೆ ಹೊಲ ಹೋಗಲಿ ನಾಮಿನೇಶನ್ ಹಾಕಿ ಬಾ ಹೋಗು” ಎಂದಿದ್ದರಂತೆ ದೊಡ್ಡ ಗೌಡಶಾನಿ.

ಚಾಂದಕೋಟೆಗೌಡರು ಲೋಕಸಭೆಯ ಅಭ್ಯರ್ಥಿಯಾದರು. ದುಭೆ ಸಾಹೇಬರು ಸೋತರು. ಗೌಡ್ರು ಗೆದ್ದರು. ಸಂಸದರಾಗಿ ಪ್ರಮಾಣ ವಚನ ಸ್ವಿಕರಿಸಿದ ಕೆಲವೇ ತಿಂಗಳಲ್ಲಿ ಹೃದಯಾಘಾತದಿಂದ ಇಹಲೋಕ ತೊರೆದರು, ವಿಜಾಪುರ ಜಿಲ್ಲೆಯ ಜನಪ್ರಿಯ ಗೌಡ್ರು.

“ಚಾಂದಕೋಟೆಗೌಡರ ಸ್ಥಾನ ನಾನು ತುಂಬತೀನಿ” ಎಂದು ತೆರವಾದ ಲೋಕಸಭೆಯ ಸ್ಥಾನ ತುಂಬಲು ಬಂದರು ಯತ್ನಾಳದ ರಾಮನಗೌಡ್ರು. ಆದರೆ ಜನ ಇವರ ಮಾತನ್ನು ನಂಬಲಿಲ್ಲ. ಚುನಾವಣೆಯಲ್ಲಿ ಯತ್ನಾಳಗೌಡ್ರು ಸೋತರು. ರಾಜಕೀಯದಿಂದ ನಿವೃತ್ತಿಯಾದರು.

ಇದನ್ನು ಓದಿದ್ದೀರಾ?: ಯತ್ನಾಳ್​​​ ಉಚ್ಛಾಟನೆ | ಬಿಜೆಪಿ ತೊರೆಯುವಂತೆ ಪಂಚಮಸಾಲಿ ಸಮುದಾಯಕ್ಕೆ ಸ್ವಾಮೀಜಿ ಕರೆ

ರಾಮನಗೌಡರ ಐದು ಮಕ್ಕಳಲ್ಲಿ ಎರಡನೆಯವರೇ ಇಂದಿನ ಯತ್ನಾಳ್ ಬಸನಗೌಡರು. ಸಾಹಿತಿ ರಂಜಾನ ದರ್ಗಾರವರು ಹೇಳುವಂತೆ ನಾಚಿಕೆ ಸ್ವಭಾವದ ಬಸನಗೌಡ ರಾಜ್ಯ ನಾಯಕನಾಗುತ್ತಾನೆ ಎಂದು ನಾವ್ಯಾರು ಎಣಿಸಿರಲಿಲ್ಲ. ಆದರೆ ನಾಚಿಕೆ ಸ್ವಭಾವದ, ಮಾತುಗಾರನಲ್ಲದ, ನೆರೆಮನೆಯ ಹುಡುಗ ಬಿಜಾಪುರ ನಗರದ ಶಾಸಕರಾದರು. ಮುಂದೆ ಸಂಸದರಾದರು, ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸರ್ಕಾರದ ಮಂತ್ರಿಯೂ ಆಗಿಬಿಟ್ಟರು.

ನಾಚಿಕೆ ಸ್ವಭಾವದ ಬಸನಗೌಡರು ಬದಲಾದರು. ವಿರೋಧಿಗಳು ಇವರನ್ನು ‘ಸಡಿಲಬಾಯಿ’ಯ ಯತ್ನಾಳ ಎನ್ನುವಷ್ಟರ ಮಟ್ಟಿಗೆ ಬದಲಾದರು. ಗೌಡರು ಇನ್ನೊಂದು ಯಡವಟ್ಟು ಮಾಡಿಕೊಂಡರು. ವಿಜಾಪೂರ ಕ್ಷೇತ್ರವನ್ನು ತೊರೆದು ದೇವರ ಹಿಪ್ಪರಗಿ ಕ್ಷೇತ್ರಕ್ಕೆ ವಲಸೆ ಹೋದರು. ಅಲ್ಲಿ ಬಳ್ಳಾರಿಯ ಗಣಿಯ ದೂಳು ಇವರ ಕಣ್ಣು ರೆಪ್ಪೆಯ ಒಳ ಸೇರಿತು. ಕಣ್ಣು ತೆರೆಯಲು ಅವಕಾಶವನ್ನೇ ನೀಡಲಿಲ್ಲ.

