ಲೋಕಾಯುಕ್ತದವರು ತನಿಖೆ ನಡೆಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ದೂರುದಾರರಿಗೆ ತನಿಖೆಯ ಮಾಹಿತಿ ಕೊಡುವ ನಿಯಮ ಇದೆಯೇ? ಲೋಕಾಯುಕ್ತ ತನಿಖೆಯ ವರದಿ ಮೇಲೆ ಸಿದ್ದರಾಮಯ್ಯ ಕುಟುಂಬಕ್ಕೆ ನ್ಯಾಯಾಲಯ ಕ್ಲೀನ್‌ಚಿಟ್ ನೀಡುತ್ತಾ ಅಥವಾ ಸ್ನೇಹಮಯಿ ಕೃಷ್ಣ ಅವರ ತಕರಾರನ್ನು ಎತ್ತಿ ಹಿಡಿಯುತ್ತಾ ಎಂಬುದು ಸದ್ಯದ ಪ್ರಶ್ನೆ. ಈ ಬಗ್ಗೆ ತನಿಖಾ ಅಧಿಕಾರಿಗಳು ಏನು ಹೇಳುತ್ತಾರೆ ಇಲ್ಲಿದೆ...
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವ ಆರೋಪಕ್ಕೆ ಗುರಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಹಾಗೂ ವಿವಾದ ಭೂಮಿಯ ಮಾಲೀಕ ಜೆ ದೇವರಾಜು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಮೈಸೂರು ಲೋಕಾಯುಕ್ತ ಪೊಲೀಸರು ಆರೋಪ ಮುಕ್ತಗೊಳಿಸಿದ್ದು, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತನಿಖೆಯ ಅಂತಿಮ ವರದಿಯನ್ನು ಫೆ.20ರಂದು ಸಲ್ಲಿಸಿದ್ದಾರೆ.
ದೇಶದ ಗಮನ ಸೆಳೆದಿರುವ ಮತ್ತು ರಾಜಕೀಯವಾಗಿ ಮಹತ್ವ ಪಡೆದಿರುವ ಪ್ರಕರಣ ಇದಾಗಿದ್ದರಿಂದ ಮುಡಾ ಪ್ರಕರಣದ ತನಿಖೆಯ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ನಂತರ ಮುಂದೇನು ಎನ್ನುವ ಕುತೂಹಲ ಸಹಜವಾಗಿಯೇ ಮೂಡಿದೆ. ಸಿಎಂ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ನ್ಯಾಯಾಲಯದಿಂದ ಕ್ಲೀನ್‌ಚಿಟ್ ಸಿಗುತ್ತಾ ಅಥವಾ ದೂರುದಾರ ಸ್ನೇಹಮಯಿ ಕೃಷ್ಣ ಅವರ ತಕರಾರನ್ನು ನ್ಯಾಯಾಲಯ ಎತ್ತಿ ಹಿಡಿಯುತ್ತಾ ಎಂಬುದು ಸದ್ಯದ ಪ್ರಶ್ನೆ.
“ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ 3.16 ಎಕರೆ ಜಮೀನಿಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾ ಅಕ್ರಮವಾಗಿ ಬದಲಿ 14 ನಿವೇಶನಗಳನ್ನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಬೀರಿದ್ದು, ತನಿಖೆ ನಡೆಸಬೇಕು”ಎಂದು ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಆಗಸ್ಟ್ 8, 2024ರಂದು ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ದೂರಿನಲ್ಲಿ ಸ್ನೇಹಮಯಿ ಕೃಷ್ಣ ಕೋರಿದ್ದರು.
ಅಷ್ಟೊತ್ತಿಗಾಗಲೇ ಪ್ರಕರಣ ರಾಜಕೀಯ ಸ್ವರೂಪ ಪಡೆದು, ಸಿದ್ದರಾಮಯ್ಯ ಮುಜುಗರ ಎದುರಿಸುವಂತಾಯ್ತು. ಪ್ರಕರಣವನ್ನು ಸರ್ಕಾರ ಕೂಡಲೇ ಲೋಕಾಯುಕ್ತ ತನಿಖೆಗೆ ವಹಿಸಿತು. ಅದೇ ಸಮಯದಲ್ಲಿ ಸ್ನೇಹಮಯಿ ಕೃಷ್ಣ ಸಿದ್ದರಾಮಯ್ಯ ವಿರುದ್ದವೂ ತನಿಖೆಯಾಗಬೇಕು ಎಂದು ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ರಾಜ್ಯಪಾಲರು ಸಿದ್ದರಾಮಯ್ಯ ಮತ್ತು ಇತರೆ ಆರೋಪಿಗಳ ತನಿಖೆಗೆ ಅನುಮತಿಸಿದ್ದರು. ಇದನ್ನು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ರಾಜ್ಯಪಾಲರ ನಿರ್ಣಯ ಹೈಕೋರ್ಟ್ ಎತ್ತಿ ಹಿಡಿಯುತ್ತಿದ್ದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಸ್ನೇಹಮಯಿ ಕೃಷ್ಣ ದೂರಿನಡಿ 2024ರ ಸೆಪ್ಟೆಂಬರ್ 27ರಂದು ಲೋಕಾಯುಕ್ತ ಪೊಲೀಸರಿಂದ ಮೊ.ನಂ 11/2024, 500 120(2), 166, 403, 406, 420, 426, 465, 468, 340, 351 ಭಾರತೀಯದಂಡ ಸಂಹಿತೆ, 9, 13 ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988, 3, 53 & 54 ಬೇನಾಮಿ ಆಸ್ತಿ ವಹಿವಾಟುತಡೆ ಕಾಯ್ದೆ-1988, 3, 4 ಕರ್ನಾಟಕ ಭೂ ಕಬಳಿಕೆ -2011 ಅಡಿ ಎಫ್‌ಐಆರ್ ದಾಖಲಾಯಿತು.
ವಿಚಾರಣೆ ನಡೆಸಿದ ಲೋಕಾಯುಕ್ತ ತನಿಖಾಧಿಕಾರಿಗಳು ಪ್ರಕರಣದ ನಾಲ್ವರು ಆರೋಪಿಗಳಾದ ಸಿದ್ದರಾಮಯ್ಯ (ಎ-1 ಆರೋಪಿ), ಪಾರ್ವತಿ (ಎ-2 ಆರೋಪಿ), ಮಲ್ಲಿಕಾರ್ಜುನ ಸ್ವಾಮಿ (ಎ-3 ಆರೋಪಿ) ಹಾಗೂ ದೇವರಾಜು (ಎ-4 ಆರೋಪಿ) ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಂತಹ ಸಾಕ್ಷ್ಯಗಳು ತನಿಖೆ ವೇಳೆ ಪತ್ತೆಯಾಗಿಲ್ಲ. ಇದು ಸಿವಿಲ್ ಸ್ವರೂಪದ ಪ್ರಕರಣವಾಗಿದೆ. ಕಾನೂನಿನ ತಪ್ಪು ತಿಳಿವಳಿಕೆಯಿಂದ ಆಗಿರುವಂತಹದ್ದಾಗಿದೆ. ತನಿಖೆ ನಡೆಸಲು ಮತ್ತು ಕ್ರಮ ತೆಗೆದುಕೊಳ್ಳಲು ತಕ್ಕುದಾದ ಪ್ರಕರಣವಾಗಿರುವುದಿಲ್ಲ. ಇದರಡಿಯಲ್ಲಿ ತನಿಖೆ ನಡೆಸದೆ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ ಎಂದು ಐದು ಕಾರಣಗಳನ್ನು ಲೋಕಾಯುಕ್ತ ನೀಡಿದೆ.
ಮುಡಾ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಮೈಸೂರು ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ಅವರು ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ತನಿಖೆ ಮುಗಿದಿರುವ ಬಗ್ಗೆ ನೋಟಿಸ್ ನೀಡಿ, “ತನಿಖಾ ವರದಿಯನ್ನು ತಾವು ವಿರೋಧಿಸುವುದಿದ್ದರೆ ನೋಟಿಸ್ ತಲುಪಿದ ಒಂದು ವಾರದೊಳಗೆ ನ್ಯಾಯಾಲಯದಲ್ಲಿ ತಮ್ಮ ವಿರೋಧ ದಾಖಲಿಸಬಹುದು. ಇಲ್ಲದಿದ್ದರೆ, ನಾಲ್ವರು ಆರೋಪಿಗಳ ವಿರುದ್ಧದ ಆರೋಪ ಸಾಬೀತುಪಡಿಸುವ ಸಾಕ್ಷಾಧಾರಗಳು ಇಲ್ಲ ಎಂಬ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವಿಳಂಬ, ನಜೀರ್ ಸಾಬ್‌ರಿಗೆ ಬಗೆದ ದ್ರೋಹವಲ್ಲವೇ?