ಸೋತ ನಂತರ ಅಧಿಕಾರದಲ್ಲಿದ್ದಾಗ ಆಡಿದ ಮಾತುಗಳು ಇವರಿಗೆ ತಿರುಗು ಬಾಣವಾದವು. ‘ಆನೆ ಬಿದ್ದಾಗ ಆಳಿಗೊಂದು ಕಲ್ಲಂತೆ’… ಗೌಡ್ರರನ್ನು ದೂರ ಸರಿಸಿತ್ತು ಅವರ ಮಾತೃ ಪಕ್ಷ. ತನಗೆ ಚಡ್ಡಿ ತೊಡಿಸಿ ಕೈಯಲ್ಲಿ ದೊಣ್ಣೆ ನೀಡಿದ ಪಕ್ಷವು ತನ್ನನ್ನು ಮರೆಯುತ್ತದೆ ಎಂದು ಕನಸಿನಲ್ಲಿಯೂ ಕಂಡಿರಲಿಲ್ಲ ಯತ್ನಾಳ್. ಹತಾಶರಾದರು ಯತ್ನಾಳ ಗೌಡರು. ಜೆಡಿಎಸ್ ಬಾಗಿಲು ಬಡಿದರು. ಸ್ಕಲ್ ಕ್ಯಾಪ್ ಧರಿಸಿದರು. ‘ಟಿಪ್ಪು ಮೈಸೂರಿನ ಹುಲಿ’ ಎಂದರು. ‘ಹಿಂದೂ ಮುಸ್ಲಿಂ ಬಾಯಿ ಬಾಯಿ’ ಎಂದರು. ಜನ ನಂಬಲಿಲ್ಲ. ಸಣ್ಣ ವಯಸ್ಸಿನಲ್ಲಿ ದಿಲ್ಲಿಯ ದೊರೆ ಬಿಜಾಪುರದ ಮನೆಯ ಮೂಲೆಯಲ್ಲಿ ತಣ್ಣಗೆ ಮಲಗಿಬಿಟ್ಟರು.

ಕಾಲ ಬದಲಾಗುತ್ತಲೆ ಇರುತ್ತದೆ. ಕೆಲ ವರ್ಷಗಳ ನಂತರ ಕರ್ನಾಟಕದ ಮೇಲ್ಮನೆಯ ಚುನಾವಣೆ ಬಂತು. ‘ಬಸನಗೌಡ್ರಿಗೆ ಅವಕಾಶ ನೀಡೋಣ’ ಎಂದರು ಪಕ್ಷಾತೀತವಾಗಿ ಜಿಲ್ಲೆಯ ಎಲ್ಲ ರಾಜಕೀಯ ಮುಖಂಡರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲರಿಗೂ ಬೇಕಾಗಿ ಬಿಟ್ಟಿದ್ದರು ಯತ್ನಾಳ್. ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿ ಎರಡನೆಯ ಇನ್ನಿಂಗ್ಸ್ ಪ್ರಾರಂಭಿಸಿದರು ಯತ್ನಾಳ ಗೌಡರು.

(ನಾಳೆ ಇನ್ನಷ್ಟು)

ಜಿ ಬಿ ಪಾಟೀಲ್
ಜಿ ಬಿ ಪಾಟೀಲ್‌
+ posts

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜಿ ಬಿ ಪಾಟೀಲ್‌
ಜಿ ಬಿ ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

1 COMMENT

  1. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ…

    ರಾಜಕೀಯದಲ್ಲಿ ನೇರ ನೇರವಾಗಿ ಮಾತನಾಡೋ ಬಸನಗೌಡ ಪಾಟೀಲ್ ಯತ್ನಾಳ್ ಅವ್ರೇ….ನೇರಾ ನೇರಾ ಮಾತನಾಡೋರಿಗೆ ರಾಜಕೀಯದಲ್ಲಿ ಬೆಲೆ ಇಲ್ಲ. ಶಕುನಿ ಅಂತವರಿಗೆ ಬೆಲೆ ಇದೆ. ಹೀಗಾಗಿ ಸತ್ಯ ಹೇಳಿದ ಹರಿಶ್ಚಂದ್ರ ಸ್ಮಶಾನ ಕಾಯಬೇಕಾಯ್ತು .. ಈ ರೀತಿ ಆಗಿದೆ ಪಾಪಾ ಯತ್ನಾಳ್ ಪರಿಸ್ಥಿತಿ. ಅದಷ್ಟು ಬೇಗನೆ ಉಚ್ಚಾಟನೆ ಕ್ರಮ ವಾಪಸ್ ಆಗಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

Download Eedina App Android / iOS

X