ಜೊತೆಗೆ ಮತ್ತೊಂದು ಪ್ರಕರಣದ ಬಗ್ಗೆಯೂ ಉಲ್ಲೇಖಿಸಿದ್ದು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ 2016ನೇ ಸಾಲಿನಿಂದ 2024ನೇ ಸಾಲಿನವರೆಗೆ 50:50 ಅನುಪಾತದಲ್ಲಿ ಪರಿಹಾರಾತ್ಮಕ ನಿವೇಶನಗಳನ್ನು ನೀಡಿರುವ ಆರೋಪಗಳ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಕಲಂ 173 (8) ಸಿ.ಆರ್.ಪಿ.ಸಿ ರೀತ್ಯಾ ಹೆಚ್ಚುವರಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಕೊಳ್ಳಲಾಗುವುದು ಎಂದು ಲೋಕಾಯುಕ್ತ ಸ್ನೇಹಮಯಿ ಕೃಷ್ಣ ಅವರಿಗೆ ಮಾಹಿತಿ ನೀಡಿದ್ದರು.

ದೂರುದಾರರಿಗೆ ತನಿಖಾ ಸಂಸ್ಥೆಗಳು ಮಾಹಿತಿ ಏಕೆ ನೀಡುತ್ತವೆ? ಲೋಕಾಯುಕ್ತ ತನಿಖೆ ನಡೆಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ದೂರುದಾರರಿಗೆ ತನಿಖೆಯ ಮಾಹಿತಿ ಕೊಡುವ ನಿಯಮ ಎಲ್ಲ ತನಿಖಾ ಸಂಸ್ಥೆಗಳಲ್ಲೂ ಇದೆ. ಈ ಬಗ್ಗೆ ಹೆಸರು ಹೇಳಲು ಇಚ್ಛಿಸದ ಲೋಕಾಯುಕ್ತ ಎಸ್‌ಪಿ ಒಬ್ಬರು ಈದಿನ.ಕಾಮ್ ಜೊತೆ ಮಾತನಾಡಿ, "ನಮ್ಮ ಭಾಷೆಯಲ್ಲಿ ನೋಟಿಸ್ ಎನ್ನುವ ಬದಲು 'ಹಿಂಬರಹ' ಎನ್ನುತ್ತೇವೆ. ದೂರುದಾರರಿಗೆ ತನಿಖೆಯ ಅಂತಿಮ ವರದಿಯ ಸಾರಾಂಶ ಏನಿದೆ ಎಂಬುದನ್ನು ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಮೊದಲೇ ಹಿಂಬರಹದಲ್ಲಿ ಕೊಡುತ್ತೇವೆ. ಇದು ಎಲ್ಲ ತನಿಖಾ ಸಂಸ್ಥೆಗಳ ನಿಯಮ" ಎಂದು ಹೇಳಿದರು. "ಯಾವುದೇ ತನಿಖಾ ಸಂಸ್ಥೆಗಳು ಇರಲಿ ಒಂದು ಬೈಕ್ ಕಳ್ಳತನ ಆದ ಪ್ರಕರಣಕ್ಕೂ ದೂರುದಾರರಿಗೆ ಮಾಹಿತಿ ಕೊಡುವ ನಿಯಮ ಇದೆ. ಪ್ರಕರಣದ ಬಗ್ಗೆ ಚಾರ್ಜ್‌ಶೀಟ್ ಆಗಿದ್ದಲ್ಲಿ ಮಾತ್ರ ದೂರುದಾರರಿಗೆ ಹಿಂಬರಹ ಕೊಡುವುದಿಲ್ಲ. ನೇರವಾಗಿ ನ್ಯಾಯಾಲಯಕ್ಕೆ ಅಂತಿಮ ವರದಿ ಒಪ್ಪಿಸುತ್ತೇವೆ. ಅದನ್ನು 'ಎ-ರಿಪೋರ್ಟ್' ಎನ್ನಲಾಗುತ್ತದೆ. ಪ್ರಕರಣ ತನಿಖೆಗೆ ಯೋಗ್ಯವಾಗಿಲ್ಲ ಅಥವಾ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದಾಗ 'ಬಿ-ರಿಪೋರ್ಟ್' (ಸುಳ್ಳು ಪ್ರಕರಣ) ಎಂದು ವರದಿ ಸಿದ್ಧವಾಗುತ್ತದೆ. ಇನ್ನೊಂದು 'ಸಿ - ರಿಪೋರ್ಟ್' ಇದೆ. ಉದಾ: ಒಂದು ಬೈಕ್ ಕಳ್ಳತನ ಆಗುತ್ತದೆ. ಈ ಬಗ್ಗೆ ದೂರು ದಾಖಲಾಗುತ್ತದೆ, ನಂತರ ಎಫ್‌ಐಆರ್ ಆಗುತ್ತದೆ, ತದನಂತರ ತನಿಖೆ ನಡೆಯುತ್ತದೆ, ಕೊನೆಗೆ ಬೈಕ್ ಆರೋಪಿ ಮತ್ತು ಬೈಕ್ ಸಿಗುವುದೇ ಇಲ್ಲ. ಆಗ 'ಸಿ-ರಿಪೋರ್ಟ್' ಹಾಕುತ್ತೇವೆ. ಅಂದರೆ ನಾಪತ್ತೆ ಪ್ರಕರಣ ಎಂದು ನಮೂದಿಸಿ ಪ್ರಕರಣ ಕ್ಲೋಸ್ ಮಾಡಲು ತಿಳಿಸುತ್ತೇವೆ" ಎಂದು ವಿವರಿಸಿದರು. "ತನಿಖಾ ಸಂಸ್ಥೆಗಳು ಸಲ್ಲಿಸುವ ವರದಿಯನ್ನು ಕೋರ್ಟ್ ಪರಿಗಣಿಸಬಹುದು ಅಥವಾ ಪರಿಗಣಿಸದೆಯೇ ಇರಬಹುದು. ದೂರುದಾರರಿಗೆ ಆಕ್ಷೇಪ ಸಲ್ಲಿಸಲು ಹಿಂಬರಹ ಕೊಡುವುದರಿಂದ ದೂರುದಾರರು ಕೋರ್ಟ್‌ನಲ್ಲಿ ಯಾವ ರೀತಿ ತಕರಾರು ಎತ್ತುತ್ತಾರೆ ಎಂಬುದನ್ನು ನ್ಯಾಯಾಲಯ ಗಮನಿಸುತ್ತದೆ. ಆಗ ತನಿಖಾ ವರದಿಯನ್ನು ಹೋಲಿಕೆ ಮಾಡಿ ಪ್ರಕರಣದಲ್ಲಿ ಲೋಪದೋಷ ಕಂಡು ಬಂದರೆ ಮರು ಪರಿಶೀಲನೆಗೆ ಸೂಚಿಸುತ್ತದೆ. ದೂರುದಾರರ ಆರೋಪಗಳಲ್ಲಿ ಹುರುಳು ಇಲ್ಲ ಎಂದಾದರೆ ಆರೋಪಿತರಿಗೆ ನ್ಯಾಯಾಲಯ ಕ್ಲೀನ್‌ಚಿಟ್ ನೀಡುತ್ತದೆ. ವಿಚಾರಣಾ ನ್ಯಾಯಾಲಯ ಆರೋಪಿತರಿಗೆ ಕ್ಲೀನ್‌ಚಿಟ್ ನೀಡಿದ ಮೇಲೂ ದೂರುದಾರರು ಮೇಲಿನ ಕೋರ್ಟ್ ಮೊರೆ ಹೋಗಲು ಅವಕಾಶವಿದೆ" ಎಂದು ತಿಳಿಸಿದರು.
ಸ್ನೇಹಮಯಿ ಕೃಷ್ಣ ಅವರು ಮುಡಾ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಲು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಹಿನ್ನಡೆ ಅನುಭವಿಸಿದ್ದಾರೆ. “ಲೋಕಾಯುಕ್ತ ತನಿಖೆಯಲ್ಲಿ ಯಾವುದೇ ಲೋಪದೋಷ ಕಂಡುಬಂದಿಲ್ಲ. ಹೀಗಾಗಿ, ಮುಂದುವರಿದ ತನಿಖೆಗಾಗಿ ಅಥವಾ ಮರು ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಲಾಗದು” ಎಂದು ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ (ಧಾರವಾಡ) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠ ಫೆ.8ರಂದು ಆದೇಶ ನೀಡಿ, ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸಿದೆ. “ಸಿಬಿಐ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲು ತುಳಿಯಲಾರೆ, ನನ್ನ ವಾದವನ್ನು ನಾನೇ ಮಾಡಿಕೊಂಡು ಕೇಸ್ ಗೆಲ್ಲುವೆ” ಎಂದು ಸ್ನೇಹಮಯಿ ಕೃಷ್ಣ ಮಾಧ್ಯಮಗಳಿಗೂ ಹೇಳಿದ್ದಾರೆ.

ವಾರದಲ್ಲಿ ತಕರಾರು ಸಲ್ಲಿಕೆ: ಸ್ನೇಹಮಯಿ ಕೃಷ್ಣ
ಈಗ ಲೋಕಾಯುಕ್ತ ತನಿಖಾ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ ವಾರದಲ್ಲಿ ತಕರಾರು ಅರ್ಜಿ ಸಲ್ಲಿಸುವೆ ಎಂದಿದ್ದಾರೆ. “ಲೋಕಾಯುಕ್ತ ಅಧಿಕಾರಿಗಳ ಮೇಲಿನ ನಮ್ಮ ಅನುಮಾನ ನಿಜವಾಗಿದೆ. ಸಾಕ್ಷ್ಯಾಧಾರಗಳನ್ನು ಕೊಟ್ಟಿದ್ದರೂ ಸೂಕ್ತ ತನಿಖೆ ನಡೆಸಿಲ್ಲ. ಆತ್ಮಸಾಕ್ಷಿ ಮಾರಿಕೊಂಡ ಅಧಿಕಾರಿಗಳಷ್ಟೇ ಇಂತಹ ವರದಿ ನೀಡಲು ಸಾಧ್ಯ. ‘ಬಿ- ರಿಪೋರ್ಟ್’ ನೀಡುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಒಂದು ವಾರದಲ್ಲಿ ನೋಟಿಸ್‌ಗೆ ತಕರಾರು ಸಲ್ಲಿಸಿ, ನ್ಯಾಯಾಲಯದಲ್ಲಿ ನನ್ನ ಆರೋಪವನ್ನು ಸಾಬೀತು ಮಾಡುತ್ತೇನೆ. 50:50 ಅನುಪಾತದ ತನಿಖೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ತರಾತುರಿಯಲ್ಲಿ ಅಂತಿಮ ವರದಿ ಸಲ್ಲಿಸುತ್ತಿರುವುದು ಕಾನೂನಿನ ಉಲ್ಲಂಘನೆ. ಪಾರ್ವತಿ ಅವರಿಗೆ 50:50 ಅನುಪಾತದ ಅಡಿ ನಿವೇಶನ ಹಂಚಿಕೆ ಅಧಿಸೂಚನೆಯ ದಾಖಲೆ ನೀಡಿದರೆ ನಾನು ಹೋರಾಟ ನಿಲ್ಲಿಸಿ ಜೈಲಿಗೆ ಹೋಗಲು ಸಿದ್ಧ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಡಾ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ ಬೆನ್ನಿಗೇ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಕುಟುಂಬವನ್ನು ಆರೋಪ ಮುಕ್ತಗೊಳಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಬಲ ತುಂಬಿದೆ. ಲೋಕಾಯುಕ್ತ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿರುವ ಸಾಧ್ಯತೆ ಇರುವುದಿರಂದ ಜನಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತ ವರದಿಯನ್ನು ಪರಿಗಣಿಸುವ ಸಾಧ್ಯತೆಯೇ ಹೆಚ್ಚು ಎಂಬುದು ತನಿಖಾ ಅಧಿಕಾರಿಗಳ ಮಾತು. ಆದರೆ, ಸ್ನೇಹಮಯಿ ಕೃಷ್ಣ ಯಾವ ರೀತಿ ತಕರಾರು ಸಲ್ಲಿಸುತ್ತಾರೆ? ಕೋರ್ಟ್ ಅದನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ಅಂತಿಮವಾಗಿ ನ್ಯಾಯಾಲಯದ ಆದೇಶವೇ ಹೇಳಬೇಕು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.